ಶಾಹು ಮಹಾರಾಜರ ಆಡಳಿತವು ರಾಜಪ್ರಭುತ್ವದಲ್ಲಿ ಜನಪ್ರಭುತ್ವದ ಮೌಲ್ಯಗಳನ್ನು ತುಂಬಿದ್ದರಿಂದ ಅವರು ಸ್ವಯಂ ʼರಾಜರ್ಷಿʼ ಎಂದು ಕರೆಸಿಕೊಂಡರು. ಜಾತಿ, ವರ್ಗ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಅವರ ಸುಧಾರಣೆಗಳು ಸ್ವಾತಂತ್ರ್ಯೋತ್ತರ ಭಾರತದ ಸಂವಿಧಾನದ ಮೀಸಲಾತಿ ನೀತಿಗೆ ಪ್ರೇರಣೆಯಾದವು. ʼಹಿಂದುಳಿದವರನ್ನು ಮುಂದುವರಿಸುವುದೇ ನನ್ನ ಧರ್ಮʼ ಎಂಬ ಅವರ ಮಾತುಗಳು ಇಂದಿಗೂ ಪ್ರೇರಣೆಯಾಗಿವೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 1874ರ ಜೂನ್ 26ರಂದು ಛತ್ರಪತಿ ಶಾಹು ಮಹಾರಾಜರು ಜನಿಸಿದರು. ಇವರು ಹಿಂದುಳಿದ ಜಾತಿಯ ಕುಣಲಿ ಮರಾಠಾ ಸಮಾಜಕ್ಕೆ ಸೇರಿದ ಇವರು ವಿದ್ಯಾಭ್ಯಾಸದ ನಂತರ 20ರ ವಯಸ್ಸಿನಲ್ಲಿಯೇ 1894ರ ಏಪ್ರಿಲ್ 2ರಲ್ಲಿ ಬ್ರಿಟಿಷ್ ಸಂಸ್ಥಾನದ ಸಾಮಂತ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು.
ರಾಜ ಮನೆತನದ ಪ್ರಕಾರ ಕಿರೀಟಧಾರರಾದ ರಾಜರು ಅರಮನೆಯ ಆವರಣದಲ್ಲಿರುವ ಪಂಚಗಂಗಾ ಕಲ್ಯಾಣಿಯಲ್ಲಿ ಸ್ನಾನಮಾಡುವುದರ ಮೂಲಕ, ಪುರೋಹಿತರು ವೇದಘೋಷಗಳನ್ನು ಪಠಣ ಮಾಡಿ, ಮೆರವಣಿಗೆಯಲ್ಲಿ ಕರೆತಂದು, ಪುರೋಹಿತರೇ ನಿಂತು ಮಹಾರಾಜರನ್ನು ಸಿಂಹಾಸನದ ಮೇಲೆ ಕುಳ್ಳಿರಿಸುವ ಪದ್ಧತಿಯಿತ್ತು. ಆದರೆ ಶಾಹು ಮಹಾರಾಜರಿಗೆ ಕಿರೀಟಧಾರಣೆ ಮಾಡುವ ಸಮಾರಂಭಕ್ಕೆ ಮಂತ್ರಪಠಣ ಮಾಡಲು ಬ್ರಾಹ್ಮಣರು ನಿರಾಕರಿಸುತ್ತ, ʼಶೂದ್ರನಿಗೆ ಇದರ ಅಗತ್ಯವಿಲ್ಲʼ ಎಂದು ಪ್ರತಿಪಾದಿಸುತ್ತಾರೆ.
