ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ತೂರಿದ್ದು, ಅವರ ಪರ ಸಿಂಪತಿ ಉಂಟಾಗುವುದಕ್ಕೂ ಅವಕಾಶ ನೀಡಿದೆ. ಇನ್ನೊಂದೆಡೆ 2023ರಲ್ಲಿ ಪ್ರದೀಪ್ ಈಶ್ವರ್ ಅವರತ್ತ ಹರಿದುಬಂದಿದ್ದ ಸುಧಾಕರ್ ವಿರೋಧಿ ಮತಗಳು ಈಗ ಕೈಕೊಡುವ ಸಾಧ್ಯತೆಯೂ ಹೆಚ್ಚಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಸರ್ಕಾರದ ವತಿಯಿಂದ ಜೂನ್ 27ರಂದು ನಡೆದ ಕೆಂಪೇಗೌಡ ಜಯಂತಿ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರು ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ನಡೆದ ಜಟಾಪಟಿಗೆ ಸ್ಥಳೀಯ ಕಾರಣಗಳಿರುವಂತೆಯೇ ದೀರ್ಘಕಾಲೀನ ಪರಿಣಾಮ ಬೀರಬಲ್ಲ ರಾಜಕೀಯ ಆಯಾಮಗಳು ಇವೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ವಿಶ್ಲೇಷಕರು.
ಈಶ್ವರ್ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದದ್ದು ಕೇವಲ ಸಾಮಾನ್ಯ ವಿದ್ಯಮಾನವಾಗಿ ಉಳಿದಿಲ್ಲ. ಅಂದು ಸಭಾಂಗಣದ ಒಳಗೆ ಆರಂಭದಿಂದಲೇ ಕಿರಿಕಿರಿ ಉಂಟುಮಾಡುತ್ತಿದ್ದ ಗುಂಪಿನ ಹಿಂದೆ ಯಾರಿದ್ದರು? ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಕ್ಷೇತ್ರದ ಶಾಸಕರು ಬಂದಿದ್ದೇ ತಪ್ಪು ಎಂದು ವಾದಿಸುತ್ತಿದ್ದವರು ಹೊಂದಿದ್ದ ಉದ್ದೇಶವಾದರೂ ಏನು? ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, “ಶಾಸಕರಿಗೆ ಥಳಿಸಲೆಂದೇ ಆ ಗುಂಪು ಅಲ್ಲಿಗೆ ಬಂದಿತ್ತು. ಕೇಸರಿ ಶಾಲು ಧರಿಸಿದ್ದ ಅವರು, ಪಾನಮತ್ತರಾಗಿಯೂ ಇದ್ದರು. ಶಾಸಕರಿಗೆ ಕೆಟ್ಟ ಶಬ್ದಗಳಿಂದ ನಿಂದಿಸಲು ಶುರು ಮಾಡಿದರು. ಶಾಸಕರು ಅಸಹಾಯಕರಾಗಿದ್ದರು. ಜಿಲ್ಲಾಡಳಿತವು ಆ ಗುಂಪನ್ನು ನಿಯಂತ್ರಿಸುವಲ್ಲಿ ವಿಫಲವಾಗಿತ್ತು”.
