ಮುನಿಯಪ್ಪ ಅವರ ಗಣಿನಾಡಿನ ಪ್ರವೇಶಕ್ಕೂ ಮೊದಲೇ ಸಾಕಷ್ಟು ಸವಾಲುಗಳು ಎದುರಾಗಿವೆ. ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಸಮಸ್ಯೆ, ಬರ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳು ಎದುರು ನೋಡುತ್ತಿವೆ. ಇವುಗಳನ್ನೆಲ್ಲ ಅಚ್ಚುಕಟ್ಟಾಗಿ ನಿಭಾಯಿಸಿ ಮುನಿಯಪ್ಪ ಜನರ ಮನ್ನಣೆ ಗಳಿಸುವರೇ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕೆಲ ದಿನಗಳ ಹಿಂದಷ್ಟೇ ಟೇಕಾಫ್ ಆಗಿರುವ ಡಿ ಕೆ ಶಿವಕುಮಾರ್ ಸರ್ಕಾರ ಈಗ ಸಚಿವರುಗಳ ಜವಾಬ್ದಾರಿ ಮಿತಿಯನ್ನು ಹೆಚ್ಚಿಸಿದೆ. ಸಿಎಂ ಡಿಕೆಶಿ ಜತೆಗೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರ ಹೆಗಲಿಗೆ ಖಾತೆ ಜತೆಗೆ ವಿಕೋಪ ನಿರ್ವಹಣೆಯ ಉಸ್ತುವಾರಿ ಜವಾಬ್ದಾರಿಯನ್ನೂ ಹೊರಿಸಿದೆ. ರಾಜ್ಯದಲ್ಲಿನ ಮಳೆ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳ ಪರಿಣಾಮ ನಿರ್ವಣೆ ಹಾಗೂ ಮೇಲ್ವಿಚಾರಣೆಗಾಗಿ ಸಚಿವರಿಗೆ ಮತ್ತೊಂದು ಜವಾಬ್ದಾರಿ ಹೊರಿಸಲಾಗಿದೆ. ಸಚಿವ ಸಂಪುಟ ವಿಳಂಬ ಕಾರಣದಿಂದಾಗಿ ಒಬ್ಬೊಬ್ಬರಿಗೆ ಎರಡ್ಮೂರು ಜಿಲ್ಲೆಗಳ ಹೊಣೆ ನೀಡಲಾಗಿದೆ. ಆದರೆ ದೂರದೂರಿನ ಕೆ ಎಚ್ ಮುನಿಯಪ್ಪ ಅವರಿಗೆ ಗಣಿನಾಡು ರಕ್ಷಣೆಯ ಹೊಣೆ ಹೊರಿಸಿರುವುದು ಗಮನಾರ್ಹ ಸಂಗತಿಯಾಗಿದೆ.
ಹೌದು.. ಮುನಿಯಪ್ಪ ಅವರಿಗೆ ಮೂರು ಜಿಲ್ಲೆಗಳ ವಿಕೋಪ ನಿರ್ವಣೆಯ ಜವಾಬ್ದಾರಿ ವಹಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಪತ್ತು ನಿರ್ವಹಣೆ ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ. ಸ್ಥಳೀಯರೇ ಆಗಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಲೆ ಹಿಡಿತವಿದೆ. ಆದರೆ ದೂರದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಕಬ್ಬಿಣದ ಕಡಲೆಯಾಗಿ ಪರಿಣಮಿಸಬಹುದು. ಯಾಕೆಂದರೆ ಗಣಿ ಧೂಳನ್ನೇ ಹೊದ್ದು ಮಲಗಿರುವ ಎರಡೂ ಜಿಲ್ಲೆಗಳಲ್ಲಿ ಜಾಸ್ತಿ ಮಳೆ ಬಂದರೂ ಕಷ್ಟವೇ, ಮಳೆ ಬಾರದಿದ್ದರೂ ಸಮಸ್ಯೆಗಳೇ ಹೆಚ್ಚು. ಹೀಗಾಗಿ, ಮುನಿಯಪ್ಪ ಅವರಿಗೆ ಗಣಿನಾಡಿನ ನಿರ್ವಹಣೆ ಅಷ್ಟು ಸುಲಭವೇ ಎನ್ನುವ ಪ್ರಶ್ನೆಗಳು ಎದ್ದಿವೆ.
ಈಗಾಗಲೇ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮುಂಗಾರು ನಿರಾಶೆ ಮೂಡಿಸಿದೆ. ಸಕಾಲಕ್ಕೆ ಮುಂಗಾರು ಎಂಟ್ರಿ ಕೊಟ್ಟಿದ್ದರೆ ಇಷ್ಟೊತ್ತಿಗಾಗಲೇ ಈ ನಾಡಿನ ಜನರ ಜೀವನಾಡಿ ತುಂಗಭದ್ರಾ ಜಲಾಶಯದ ಒಡಲಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಬೇಕಿತ್ತು. ಆದರೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ನಿರೀಕ್ಷಿಸಿದಷ್ಟು ನೀರು ಹರಿದು ಬಂದಿಲ್ಲ. ಇದರಿಂದ ಮಳೆಯನ್ನೇ ನಂಬಿದ್ದ ರೈತರು ನಿರಾಶೆಗೊಂಡು ಈಗ ಡ್ಯಾಂ ನೀರಿನತ್ತ ಮುಖ ಮಾಡಿ ಕುಳಿತಿದ್ದಾರೆ. ಡ್ಯಾಂನಲ್ಲೇ ನೀರು ಸಂಗ್ರಹ ಆಗದಿದ್ದರೆ ಕಾಲುವೆಗಳಿಗೆ ನೀರು ಹರಿಸುವುದು ಕಷ್ಟ. ಇದು ಈಗಾಗಲೇ ರೈತರನ್ನು ಆತಂಕಕ್ಕೆ ತಳ್ಳಿದೆ.