ಏಕೆಂದರೆ, ಕೊಲ್ಲಾಪುರ ಜಿಲ್ಲೆಯ ಕಾಗಲ್(ಹಿರಿಯ) ಸಂಸ್ಥಾನದ ರಾಜಮನೆತನದಲ್ಲಿ ಜನಿಸಿದ ಛತ್ರಪತಿ ಶಾಹು ಮಹಾರಾಜರು ಹಿಂದುಳಿದ ಜಾತಿಯ ಕುಣಲಿ ಮರಾಠಾ ಸಮುದಾಯಕ್ಕೆ ಸೇರಿದವರು. ಇವರ ತಂದೆ ಅಪ್ಪಾಸಾಹೇಬ್ ಘಾಟ್ಗೆ ಮತ್ತು ತಾಯಿ ರಾಧಾಬಾಯಿ. ಶಾಹು ಮಹಾರಾಜರ ಮೂಲ ಹೆಸರು ಯಶವಂತರಾವ್ ಘಾಟ್ಗೆ… ಇವರು ಅಪ್ಪಾಸಾಹೇಬ್ ಘಾಟ್ಗೆ ಅವರ ಹಿರಿಯ ಮಗ. ಕಾಗಲ್‌ನಲ್ಲಿ ಹುಟ್ಟಿ ಬೆಳೆದರು. ನಂತರ 1884ರ ಮಾರ್ಚ್‌ನಲ್ಲಿ ಕೊಲ್ಲಾಪುರದ ರಾಜಾ ಶಿವಾಜಿ IVಯ ಪತ್ನಿ ಆನಂದಿಬಾಯಿಯವರು ಇವರನ್ನು ದತ್ತು ಪಡೆದರು. ಬಳಿಕ ಯುವಕನಾಗಿದ್ದಾಗಲೇ 1894ರಲ್ಲಿ ಸಾಮಂತ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡು ಭೋಂಸ್ಲೆ ವಂಶದ ರಾಜರಾದರು. ಹಾಗಾಗಿ ಬ್ರಾಹ್ಮಣರು ಶಾಸ್ತ್ರಗಳನ್ನು ಮಾಡಲು ನಿರಾಕರಿಸಿದರು.
ಬ್ರಾಹ್ಮಣರ ನಿರಾಕರಣೆಯಾದರೂ ಕಿರೀಟಧಾರಣೆಗೊಂಡ ಛತ್ರಪತಿ ಶಾಹುಮಹಾರಾಜರು ಸಮಾರಂಭ ಬಹಿಷ್ಕರಿಸಿದ ಬ್ರಾಹ್ಮಣರ ವತನ್(ಇನಾಂ ಜಮೀನು) ಅನ್ನು ಮತ್ತು ಅವರಿಗೆ ನೀಡುತ್ತಿದ್ದ ರಾಜಧನವನ್ನು ರದ್ದು ಮಾಡುತ್ತಾರೆ. ʼರಾಜನಾದ ತನಗೇ ಈ ರೀತಿ ಮಾಡುವ ಇವರು ಸಾಮಾನ್ಯ ಜನರನ್ನು ಇನ್ಯಾವ ರೀತಿ ನೋಡಬಹುದುʼ ಎಂದು ಅರಿತ ಅವರು ಬ್ರಾಹ್ಮಣರ ವಿರುದ್ಧ ಕಠಿಣ ನಿಯಮಗಳನ್ನು ತಳೆಯುತ್ತಾರೆ. ವತನ್ ಭೂಮಿ ಮತ್ತು ರಾಜಧನ ಕಳೆದುಕೊಂಡ ಪುರೋಹಿತರು ಅವರ ಜಗದ್ಗುರುಗಳಾದ ಶಂಕರಾಚಾರ್ಯರಿಗೆ ದೂರು ನೀಡಿ ಅವರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದರಿಂದ ಮತ್ತೆ ಕೋಪಗೊಂಡ ಮಹಾರಾಜರು ಅವರ ಜಗದ್ಗುರುಗಳನ್ನು ಕೊಲ್ಲಾಪುರ ಪ್ರಾಂತದಿಂದಲೇ ಗಡಿಪಾರು ಮಾಡುವುದರ ಮೂಲಕ ಜಗದ್ಗುರುಗಳ ಸಾವಿರಾರು ಎಕರೆ ಇನಾಂ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಕೊಲ್ಲಾಪುರ ಪ್ರಾಂತದಲ್ಲಿ ಎಲ್ಲ ಹಂತದ ಅಧಿಕಾರಗಳಲ್ಲಿ ನೂರಕ್ಕೆ ನೂರರಷ್ಟು ಬ್ರಾಹ್ಮಣರೇ ಇದ್ದರು.
