ಸ್ನೇಹಿತರ ನಡುವೆ ಕೆಲಸದ ವಿಚಾರವಾಗಿ ನಡೆಯುತ್ತಿದ್ದ ಮಾತಿನ ಚಕಮಕಿ ಬಿಡಿಸಲು ಮಧ್ಯಪ್ರವೇಶಿಸಿದ ಯುವಕನೊಬ್ಬ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತನನ್ನು ಮದ್ದೂರು ನಗರದ ಕೆಇಬಿ ಮುಂಭಾಗದ ತಮಿಳು ಕಾಲೋನಿ ನಿವಾಸಿಗಳಾದ ರೂಪ ಮತ್ತು ಕುಮಾರ್ ದಂಪತಿಯ ಪುತ್ರ ನಂದನ್ (25) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಸುಮಾರು 7.40ರ ವೇಳೆಗೆ ಸಿದ್ದಾರ್ಥ ಬಡಾವಣೆಯ ಎದುರಿನ ಗರೀಬ್ ಸೈಟ್‌ನ 5ನೇ ಕ್ರಾಸ್ ಬಳಿ ಈ ಘಟನೆ ನಡೆದಿದೆ. ನಂದನ್‌ನ ಸ್ನೇಹಿತರಾದ ರಘು ಮತ್ತು ಪ್ರಕಾಶ್ ನಡುವೆ ಕೆಲಸದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ವಿವಾದದಲ್ಲಿ ಭಾಗಿಯಾಗಿರದ ನಂದನ್, ಇಬ್ಬರ ನಡುವಿನ ಜಗಳ ಬಿಡಿಸಲು ಮುಂದಾಗಿದ್ದಾನೆ. ಈ ವೇಳೆ ನಡೆದ ಗಲಾಟೆಯಲ್ಲಿ ಚಾಕುವಿನಿಂದ ಕುತ್ತಿಗೆಯ ಭಾಗಕ್ಕೆ ಇರಿತವಾಗಿದ್ದು, ತೀವ್ರವಾಗಿ ಗಾಯಗೊಂಡ ನಂದನ್ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಗರೀಬ್ ಸೈಟ್ ಬಡಾವಣೆಯ ಶಿವರಾಜು ಸೇರಿದಂತೆ ನಾಲ್ವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಬಂಧಿತ ನಾಲ್ವರಲ್ಲಿ ಓರ್ವ ಮಹಿಳೆ ಹಾಗೂ ಇತರ ಇಬ್ಬರು ಆರೋಪಿಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಮೃತ ನಂದನ್‌ನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ, ಮೃತನ ತಾಯಿ ರೂಪ ಅವರ ಸಮ್ಮುಖದಲ್ಲಿ ಘಟನಾ ಸ್ಥಳದ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ಮಧ್ಯಾಹ್ನ ಸುಮಾರು 2 ಗಂಟೆಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮದ್ದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ನಂದನ್ ಕುಟುಂಬದ ಏಕೈಕ ಪುತ್ರನಾಗಿದ್ದು, ಇಬ್ಬರು ತಂಗಿಯರಿದ್ದಾರೆ. ಕಷ್ಟಪಟ್ಟು ಬೆಳೆಸಿದ ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಮೃತದೇಹದ ಮುಂದೆ ಕಣ್ಣೀರಿಟ್ಟ ತಾಯಿ ರೂಪ, “ನನ್ನ ಎದೆಎತ್ತರಕ್ಕೆ ಬೆಳೆದು ನಿಂತಿದ್ದ ಒಬ್ಬನೇ ಮಗನನ್ನು ಕಳೆದುಕೊಂಡಿದ್ದೇನೆ. ಮದುವೆಯಾಗಬೇಕಿರುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಈಗ ನಮ್ಮ ಕುಟುಂಬ ಅನಾಥವಾಗಿದೆ. ಯಾವುದೇ ತಪ್ಪು ಮಾಡದ ನನ್ನ ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಮಗನಿಗೆ ನ್ಯಾಯ ಸಿಗಬೇಕು” ಎಂದು ನೋವು ತೋಡಿಕೊಂಡರು.
ತಂದೆ ಕುಮಾರ್ ಮಾತನಾಡಿ, “ಮಗನನ್ನು ಹೊತ್ತು, ಹೊಟ್ಟೆ ಬಟ್ಟೆ ಕಟ್ಟಿ, ನಾನು ಮತ್ತು ನನ್ನ ಪತ್ನಿ ಬಹಳ ಕಷ್ಟಪಟ್ಟು ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡುಮಗನನ್ನು ಬೆಳೆಸಿದ್ದೆವು. ನಮ್ಮ ಮನೆಯ ಬೆಳಕಾಗಬೇಕಿದ್ದ ಮಗನನ್ನು ಇಂದು ಕಳೆದುಕೊಂಡಿದ್ದೇನೆ. ಈ ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಕಣ್ಣೀರಿಟ್ಟರು.
ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ಜನಶಕ್ತಿ ತಂಡದ ಸದಸ್ಯರು ನೊಂದ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮಗನನ್ನು ಕಳೆದುಕೊಂಡ ಕುಟುಂಬದ ದುಃಖದಲ್ಲಿ ಭಾಗಿಯಾದ ತಂಡದ ಸದಸ್ಯರು, “ಕಳೆದುಹೋದ ಮಗನನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕುಟುಂಬ ಎದುರಿಸಬಹುದಾದ ಸಂಕಷ್ಟಗಳು ಮತ್ತು ಸಮಸ್ಯೆಗಳಲ್ಲಿ ನಿಮ್ಮೊಂದಿಗೆ ನಿಲ್ಲುತ್ತೇವೆ” ಎಂದು ಧೈರ್ಯ ತುಂಬಿದರು.
ಈ ವಿಶೇಷ ವರದಿ ಓದಿದ್ದೀರಾ? ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!
ತಮಿಳು ಕಾಲೋನಿಯ ನಿವಾಸಿಗಳೂ ನಂದನ್ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಇಡೀ ಸಮುದಾಯದ ಜನರು ಕುಟುಂಬದ ಸದಸ್ಯರೊಂದಿಗೆ ದುಃಖ ಹಂಚಿಕೊಂಡು, ಅಂತ್ಯಸಂಸ್ಕಾರದ ಕಾರ್ಯಗಳಲ್ಲಿಯೂ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ.
ಈ ವಿಶೇಷ ವರದಿ ಓದಿದ್ದೀರಾ? ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ
ಒಂದು ಕುಟುಂಬದ ಆಧಾರವಾಗಿದ್ದ ಯುವಕನ ಅಕಾಲಿಕ ಸಾವು ತಮಿಳು ಕಾಲೋನಿಯಲ್ಲಿ ಶೋಕದ ವಾತಾವರಣ ಸೃಷ್ಟಿಸಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯರು ನಂದನ್ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.





