ರಾಮ ಮಂದಿರ ಕಟ್ಟಿದ್ದು ರಾಜಕೀಯಕ್ಕೋಸ್ಕರ ಮತ್ತು ರಾಮನ ಹೆಸರಿನಲ್ಲಿ ಲೂಟಿ ಮಾಡಲು, ದೈವ ಸೇವೆಗೆ ಅಲ್ಲ ಅನ್ನುವುದು ಜನಕ್ಕೆ ಗೊತ್ತಾಗುತ್ತಿದೆ. ಬಿಜೆಪಿ ಒಳಗಿನ ಅಂತರ್ಯುದ್ಧ ಇನ್ನೂ ಅನೇಕ ಹಗರಣಗಳನ್ನು ಮುಂಬರುವ ದಿನಗಳಲ್ಲಿ ಅನಾವರಣಗೊಳಿಸಲಿದೆ. ಈ ಅಕ್ಷ್ಯಮ್ಯ ಅಪರಾಧ ಎಸಗಿದ ಸಂಘ ಪರಿವಾರ ಮತ್ತು ಬಿಜೆಪಿ ತಮ್ಮೊಳಗಿನ ವಿಷದಿಂದಲೇ ಅಂತ್ಯಗೊಳ್ಳಲಿವೆ.
ಈ ದೇಶದಲ್ಲಿ ನಟ್ಟ ನಡು ರಾತ್ರಿಯಲ್ಲಿ ಮಹಿಳೆಯೊಬ್ಬಳು ಒಬ್ಬಂಟಿಯಾಗಿ ಸುರಕ್ಷಿತವಾಗಿ ಓಡಾಡಬಲ್ಲಳಾದಲ್ಲಿ ಇಲ್ಲಿ ರಾಮರಾಜ್ಯ ಬಂತು ಅಂತ ಅಂದುಕೊಳ್ಳುತ್ತೇನೆ ಅಂತ ಮಹಾತ್ಮಾ ಗಾಂಧಿ ಹೇಳುತ್ತಿದ್ದರು. ಸ್ವತಃ ಶ್ರೀರಾಮನೇ ತನ್ನ ಗರ್ಭಿಣಿ ಪತ್ನಿಯನ್ನು ಯಾವನೋ ಬೀದಿ ಬದಿ ದಾಸಯ್ಯನ ಮಾತು ಕೇಳಿ ಕಾಡಿಗಟ್ಟಿದ್ದು ರಾಮರಾಜ್ಯವೇ ಅಲ್ಲವೇನೋ ಎಂಬಂತೆ. ರಾಮ, ರಾವಣ, ರಾಮರಾಜ್ಯ ಇತ್ಯಾದಿಗಳ ಬಗ್ಗೆ ಅನೇಕ ಕಥಾನಕಗಳು ಇರುವ ಈ ದೇಶದಲ್ಲಿ ರಾಮರಾಜ್ಯ ಅನ್ನುವುದು ಕೇವಲ ಒಂದು ಸುಖೀ ಸಮೃದ್ಧ ಮತ್ತು ಸುರಕ್ಷಿತ ಕಲ್ಯಾಣ ರಾಜ್ಯಕ್ಕೆ ಒಂದು ರೂಪಕವನ್ನಾಗಿ ಮಾತ್ರ ನೋಡಿದರೆ ಗೊಂದಲಗಳು ಕಡಿಮೆ. ರಾಮನ ಇತಿಹಾಸ, ರಾಮಾಯಣ ಕಾವ್ಯ ಮತ್ತು ಈ ರಾಮರಾಜ್ಯ ಕಲ್ಪನೆಗೆ ಸಂಪೂರ್ಣ ತಾಳೆ ಹೊಂದುವುದು ಅಸಾಧ್ಯ. ಆಯ್ತು ರೂಪಕವನ್ನು ಒಪ್ಪಿಕೊಂಡು ಮುಂದೆ ಹೋಗೋಣ.
ಮರ್ಯಾದಾ ಪುರುಷೋತ್ತಮ ಶ್ರೀರಾಮ ಅನ್ನುತ್ತಿದ್ದ ಬಾಪುವಿನ ಎದೆಗೆ ಗುಂಡಿಕ್ಕಿದ್ದು ತನ್ನದೇ ವರ್ಷನ್ ರಾಮರಾಜ್ಯದ ಕನಸು ಹೊತ್ತ ನಾಥುರಾಮ್ ಗೋಡ್ಸೆ. ಬಾಪುವಿನ ರಾಮನಿಗೂ ಸಂಘ ಪರಿವಾರದ ರಾಮನಿಗೂ ಇಂತಹ ಪರಮ ವೈರತ್ವ!
ಇದೆಲ್ಲ ಯಾಕೆ ಹೇಳಿದೆ ಅಂದರೆ, ಮಧ್ಯರಾತ್ರಿ ಒಬ್ಬಂಟಿಯಾಗಿ ಸಂಚರಿಸುವ ಮಹಿಳೆಯನ್ನು ರಕ್ಷಿಸಬೇಕಾದ ರಾಮನಿಗೆ ಅಯೋಧ್ಯೆಯ ರಾಮ ಮಂದಿರದಲ್ಲೇ ರಕ್ಷಣೆ ಇಲ್ಲದಂತಾಗಿದೆ.
