ಜಾತಿಯಿಂದ ಉಂಟಾದ ಅಸಮಾನತೆಯನ್ನು ನಿವಾರಿಸುವುದಕ್ಕಾಗಿ ಮೀಸಲಾತಿ ಇದೆಯೇ ಹೊರತು ಬಡತನ ನಿರ್ಮೂಲನೆಗಲ್ಲ. ಯಾವ ದಿನ ಶಿಕ್ಷಣ, ಉದ್ಯೋಗ, ಭೂಮಿ, ಸಂಪತ್ತು, ಅಧಿಕಾರ, ನ್ಯಾಯ, ಗೌರವ ಹಾಗೂ ಪ್ರತಿನಿಧಿತ್ವದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಪಾಲು ದೊರೆಯುತ್ತದೆಯೋ, ಆ ದಿನ ಮೀಸಲಾತಿಯ ಅಗತ್ಯವೇ ಕಡಿಮೆಯಾಗುತ್ತದೆ; ಇಲ್ಲದಂತೆಯೂ ಆಗುತ್ತದೆ.
ಇಂದು ಕೆಲವರು ʼಮೀಸಲಾತಿ ಹಠಾವೋʼ ಎಂಬ ಘೋಷಣೆಯೊಂದಿಗೆ ಆಂದೋಲನ ನಡೆಸುತ್ತಿದ್ದಾರೆ. ಆದರೆ, ಈ ಘೋಷಣೆ ಕೇವಲ ಒಂದು ಸರ್ಕಾರಿ ನೀತಿಯನ್ನು ವಿರೋಧಿಸುವ ಘೋಷಣೆಯಲ್ಲ. ಇದು ಶತಮಾನಗಳ ಕಾಲ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ವಂಚಿತರಾಗಿದ್ದವರನ್ನು ಮುಖ್ಯವಾಹಿನಿಗೆ ತರಲು ಸಾವಿರಾರು ವರ್ಷಗಳಿಂದ ನಡೆದ ಹೋರಾಟದ ತಾತ್ವಿಕ ನೆಲೆಯನ್ನು ಪ್ರಶ್ನಿಸುತ್ತ ಚಿವುಟುವ ಪ್ರಯತ್ನವಾಗಿದೆ.
ʼಮೀಸಲಾತಿ ಹಠಾವೋʼ ಘೋಷಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿಸಿರುವ ಕೆಲ ಸಂಘಟನೆಗಳು ಮತ್ತು ವ್ಯಕ್ತಿಗಳ ವಾದ ಸರಳವಾಗಿದೆ. ಮೀಸಲಾತಿಯಿಂದ ಪ್ರತಿಭೆ ಸಾಯುತ್ತಿದೆ, ಸಮಾಜ ವಿಭಜನೆಯಾಗುತ್ತಿದೆ, ಎಲ್ಲರಿಗೂ ಒಂದೇ ರೀತಿಯ ಅವಕಾಶ ಸಿಗಬೇಕು ಎಂಬ ವಾದ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು, ಹೌದಲ್ಲವೇ? ಎನಿಸಬಹುದು. ಆದರೆ ಭಾರತದ ಇತಿಹಾಸವನ್ನು, ಜಾತಿ ವ್ಯವಸ್ಥೆಯನ್ನು, ಸಾಮಾಜಿಕ ಅಸಮಾನತೆಯನ್ನು ಮತ್ತು ಸಂವಿಧಾನದ ಮೂಲ ಆಶಯವನ್ನು ಅರ್ಥಮಾಡಿಕೊಂಡರೆ ಈ ವಾದ ಎಷ್ಟು ಅಪೂರ್ಣ ಎಂಬುದು ಸ್ಪಷ್ಟವಾಗುತ್ತದೆ.
ಮೀಸಲಾತಿ ಎನ್ನುವುದು ಕೇವಲ ಉದ್ಯೋಗ ಅಥವಾ ಶಿಕ್ಷಣದಲ್ಲಿ ನೀಡುವ ಸೀಟುಗಳ ಹಂಚಿಕೆ ಅಲ್ಲ. ಅದು ಸಾವಿರಾರು ವರ್ಷಗಳ ಸಾಮಾಜಿಕ ಬಹಿಷ್ಕಾರ, ಶೈಕ್ಷಣಿಕ ವಂಚನೆ, ಆರ್ಥಿಕ ಹಿಂದುಳಿಯುವಿಕೆ ಮತ್ತು ಅಧಿಕಾರದಿಂದ ಹೊರಗಿಡುವ ವ್ಯವಸ್ಥೆಗೆ ನೀಡಿದ ಸಾಂವಿಧಾನಿಕ ಉತ್ತರವಾಗಿದೆ.
ಈ ನೆಲ ಬಸವಣ್ಣ, ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ. ಬಿ ಆರ್ ಅಂಬೇಡ್ಕರ್ ಅವರಂತಹ ಬಹುತೇಕ ಸಾಮಾಜಿಕ ಸಂತರು ಬದುಕಿದ್ದ ನೆಲೆ. ಇವರ ಚಿಂತನೆಗಳನ್ನು ಓದಿದರೆ, ʼಮೀಸಲಾತಿ ಹಠಾವೋʼ ಎಂಬ ಘೋಷಣೆಯು ಅವರ ಸಮಾಜದೃಷ್ಟಿಗೆ ವಿರುದ್ಧವಾಗಿರುವುದು ಸ್ಪಷ್ಟವಾಗುತ್ತದೆ.