ರಾಜರ್ಷಿ ಶಾಹು ಮಹಾರಾಜರು ಮಿತಭಾಷಿ ಮತ್ತು ಸಾಮಾಜಿಕ ಬಹಿಷ್ಕೃತರನ್ನು ಅಪ್ಪಿಕೊಳ್ಳುತ್ತಿದ್ದ ವಿಶಿಷ್ಟ ರಾಜರಾಗಿದ್ದರು. ಅವರು ಆಧುನಿಕ ಚಿಂತಕರಾಗಿದ್ದರು. ಕೊಲ್ಲಾಪುರವನ್ನು ರೂಪಿಸುವ ಜವಾಬ್ದಾರಿಯನ್ನೂ ಹೊಂದಿದ್ದರು. ಆ ಸಮಯದಲ್ಲಿ ಸಾಮಾಜಿಕ ಅನಿಷ್ಟ ರೂಢಿಗಳು ಮತ್ತು ಪರಿಸ್ಥಿತಿಗಳು ಭಾರತೀಯ ಸಮಾಜದಲ್ಲಿ ಮಹಿಳೆಯರು, ತಳಸಮುದಾಯಗಳು ಮತ್ತು ಬುಡಕಟ್ಟುಗಳನ್ನು ಹೀನಾಯವಾಗಿ ಕಾಣುತ್ತಿದ್ದವು. ಹಾಗಾಗಿ ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಮುಂದಾದ ರಾಜರ್ಷಿ ಶಾಹು ಮಹಾರಾಜರು ಸಮಾಜದಲ್ಲಿ ಹಿಂದುಳಿದವರಿಗೆ ಶಿಕ್ಷಣವನ್ನು ಮೊದಲ ಆದ್ಯತೆಯನ್ನಾಗಿ ನೀಡಿದರು. ಏಕೆಂದರೆ ಸಂಪತ್ತು ಮತ್ತು ಅಧಿಕಾರ ಎರಡಕ್ಕೂ ಶಿಕ್ಷಣ ದಾರಿ ಎಂಬುದನ್ನು ಶಾಹು ಮಹಾರಾಜರು ಅರಿತಿದ್ದರು. ಸಾಮಾಜಿಕ ನ್ಯಾಯ ಒದಗಿಸಲು, ಸಮಾಜಕ್ಕೆ ಘಾತುಕವಾದ ಕೆಟ್ಟ ಸಂಪ್ರದಾಯಗಳನ್ನು ನಿಷೇಧಿಸಲು ಪ್ರಯತ್ನಿಸಿದರು. ಸಮಾಜ ಮತ್ತು ಸರ್ಕಾರದಲ್ಲಿ ಎಲ್ಲ ಜನರಿಗೆ ಸಮಾನ ಅವಕಾಶ ನೀಡುವಲ್ಲಿ ಪಣತೊಟ್ಟರು. ಆದರೂ ಅನಕ್ಷರಸ್ಥ ತಳಸಮುದಾಯಗಳು ಆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದು ತಿಳಿದು ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರು.
ಮಹಾತ್ಮಾ ಜ್ಯೋತಿಬಾ ಫುಲೆಯವರು ಸ್ಥಾಪಿಸಿದ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು ನಿರ್ಧರಿಸಿದರು. ಶೂದ್ರರ ಅವನತಿಗೆ ಶಿಕ್ಷಣದ ಕೊರತೆಯೇ ಮೂಲ ಕಾರಣವೆಂದು ಅರಿತಿದ್ದ ಛತ್ರಪತಿ ಶಾಹುಮಹಾರಾಜರು ಶೂದ್ರ ಜಾತಿಗಳಿಗೆ ವಿಶೇಷವಾಗಿ ಅಸ್ಪಶ್ಯ ಜಾತಿಗಳನ್ನೊಳಗೊಂಡು 22 ಶಾಲೆ ಮತ್ತು ಹಾಸ್ಟೆಲ್‌ಗಳನ್ನು ಪ್ರಾರಂಭಿಸುತ್ತಾರೆ. ಅಲ್ಲದೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಪ್ರೇರೇಪಿಸಲು 3 ತಿಂಗಳ ಸ್ಕಾಲರ್‌ಶಿಪ್ ಕೂಡಾ ನೀಡುತ್ತಾರೆ. ಅಲ್ಲದೆ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕವಾದ ಎರಡು ಶಾಲೆ ಮತ್ತು ಹಾಸ್ಟೆಲ್‌ಗಳನ್ನು ಮೊಟ್ಟಮೊದಲ ಬಾರಿಗೆ ಪ್ರಾರಂಭಿಸುತ್ತಾರೆ. ಇಂಗ್ಲೆಂಡ್‌ನ ರಾಣಿ ಕುಟುಂಬದ ವಿವಾಹವೊಂದರಲ್ಲಿ ಭಾಗವಹಿಸಿದ್ದ ಅವರು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಇಂಗ್ಲೆಂಡಿನಿಂದಲೇ ಒಂದು ರಾಜಾಜ್ಞೆಯನ್ನು ಹೊರಡಿಸಿ ಅಸ್ಪಶ್ಯ, ಹಿಂದುಳಿದ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿಯಲ್ಲಿ ಶೇ. 50ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದ್ದರು. ಇದು 1902ರ ಜುಲೈ 26ರಂದು ಕೊಲ್ಲಾಪುರದ ಗೆಜೆಟ್‌ನಲ್ಲಿ ಪ್ರಕಟವಾಯಿತು.