ಎಂಬತ್ತರ ಮತ್ತು ತೊಂಭತ್ತರ ದಶಕದಲ್ಲಿ ಇಡೀ ದೇಶದ ತುಂಬಾ ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿಯಲ್ಲಿ ರಾಮೋನ್ಮಾದ ಹರಡಿ, ಅಯೋಧ್ಯೆಯಲ್ಲಿದ್ದ ಮಸೀದಿ ಕೆಡವಿ ದೇವಸ್ಥಾನ ಕಟ್ಟದಿದ್ದರೆ ತಮ್ಮ ಧರ್ಮವೇ ಅಂತ್ಯಗೊಳ್ಳುವುದು ಅಂತೆಲ್ಲ ಪ್ರಚೋದನೆ ಮಾಡಿ, ದೊಂಬಿ ಮಾಡಿ, ಮಾಡಿಸಿ, ಅನೇಕ ಹಿಂದೂ ಮತ್ತು ಮುಸ್ಲಿಂ ಅಮಾಯಕರ ಸಾವಿಗೆ ಕಾರಣವಾಗಿ, ಕೊನೆಗೆ ಮಸೀದಿ ಕೆಡವಿ, ಇಂಡಿಯಾ-ಪಾಕಿಸ್ತಾನ ವಿಭಜನೆ ಅಪೂರ್ಣ, ನಿಖರ ಮತ್ತು ಖಚಿತ ಹಿಂದೂ-ಮುಸ್ಲಿಂ ವಿಭಜನೆ ಮಾಡುತ್ತೇವೆ ಅಂತ ಹೊರಟು ಈ ದೇಶದ ಪ್ರತಿ ಹಿಂದೂ ಮನೆಯಿಂದ ಚಂದಾ ಎತ್ತಿ ಕಟ್ಟಿದ್ದು ಈ ಅಯೋಧ್ಯೆಯ ರಾಮ ಮಂದಿರ. ಅದ್ವಾನಿ ತರದ ರಾಮೋನ್ಮಾದ ಹೀರೋಗಳು ರಥಯಾತ್ರೆ ಮಾಡಿ ಬಾಪುವಿನ ಕನಸಿನ ರಾಮ ರಾಜ್ಯ ಕಟ್ಟಬಹುದಾಗಿತ್ತು, ಆದರೆ ಕಟ್ಟಿದ್ದು ರಾಮನ ಹೆಸರಿನ ವಿಷಕಾರಿ ರಾಜಕಾರಣ. ಭಾರತ ಪಾಕಿಸ್ತಾನ ವಿಭಜನೆ ಆದಾಗ ಭಾರತ ಹಿಂದೂ ರಾಷ್ಟ್ರ ಆಗದೇ ಇಲ್ಲಿ ಮುಸ್ಲಿಮರೂ ಇರುವಂತಾದ್ದನ್ನು ಒಪ್ಪದ ಜನಕ್ಕೆ ಇಲ್ಲಿ ಎರಡನೇ ವಿಭಜನೆ ಹಿಂದೂ-ಮುಸ್ಲಿಂ ಒಡಕಿನ ರೂಪದಲ್ಲಿ ಸಾಧಿಸುವುದು ಅಗತ್ಯವಾಗಿತ್ತು. ಅದಕ್ಕಾಗಿ ಮುಸ್ಲಿಮರನ್ನು ಕೆಣಕಿ, ಅವರಿಲ್ಲಿ ಎರಡನೇ ದರ್ಜೆ ಪ್ರಜೆಗಳು ಅಂತ ಪ್ರೂವ್ ಮಾಡಲು ಅಲ್ಲಿ ಮಸೀದಿ ಕೆಡವಿ ಮಂದಿರ ಕಟ್ಟಲೇಬೇಕಾಗಿತ್ತು. ಅದೇ ಉದ್ದೇಶದಿಂದ ಹುಟ್ಟಿದ್ದು ವಿಶ್ವ ಹಿಂದೂ ಪರಿಷದ್. ಮುಸ್ಲಿಮರಿಗೆ ಪಾಠ ಕಲಿಸುವ ಒಂದು ರಾಜಕಾರಣದ ಅಂಗವಾಗಿ ಕಟ್ಟಿದ ದೇವಸ್ಥಾನದಲ್ಲಿ ದೇವರು ಇರಲು ಸಾಧ್ಯವೇ?
ಇದನ್ನು ಓದಿದ್ದೀರಾ?: ಘೋರಿ ಘಜ್ನಿಗೂ ಶ್ರೀರಾಮನ ಸಂಪತ್ತು ಲೂಟಿ ಹೊಡೆದಿರುವವರಿಗೂ ವ್ಯತ್ಯಾಸ ಏನುಳಿಯಿತು?