ಬಸವಣ್ಣ ಸಮಾನತೆಯ ಮೊದಲ ಕ್ರಾಂತಿಕಾರಿ
ಹನ್ನೆರಡನೇ ಶತಮಾನದಲ್ಲಿ ಬಸವಣ್ಣರು ಮಾಡಿದ ಹೋರಾಟ ಕೇವಲ ಧಾರ್ಮಿಕ ಸುಧಾರಣೆಯಲ್ಲ; ಅದು ಸಾಮಾಜಿಕ ನ್ಯಾಯದ ಚಳವಳಿಯೂ ಆಗಿತ್ತು. ಆ ಕಾಲದಲ್ಲಿ ಜ್ಞಾನ, ಶಿಕ್ಷಣ, ದೇವರ ಆರಾಧನೆ, ಧಾರ್ಮಿಕ ಅಧಿಕಾರ, ಸಮಾಜದ ಗೌರವ ಎಲ್ಲವೂ ಕೆಲವು ಜಾತಿಗಳ ಕೈಯಲ್ಲಿ ಕೇಂದ್ರೀಕೃತವಾಗಿದ್ದವು. ಉಳಿದವರಿಗೆ ಅಧೀನತೆಯೇ ಜೀವನವಾಗಿತ್ತು. ಬಸವಣ್ಣ 12ನೇ ಶತಮಾನದಲ್ಲೇ ಈ ಜಾತಿ ಆಧಾರಿತ ಶ್ರೇಣೀಕರಣ ವ್ಯವಸ್ಥೆಯನ್ನು ಪ್ರಶ್ನಿಸಿದ್ದರು. ಅನುಭವ ಮಂಟಪವನ್ನು ನಿರ್ಮಿಸುವ ಮೂಲಕ ಅವರು ಜನ್ಮವಲ್ಲ, ಅನುಭವ ಮತ್ತು ಚಿಂತನೆಯೇ ಮಾನವನ ಮೌಲ್ಯವನ್ನು ನಿರ್ಧರಿಸಬೇಕು ಎಂದು ಘೋಷಿಸಿದರು. ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಗೌರವ ಮತ್ತು ಅವಕಾಶವನ್ನು ಕಲ್ಪಿಸುವ ಪ್ರಯತ್ನ ಮಾಡಿದರು. ಚಮ್ಮಾರ. ಕಮ್ಮಾರ, ದೋಹಾರ, ಮಹಿಳೆ, ಕೃಷಿಕ, ರಾಜಕಾರಣಿ ಎಲ್ಲರೂ ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸುವ ವ್ಯವಸ್ಥೆಯನ್ನು ಅವರು ರೂಪಿಸಿದರು. ಸಮಾಜದಲ್ಲಿ ಕೆಳಗಿಟ್ಟವರನ್ನು ಮುಖ್ಯವಾಹಿನಿಗೆ ತರುವ ಅವರ ಪ್ರಯತ್ನವೇ ಸಾಮಾಜಿಕ ನ್ಯಾಯದ ಮೂಲತತ್ವವಾಗಿತ್ತು.
ಇದು ಕೇವಲ ಆಧ್ಯಾತ್ಮಿಕ ಕ್ರಾಂತಿ ಅಲ್ಲ; ಪ್ರತಿನಿಧಿತ್ವದ ಕ್ರಾಂತಿ
ಇಂದು ʼಎಲ್ಲರೂ ಒಂದೇ ಸಾಲಿನಲ್ಲಿ ನಿಲ್ಲಲಿʼ ಎನ್ನುವವರು, ಮೊದಲು ಶತಮಾನಗಳ ಕಾಲ ಯಾರನ್ನು ಸಾಲಿನ ಹೊರಗೆ ನಿಲ್ಲಿಸಲಾಗಿತ್ತು ಎಂಬ ಪ್ರಶ್ನೆಗೆ ಉತ್ತರ ಕೊಂಡುಕೊಳ್ಳಬೇಕು. ಅನುಭವ ಮಂಟಪ ಕೇವಲ ಆಧ್ಯಾತ್ಮಿಕ ಕ್ರಾಂತಿ ಅಲ್ಲ; ಪ್ರತಿನಿಧಿತ್ವದ ಕ್ರಾಂತಿ. ಬಸವಣ್ಣರು ಅವಕಾಶವಿಲ್ಲದವರಿಗೆ ಅವಕಾಶ ಕಲ್ಪಿಸುವ ಸಮಾಜದ ಪರ ನಿಂತಿದ್ದರು. ಆ ದೃಷ್ಟಿಯಲ್ಲಿ ನೋಡಿದರೆ ಸಾಮಾಜಿಕ ನ್ಯಾಯದ ವಿಶೇಷ ಕ್ರಮಗಳು ಬಸವಣ್ಣರ ಚಿಂತನೆಗೆ ವಿರುದ್ಧವಲ್ಲ; ಅವು ಅದರ ಸಹಜ ವಿಸ್ತರಣೆ.
ಭಾರತದ ಮೊದಲ ಮೀಸಲಾತಿಯ ಹರಿಕಾರ ಶಾಹು ಮಹಾರಾಜ
ರಾಜರ್ಷಿ ಶಾಹು ಮಹಾರಾಜರು ಮಿತಭಾಷಿ ಮತ್ತು ಸಾಮಾಜಿಕ ಬಹಿಷ್ಕೃತರನ್ನು ಅಪ್ಪಿಕೊಳ್ಳುತ್ತಿದ್ದ ವಿಶಿಷ್ಟ ರಾಜರಾಗಿದ್ದರು. ಅವರು ಆಧುನಿಕ ಚಿಂತಕರಾಗಿದ್ದರು. ಕೊಲ್ಲಾಪುರವನ್ನು ರೂಪಿಸುವ ಜವಾಬ್ದಾರಿಯನ್ನೂ ಹೊಂದಿದ್ದರು. ಆ ಸಮಯದಲ್ಲಿ ಸಾಮಾಜಿಕ ಅನಿಷ್ಟ ರೂಢಿಗಳು ಮತ್ತು ಪರಿಸ್ಥಿತಿಗಳು ಭಾರತೀಯ ಸಮಾಜದಲ್ಲಿ ಮಹಿಳೆಯರು, ತಳಸಮುದಾಯಗಳು ಮತ್ತು ಬುಡಕಟ್ಟುಗಳನ್ನು ಹೀನಾಯವಾಗಿ ಕಾಣುತ್ತಿದ್ದವು. ಹಾಗಾಗಿ ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಮುಂದಾದ ರಾಜರ್ಷಿ ಶಾಹು ಮಹಾರಾಜರು ಸಮಾಜದಲ್ಲಿ ಹಿಂದುಳಿದವರಿಗೆ ಶಿಕ್ಷಣವನ್ನು ಮೊದಲ ಆದ್ಯತೆಯನ್ನಾಗಿ ನೀಡಿದರು. ಏಕೆಂದರೆ ಸಂಪತ್ತು ಮತ್ತು ಅಧಿಕಾರ ಎರಡಕ್ಕೂ ಶಿಕ್ಷಣ ದಾರಿ ಎಂಬುದನ್ನು ಶಾಹು ಮಹಾರಾಜರು ಅರಿತಿದ್ದರು. ಸಾಮಾಜಿಕ ನ್ಯಾಯ ಒದಗಿಸಲು, ಸಮಾಜಕ್ಕೆ ಘಾತುಕವಾದ ಕೆಟ್ಟ ಸಂಪ್ರದಾಯಗಳನ್ನು ನಿಷೇಧಿಸಲು ಪ್ರಯತ್ನಿಸಿದರು. ಸಮಾಜ ಮತ್ತು ಸರ್ಕಾರದಲ್ಲಿ ಎಲ್ಲ ಜನರಿಗೆ ಸಮಾನ ಅವಕಾಶ ನೀಡುವಲ್ಲಿ ಪಣತೊಟ್ಟರು. ಆದರೂ ಅನಕ್ಷರಸ್ಥ ತಳಸಮುದಾಯಗಳು ಆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದು ತಿಳಿದು ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರು.