“’ಇದು ಅಂಬೇಡ್ಕರ್ ಜಯಂತಿಯಲ್ಲ, ಕೆಂಪೇಗೌಡರ ಜಯಂತಿ. ಪ್ರದೀಪ್ ಈಶ್ವರ್ ಯಾಕೆ ಇಲ್ಲಿಗೆ ಬಂದಿದ್ದಾರೆ?’ ಎಂದು ಪದೇಪದೇ ಕೆಣಕಲಾಯಿತು. ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರೊಬ್ಬರು ಬರಬಾರದು ಎಂದು ವಾದಿಸಿದ್ದು ಸರಿಯೇ? ಅಂಬೇಡ್ಕರ್ ಜಯಂತಿಗೆ ಮಾತ್ರ ಬರಬೇಕೆಂದು ಹೇಳುತ್ತಿದ್ದ ಆ ಗುಂಪು ಯಾವ ಮನಸ್ಥಿತಿಯನ್ನು ಹೊಂದಿತ್ತು?” ಎಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. “ಅಂಬೇಡ್ಕರ್ ವರ್ಸಸ್ ಕೆಂಪೇಗೌಡ ಎಂಬ ಮಾತುಗಳನ್ನು ಗಲಾಟೆ ಮಾಡಲು ಬಂದವರು ಆಡಿದ್ದರಿಂದಲೇ ಶಾಸಕ ಪ್ರದೀಪ್ ಈಶ್ವರ್ ಜೈ ಎಸ್.ಸಿ, ಎಸ್.ಟಿ ಎಂದರು. ಅವರು ಹೊರಗೆ ಬಂದ ಮೇಲೂ ಹಲ್ಲೆ ನಡೆಸಲು ಮುಂದಾದಾಗ ಅವರು ಹೆದರಿಕೊಂಡು ಓಡಬೇಕಿತ್ತೆ? ಆಗ ಮೀಸೆ ತಿರುವಿದ್ದಾರೆ, ತೊಡೆ ತೊಟ್ಟಿದ್ದಾರೆ. ಇದನ್ನೇ ದೊಡ್ಡದಾಗಿ ಹೇಳುವವರು ಒಳಗೆ ನಡೆದ ದಾಂಧಲೆ ಕುರಿತೇಕೆ ಮೌನವಹಿಸುತ್ತಾರೆ?” ಎಂದು ಕೇಳುತ್ತಿದ್ದಾರೆ.
ಪ್ರದೀಪ್ ಈಶ್ವರ್ ಮತ್ತು ಸ್ಥಳೀಯ ಬಿಜೆಪಿ ನಾಯಕರಾದ ಸಂದೀಪ್ ರೆಡ್ಡಿಯವರು ಜೊತೆಯಾಗಿಯೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಕುಣಿದಿದ್ದರು. ಕಾರ್ಯಕ್ರಮ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದರೆ ವೇದಿಕೆ ಕಾರ್ಯಕ್ರಮ ಶುರುವಾಗುವ ವೇಳೆಗೆ ಗಲಾಟೆ ಹಬ್ಬಿಸಲಾರಂಭಿಸಿದರು. ಇದರ ಹಿಂದೆ ಸಂಸದ ಸುಧಾಕರ್ ಪಾತ್ರ ಎಷ್ಟಿತ್ತು?- ಈ ಚರ್ಚೆಗಳು ಘಟನೆಯ ಸುತ್ತ ಮುನ್ನಲೆಗೆ ಬಂದಿವೆ.
ಮುಖ್ಯವಾಗಿ ಚಿಕ್ಕಬಳ್ಳಾಪುರದ ಘಟನೆ ‘ಒಬಿಸಿ ಅಸ್ಮಿತೆ’ಯನ್ನು ಕೆಣಕಿರುವುದಂತೂ ಸತ್ಯ. ಹಿಂದುಳಿದ ವರ್ಗಗಳ ಅತಿದೊಡ್ಡ ಲೀಡರ್ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಪ್ರದೀಪ್ ಈಶ್ವರ್ ಕಣ್ಣೀರು ಹಾಕಿದ್ದಾರೆ. ಆ ಸಂದರ್ಭದಲ್ಲಿ ಒಬಿಸಿ ಮುಖಂಡರಾದ ಯತೀಂದ್ರ ಸಿದ್ದರಾಮಯ್ಯ, ಮಧು ಬಂಗಾರಪ್ಪ, ರವಿ ಬೋಸರಾಜ್ ಕೂಡ ಹಾಜರಿದ್ದರು. “ನನ್ನನ್ನು ಮತ್ತು ನನ್ನ ಕುಟುಂಬವನ್ನು ವೈಯಕ್ತಿಕವಾಗಿ ನಿಂದಿಸಲಾಯಿತು, ಚಪ್ಪಲಿ ಎಸೆದು ಅವಮಾನಿಸಿದರು” ಎಂದು ಪ್ರದೀಪ್ ಮನನೊಂದು ಮಾತನಾಡಿದ್ದಾರೆ. ಈ ಅವಮಾನಕಾರಿ ಸನ್ನಿವೇಶದಲ್ಲಿ ಪ್ರದೀಪ್ ಜೊತೆ ನಿಲ್ಲಬೇಕೆಂದು ಒಬಿಸಿ ನಾಯಕರು ಸ್ಪಷ್ಟನಿರ್ಧಾರಕ್ಕಂತೂ ಬಂದಿದ್ದಾರೆ.
“ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಇಲ್ಲೇ ಇದ್ದು ಇಂಥವನ್ನು ಎದುರಿಸಬೇಕು. ಇದರಿಂದ ಧೃತಿಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ” ಎಂದು ಸಿದ್ದರಾಮಯ್ಯನವರು ಧೈರ್ಯ ತುಂಬಿದ್ದಾರೆ. ಚಿಕ್ಕಬಳ್ಳಾಪುರ ಘಟನೆ ಸಂಬಂಧ ಮಾಜಿ ಸಚಿವ ಮಧು ಬಂಗಾರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, “ಏನು ಮಾಡಲಿ ಮಧು ಅಣ್ಣ ಅಂತ ಪ್ರದೀಪ್ ಕರೆ ಮಾಡಿದ. ನಮಗೆಲ್ಲ ಹಿರಿಯರಾದ ಸಿದ್ದರಾಮಯ್ಯ ಸಾಹೇಬರು ಇದ್ದಾರೆ. ನಾವೆಲ್ಲ ಅವರನ್ನು ಭೇಟಿ ಮಾಡೋಣ ಎಂದು ಕರೆಸಿಕೊಂಡೆ. ಎಲ್ಲೋ ಹೊರಟಿದ್ದವನು ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡಿ ಬಂದ. ಆತನಿಗೆ ದುಃಖ ತಡೆಯೋಕೆ ಆಗಲಿಲ್ಲ. ಕಷ್ಟಪಟ್ಟು ಬೆಳೆದು ಬಂದ ವ್ಯಕ್ತಿ ಆತ. ಫ್ಯಾಮಿಲಿ ಬಗ್ಗೆ ನಿಂದಿಸಿರುವುದು ಅವನಿಗೆ ನೋವು ತಂದಿದೆ. ನಿಂದನೆಗಳನ್ನು ಮನಸ್ಸಿಗೆ ಹಚ್ಚಿಕೊಂಡು ಹಿಂದುಳಿದವರು ನಾವು ಎಂದು ಹೇಳಿದ್ದಾನೆ. ನಾವು ಅವನ ಜೊತೆ ಇದ್ದೇವೆ. ಈ ಸಂದರ್ಭದಲ್ಲಿ ನಾನು ಮನೆಯಲ್ಲಿ ಕೂರಬೇಕಾಗಿತ್ತಾ? ಅದು ಸರ್ಕಾರಿ ಕಾರ್ಯಕ್ರಮ. ಎರಡೂ ಕಾಲು ಗಂಟೆ ತನ್ನ ಕುರ್ಚಿಯಲ್ಲಿ ಆತ ಕೂತಿದ್ದ. ಏಳೆಂಟು ಜನ ಪೊಲೀಸರಿದ್ದರಷ್ಟೇ. ಎಣ್ಣೆ ಹೊಡೆದುಕೊಂಡು ಬಂದು ಕೆಟ್ಟ ಪದಗಳನ್ನು ಬಳಸುವುದೇ? ಇದನ್ನೆಲ್ಲ ನಾನು ಬಳಸಿದರೆ ಒಪ್ಪುತ್ತೀರಾ? ಅದು ಸರ್ಕಾರ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ. ಇವರು ಯಾರ ವಿರುದ್ಧ ಗಲಾಟೆ ಮಾಡಿದ್ದಾರೆ? ನಾಚಿಕೆ ಆಗಲ್ವಾ? ಈ ಘಟನೆಯನ್ನು ಎಲ್ಲರೂ ಖಂಡಿತಬೇಕು” ಎಂದು ಆಗ್ರಹಿಸಿದ್ದಾರೆ.