ಮಂದಿರ ಅಲ್ಲೇ ಕಟ್ಟುವುದು ಅಂತ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳುತ್ತಾ ಬಂದು ಇಟ್ಟಿಗೆ, ಗ್ರಾನೈಟ್, ಅಮೃತಶಿಲೆ ಇನ್ನೂ ಅನೇಕ ಕಟ್ಟಡ ಸಾಮಗ್ರಿಗಳನ್ನು ಒಂದಲ್ಲ ಒಂದು ನೂರು ದೇವಸ್ಥಾನ ಕಟ್ಟಲಾಗುವಷ್ಟು ಕೊಟ್ಟರು ಇಲ್ಲಿನ ಹಿಂದೂ ರಾಮ ಭಕ್ತರು. ಮಸೀದಿ ಕೆಡವಿದ್ದನ್ನು ಅಂದು ಖುದ್ದು ಅದ್ವಾನಿಯೇ ಖಂಡಿಸಿ ರಾಜಕೀಯವಾಗಿ ಬಚಾವಾದರು. ಆದರೆ ನಾನೇ, ನಮ್ಮ ಕಾರ್ಯಕರ್ತರೇ ಮಸೀದಿ ಕೆಡವಿದ್ದು ಅದೇನ್ ಮಾಡ್ಕೊತೀರೋ ಮಾಡ್ಕಳಿ ಅಂದಿದ್ದು ಶಿವಸೇನೆಯ ಬಾಳ್ ಠಾಕ್ರೆ. ಅದೇ ಕಾಲದಲ್ಲಿ ಇಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಿಯೇ ಸೈ ಅಂತ ಕೋಮು ಗಲಭೆ ಆರಂಭಿಸಿದ ಸಂಘಿಗಳು ತಮ್ಮ ಕಚೇರಿಯ ಮೇಲಾಗಲಿ, ಇಲ್ಲಿ ಯಾವುದೇ ಹಿಂದೂ ದೇವಸ್ಥಾನಗಳ ಮೇಲಾಗಲಿ ತ್ರಿವರ್ಣ ಧ್ವಜ ಹಾರಿಸುತ್ತಿರಲಿಲ್ಲ. ಧರ್ಮಾಂಧತೆ ಮತ್ತು ಕಾಂಗ್ರೆಸ್ ವಿರೋಧಿ ಭಾವನೆ ಎಷ್ಟು ಬಲವಾಗಿತ್ತೆಂದರೆ ಇಂತಹ ಸರಳ ಕಾಮನ್‌ಸೆನ್ಸ್ ಪ್ರಶ್ನೆಗಳೂ ಜನರಿಗೆ ಹೊಳೆಯುತ್ತಿದ್ದಿಲ್ಲ. ತಮ್ಮ ಕಚೇರಿಯ ಮೇಲೆಯೇ ಬೇಡವಾದ ಧ್ವಜವನ್ನು ಅಲ್ಲಿ ಹಾರಿಸಬೇಕು, ಇಲ್ಲಿ ಹಾರಿಸಲೇಬೇಕು ಎಂಬ ಹಠ ಯಾಕೆ ಮಾಡುತ್ತಿದ್ದಾರೆ ಅಂತ ಕೇಳಿಕೊಂಡಿದ್ದರೆ ಅನೇಕ ಜೀವಗಳು ಉಳಿಯುತ್ತಿದ್ದವು, ಸಾಮಾಜಿಕ ಸ್ವಾಸ್ಥ್ಯ ಉಳಿಯುತ್ತಿತ್ತು. ಈ ದೇಶದ ಕಣ ಕಣದಲ್ಲೂ ರಾಮನಿದ್ದಾನೆ ಅಂತ ಹೇಳುವ ಜನ ಅಯೋಧ್ಯೆಯ ಮಸೀದಿಯಲ್ಲಿ ಮಾತ್ರ ಏಕೆ ರಾಮನನ್ನು ಹುಡುಕುತ್ತಿದ್ದಾರೆ ಎಂಬ ಪ್ರಶ್ನೆ ಜನಸಾಮಾನ್ಯ ಕೇಳಿಕೊಂಡಿದ್ದರೆ ಸಾಕಿತ್ತು.

ಆದರೆ ಹಾಗಾಗಲಿಲ್ಲ. ಕಾಂಗ್ರೆಸ್ಸಿನ ಮೇಲಿದ್ದ ಅಸಹನೆಯ ತೀವ್ರತೆ ಎಷ್ಟಿತ್ತೆಂದರೆ ಈ ತರದ ಕಾಮನ್‌ಸೆನ್ಸ್ ಪ್ರಶ್ನೆಗಳು ಜನರಿಗೆ ಹೊಳೆಯಲೇ ಇಲ್ಲ. ಕಾಂಗ್ರೆಸ್ ಮಾತಾಡುವ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತ್ತು. ಇಲ್ಲಿನ ಮಾಧ್ಯಮಗಳಲ್ಲಿ ಸಂಘಿಗಳು ಅದಾಗಲೇ -ಅಂದರೆ ಎಮೆರ್ಜೆನ್ಸಿ ನಂತರದ ಕಾಲದಿಂದ- ಸೇರಿಕೊಂಡಾಗಿತ್ತು. ಕಾಮನ್‌ಸೆನ್ಸ್ ಬಿಟ್ಟು ಕ್ಲಿಷ್ಟಕರ ವಾದ ಪ್ರತಿವಾದ ಮಾಡಿ ಹಿಂದೂ-ಮುಸ್ಲಿಂ ವಿಭಜನೆಗೆ ಮಾಧ್ಯಮಗಳು ಕೂಡ ವಾತಾವರಣ ಸೃಷ್ಟಿಸತೊಡಗಿದರು.