ಮತ್ತೊಂದೆಡೆ, ಇಷ್ಟುದಿನ ಸುರಿಯದ ಮಳೆ ಇನ್ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಲಿದೆ. ಈಗಾಗಲೇ ಬೋರ್‌ವೆಲ್ ನೀರಿನಿಂದ ಬಿತ್ತನೆ ಮಾಡಿರುವ ಬೆಳೆಗಳಿಗೆ ಹಾನಿಯಾಗಬಹುದು. ಆಗ ರೈತರಿಗೆ ತುರ್ತು ಪರಿಹಾರ ವಿತರಿಸುವ ಸವಾಲುಗಳು ಸಚಿವರಿಗೆ ಎದುರಾಗಬಹುದು. ಇಂತಹ ಇನ್ನೂ ಅನೇಕ ಸಮಸ್ಯೆಗಳು ಸಚಿವರಿಗೆ ಕಾಡಬಹುದು. ಅವುಗಳನ್ನೆಲ್ಲ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು, ದೂರದ ಮುನಿಯಪ್ಪ ಅವರಿಗೆ ಗಣಿನಾಡಿನ ಉಸ್ತುವಾರಿ ನೀಡಿರುವುದಕ್ಕೆ ಸ್ಥಳೀಯ ರೈತರು ಮತ್ತು ರೈತ ಮುಖಂಡರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಗರಿಬೊಮ್ಮನಹಳ್ಳಿ ತಾಲೂಕು ರೈತ ಸಂಘದ ಅಧ್ಯಕ್ಷ ಬಸನಗೌಡರ ಅವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಮುನಿಯಪ್ಪ ಅವರು ಬಳ್ಳಾರಿ, ವಿಜಯನಗರ ಜಿಲ್ಲೆಗೆ ಬಂದು ಹೋಗುವಷ್ಟರಲ್ಲೇ ಸಮಯ ಕಳೆದುಹೋಗುತ್ತದೆ. ವಿಜಯನಗರ ಜಿಲ್ಲೆಯ ಗಡಿಭಾಗದಲ್ಲಿರುವ ನಾವು ಜಿಲ್ಲಾ ಕೇಂದ್ರಕ್ಕೆ ಬರುವಷ್ಟರಲ್ಲೇ ಮಧ್ಯಾಹ್ನವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಸಚಿವರು ಭೇಟಿಗೆ ಸಿಗುವರೇ? ಅಲ್ಲದೇ ಇನ್ನೊಂದು ವಾರ ಕಳೆದರೆ ಹಗರಿಬೊಮ್ಮನಹಳ್ಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಈಗಾಗಲೇ ಬಿತ್ತಿದ ಬೆಳೆಗಳೆಲ್ಲವೂ ಒಣಗಿಹೋಗಿವೆ. ಕೆಲವರು ಬಿತ್ತನೆಗೆ ತಂದಿಟ್ಟಿದ್ದ ಬಿತ್ತನೆಬೀಜಗಳನ್ನು ಪುನಃ ಮಾರಾಟ ಮಾಡುವ ನಿರ್ಧಾರದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ದೂರದ ಮುನಿಯಪ್ಪ ಅವರು ಹೇಗೆ ವಿಪತ್ತು ನಿರ್ವಹಣೆ ಮಾಡುತ್ತಾರೆ? ಅದಕ್ಕಾಗಿ ಸ್ಥಳೀಯ ನಾಯಕರಿಗೆ ಸಚಿವ ಸ್ಥಾನ ನೀಡಿ ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು” ಎಂದು ಆಗ್ರಹಿಸಿದರು.
ಮತ್ತೊಂದೆಡೆ, ರೈತ ಸಂಘದ ರಾಜ್ಯಾಧ್ಯಕ್ಷ ಎಸ್ ಎ ಖಾದ್ರಿಯವರು ಪ್ರತಿಕ್ರಿಯೆ ನೀಡಿದ್ದು, “ಮುನಿಯಪ್ಪ ಅವರಿಗೆ ಸುದೀರ್ಘವಾದ ರಾಜಕೀಯದ ಅನುಭವ ಇದೆ. ಈ ರಾಜ್ಯದ ಮುಖ್ಯಮಂತ್ರಿಯಾಗುವ ಅರ್ಹತೆ ಅವರಿಗಿದೆ. ಹೀಗಿರುವಾಗ ಮೂರು ಜಿಲ್ಲೆಗಳ ಉಸ್ತುವಾರಿ ನಿಭಾಯಿಸುವುದು ಮುನಿಯಪ್ಪ ಅವರಿಗೆ ಕಷ್ಟವೇನಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಮಾವು ಖರೀದಿಗೆ ₹1,750 ನಿಗದಿ: ಕೇಂದ್ರದ ‘ಪುಡಿಗಾಸು’ ನೆರವಿಗೆ ಬೆಳೆಗಾರರ ಆಕ್ರೋಶ
ಸದ್ಯ ಮುನಿಯಪ್ಪ ಅವರ ಗಣಿನಾಡಿನ ಪ್ರವೇಶಕ್ಕೂ ಮೊದಲೇ ಸಾಕಷ್ಟು ಸವಾಲುಗಳು ಎದುರಾಗಿವೆ. ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಸಮಸ್ಯೆ, ಬರ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳು ಎದುರು ನೋಡುತ್ತಿವೆ. ಇವುಗಳನ್ನೆಲ್ಲ ಅಚ್ಚುಕಟ್ಟಾಗಿ ನಿಭಾಯಿಸಿ ಮುನಿಯಪ್ಪ ಜನರ ಮನ್ನಣೆ ಗಳಿಸುವರೇ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