ಬ್ರಾಹ್ಮಣೇತರ ಜಾತಿಗಳನ್ನು ಹಿಂದುಳಿದ ವರ್ಗಗಳಾಗಿ ಗುರುತಿಸಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಮಾನ ಅವಕಾಶ ನೀಡಿದರು. ಇದು ಜಾತಿ ತಾರತಮ್ಯವನ್ನು ತೊಡೆದುಹಾಕುವ ಮಹತ್ವದ ಕ್ರಮವಾಗಿತ್ತು. ಪಂಚಗಂಗಾ ನದಿಯಲ್ಲಿ ನಡೆದ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಏಕಸ್ವಾಮ್ಯವನ್ನು ಕಂಡ ಅವರು ಈ ಸುಧಾರಣೆಗೆ ಪ್ರೇರಣೆ ಪಡೆದರೆಂದು ಹೇಳಲಾಗುತ್ತದೆ.
ಶೈಕ್ಷಣಿಕ ಪ್ರಗತಿ: ರಾಜರ್ಷಿ ಶಾಹು ಮಹಾರಾಜರು ವೈವಿಧ್ಯಮಯ ಸಾಮಾಜಿಕ ವಿಭಾಗಗಳಲ್ಲಿ ಒಳಗೊಳ್ಳುವಿಕೆಯನ್ನು ಬೆಳೆಸಲು ಮೀಸಲಾಗಿರುವ ಪ್ರಮುಖ ಸಾಮಾಜಿಕ ಸುಧಾರಕರಾಗಿ ಹೊರಹೊಮ್ಮಿದರು. ಶಿಕ್ಷಣವು ಯಶಸ್ಸಿಗೆ ನಿರ್ಣಾಯಕ ಮಾರ್ಗವೆಂದು ಗುರುತಿಸಿದ ಅವರು, ಕೊಲ್ಲಾಪುರದ ನಿವಾಸಿಗಳನ್ನು ಔಪಚಾರಿಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. ಅವರು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತಂದರು. ಶಿಕ್ಷಣದ ಮಹತ್ವದ ಬಗ್ಗೆ ಸಾರ್ವಜನಿಕ ಮನೋಭಾವಗಳನ್ನು ಪರಿವರ್ತಿಸಲು ಪ್ರಯತ್ನಿಸಿದರು. ಹೆಚ್ಚುವರಿಯಾಗಿ, ಕೊಲ್ಲಾಪುರದಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದರು. ವಿವಿಧ ಜಾತಿಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಸ್ಥಾಪಿಸಿದರು. ತಾಂತ್ರಿಕ ಶಿಕ್ಷಣಕ್ಕಾಗಿ ರಾಜಾರಾಂ ಇಂಡಸ್ಟ್ರಿಯಲ್ ಸ್ಕೂಲ್ ಸ್ಥಾಪಿಸಿದರು. ಶಿಕ್ಷಣವು ಸಮಾಜದ ಎಲ್ಲಾ ವರ್ಗಗಳಿಗೆ ಲಭ್ಯವಾಗಬೇಕು ಎಂಬುದು ಅವರ ದೃಢ ನಂಬಿಕೆಯ ಈ ಪ್ರಯತ್ನಗಳು ಸಮುದಾಯದ ಎಲ್ಲ ಸದಸ್ಯರ ಸಾಮಾಜಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು.