ಆಗ ಬಿಜೆಪಿ ಎಲ್ಲಿಯೂ ಅಧಿಕಾರದಲ್ಲಿ ಇರಲಿಲ್ಲ. ಈ ಇಡೀ ಸಂಘ ಪರಿವಾರವನ್ನು, ವಿಶ್ವ ಹಿಂದೂ ಪರಿಷತ್ತನ್ನು, ಭಜರಂಗದಳವನ್ನು ಸಾಕಿದ್ದು ಭಕ್ತರ ದೇಣಿಗೆ. ಬಿಜೆಪಿ ಪಾರ್ಟಿ ಫಂಡು ಅಷ್ಟಕ್ಕಷ್ಟೇ. ಎಂಬತ್ತು ತೊಂಬತ್ತರ ದಶಕದಲ್ಲಿ ಕೂಡ, ಮಸೀದಿ ಕೆಡವಿದರೂ ಕೂಡ ಈ ಹಿಂದೂ-ಮುಸ್ಲಿಂ ವಿಭಜನೆ ಬಿಜೆಪಿಯನ್ನು ಸರಕಾರ ರಚಿಸುವಂತೆ ಮಾಡಲಿಲ್ಲ. ಬದಲಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನು ದೂರ ಇಡುವ ತೃತೀಯ ರಂಗಗಳು ಸರಕಾರ ಮಾಡಿದವು. ಕೇಂದ್ರದಲ್ಲಿ ವಿ.ಪಿ. ಸಿಂಗ್, ಚಂದ್ರಶೇಖರ್, ದೇವೇಗೌಡ, ಗುಜ್ರಾಲ್ ಇತ್ಯಾದಿಗಳು ಒಂದೆಡೆಯಾದರೆ, ರಾಜ್ಯಗಳಲ್ಲಿ ಶಿವಸೇನೆ, ತೆಲಗು ದೇಶಂ ಪಾರ್ಟಿ, ತೃಣಮೂಲ ಕಾಂಗ್ರೆಸ್ ಇತ್ಯಾದಿಗಳು ಕಾಂಗ್ರೆಸ್ ವಿರೋಧಿ ಅಲೆಯ ಫಲಾನುಭಾವಿಗಳಾದರು.
ಇದನ್ನು ಓದಿದ್ದೀರಾ?: ಶ್ರೀರಾಮನೇ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾನೆ: ಬಿಜೆಪಿ ವಿರುದ್ಧ ಕೇಜ್ರಿವಾಲ್ ಗುಡುಗು
ಆಗ ನಡೆದಿದ್ದೇ ಗುಜರಾತ್ ನರಮೇಧ. ಪ್ರಶಾತೀತ ಹಿಂದೂ ಹೃದಯ ಸಾಮ್ರಾಟರಾಗಿ ಹೊಮ್ಮಿದ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಅಂದಿನ ಪ್ರಧಾನಿ ವಾಜಪೇಯಿ. ಒಬ್ಬ ಮುಖ್ಯಮಂತ್ರಿಯಾಗಿ ಮೋದಿ ರಾಜಧರ್ಮ ಪಾಲಿಸಲಿಲ್ಲ ಎಂಬುದನ್ನು ಗಟ್ಟಿಯಾಗಿಯೇ ಹೇಳಿದರು. ಆದರೆ ಧರ್ಮಾಂಧತೆಯ ನಶೆಗೆ ಮದ್ದು ಉಂಟೇ? ಮುಂದೆ ಬಂದ ಮನಮೋಹನ್ ಸಿಂಗ್ ಸರಕಾರದ ಹತ್ತೂ ವರ್ಷ ಈಗ ಪೂರ್ಣಕಾಲಿಕ ಸಂಘಿಗಳಾದ ಮಾಧ್ಯಮಗಳು ಗುಜರಾತ್ ಮಾಡೆಲ್ ವರ್ಸಸ್ ಮನಮೋಹನ್ ಸಿಂಗ್ ಆಡಳಿತ ಎಂಬ ಕಪೋಲಕಲ್ಪಿತ ನೆರೆಟಿವ್ ಕಟ್ಟಿದರು. ಮೋದಿಯ ಗುಜರಾತ್ ಒಂದು ಇಂದ್ರನ ಸ್ವರ್ಗಲೋಕವೆಂದೂ, ಮನಮೋಹನ್ ಸಿಂಗ್ ಒಬ್ಬ ಬೆದರುಬೊಂಬೆ ಎಂದೂ ನೆರೆಟಿವ್ ಕಟ್ಟಿದರು. ಮುಂದೆ ಅದಾನಿ-ಅಂಬಾನಿ-ಆರ್‍ಎಸ್‌ಎಸ್ ಸೇರಿ ಮಾಡಿದ ರಾಷ್ಟ್ರೀಯ ಪ್ರಹಸನ ಅಣ್ಣಾ ಹಜಾರೆ ಚಳವಳಿ. ಈಗ ಬಿಜೆಪಿಗೆ ಹಣ ಗುಜರಾತಿನ ಉದ್ಯಮಿಗಳು ಕೊಟ್ಟು ಸಾಕಿದರೆ, ಸಂಘ ಪರಿವಾರಕ್ಕೆ ರಾಮನ ಹೆಸರಿನಿಂದ ಬರುವ ದೇಣಿಗೆಯ ಹರಿವು ಹೆಚ್ಚಾಯಿತು.