“ಈ ಹಿಂದೆ ಸಿದ್ದರಾಮಯ್ಯನವರು ಧರಿಸಿದ್ದ ಹುಬ್ಲೋಟ್ ವಾಚ್ ಬಗ್ಗೆ ಇತರರು ಮಾತನಾಡಿದ್ದಂತೆ ಈತ ಕುಮಾರಸ್ವಾಮಿ ಧರಿಸಿರುವ ವಾಚ್ ಬಗ್ಗೆ ಹೇಳಿಕೆ ನೀಡಿದ್ದಾನೆ. ಈತನಿಗೆ ಉತ್ತರ ಕೊಡಲು ಸಾಧ್ಯವಾಗದಿದ್ದರೆ ಬಿಟ್ಟುಬಿಡಬೇಕು. ಆದರೆ ಜನರನ್ನು ಕಳುಹಿಸಿ ಗಲಾಟೆ ಮಾಡಿಸುವುದೇ? ನಾನು ಜೆಡಿಎಸ್‌ನಲ್ಲಿದ್ದೆ. ಕಾಂಗ್ರೆಸ್ ವಿರುದ್ಧವಾಗಿ ರಾಜಕೀಯವಾಗಿ ಮಾತನಾಡುತ್ತಿದ್ದೆ. ಆದರೆ ವ್ಯಕ್ತಿಗತವಾಗಿ, ಫ್ಯಾಮಿಲಿ ಬಗ್ಗೆ ನಿಂದಿಸುವುದು ನಮ್ಮ ಸಭ್ಯತೆ ಅಲ್ಲ. ಆತನಾಗಲೀ, ನಾನಾಗಲೀ ನಮಗೆ ನಮ್ಮವರು ಮಾತ್ರ ಮತ ಹಾಕಿ ಗೆಲ್ಲಿಸಿದ್ದಾರೆಂದು ಎಂದಿಗೂ ಹೇಳುವುದಿಲ್ಲ. ನನ್ನ ಒಬಿಸಿ ಜನಾಂಗದವರು ನನ್ನ ವಿರುದ್ಧವೂ ಮತ ಹಾಕಿರುತ್ತಾರೆ, ಪರವೂ ಮತ ಹಾಕಿರುತ್ತಾರೆ. ಸಾಂವಿಧಾನಿಕವಾಗಿ ಪ್ರದೀಪ್ ಅವರದ್ದು ತಪ್ಪಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಮುಖ್ಯಮಂತ್ರಿಯವರಲ್ಲಿ ಆಗ್ರಹಿಸುತ್ತೇನೆ. ಯಾರು ಯಾರನ್ನಾದರೂ ಹೇಗೆ ಬೇಕಾದರೂ ನಡೆಸಿಕೊಳ್ಳಬಹುದಾ?” ಎಂದಿದ್ದಾರೆ.
“ಪ್ರದೀಪ್ ಈಶ್ವರ್ ಅವರು ಅಂದು ನಡೆದ ಘಟನೆಯ ಸಂದರ್ಭದಲ್ಲಿ ಹತಾಷೆಗೆ ಒಳಗಾಗಿದ್ದರು. ಅವ್ಯಾಚ್ಯ ಶಬ್ದಗಳಿಂದ ನೊಂದರು. ‘ಇದು ಎಸ್‌ಸಿ ಎಸ್‌ಟಿಗಳ ಮೇಲೆ ಆಗಿರುವ ದಾಳಿ. ಜೈ ಎಸ್‌ಸಿ- ಎಸ್‌ಟಿ, ಜೈ ಒಬಿಸಿ’ ಎಂದು ಕೂಗುವುದಕ್ಕೂ ಇದೇ ಕಾರಣವಾಗಿತ್ತು. ನಿಂದನೆಗೆ ಒಳಗಾದ ಅವರೊಂದಿಗೆ ಒಬಿಸಿ ನಾಯಕರು ನಿಲ್ಲುತ್ತೇವೆ” ಎಂಬ ಅಭಿಪ್ರಾಯಕ್ಕೆ ಕಾಂಗ್ರೆಸ್‌ನ ಹಿಂದುಳಿದ ವರ್ಗದ ಲೀಡರ್‌ಗಳು ಬಂದಿರುವುದನ್ನು ಮಧು ಬಂಗಾರಪ್ಪನವರ ಮಾತುಗಳು ಧ್ವನಿಸುತ್ತಿವೆ.