ಮಹಿಳೆಯರ ಹಕ್ಕುಗಳು ಮತ್ತು ಅವಕಾಶಗಳನ್ನು ಹೆಚ್ಚಿಸುವುದು
ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನಗಳಲ್ಲಿ, ಮಹಿಳೆಯರು ಕೌಟುಂಬಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯ ನಿರ್ಬಂಧಗಳಿಂದಾಗಿ ಅವರು ಸಮಾಜದಲ್ಲಿ ಗಮನಾರ್ಹ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅಲ್ಲದೆ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದರು. ಇದರಿಂದಾಗಿ ಅವರ ಸಾಮಾಜಿಕ ಸ್ಥಾನಮಾನ ಕುಸಿದಿತ್ತು. ಪರಿಣಾಮವಾಗಿ, ಈ ಅವಧಿಯಲ್ಲಿ ವಿಧವೆಯರು ಅನುಭವಿಸುತ್ತಿದ್ದ ತೀವ್ರ ತೊಂದರೆಗಳು ವಿಧವಾ ವಿವಾಹಕ್ಕೆ ಕ್ರಮ ಕೈಗೊಳ್ಳುವಂತೆ ಶಾಹು ಮಹಾರಾಜರನ್ನು ಪ್ರೇರೇಪಿಸಿತು. ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಲು ಮತ್ತು ಅವರನ್ನು ಉನ್ನತ ಗೌರವದಿಂದ ಕಾಣಲು ಶಾಹು ಮಹಾರಾಜ್ ಗಣನೀಯ ಯೋಜನೆಗಳನ್ನು ಕೈಗೊಂಡರು. ಎಲ್ಲರಿಗೂ ಸಮಾನ ಅವಕಾಶಗಳಿಗೆ ಆದ್ಯತೆ ನೀಡಿದರು.
ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದ ಅವರು ಹಲವಾರು ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದರು. ಅಂತೆಯೇ ಡಾ. ಮಿಸ್ ಕೃಷ್ಣಾಬಾಯಿ ಕೆಳವ್ಕರ್ ಅವರ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಿದರು. ಇವರು ಬ್ರಿಟನ್‌ನಲ್ಲಿ ವೈದ್ಯಕೀಯ ತರಬೇತಿ ಪಡೆದು ಹಿಂದಿರುಗಿದ ನಂತರ, 1924ರವರೆಗೆ ಆಲ್ಬರ್ಟ್ ಎಡ್ವರ್ಡ್ ಸ್ಮಾರಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಹಾಯಕ ಶಸ್ತ್ರಚಿಕಿತ್ಸಕ ಮತ್ತು ಮಹಿಳಾ ವಿಭಾಗದ ಮುಖ್ಯಸ್ಥರಾಗಿ ವೈದ್ಯಕೀಯ ಸೇವೆ ಸಲ್ಲಿಸಿದರು. ಇದು ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣಕ್ಕೆ ಸಾಮಾಜಿಕ ಬೆಂಬಲವನ್ನು ಬೆಳೆಸಲು ಒಂದು ಪ್ರಮುಖ ಕ್ಷಣವನ್ನು ಗುರುತಿಸಿತು. ಅಲ್ಲದೆ ಮಹಾರಾಜರು ಕುಟುಂಬಗಳು ಮತ್ತು ಸಮಾಜದಲ್ಲಿ ಮಹಿಳೆಯರ ಹಕ್ಕು ಹಾಗೂ ಅವಕಾಶಗಳಿಗಾಗಿ ನಿರಂತರವಾಗಿ ಪ್ರತಿಪಾದಿಸಿದರು. ಲಿಂಗ ಸಮಾನತೆಗಾಗಿ ಅವಿಶ್ರಾಂತವಾಗಿ ದುಡಿದರು.