ಶೂದ್ರರ ಅವನತಿಗೆ ಶಿಕ್ಷಣದ ಕೊರತೆಯೇ ಮೂಲ ಕಾರಣವೆಂದು ಅರಿತಿದ್ದ ಛತ್ರಪತಿ ಶಾಹುಮಹಾರಾಜರು ಅಸ್ಪಶ್ಯ ಜಾತಿಗಳನ್ನೊಳಗೊಂಡು ಎಲ್ಲ ಶೂದ್ರ ಜಾತಿಗಳಿಗೆ 22 ಶಾಲೆ ಮತ್ತು ಹಾಸ್ಟೆಲ್‌ಗಳನ್ನು ಪ್ರಾರಂಭಿಸುತ್ತಾರೆ. ಅಲ್ಲದೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಪ್ರೇರೇಪಿಸಲು 3 ತಿಂಗಳ ಸ್ಕಾಲರ್‌ಶಿಪ್ ಕೂಡಾ ನೀಡುತ್ತಾರೆ. ಅಲ್ಲದೆ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕವಾದ ಎರಡು ಶಾಲೆ ಹಾಗೂ ಹಾಸ್ಟೆಲ್‌ಗಳನ್ನು ಮೊಟ್ಟಮೊದಲ ಬಾರಿಗೆ ಪ್ರಾರಂಭಿಸುತ್ತಾರೆ. ಇಂಗ್ಲೆಂಡ್‌ನ ರಾಣಿ ಕುಟುಂಬದ ವಿವಾಹವೊಂದರಲ್ಲಿ ಭಾಗವಹಿಸಿದ್ದ ಅವರು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಇಂಗ್ಲೆಂಡಿನಿಂದಲೇ ಒಂದು ರಾಜಾಜ್ಞೆಯನ್ನು ಹೊರಡಿಸಿ ಅಸ್ಪಶ್ಯ, ಹಿಂದುಳಿದ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿಯಲ್ಲಿ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿದ್ದರು. ಇದು 1902ರ ಜುಲೈ 26ರಂದು ಕೊಲ್ಲಾಪುರದ ಗೆಜೆಟ್‌ನಲ್ಲಿ ಪ್ರಕಟವಾಯಿತು.

ಅಂದಿನ ಕೊಲ್ಹಾಪುರ ಆಡಳಿತದಲ್ಲಿ ಬ್ರಾಹ್ಮಣರು ಸುಮಾರು ಶೇ.94ರಷ್ಟು ಹುದ್ದೆಗಳನ್ನು ಹೊಂದಿದ್ದರು. ಇದನ್ನು ಸರಿಪಡಿಸಲು ಶಾಹು ಮಹಾರಾಜರು ಮೀಸಲಾತಿ ತಂದರು. ಬ್ರಾಹ್ಮಣೇತರ ಎಲ್ಲ ಜಾತಿಗಳನ್ನು ಹಿಂದುಳಿದ ವರ್ಗಗಳಾಗಿ ಗುರುತಿಸಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಮಾನ ಅವಕಾಶ ನೀಡಿದರು. ಇದು ಜಾತಿ ತಾರತಮ್ಯವನ್ನು ತೊಡೆದುಹಾಕುವ ಮಹತ್ವದ ಕ್ರಮವಾಗಿತ್ತು. ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಕೆಲವೇ ವರ್ಗಗಳ ಕೈಯಲ್ಲಿ ಸೀಮಿತವಾಗಿದ್ದರೆ ಪ್ರಜೆಗಳ ರಾಜ್ಯ ಅರ್ಥಹೀನವಾಗುತ್ತದೆಂದು ನಂಬಿದ್ದ ಅವರು ʼಮೀಸಲಾತಿʼ ಪ್ರತಿಭೆಗೆ ವಿರುದ್ಧವಲ್ಲ, ಅವಕಾಶದ ಅಸಮಾನತೆಯನ್ನು ಸರಿಪಡಿಸುವ ಸಾಧನ ಎಂಬುದನ್ನು ತೋರಿಸಿದರು. ಅವರು ಉಚಿತ ಶಿಕ್ಷಣ, ಅಸ್ಪೃಶ್ಯತೆ ನಿವಾರಣೆ, ಮಹಿಳಾ ಹಕ್ಕುಗಳು, ಅಂತರ್ಜಾತಿ ವಿವಾಹಗಳಿಗೆ ಬೆಂಬಲ ನೀಡಿದರು. ಅಂಬೇಡ್ಕರ್ ಅವರನ್ನು ಆರ್ಥಿಕವಾಗಿ ಬೆಂಬಲಿಸಿದರು. ʼಮೆರಿಟ್ʼ ಎಂಬುದು ಕೆಲವು ಜಾತಿಗಳ ಮೊನೊಪೊಲಿ(ಏಕಸ್ವಾಮ್ಯ)ಯಾಗಿದ್ದಾಗ, ಅದನ್ನು ಮುರಿಯಲು ಮೀಸಲಾತಿ ಅಗತ್ಯವೆಂದು ತಿಳಿದು ರಾಜ್ಯವು ಸಮಾನತೆಯನ್ನು ಕಾನೂನಿನಿಂದ ಖಾತರಿಪಡಿಸಬೇಕು ಎಂಬುದನ್ನು ತೋರಿಸಿಕೊಟ್ಟರು.
ಆದ್ದರಿಂದ ಅವರು ಆಡಳಿತದಲ್ಲಿ ಎಲ್ಲ ವರ್ಗಗಳಿಗೂ ಪಾಲು ನೀಡುವ ನೀತಿಯನ್ನು ಅನುಸರಿಸಿದರು. ಶಾಲೆಗಳನ್ನು ಆರಂಭಿಸಿದರು. ವಿದ್ಯಾರ್ಥಿವೇತನ ನೀಡಿದರು. ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಿದರು. ಮೊದಲ ಬಾರಿಗೆ ಸಾಮಾನ್ಯ ಜನರಿಗಾಗಿ ಅಧಿಕಾರದ ಬಾಗಿಲುಗಳನ್ನು ತೆರೆದರು.