ಘಟನೆಯ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಅವರು ಮೀಸೆ ತಿರುವಿದ್ದು, ತೊಡೆ ತಟ್ಟಿದ್ದು, ಜಾತಿ ಕೇಂದ್ರಿತ ಘೋಷಣೆಗಳನ್ನು ಕೂಗಿದ್ದು ರಾಜಕೀಯ ಸೂಕ್ಷ್ಮತೆಯ ಪ್ರಶ್ನೆಯನ್ನು ಹುಟ್ಟುಹಾಕಿವೆಯಾದರೂ, ಅವರು ಹಾಗೆ ಮಾಡುವುದು ಅನಿವಾರ್ಯವಾಗಿತ್ತು ಎಂಬ ನಿರೂಪಣೆಗಳು ಹುಟ್ಟಿಕೊಂಡಿವೆ.
ಜಾತಿ ಸೂಕ್ಷ್ಮಗಳನ್ನು ಆ ಉದ್ವಿಗ್ನತೆಯ ಸಂದರ್ಭದಲ್ಲಿ ಜನಪ್ರತಿನಿಧಿಯಾದ ಈಶ್ವರ್ ಮರೆತಂತೆಯೂ ಕಾಣುತ್ತದೆ. ತನ್ನ ಮತಬ್ಯಾಂಕ್ ಸಮುದಾಯಗಳ ಗುರಾಣಿ ಹಿಡಿದು ಬಚಾವಾಗುವ ಹಾದಿಯನ್ನು ತಕ್ಷಣ ಕಂಡುಕೊಂಡರು ಎಂಬ ಅಭಿಪ್ರಾಯಗಳು ದಟ್ಟವಾಗುತ್ತಿವೆ. ಆ ಉದ್ವಿಗ್ನತೆಯ ಸಂದರ್ಭದಾಚೆಗೆ ನೋಡಿದರೂ ಪ್ರದೀಪ್ ಈಶ್ವರ್ ಅವರು ಎಸ್‌ಸಿ, ಎಸ್‌ಟಿ, ಒಬಿಸಿಗಳನ್ನು ನೆನೆಯಲು ಕಾರಣವಿತ್ತು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳು ಧ್ರುವೀಕರಣಗೊಂಡರೆ ಎದುರಾಳಿಗಳನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದು ಎಂಬುದು ಈಶ್ವರ್ ಲೆಕ್ಕಾಚಾರ.
ಈ ಲೇಖನ ಓದಿದ್ದೀರಾ?: ಗಣಿನಾಡಿನ ವಿಪತ್ತು ನಿರ್ವಹಿಸುವರೇ ದೂರದ ಮುನಿಯಪ್ಪ?
ಚಿಕ್ಕಬಳ್ಳಾಪುರ ಹೇಳಿಕೇಳಿ ದಲಿತರೇ ನಿರ್ಣಾಯಕ ಮತದಾರರಾಗಿರುವ ವಿಧಾನಸಭಾ ಕ್ಷೇತ್ರ. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟರು ದೊಡ್ಡಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಗುರುತಿಸುವುದಾದರೆ ಚಾಮರಾಜನಗರ ಹಾಗೂ ಅವಿಭಜಿತ ಕೋಲಾರ ಜಿಲ್ಲೆಯನ್ನು ಕಣ್ಣುಮುಚ್ಚಿ ತೋರಿಸಬಹುದು. ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ. 45ರಷ್ಟು ಪರಿಶಿಷ್ಟರು ಇದ್ದಾರೆಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರ 2008ರವರೆಗೂ ಎಸ್‌ಸಿ ಮೀಸಲು ಕ್ಷೇತ್ರವಾಗಿತ್ತು. ಆದರೆ ಬಲಿಜ ಮತ್ತು ಒಕ್ಕಲಿಗರು ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಲೇ ಇದ್ದರು. ಮೀಸಲು ಕ್ಷೇತ್ರವಾಗಿರುವ ಬಗ್ಗೆ ಒಕ್ಕಲಿಗರಲ್ಲಿ ದೊಡ್ಡಮಟ್ಟದ ಅಸಮಾಧಾನವೂ ಇತ್ತು. ಆ ಮೀಸಲು ಕ್ಷೇತ್ರದಲ್ಲಿ ಯಾವುದೇ ದಲಿತ ನಾಯಕರು ಬೆಳೆಯಲು ಪ್ರಬಲ ಸಮುದಾಯಗಳು ಬಿಡಲೇ ಇಲ್ಲ. ಆ ನಿಟ್ಟಿನಲ್ಲಿ ನೋಡಿದರೆ ಪ್ರಭಾವಿ ಜಾತಿಗಳನ್ನು ಎದುರುಹಾಕಿಕೊಂಡು ರಾಜಕೀಯ ಮಾಡಿದವರು ರೇಣುಕಾ ರಾಜೇಂದ್ರನ್ ಅವರಷ್ಟೇ.