ಅಂತೂ ಇಂತೂ ಬಿಜೆಪಿ ಕೇಂದ್ರದಲ್ಲಿ ಸರಕಾರ ರಚಿಸುವಂತಾಗಿ, ಅದ್ವಾನಿ ಮೂಲೆ ಗುಂಪಾಗಿ ಮೋದಿಯವರು ಪ್ರಧಾನಿ ಆಗುತ್ತಾರೆ. ಮೋದಿ ಮಾಡಿದ ಡಿಮಾನಿಟೈಸೇಷನ್, ಕೋವಿಡ್ ಸಾವುಗಳು, ಎಲೆಕ್ಟರೋಲ್ ಬಾಂಡ್‌ಗಳ ಭ್ರಷ್ಟಾಚಾರ ಇತ್ಯಾದಿಗಳನ್ನು ಹಿಂದೂ-ಮುಸ್ಲಿಂ ನಶೆ ತೆಲೆಗೇರಿ ವಾಸ್ತವಕ್ಕೆ ಕುರುಡಾದ ಜನ ಸಹಿಸಿಕೊಂಡರು. ಮತ್ತು ಟೀಕೆ ಮಾಡುವವರನ್ನು ದೇಶದ್ರೋಹಿ ಅಂತ ಹೇಳಲು ಇಲ್ಲಿನ ಮುಖ್ಯವಾಹಿನಿ ಮಾಧ್ಯಮಗಳೇ ಸಹಕರಿಸಲು ಶುರು ಮಾಡಿದವು. ಮೋದಿ ಮತ್ತವರ ಮಂತ್ರಿಗಳನ್ನು ಮಾತಾಡಿಸುವಾಗ ಅದೇನೋ ಧನ್ಯತಾಭಾವ ಮುಖದಲ್ಲಿ ಕಾಣಲು ಶುರುವಾಯಿತು. ಮೋದಿ ವಿರೋಧಿಗಳನ್ನು ಮಾತಾಡಿಸುವಾಗ ನಿಷ್ಠುರ ಪತ್ರಿಕಾಧರ್ಮ ತೋರುವ, ಮೋದಿ ಸರಕಾರದ ಬಗ್ಗೆ ಮಾತಾಡುವಾಗ ಚಮಚಾಗಳಂತೆ ತೋರತೊಡಗಿದರು.
ಇದೆಲ್ಲ ದೊರೆಯ ತಲೆಗೆ ಏರಿ, ತಾನೊಬ್ಬ ದೈವಾಂಶಸಂಭೂತ ಗಣರಕ್ಷಕ ಅನ್ನುವ ಭ್ರಮೆ ಹುಟ್ಟಿಸುವುದು ಸಹಜ ಅಲ್ಲವೇ. ಮತ್ತೀಗ ಹಿಂದಿನಂತೆ ಫಂಡಿಗೋಸ್ಕರ ಸಂಘಿಗಳ ಮರ್ಜಿ ಕಾಯಬೇಕಾಗಿಲ್ಲ. ಹಾಗೆಯೇ ಸಂಘ ಸಮೂಹಕ್ಕೆ ಟಕ್ಕರ್ ಕೊಡುವಷ್ಟು ಸಂಖ್ಯೆಯಲ್ಲಿ ಸ್ವತಃ ಮೋದಿಯ ಭಕ್ತರೇ ಇದ್ದಾರೆ. ನಮಗೆ ಸಂಘದ ಅಗತ್ಯ ಇಲ್ಲವೇ ಇಲ್ಲ ಎಂಬ ಮಾತನ್ನು ಜೆ.ಪಿ. ನಡ್ದಾ ಹೇಳಿ ಕೂಡ ಆಗಿದೆ.
ಇನ್ನೇನು ತಾನು ಸರ್ವಾಧಿಕಾರಿ ಆಗಬಹುದು ಅನ್ನುವಷ್ಟರಲ್ಲೇ, ವಯಸ್ಸು ಅಡ್ಡ ಬರುತ್ತದೆ. ಅದಾಗಲೇ ಮೋದಿ ಸಾಹೇಬರಿಗೆ ಈಗ ಎಪ್ಪತ್ತೈದು. ಈ ಸೆಪ್ಟೆಂಬರಿಗೆ ಎಪ್ಪತ್ತಾರು. ಎಪ್ಪತ್ತೈದರ ನಂತರ ಮೋದಿ ಇರಬೇಕೆ ಅನ್ನುವ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ. ಅಷ್ಟರಲ್ಲಿಯೇ ಈ ಇರಾನ್-ಇಸ್ರೇಲ್ ಯುದ್ಧ, ಎಪ್‌ಸ್ಟೀನ್ ಫೈಲುಗಳು ಇತ್ಯಾದಿಗಳ ಕಾಟ. ಟ್ರಂಪ್ ಸರಕಾರ ಪತನಗೊಂಡ ನಂತರ ಇದು ಹೊಸ ರೂಪವನ್ನೇ ಪಡೆಯಲಿದೆ. ಆ ಚರ್ಚೆ ಇನ್ನೊಮ್ಮೆ ಮಾಡೋಣ.