ಶಿಕ್ಷಣವೇ ಸಾಮಾಜಿಕ ಪರಿವರ್ತನೆಯ ದಾರಿ ಎಂದರಿತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್
ಮೈಸೂರು ಸಂಸ್ಥಾನದಲ್ಲಿ ಶಿಕ್ಷಣವನ್ನು ಜನಸಾಮಾನ್ಯರಿಗೆ ತಲುಪಿಸಲು, ಹಿಂದುಳಿದ ಸಮುದಾಯಗಳಿಗೆ ವಿದ್ಯಾರ್ಥಿವೇತನ, ವಸತಿ, ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹತ್ವದ ಪಾತ್ರವಹಿಸಿದರು. ಸಮಾಜದ ಎಲ್ಲ ವರ್ಗಗಳು ಶಿಕ್ಷಣ ಮತ್ತು ಆಡಳಿತದಲ್ಲಿ ಪಾಲ್ಗೊಳ್ಳಬೇಕು ಎಂಬುದು ಅವರ ಆಡಳಿತದ ಧ್ಯೇಯವಾಗಿತ್ತು.
1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಇದು ಭಾರತದಲ್ಲೇ ರಾಜ್ಯ ಮಟ್ಟದ ಮೊದಲ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿತ್ತು. ದಲಿತರು, ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ, ಹಲವು ಬಾಲಕಿಯರ ವಿದ್ಯಾಲಯಗಳನ್ನು ತೆರೆದರು. ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸುವತ್ತ ಕ್ರಮ ಕೈಗೊಂಡರು. ಸಾರ್ವಜನಿಕ ಶಾಲೆಗಳಲ್ಲಿ ಜಾತಿ ಭೇದವಿಲ್ಲದ ಪ್ರವೇಶ ಪ್ರವೇಶ ನೀಡಲಾಗಿತ್ತು. ಇದರ ಫಲವಾಗಿ ಮೈಸೂರು ಸಂಸ್ಥಾನವು ಅಂದಿನ ಭಾರತದಲ್ಲಿ ಸಾಕ್ಷರತೆ ಪ್ರಮಾಣದಲ್ಲಿ ಮುಂಚೂಣಿಯಲ್ಲಿತ್ತು.
ಜೆ ಎನ್ ಟಾಟಾ ಅವರ ಕನಸಿನ ‘ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್’ (IISc) ಸಂಸ್ಥೆಯನ್ನು ಸ್ಥಾಪಿಸಲು ನಾಲ್ವಡಿಯವರು ಬೆಂಗಳೂರಿನಲ್ಲಿ 370 ಎಕರೆ ಜಮೀನು ಮತ್ತು ಭಾರೀ ಪ್ರಮಾಣದ ಆರ್ಥಿಕ ನೆರವನ್ನು ನೀಡಿದರು. ಇದರಿಂದಾಗಿ ಬೆಂಗಳೂರಿನ IISc ಸ್ಥಾಪನೆಯಾಯಿತು.
1918ರಲ್ಲಿ ಮಿಲ್ಲರ್ ಸಮಿತಿಯನ್ನು ನೇಮಿಸಿ, ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಜಾರಿಗೊಳಿಸಿದರು. 7 ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವನ್ನು ಶೇ.50ಕ್ಕೆ ತರುವುದು ಇದರ ಗುರಿಯಾಗಿತ್ತು. ಬ್ರಾಹ್ಮಣೇತರರು(ಒಕ್ಕಲಿಗ, ಲಿಂಗಾಯತ, ದಲಿತರು ಸೇರಿ) ಆಡಳಿತದಲ್ಲಿ ಅತ್ಯಲ್ಪ ಪ್ರಾತಿನಿಧ್ಯ ಹೊಂದಿದ್ದರು. ಅದಕ್ಕಾಗಿ ನಾಲ್ವಡಿಯವರು ವಿರೋಧವನ್ನು ಎದುರಿಸಿ ಈ ನೀತಿ ಜಾರಿಗೊಳಿಸಿದರು.

ಮೈಸೂರು ರಾಜ್ಯವು ಭಾರತದಲ್ಲಿ ಮೊದಲ ಬಾರಿಗೆ ವ್ಯಾಪಕವಾಗಿ ಜಾತಿ ಆಧಾರಿತ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ರಾಜ್ಯಗಳಲ್ಲಿ ಒಂದು. ಪ್ರಗತಿಪರ ಆಡಳಿತವು ಸಾಮಾಜಿಕ ನ್ಯಾಯವನ್ನು ನೀತಿಯಾಗಿ ತೆಗೆದುಕೊಳ್ಳಬೇಕು ಎಂಬುದನ್ನು ನಾಲ್ವಡಿಯವರು ತೋರಿಸಿದರು. ಸರ್ಕಾರವು ಕೇವಲ ಕಾನೂನು-ಸುವ್ಯವಸ್ಥೆ ಕಾಯುವ ಯಂತ್ರವಲ್ಲ; ಅವಕಾಶಗಳನ್ನು ನ್ಯಾಯಯುತವಾಗಿ ಹಂಚುವ ಸಂಸ್ಥೆಯೂ ಆಗಿದೆ ಎಂಬ ಸತ್ಯವನ್ನು ತಿಳಿದಿದ್ದರು.
ಮೀಸಲಾತಿ ದಾನವಲ್ಲ, ಸಾಂವಿಧಾನಿಕ ನ್ಯಾಯ: ಡಾ. ಅಂಬೇಡ್ಕರ್
ಅಂಬೇಡ್ಕರ್ ಮೀಸಲಾತಿಯನ್ನು ದಯೆಯ ಕ್ರಮವಾಗಿ ನೋಡಲಿಲ್ಲ. ಅದು ʼಕ್ಷತಿಪೂರಣ ನ್ಯಾಯ(compensatory justice)ʼ ಎಂದು ನಂಬಿದ್ದರು. ಸಮಾನ ಸ್ಪರ್ಧೆ ಎಂದರೆ ಎಲ್ಲರೂ ಒಂದೇ ಸಾಲಿನಲ್ಲಿ ಓಟ ಆರಂಭಿಸುವುದಲ್ಲ; ಶತಮಾನಗಳ ಹಿಂದೆ ತಳ್ಳಲ್ಪಟ್ಟವರನ್ನು ಮೊದಲು ಸಮಾನ ನೆಲೆಗೆ ತರುವುದು ಅಗತ್ಯ ಎಂಬುದು ಅವರ ದೃಷ್ಟಿಕೋನವಾಗಿತ್ತು.