ಚಿಕ್ಕಬಳ್ಳಾಪುರವು ಸಾಮಾನ್ಯ ಕ್ಷೇತ್ರವಾಗಿ ಘೋಷಣೆಯಾದ ಮೇಲೆ ಇಲ್ಲಿ ಒಕ್ಕಲಿಗರು ಮತ್ತು ಬಲಿಜರ ನಡುವೆ ತೀವ್ರ ಪೈಪೋಟಿ ಏರ್ಪಡುತ್ತಾ ಬಂದಿತು. ಆಂಧ್ರದ ಕಮ್ಮಾ ಮತ್ತು ನಾಯ್ಡುಗಳಿಗೆ ಹೋಲಿಸಬಹುದಾದ ಸಮುದಾಯ ಇಲ್ಲಿನ ಬಲಿಜರು. ಆಂಧ್ರದ ಕಾಪು ಸಮುದಾಯಕ್ಕೂ ಇವರಿಗೂ ಹೋಲಿಕೆ ಕಂಡುಬರುತ್ತದೆ. ಇದು ಪ್ರಭಾವಿ ಸಮುದಾಯವಾದರೂ ಒಬಿಸಿ ಎಂದು ಪರಿಗಣಿಸಲ್ಪಟ್ಟಿದೆ. ಪ್ರದೀಪ್ ಈಶ್ವರ್ ಇಂತಹ ಬಲಿಜ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಧ್ರುವೀಕರಣಗೊಂಡರೆ ಒಕ್ಕಲಿಗರ ಬೆಂಬಲವಿಲ್ಲದೆಯೂ ಗೆಲ್ಲಬಹುದು ಎಂಬ ತಂತ್ರ ಅವರದ್ದಿರಬಹುದು.
ಸುಧಾಕರ್ ಕೋಟೆಯಲ್ಲಿ ಈಶ್ವರ್ ಸಾಮ್ರಾಜ್ಯ
2013ರಿಂದೀಚೆಗೆ ಆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಡಾ. ಕೆ. ಸುಧಾಕರ್ ಹಿಡಿತ ಸಾಧಿಸಿದ್ದರು. ಸುಧಾಕರ ಅವರ ಎದುರು ಸ್ಪರ್ಧಿಸಲು ಸ್ಥಳೀಯವಾಗಿ ಯಾವುದೇ ಒಕ್ಕಲಿಗರೂ ಸಿದ್ಧವಿರಲಿಲ್ಲ. ದಲಿತ ಮುಖ ಕೊತ್ತೂರು ಮಂಜು ಅವರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಮಂಜು ಈ ಕಡೆ ಬರಲು ಒಪ್ಪಲಿಲ್ಲ. ಮಂಜು ಇಲ್ಲಿ ಗೆದ್ದರೆ ಮತ್ತೆ ವಿಧಾನಸಭಾ ಕ್ಷೇತ್ರವು ಎಸ್‌ಸಿಗಳ ಕೈಗೆ ಹೋಗುತ್ತದೆ ಎಂದು ಕಾಂಗ್ರೆಸ್‌ನಲ್ಲಿದ್ದ ಒಕ್ಕಲಿಗರೇ ಮಾತನಾಡಿಕೊಂಡಿದ್ದರು. ಅಂತಹ ಸನ್ನಿವೇಶದಲ್ಲಿ ಮೇಲೆದ್ದು ಬಂದ ಪ್ರದೀಪ್ ಈಶ್ವರ್, ಎಲ್ಲ ಪ್ರೆಡಿಕ್ಷನ್‌ಗಳನ್ನು ಉಲ್ಟಾ ಮಾಡಿ ಗೆದ್ದರು. ಸುಧಾಕರ್ ನಡೆಸಿದ್ದ ದುರಾಡಳಿತದಿಂದ ಬೇಸತ್ತ ಜನರು ಈಶ್ವರ್ ಕಡೆ ವಾಲಿದರು.