ಎಪ್ಪತ್ತೈದರ ನಂತರ ಮೋದಿ ಇರಬೇಕೆ ಅನ್ನುವ ಚರ್ಚೆಗೆ ಮತ್ತೆ ಬರೋಣ. 2029ರ ಚುನಾವಣೆವರೆಗೂ ಕಾಯ್ದರೆ ಆಗ ಮೋದಿಗೆ ಎಪ್ಪತ್ತೊಂಬತ್ತು ಆಗಿರುತ್ತದೆ. ಹೀಗಾಗಿ ಮೋದಿಯ ನಂತರ ಯಾರು ಎಂಬ ಪ್ರಶ್ನೆಗೆ ಬಿಜೆಪಿ ಈಗ ಉತ್ತರ ಕಂಡು ಕೊಳ್ಳಲೇಬೇಕು. ಇಲ್ಲಿಂದಲೇ ಶುರುವಾಗುವುದು ಬಿಜೆಪಿಯ ಅಂತರ್ಯುದ್ಧ.
ಮೋದಿಗಿಂತ ಹತ್ತು ವರ್ಷ ಚಿಕ್ಕವನಾದ ಅಮಿತ್ ಶಾ ತೆರೆಯ ಮರೆಯಲ್ಲಿ ಮಾಡಿದ ತಂತ್ರಗಾರಿಕೆಗಳೇ ಮೋದಿಯ ಗೆಲುವಿಗೆ ಕಾರಣ. ಇಷ್ಟು ವರ್ಷ ಶ್ರಮಿಸಿದ ಅಮಿತ್ ಶಾ ಮೋದಿಯ ನಂತರ ಮೋದಿಯ ಸ್ಥಾನದಲ್ಲಿ ತನ್ನನ್ನು ಕಲ್ಪಿಸಿಕೊಳ್ಳುವುದು ಸಹಜ. ವಯಸ್ಸು ಇದೆ, ಸಾಮರ್ಥ್ಯವೂ ಇದೆ. ನಾನು ಯಾಕಾಗಬಾರದು ಅಂತ ಶಾಗೆ ಅನಿಸಿದರೆ ಆಶ್ಚರ್ಯ ಇಲ್ಲ.
ಆದರೆ ಹಿಂದೂ ರಾಷ್ಟ್ರದ ಕಲ್ಪನೆಗೆ ಮತ್ತು ಅದರ ಚಿತ್ರಣಕ್ಕೆ ಯೋಗಿ ಆದಿತ್ಯನಾಥ್ ಸೂಕ್ತ ಅಂತ ಸಂಘ ಪರಿವಾರಕ್ಕೆ ಅನಿಸುವುದು ಸಹಜ. ಸಂಘ ಪರಿವಾರದ ಭಾಗವೇ ಆಗಿ, ಸಂಘಕ್ಕೆ ಮೊದಲ ನಿಷ್ಠೆ ತೋರುವ ಕಾವಿಧಾರಿ ಯೋಗಿ ಹಿಂದೂ ರಾಷ್ಟ್ರದ ಕನಸಿನ ಸಂಘಿಗಳಿಗೆ ಪುಳಕವನ್ನೇ ಹುಟ್ಟಿಸಬಲ್ಲ. ಆದರೆ ಇಡೀ ದೇಶದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ, ಈ ದೇಶದ ಇಡೀ ವ್ಯವಸ್ಥೆಯನ್ನೇ ಅಲ್ಲಾಡಿಸಬಲ್ಲ ಅಮಿತ್ ಶಾ ಇದನ್ನು ಒಪ್ಪಲು ಸಾಧ್ಯವೇ? ಶಾಗಿಂತ ಹನ್ನೊಂದು ವರ್ಷ ಚಿಕ್ಕವನಾದ ಯೋಗಿ ಬಿಜೆಪಿಯ ಹೊಸ ಮುಖ ಆಗಿಬಿಟ್ಟರೆ ಶಾ ನಿವೃತ್ತಿಗೆ ಕಾಯುತ್ತ ಕೂರಬೇಕಾಗುತ್ತದೆ.