ಮೀಸಲಾತಿ ಏಕೆ ಇನ್ನೂ ಅಗತ್ಯ?
ಸಾವಿರಾರು ವರ್ಷಗಳಿಂದ ಅಧಿಕಾರದ ಎಲ್ಲಾ ಸಂಸ್ಥೆಗಳಿಂದ ಹೊರಗಿಡಲ್ಪಟ್ಟ ಸಮುದಾಯಗಳಿಗೆ ಸಂಸತ್ತು, ವಿಧಾನಸಭೆ, ಆಡಳಿತ, ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಪಾಲುದಾರಿಕೆ ಸಿಗದಿದ್ದರೆ ಪ್ರಜಾಪ್ರಭುತ್ವ ಅಪೂರ್ಣವಾಗುತ್ತದೆ ಎಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಅರಿತಿದ್ದರು. ಹಾಗಾಗಿಯೇ ದೂರದೃಷ್ಟಿಯ ಫಲವಾಗಿ ಸಂವಿಧಾನದಲ್ಲಿ ಮೀಸಲಾತಿ ಲಿಖಿತಗೊಳಿಸಿದರು. ಸಮಾನತೆ ಎಂದರೆ ಎಲ್ಲರಿಗೂ ಒಂದೇ ನಿಯಮ ಹೇರಿಕೆಯಾಗುವುದಲ್ಲ. ಅಸಮಾನ ಪರಿಸ್ಥಿತಿಯಲ್ಲಿರುವವರಿಗೆ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವುದೇ ನಿಜವಾದ ಸಮಾನತೆ. ಈ ಐತಿಹಾಸಿಕ ಅಸಮಾನತೆಯನ್ನು ಸರಿಪಡಿಸುವುದಕ್ಕಾಗಿ ಸಂವಿಧಾನದಲ್ಲಿ 15(4), 16(4), 46ನೇ ವಿಧಿಗಳಂತಹ ವಿಶೇಷ ನಿಬಂಧನೆಗಳನ್ನು ಜಾರಿಗೊಳಿಸಲಾಯಿತು.
| ಅಂಶ | ಆರ್ಟಿಕಲ್ 15(4) | ಆರ್ಟಿಕಲ್ 16(4) |
|---|---|---|
| ಮುಖ್ಯ ಕ್ಷೇತ್ರ | ಶಿಕ್ಷಣ, ಸಾರ್ವಜನಿಕ ಸೌಲಭ್ಯಗಳು | ಸರ್ಕಾರಿ ನೌಕರಿ / ನೇಮಕಾತಿ |
| ಗುರಿ ವರ್ಗ | ಸಾಮಾಜಿಕ-ಶೈಕ್ಷಣಿಕ ಹಿಂದುಳಿದ ವರ್ಗಗಳು, SC, ST | ಹಿಂದುಳಿದ ವರ್ಗಗಳು (ಸಾಕಷ್ಟು ಪ್ರಾತಿನಿಧ್ಯವಿಲ್ಲದ) |
| ಮೂಲ | 1951ರ ಮೊದಲ ತಿದ್ದುಪಡಿ | ಮೂಲ ಸಂವಿಧಾನ |
| ಸ್ವರೂಪ | ವಿಶೇಷ ನಿಬಂಧನೆ (special provision) | ನೇರ ಮೀಸಲಾತಿ (reservation of posts) |
ಮೀಸಲಾತಿ ʼಮೆರಿಟ್ʼಗೆ ವಿರುದ್ಧವಲ್ಲ. ಅದು ಸಮಾನ ಅವಕಾಶವನ್ನು ಖಾತರಿಪಡಿಸುವ ಸಾಧನ. ಸಮಾಜವು ಶತಮಾನಗಳ ಕಾಲ ಕೆಲವರನ್ನು ಶಿಕ್ಷಣ, ಆಸ್ತಿ, ಸಾಮಾಜಿಕವಾಗಿ ಹೊರಗಿಟ್ಟಿದ್ದರೆ, ಅವರನ್ನು ಒಂದೇ ಸಾಲಿನಲ್ಲಿ ಸ್ಪರ್ಧಿಸಲು ಹೇಳುವುದು ಅನ್ಯಾಯ.
ಮೀಸಲಾತಿಯ ಉದ್ದೇಶ ಜಾತಿಯನ್ನು ಶಾಶ್ವತಗೊಳಿಸುವುದಲ್ಲ; ಜಾತಿ ಆಧಾರಿತ ಅಸಮಾನತೆಯ ಪರಿಣಾಮಗಳನ್ನು ಕಡಿಮೆ ಮಾಡುವುದು. ಸಮಾಜದಲ್ಲಿ ಶಿಕ್ಷಣ, ಭೂಮಿ, ಸಂಪತ್ತು, ಅಧಿಕಾರ ಮತ್ತು ಪ್ರತಿನಿಧಿತ್ವದಲ್ಲಿ ಸಮಾನತೆ ಸಂಪೂರ್ಣವಾಗಿ ಸಾಧನೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಮೀಸಲಾತಿ ತೆಗೆದುಹಾಕುವುದು ಅಸಮಾನತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಅಪಾಯವನ್ನು ಹೊಂದಿದೆ. ರಾಜಕೀಯ ಮೀಸಲಾತಿಗೆ ಮೊದಲು 10 ವರ್ಷ ಮಿತಿ ಇತ್ತು(ಅಂಬೇಡ್ಕರ್ ಅದನ್ನು ಇನ್ನೂ ಹೆಚ್ಚು ಮಾಡಬೇಕೆಂದು ಬಯಸಿದ್ದರು). ಶಿಕ್ಷಣ ಮತ್ತು ನೌಕರಿಗಳ ಮೀಸಲಾತಿಗೆ ಅಂತಹ ಮಿತಿ ಇರಲಿಲ್ಲ. ಅಸ್ಪೃಶ್ಯತೆ ಮತ್ತು ಶೋಷಣೆ ಇರುವವರೆಗೆ ರಕ್ಷಣೆ ಬೇಕು ಎಂಬುದನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಮೀಸಲಾತಿ ಇರಬೇಕೆ ಅಥವಾ ಬೇಡವೇ ಎನ್ನುವ ಪ್ರಶ್ನೆಗಿಂತ ಮೊದಲು, ಸಮಾಜದಲ್ಲಿ ಎಲ್ಲರಿಗೂ ನಿಜವಾಗಿಯೂ ಸಮಾನ ಅವಕಾಶಗಳಿವೆಯೇ? ಎಂಬ ಪ್ರಶ್ನೆಗೆ ಉತ್ತರಿಸಬೇಕು. ಒಂದು ವೇಳೆ ಅವಕಾಶಗಳಿಲ್ಲದಿದ್ದರೆ ಸಾಮಾಜಿಕ ನ್ಯಾಯದ ಕ್ರಮಗಳನ್ನು ದುರ್ಬಲಗೊಳಿಸುವ ಬದಲು ಬಲಪಡಿಸುವ ಅಗತ್ಯವಿದೆ.