2013ರ ನಂತರ ಸುಧಾಕರ್ ಆಳ್ವಿಕೆ ಶುರುವಾದ ಮೇಲೆ ಚಿಕ್ಕಬಳ್ಳಾಪುರವನ್ನು ‘ಸುಧಾಕರ್ ರಿಪಬ್ಲಿಕ್’ ಎಂದೇ ಗುರುತಿಸಲಾಗುತ್ತಿತ್ತು. ಹಣಬಲ, ತೋಳ್ಬಲದಲ್ಲಿ ಕ್ಷೇತ್ರವನ್ನು ಹಿಡಿದಿಟ್ಟುಕೊಂಡಿದ್ದ ಸುಧಾಕರ್ ಅವರ ದಬ್ಬಾಳಿಕೆ ಮಿತಿಮೀರಿತ್ತು. ಅವರನ್ನು ಎದುರು ಹಾಕಿಕೊಂಡವರು ಕೇಸ್‌ಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಯಿತು. ಸುಧಾಕರ್ ಸಾಮ್ರಾಜ್ಯವನ್ನು ಕೊನೆಗಾಣಿಸಬೇಕೆಂದು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಅನೇಕ ಒಕ್ಕಲಿಗ ಮುಖಂಡರೂ ಕಾಂಗ್ರೆಸ್ ನಾಯಕರ ಮನೆಗಳ ಎಡತಾಕಿದ್ದೂ ಇದೆ ಎಂದು ಮೂಲಗಳು ಹೇಳುತ್ತವೆ.
ಈ ಲೇಖನ ಓದಿದ್ದೀರಾ?: ‘ನಾವು ಕಟ್ಟಾ ಬಿಜೆಪಿಗರೇ, ಆದರೆ…’; NEET ಪ್ರತಿಭಟನೆ ಬಳಿಕ ಯುಪಿಯಲ್ಲಿ ಬದಲಾವಣೆಯ ಬಿರುಗಾಳಿ
2013ರಿಂದ 2023ರವರೆಗೆ ಸುಧಾಕರ್ ಮೆರೆದ ಅಟ್ಟಹಾಸ ಹೇಳತೀರದ್ದಾಗಿತ್ತು. ಹೀಗಾಗಿ ಸುಧಾಕರ್ ಅವರನ್ನು ಮನೆಗೆ ಕಳುಹಿಸಬೇಕಾದರೆ, ಕಾಂಗ್ರೆಸ್‌ಗೆ ಮತ ಹಾಕಲೇಬೇಕು ಎಂದು ಜೆಡಿಎಸ್‌ನಲ್ಲಿದ್ದ ಒಕ್ಕಲಿಗರೂ ನಿರ್ಧರಿಸಿದ್ದರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಯಾವುದೇ ಚುನಾವಣೆಯಾದರೂ ಜೆಡಿಎಸ್‌ಗೆ ಕನಿಷ್ಠ 50,000 ಮತಗಳು ಬೀಳುತ್ತಿದ್ದವು. ಆದರೆ 2023ರ ಚುನಾವಣೆಯಲ್ಲಿ ಆ ಮತಗಳು 19000ಕ್ಕೆ ಇಳಿಕೆಯಾದವು. ಅಂದರೆ ಸುಧಾಕರ್ ಅವರನ್ನು ಸೋಲಿಸಬೇಕೆಂದು ಬಯಸಿದ್ದ ಜೆಡಿಎಸ್‌ನ ಸಾಂಪ್ರದಾಯಿಕ ಮತದಾರರೂ, ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್‌ಗೆ ವೋಟ್ ಗುದ್ದಿದ್ದರು. ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳ ಜೊತೆಗೆ ಒಕ್ಕಲಿಗರಲ್ಲಿನ ಒಂದು ಭಾಗ ಪ್ರದೀಪ್ ಈಶ್ವರ್ ಪರ ನಿಂತಿದ್ದರಿಂದ ಗೆಲುವು ಸುಲಭವಾಯಿತು ಎನ್ನಲಾಗುತ್ತದೆ.