ಇದನ್ನು ಓದಿದ್ದೀರಾ?: ಚಂಪತ್ ರಾಯ್ ರಾಜೀನಾಮೆ ಕೊಟ್ಟಿಲ್ಲ: ರಾಮಮಂದಿರ ಟ್ರಸ್ಟ್‌ನ ‘ವಾಟ್ಸ್ಯಾಪ್’ ಗುಟ್ಟು ಬಿಚ್ಚಿಟ್ಟ ಪೇಜಾವರ ಶ್ರೀ
ಈ ಹಿನ್ನೆಲೆಯಲ್ಲಿ ಯೋಗಿಯ ರಾಜ್ಯದ ಅಯೋಧ್ಯೆಯಲ್ಲಿರುವ ರಾಮ ಮಂದಿರದ ಕಳ್ಳತನಗಳು ಒಂದೊಂದಾಗಿ ಹೊರಬರುತ್ತಿರುವುದನ್ನು ನೋಡಬೇಕು. ಈ ದೇಶದಲ್ಲಿನ ಅನೇಕ ಕಾಂಗ್ರೆಸ್ ಮತದಾರರನ್ನು ಕೂಡ ಹಿಂದುತ್ವಾದಿಗಳನ್ನಾಗಿಸಿದ್ದು ಈ ರಾಮ ಭಕ್ತಿ. ಈ ದೇಶದ ಅನೇಕ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಸೇರುವಂತೆ ಮಾಡಿದ್ದು ಈ ಮಂದಿರ ಪಾಲಿಟಿಕ್ಸ್. ಸಾವಿರಾರು ಜನರ ಪ್ರಾಣ ತ್ಯಾಗ ಮಾಡಿ ಕಟ್ಟಿದ ದೇವಸ್ಥಾನದಲ್ಲಿ ತಾವೇ ಭಕ್ತಿಯಿಂದ ಸಮರ್ಪಿಸಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾಣಿಕೆಯನ್ನು ತಾವೇ ನಂಬಿದ ವಿಶ್ವ ಹಿಂದೂ ಪರಿಷತ್ತಿನ ನಾಯಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೋರಾಟಗಾರರು ಸೇರಿ ಸಿಸಿಟಿವಿ ಕೆಮೆರಾ ಆಫ್ ಮಾಡಿ ಲೂಟಿ ಹೊಡೆದರೂ, ಯೋಗಿಯ ಸರಕಾರ ಸುಮ್ಮನೇ ಇರುವುದು ಕೇವಲ ಭ್ರಷ್ಟಾಚಾರ ಮಾತ್ರ ಅಲ್ಲ; ಅದು ಈ ದೇಶದ ಜನರ ರಾಮ ಭಕ್ತಿಯ ಮೇಲೆ ಆದ ದಾಳಿ. ಮೋದಿಯ ಭಾರತದಲ್ಲಿ, ಯೋಗಿಯ ರಾಜ್ಯದಲ್ಲಿ ರಾಮನೇ ಸೇಫ್ ಇಲ್ಲ -ಇದೇ ರಾಮ ಭಕ್ತರ ಸುಪರ್ದಿಯಲ್ಲಿ ರಾಮ ಸೇಫ್ ಇಲ್ಲ- ಅನ್ನುವುದು ಇಲ್ಲಿನ ಸಂದೇಶ.
ಅಲ್ಲಿಗೆ ಯೋಗಿ ಮತ್ತು ಮೋದಿ ಇಬ್ಬರು ಮಾತ್ರವಲ್ಲ, ಇಡೀ ಸಂಘ ಪರಿವಾರದ ಮುಖವಾಡವೇ ಕಳಚಿ ಬಿದ್ದಂತಾಗಿದೆ. ಮಂದಿರ ಕಟ್ಟಿ ಧರ್ಮ ರಕ್ಷಣೆ ಮಾಡುತ್ತೇವೆ ಅಂತ ಹೊರಟವರು ರಾಮ ಮಂದಿರದಲ್ಲೇ ದಗಾ, ವಂಚನೆ ಮತ್ತು ಕಳ್ಳತನಕ್ಕೆ ಇಳಿದಿದ್ದಾರೆ. ಚಿನ್ನ ಬೆಳ್ಳಿ ನಗದು ಕಳ್ಳತನ ಮಾತ್ರವಲ್ಲ, ರಾಮ ಮಂದಿರ ಟ್ರಸ್ಟ್ ಜಮೀನು ಖರೀದಿಯಲ್ಲಿ ನೂರಾರು ಕೋಟಿ ಅವ್ಯವಹಾರ ಮಾಡಿದ್ದು ಬೆಳಕಿಗೆ ಬಂದಿದೆ.
ರಾಮ ಮಂದಿರ ಕಟ್ಟಿದ್ದು ರಾಜಕೀಯಕ್ಕೋಸ್ಕರ ಮತ್ತು ರಾಮನ ಹೆಸರಿನಲ್ಲಿ ಲೂಟಿ ಮಾಡಲು, ದೈವ ಸೇವೆಗೆ ಅಲ್ಲ ಅನ್ನುವುದು ಜನಕ್ಕೆ ಗೊತ್ತಾಗುತ್ತಿದೆ. ಬಿಜೆಪಿ ಒಳಗಿನ ಈ ಅಂತರ್ ಯುದ್ಧ ಇನ್ನೂ ಅನೇಕ ಹಗರಣಗಳನ್ನು ಮುಂಬರುವ ದಿನಗಳಲ್ಲಿ ಅನಾವರಣಗೊಳಿಸಲಿದೆ.