ಇದನ್ನೂ ಓದಿ: ಮೊಟ್ಟ ಮೊದಲ ಮೀಸಲಾತಿ ಜನಕ: ಶಾಹು ಮಹಾರಾಜರ ಜನಪರ ಆಡಳಿತದ ಕುರಿತು ನಿಮಗೆಷ್ಟು ಗೊತ್ತು?
ಬಸವಣ್ಣ ಸಮಾನತೆಯನ್ನು ಕಲಿಸಿದರು. ಶಾಹು ಮಹಾರಾಜ ಅವಕಾಶವನ್ನು ವಿಸ್ತರಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣವನ್ನು ಎಲ್ಲರಿಗೂ ತಲುಪಿಸಿದರು. ಅಂಬೇಡ್ಕರ್ ಅದನ್ನು ಸಂವಿಧಾನದ ಭದ್ರತೆಯಾಗಿ ರೂಪಿಸಿದರು. ಆದ್ದರಿಂದ, ʼಮೀಸಲಾತಿ ಹಠಾವೋʼ ಎಂಬ ಘೋಷಣೆಗಿಂತ, ʼಸಾಮಾಜಿಕ ಅನ್ಯಾಯ ಹಠಾವೋʼ ಎಂಬ ಘೋಷಣೆಯೇ ಈ ದೇಶದ ಸಂವಿಧಾನ, ಇತಿಹಾಸ ಮತ್ತು ಸಾಮಾಜಿಕ ನ್ಯಾಯದ ಪರಂಪರೆಗೆ ಹೆಚ್ಚು ಹೊಂದಿಕೆಯಾಗುತ್ತದೆ.
ಇಂದಿನ ಮೀಸಲಾತಿ ವಿರೋಧಿಸುತ್ತಿರುವ ಯುವಜನರಿಗೆ ಕಿವಿಮಾತು…
1. ʼಮೆರಿಟ್(ಪ್ರತಿಭೆ) ಸಾಯುತ್ತಿದೆʼ ಎಂಬ ವಾದ
ಬಸವಣ್ಣ ಹೇಳಿದಂತೆ ಕಾಯಕ ಸಮಾನ. ಆದರೆ ಕಾಯಕಕ್ಕೆ ಅವಕಾಶವೇ ಇಲ್ಲದಿದ್ದರೆ? ಶಾಹು ಮಹಾರಾಜ ಮತ್ತು ನಾಲ್ವಡಿ ಏಕೆ ಶೇ.50ರಷ್ಟು ಮೀಸಲಾತಿ ಏಕೆ ತಂದರು? ಏಕೆಂದರೆ ‘ಮೆರಿಟ್’ ಎಂಬುದು ಕೆಲವು ಜಾತಿಗಳ ಮೊನೊಪೊಲಿಯಾಗಿತ್ತು. ಇಂದಿಗೂ ಅನೇಕ ಕ್ಷೇತ್ರಗಳಲ್ಲಿ(ಉನ್ನತ ನ್ಯಾಯಾಲಯ, ಕಾರ್ಪೊರೇಟ್ ಬೋರ್ಡ್‌ಗಳು, ಮಾಧ್ಯಮ) ಪ್ರಾತಿನಿಧ್ಯ ಅಸಮಾನವಾಗಿದೆ. ಮೀಸಲಾತಿ ಮೆರಿಟ್ ಅನ್ನು ಕೊಲ್ಲುವುದಿಲ್ಲ; ಅದು ಮೆರಿಟ್‌ಗೆ ಅವಕಾಶ ಕೊಡುತ್ತದೆ.”
ʼಮೆರಿಟ್ʼ ಎಂದರೆ ಏನು? ಉತ್ತಮ ಶಾಲೆ, ಉತ್ತಮ ಶಿಕ್ಷಕರು, ಸುರಕ್ಷಿತ ಮನೆ, ಪುಸ್ತಕಗಳು, ಪೌಷ್ಟಿಕ ಆಹಾರ, ಆರೋಗ್ಯ, ವಿದ್ಯುತ್, ಇಂಟರ್ನೆಟ್, ಓದಲು ಸಮಯ, ಸಮಾಜದ ಪ್ರೋತ್ಸಾಹ ಇವೆಲ್ಲವೂ ಪ್ರತಿಭೆಯ ಬೆಳವಣಿಗೆಯ ಭಾಗವಾಗಿವೆ. ಒಂದು ಬಡ ಹಳ್ಳಿಯಲ್ಲಿ, ಶಾಲೆ ಇಲ್ಲದೆ, ಪುಸ್ತಕಗಳಿಲ್ಲದೆ, ಆಹಾರವಿಲ್ಲದೆ, ಸಮಾಜದ ಬೆಂಬಲವಿಲ್ಲದೇ ಬೆಳೆದ ಮಕ್ಕಳಿಗೆ ಮತ್ತು ನಗರದ ಕೋಚಿಂಗ್ ಕ್ಲಾಸ್, ಇಂಗ್ಲಿಷ್ ಮಾಧ್ಯಮ, ನೆಟ್‌ವರ್ಕ್ ಇರುವ ಮಕ್ಕಳಿಗೂ ಒಂದೇ ಪರೀಕ್ಷೆ ನಡೆಸುವುದು ನ್ಯಾಯವೇ? ಈ ಇಬ್ಬರನ್ನೂ ಒಂದೇ ಪರೀಕ್ಷೆಯಲ್ಲಿ ಸ್ಪರ್ಧೆಗೆ ನಿಲ್ಲಿಸಿ, ಅವರ ಪರೀಕ್ಷೆಯ ಅಂಕಗಳನ್ನು ಮಾತ್ರ ಮೆರಿಟ್ ಮಾನದಂಡವೆಂದು ಹೇಳುವುದು ವಾಸ್ತವವೇ? ಅದನ್ನು ʼಸಮಾನ ಅವಕಾಶʼ ಎಂದು ಕರೆಯುವುದು ನ್ಯಾಯವೇ? ಎಂಬುದನ್ನು ಶಾಹು ಮಹಾರಾಜರ ಆಡಳಿತ ನಮಗೆ ಕಲಿಸುತ್ತದೆ.