ಕೆಂಪೇಗೌಡ ಜಯಂತಿಯ ಗಲಾಟೆ ಒಕ್ಕಲಿಗರ ಹೆಮ್ಮೆಯನ್ನು ಬಡಿದೆಬ್ಬಿಸಿದರೆ, ಮುಂದಿನ ಚುನಾವಣೆಯಲ್ಲಿ ಸುಧಾಕರ್ ವಿರೋಧಿ ಒಕ್ಕಲಿಗರು ಯಾವ ಕಡೆ ಹೊರಳುತ್ತಾರೆ ಎಂದು ಈಗಲೇ ಹೇಳುವುದಕ್ಕೆ ಆಗದು. ಒಕ್ಕಲಿಗರನ್ನು ಹಿಡಿಯಾಗಿ ಮತ್ತೆ ಸುಧಾಕರ್ ಮನೆ ಬಾಗಿಲಿಗೆ ದೂಡಿದರೂ ಆಶ್ಚರ್ಯಪಡಬೇಕಾಗಿಲ್ಲ ಎನ್ನಲಾಗುತ್ತದೆ. ಆದರೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಶಾಸಕರನ್ನು ಬೇಕೆಂತಲೇ ಅವಮಾನಿಸಿದ್ದು ಕ್ಷೇತ್ರದಲ್ಲಿ ಭಾರೀ ಪ್ರಚಾರ ಪಡೆದರೆ, ಒಕ್ಕಲಿಗ ವರ್ಸಸ್ ಒಬಿಸಿ ಮತ್ತು ಪರಿಶಿಷ್ಟರು ಎಂಬ ಸಮೀಕರಣ ಬಿಗಿಯಾಗುವ ಸಾಧ್ಯತೆಯೂ ಇದೆ.
ಸುಧಾಕರ್ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಜನರು ಅವರನ್ನು ಭೇಟಿಯಾಗಲು ತಿನುಕಾಡಬೇಕಿತ್ತು. ಆದರೆ ಪ್ರದೀಪ್ ಜನರ ಕೈಗೆ ಸಿಗುವಂತಹ ಮನುಷ್ಯ ಎಂಬ ಒಳ್ಳೆಯ ಇಮೇಜ್ ಇದ್ದಾಗ್ಯೂ, ಅವರು ಕೆಲಸ ಮಾಡುತ್ತಿಲ್ಲ ಎಂಬ ಆಕ್ಷೇಪಗಳು ದೊಡ್ಡದಾಗುತ್ತಿವೆ. ಸಭೆ ಸಮಾರಂಭಗಳಲ್ಲಿ ‘ಜೈ ಭೀಮ್’ ಘೋಷಣೆ ಕೂಗುವ ಮೂಲಕ ನೊಂದ ಸಮುದಾಯಗಳ ವಿಶ್ವಾಸ ಗಳಿಸಬಲ್ಲವರಾದರೂ, ಸಮುದಾಯ ಕೇಂದ್ರಿತ ಗಂಭೀರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆಂಬ ಬೇಸರವೂ ಇದೆ.
ಗಣರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆಯಂತಹ ಪ್ರಮುಖ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವುದು ಅವರಿಗೆ ತಿರುಗು ಬಾಣವಾಗಲು ಆರಂಭವಾಗಿತ್ತು. ಆದರೆ ಪ್ರದೀಪ್ ಅವರಿಗೆ ಈಗಲೂ ಕಾಲ ಮಿಂಚಿಲ್ಲ. ಅವರ ಮೇಲೆ ಚಪ್ಪಲಿ ಎಸೆತವಾಗಿದ್ದನ್ನು ದಲಿತ ಮತ್ತು ಹಿಂದುಳಿದ ಸಮುದಾಯಗಳು ಭಿನ್ನರೀತಿಯಲ್ಲೇ ಗ್ರಹಿಸುತ್ತಿವೆ. ಈ ರೀತಿಯಲ್ಲಿ ಅವಮಾನಕ್ಕೆ ಒಳಗಾಗಿದ್ದು ಸಮುದಾಯದ ಸಿಂಪತಿಯನ್ನೂ ತಂದುಕೊಡುವ ಸಾಧ್ಯತೆ ಇದೆ. ಜನರನ್ನು ನೇರವಾಗಿ ಭೇಟಿಯಾಗಿ ಮಾತನಾಡಲ್ಲ ಪ್ರದೀಪ್ ಅವರು ವಿಶ್ವಾಸವನ್ನು ಮರಳಿ ಪಡೆಯಲು ಇದು ಸಕಾಲವೂ ಹೌದು.