ಪೀವತ್ ರಾಮ್ ರಸ್ ಖುಮಾರಿ (ರಾಮ ರಸ ಕುಡಿಯುವ ನಶೆ) ಅಂತಾನೆ ರಾಮ ಭಕ್ತ ಕಬೀರ್. ಅದರ ಅರ್ಥ ರಾಮನನ್ನು ಹಿಡಿದು ಕುಟ್ಟಿ ಅರೆದು ಚಟ್ನಿ ಮಾಡಿ ಹಿಂಡಿ ರಸ ತೆಗೆದು ಕುಡಿದು ನಶೆ ಏರಿಸಿಕೊಳ್ಳಿ ಅಂತ ಅಲ್ಲ. ಕಬೀರನ ರಾಮನಿಗೂ ದಶರಥ ಪುತ್ರ ರಾಮನಿಗೂ ಸಂಬಂಧವೇ ಇಲ್ಲ. ಕಬೀರನ ಪ್ರಕಾರ ಈ ಬದುಕಿನ ಮೂಲಭೂತ ಸತ್ಯದ ಒಂದು ಹೆಸರು ರಾಮ ಅಷ್ಟೇ. ಅದು ಕೆಲವರಿಗೆ ರಹೀಮ ಆಗಿರುತ್ತದೆ, ಇನ್ನು ಕೆಲವರಿಗೆ ಕೃಷ್ಣ, ಮತ್ತಿತರಿಗೆ ಇನ್ನೇನೇನೋ… ಬದುಕಿನ ಮೂಲ ಸತ್ಯವನ್ನು ಅರಿಯುವುದಲ್ಲ, ಓದುವುದಲ್ಲ, ಬಡಾಯಿ ಕೊಚ್ಚಿಕೊಳ್ಳುವುದು ಅಲ್ಲ. ಆ ಸತ್ಯವನ್ನು ಕುಡಿದು ನಿನ್ನ ರಕ್ತದ ಕಣ ಕಣದಲ್ಲಿ ಇಳಿಸಿಕೋ ಅಂತಾನೆ ಕಬೀರ. ಹಾಗಾದಾಗ ಮಾತ್ರ ಈ ಬದುಕು ಸತ್ಯವೂ ಅಲ್ಲ, ಅಸತ್ಯವೂ ಅಲ್ಲ, ಹಗಲೂ ಅಲ್ಲ, ಇರುಳೂ ಅಲ್ಲ, ಇದೊಂದು ಹಗಲಲ್ಲದ ರಾತ್ರಿಯಲ್ಲದ ಮುಸ್ಸಂಜೆ ಅಥವಾ ಮುಂಜಾವು. ನಿದ್ದೆಯಲ್ಲದ, ಎಚ್ಚರವೂ ಅಲ್ಲದ ನಶೆ ಮಾತ್ರ ಅಂತ ಕಬೀರ ಹೇಳುತ್ತಾನೆ. ಪೀವತ್ ರಾಮ್ ರಸ್ ಖುಮಾರಿ ಅನ್ನುವುದನ್ನು ಅರಿಯದ ಜನ ಮಸೀದಿ ಕೆಡವಿ ರಾಮ ಮಂದಿರ ಕಟ್ಟಿದ್ದು ಸ್ವಾರ್ಥಕ್ಕಾಗಿ, ಬದುಕಿನ ಮೂಲದ ಶಾಂತಿಯನ್ನು ಸತ್ಯವನ್ನು ತಲುಪುವ ತಲುಪಿಸುವ ಮಾರ್ಗವಾಗಿ ಅಲ್ಲ.
ಅಂದು ಭಗ್ನಗೊಂಡಿದ್ದು ಮಸೀದಿ ಅಲ್ಲ; ಅಂದು ಭಗ್ನಗೊಂಡಿದ್ದು ಇಲ್ಲಿನ ಮುಸಲ್ಮಾನರ ಮನಸಿನಲ್ಲಿ ಇರಬಹುದಾದ ದೈವ ಭಕ್ತಿ. ಇಂದು ರಾಮ ಮಂದಿರದಲ್ಲಿ ನಡೆದದ್ದು ಹಣದ ಮತ್ತು ಒಡವೆಯ ಕಳವು ಅಲ್ಲ; ಇಂದು ಈಗ ನಡೆದಿದ್ದು ರಾಮ ಭಕ್ತರ ಎದೆಯಲ್ಲಿನ ವಿಶ್ವಾಸದ ಕಳವು. ಈ ಎರಡು ಅಕ್ಷ್ಯಮ್ಯ ಅಪರಾಧ ಎಸಗಿದ ಸಂಘ ಪರಿವಾರ ಮತ್ತು ಬಿಜೆಪಿ ತಮ್ಮೊಳಗಿನ ವಿಷದಿಂದಲೇ ಅಂತ್ಯಗೊಳ್ಳುತ್ತವೆ.

ಡಾ. ಬಸವರಾಜ್ ಇಟ್ನಾಳ್
ಪತ್ರಕರ್ತ, ಚಿತ್ರನಿರ್ದೇಶಕ