2. ʼಮೀಸಲಾತಿ ಜಾತಿವಾದವನ್ನು ಹೆಚ್ಚಿಸುತ್ತದೆʼ ಎಂಬ ವಾದ
ʼಜಾತಿ ವ್ಯವಸ್ಥೆʼ ಮೀಸಲಾತಿಗಿಂತ ಮುಂಚೆಯೇ ಇತ್ತು. ಬಸವಣ್ಣರ ಕಾಲದಿಂದಲೂ ಜಾತಿ ಇದೆ. ಮೀಸಲಾತಿ ಜಾತಿಯನ್ನು ನೆನಪಿಸುತ್ತದೆಂದು ಹೇಳುವುದು, ಬೆಂಕಿ ನಂದಿಸುವವರನ್ನು ‘ನೀವು ಬೆಂಕಿ ಮಾತಾಡುತ್ತೀರಿ’ ಎಂದು ಆರೋಪಿಸುವಂತೆ. ಅಂಬೇಡ್ಕರ್ ಹೇಳಿದಂತೆ ಸಮಸ್ಯೆಯನ್ನು ಗುರುತಿಸದೆ ಪರಿಹಾರವಿಲ್ಲ. ಜಾತಿ ಇರುವವರೆಗೆ ಜಾತಿ ಆಧಾರಿತ ಸರಿಪಡಿಸುವ ಕ್ರಮಗಳು ಬೇಕು.
3. ʼಮೀಸಲಾತಿ ತಾತ್ಕಾಲಿಕವಾಗಿರಬೇಕು, ಈಗ ಸಾಕುʼ ಎಂಬ ವಾದ
ʼಅಂಬೇಡ್ಕರ್ ರಾಜಕೀಯ ಮೀಸಲಾತಿಗೆ 10 ವರ್ಷ ಹೇಳಿದ್ದರು. ಆದರೆ ಅಸ್ಪೃಶ್ಯತೆ ಮತ್ತು ಶೋಷಣೆ ಮುಂದುವರಿದಿದ್ದರೆ ಇನ್ನೂ ಹೆಚ್ಚು ಬೇಕೆಂದು ಬಯಸಿದ್ದರು. ಇಂದಿಗೂ SC/ST/OBCಗಳಲ್ಲಿ ಶಿಕ್ಷಣ, ಆರೋಗ್ಯ, ಆಸ್ತಿ, ಪ್ರಾತಿನಿಧ್ಯದಲ್ಲಿ ಅಂತರವಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಮೊದಲ ಪೀಳಿಗೆಯ ಪದವೀಧರರು ಇರುವುದನ್ನು ಡೇಟಾ ತೋರಿಸುತ್ತದೆ. ಸಮಾನತೆ ಸಾಧಿತವಾದಾಗ ಮೀಸಲಾತಿ ಅನಗತ್ಯವಾಗುತ್ತದೆ. ಅಲ್ಲಿಯವರೆಗೆ ಮೀಸಲಾತಿ ನೀಡುವುದು ನ್ಯಾಯ.
4. ʼನಾನು ಬಡವನಿದ್ದೇನೆ, ನನಗೂ ಬೇಕುʼ ಎಂಬ ವಾದ
ಬಡತನ ಮತ್ತು ಜಾತಿ ಶೋಷಣೆ ಎರಡೂ ವಾಸ್ತವ. ಆದ್ದರಿಂದ ಬಡವರಿಗೆ EWS ಮೀಸಲಾತಿ ನೀಡಲಾಗಿದೆ. ಆದರೆ ಜಾತಿ ಆಧಾರಿತ ಹೊರಗಿಡುವುದು ಬಡತನಕ್ಕಿಂತ ಹೆಚ್ಚು ಕರಾಳವಾಗಿದೆ. ಅದು ಸಾಮಾಜಿಕ ಬಹಿಷ್ಕಾರ, ಮದುವೆ, ನೆಟ್‌ವರ್ಕ್, ಸಾಂಸ್ಕೃತಿಕ ಬಂಡವಾಳವನ್ನು ಒಳಗೊಂಡಿದೆ. ಅದಕ್ಕಾಗಿಯೇ ಶಾಹು ಮಹಾರಾಜ ಮತ್ತು ನಾಲ್ವಡಿ ಕೇವಲ ಆರ್ಥಿಕವಲ್ಲದೆ, ಸಾಮಾಜಿಕ ಹಿಂದುಳಿದಿರುವುದನ್ನೂ ಗುರುತಿಸಿದರು.
5. ವೈಯಕ್ತಿಕ ಉದಾಹರಣೆ
ದಲಿತರನ್ನು ಹೊರತುಪಡಿಸಿ ಇತರ ಸಮುದಾಯಗಳಿಗೂ ಅಂದರೆ, ನಿಮ್ಮ ತಂದೆ/ತಾಯಿ ಅಥವಾ ಅಜ್ಜ-ಅಜ್ಜಿಗೆ ಶಾಲೆಗೆ ಹೋಗಲು ಅವಕಾಶವಿರಲಿಲ್ಲ. ಆದರೆ ಈಗ ನಿಮಗೆ ಆ ಭಾಗ್ಯ ಇದೆ. ಅದು ಹೇಗೆ ಸಾಧ್ಯವಾಯಿತು? ಶಾಹು ಮಹಾರಾಜ, ನಾಲ್ವಡಿ, ಅಂಬೇಡ್ಕರ್ ಅವರಂಥವರು ಹೋರಾಡಿ ತಂದ ಅವಕಾಶಗಳಿಂದ. ಆದರೆ ಇಂದು ನೀವು ‘ಮೆರಿಟ್’ ಮಾತಾಡುತ್ತೀರಿ; ಏಕೆಂದರೆ ಯಾರೋ ನಿಮ್ಮ ಪೂರ್ವಜರಿಗೆ ಬಾಗಿಲು ತೆರೆದರು. ಈಗ ಅದೇ ಬಾಗಿಲನ್ನು ಇತರರಿಗೆ ಮುಚ್ಚುವುದು ನ್ಯಾಯವೇ?

ಇನ್ನೊಂದು ಉದಾಹರಣೆ : ಒಂದು ಮನೆಯಲ್ಲಿ ತಾಯಿಗೆ 4 ಮಂದಿ ಮಕ್ಕಳಿದ್ದು ಅದರಲ್ಲಿ ಓರ್ವ ಕುಂಟನೋ, ಕುರುಡನೋ ಆಗಿದ್ದರೆ, ಆ ತಾಯಿ ಮೂರು ಮಕ್ಕಳಿಗಿಂತ ಹೆಚ್ಚಾಗಿ ವಿಕಲಚೇತನನಿಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಾಳೆ. ಎಲ್ಲಿದ್ದರೂ ಅವನ ಬಗ್ಗೆಯೇ ಯೋಚಿಸುತ್ತಾಳೆ. ಆ ಮಗನನ್ನು ಹೇಗಾದರೂ ಮಾಡಿ ಆತ ಸ್ವತಂತ್ರನಾಗಿ ಎದ್ದು ನಿಲ್ಲಬೇಕೆಂದು ಯೋಚಿಸುತ್ತಾಳೆ…. ಒಂದು ಮನೆಯ ಸ್ಥಿತಿಯೇ ಹೀಗಿರುವಾಗ, ಸಾವಿರಾರು ವರ್ಷಗಳಿಂದ ಅಂಕವಿಕಲರಂತೆ ಬದುಕುತ್ತಿರುವ ದಲಿತರ ಮೀಸಲಾತಿಯನ್ನು ಕಸಿದುಕೊಳ್ಳಲು ಯತ್ನಿಸಿದರೆ ಅದು ಹಸಿದವನ ಕೈಯಿಂದ ಅನ್ನ ಕಿತ್ತುಕೊಂಡಷ್ಟೇ ಕ್ರೂರವಾಗಿರುತ್ತದೆ. ಆಳವಾಗಿ ಯೋಚಿಸಿದಾಗ ಇಂತಹ ಸಾಕಷ್ಟು ಉದಾಹರಣೆಗಳು ಕಣ್ಣಮುಂದೆ ಬರುತ್ತವೆ.
ಹಾಗಾಗಿಯೇ, ಸಮಾನತೆಯನ್ನು ಬಸವಣ್ಣರು ಆಧ್ಯಾತ್ಮಿಕವಾಗಿ, ಶಾಹು ಮಹಾರಾಜರು ಮತ್ತು ನಾಲ್ವಡಿಯವರು ಆಡಳಿತಾತ್ಮಕವಾಗಿ, ಅಂಬೇಡ್ಕರ್ ಸಂವಿಧಾನಾತ್ಮಕವಾಗಿ ಸ್ಥಾಪಿಸಿದರು. ಮೀಸಲಾತಿ ಯಾರನ್ನೂ ಕೆಳಗಿಳಿಸುವುದಿಲ್ಲ; ಕೆಳಗಿರುವವರನ್ನು ಮೇಲಕ್ಕೆತ್ತುತ್ತದೆ. ಇದು ದುರ್ಬಲರನ್ನು ರಕ್ಷಿಸುವುದಲ್ಲ, ಸಮಾಜವನ್ನು ಬಲಪಡಿಸುವುದು. ಯುವಜನರು ʼಮೆರಿಟ್ vs ಮೀಸಲಾತಿʼ ಎಂಬ ತಪ್ಪು ದ್ವಂದ್ವವನ್ನು ಬಿಟ್ಟು, ʼಸಮಾನ ಅವಕಾಶ + ಐತಿಹಾಸಿಕ ನ್ಯಾಯʼ ಎಂಬ ಚೌಕಟ್ಟಿನಲ್ಲಿ ಯೋಚಿಸಬೇಕು.
ಇದನ್ನೂ ಓದಿದ್ದೀರಾ? ಮಾದರಿ ರಾಜ್ಯ ಕಟ್ಟಿದ ಮೈಸೂರಿನ ನಿರ್ಮಾತೃ, ಸಾಮಾಜಿಕ ಹರಿಕಾರ: ನಾಲ್ವಡಿ ಕೃಷ್ಣರಾಜ ಒಡೆಯರ್
ಜಾತಿಯಿಂದ ಉಂಟಾದ ಅಸಮಾನತೆಯನ್ನು ನಿವಾರಿಸುವುದಕ್ಕಾಗಿ ಮೀಸಲಾತಿ ಇದೆಯೇ ಹೊರತು ಬಡತನ ನಿರ್ಮೂಲನೆಗಲ್ಲ. ಯಾವ ದಿನ ಶಿಕ್ಷಣ, ಉದ್ಯೋಗ, ಭೂಮಿ, ಸಂಪತ್ತು, ಅಧಿಕಾರ, ನ್ಯಾಯ, ಗೌರವ ಮತ್ತು ಪ್ರತಿನಿಧಿತ್ವದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಪಾಲು ದೊರೆಯುತ್ತದೆಯೋ, ಆ ದಿನ ಮೀಸಲಾತಿಯ ಅಗತ್ಯವೇ ಕಡಿಮೆಯಾಗುತ್ತದೆ; ಇಲ್ಲದಂತೆಯೂ ಆಗುತ್ತದೆ. ಆದರೆ ಗ್ರಾಮಗಳಲ್ಲಿ ಇನ್ನೂ ಬಾವಿಗಳು ಬೇರೆ, ದೇವಾಲಯಗಳಲ್ಲಿ ಭೇದಭಾವ, ಅಂತರ್ಜಾತಿ ವಿವಾಹಗಳಾದರೆ ಹಲ್ಲೆಗಳು, ಶೈಕ್ಷಣಿಕ ಅಸಮಾನತೆ, ಭೂಹಂಚಿಕೆಯ ಅಸಮತೋಲನ, ಆಡಳಿತದಲ್ಲಿ ಅಸಮಾನ ಪ್ರತಿನಿಧಿತ್ವ ಮುಂದುವರಿದಿರುವಾಗ, ಈ ದೇಶದಲ್ಲಿ ಜಾತಿ ಎಂಬುದು ಕಾಲು ಮುರಿದುಕೊಂಡು ಬಿದ್ದಿರುವಾಗ ಮೀಸಲಾತಿಯನ್ನು ತೆಗೆದುಹಾಕುವ ಬೇಡಿಕೆ ಸಮಸ್ಯೆಯ ಪರಿಹಾರವಲ್ಲ; ಸಮಸ್ಯೆಯನ್ನು ಮುಚ್ಚಿಹಾಕುವ ಪ್ರಯತ್ನವಾಗುತ್ತದೆ.