ಸಾಮಾಜಿಕ ಸುಧಾರಣೆಗಾಗಿ ಮೀಸಲಾತಿ: ಸಾಮಾಜಿಕ ಕಟ್ಟುಪಾಡುಗಳು ಜಾತಿ ತಾರತಮ್ಯದಿಂದ ಗಮನಾರ್ಹವಾಗಿ ಪ್ರಭಾವಿತವಾಗಿದ್ದವು. ಇದರಿಂದಾಗಿ ತಳಸಮುದಾಯದವರಿಗೆ ವೃತ್ತಿಪರ ಮತ್ತು ಶೈಕ್ಷಣಿಕ ಅವಕಾಶಗಳಿಂದ ವಂಚಿತರಾಗುವಂತೆ ಮಾಡಿತ್ತು. ಪರಿಣಾಮವಾಗಿ, ರಾಜರ್ಷಿ ಶಾಹು ಮಹಾರಾಜರು ಸಮಾನತೆಯನ್ನು ಎತ್ತಿಹಿಡಿದು, ಅಸ್ಪಶ್ಯ, ಹಿಂದುಳಿದ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿಯಲ್ಲಿ ಶೇ. 50ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದರು.
ದಲಿತ-ಹಿಂದುಳಿದ ವರ್ಗಗಳ ಉದ್ಧಾರ: ಜ್ಯೋತಿರಾವ್ ಫುಲೆಯವರಿಂದ ಪ್ರಭಾವಿತರಾಗಿದ್ದ ಶಾಹು ಮಹಾರಾಜರು ಅಸ್ಪೃಶ್ಯತೆಯನ್ನು ನಿಷೇಧಿಸಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ನೀಡಿದರು. ಡಾ. ಬಿ ಆರ್ ಅಂಬೇಡ್ಕರ್ ಅವರ ಶಿಕ್ಷಣ ಮತ್ತು ಹೋರಾಟಕ್ಕೆ ಆರ್ಥಿಕ ನೆರವು ನೀಡಿದರು. ಅಂಬೇಡ್ಕರ್ ಅವರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಿದ್ದಲ್ಲದೆ, ‘ಮೂಕ ನಾಯಕ’ ಪತ್ರಿಕೆಗೂ ಅನುದಾನ ನೀಡಿದರು.
ಕೃಷಿ ತಂತ್ರಗಳು: ರಾಜರ್ಷಿ ಶಾಹು ಮಹಾರಾಜರು ಕೃಷಿಯ ಬಗ್ಗೆ ಪ್ರಗತಿಪರ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪ್ರದರ್ಶಿಸಿದರು. ರೈತರ ಹಿತಾಸಕ್ತಿಗಳಿಗೆ ಸ್ಥಿರವಾಗಿ ಆದ್ಯತೆ ನೀಡಿದರು. ಅವರು ಹಲವಾರು ನವೀನ ಕೃಷಿ ಪದ್ಧತಿಗಳನ್ನು, ವಿಶೇಷವಾಗಿ ದಕ್ಷಿಣ ಮಹಾರಾಷ್ಟ್ರದಲ್ಲಿ ಚಹಾ ಮತ್ತು ಕಾಫಿ ಕೃಷಿಯನ್ನು ಪರಿಚಯಿಸುವ ಮೂಲಕ ಪ್ರವರ್ತಕರಾದರು. ಅವರ ಕಾರ್ಯತಂತ್ರದ ಯೋಜನೆಯಲ್ಲಿ ಬರಗಾಲದ ಪರಿಣಾಮಗಳನ್ನು ತಗ್ಗಿಸುವ ಗುರಿಯನ್ನು ಹೊಂದಿರುವ ಯೋಜನೆಗಳ ಅಭಿವೃದ್ಧಿಯೂ ಸೇರಿದೆ. 1908ರಲ್ಲಿ ಅವರು ಭಾಗೀರಥಿ ನದಿಯ ಮೇಲೆ ʼಬಂಧಾರʼ(ಸಣ್ಣ ಅಣೆಕಟ್ಟೆ)ವನ್ನು ನಿರ್ಮಿಸಿದರು. ಅದಕ್ಕೆ ಮಹಾರಾಣಿ ಲಕ್ಷ್ಮಿಬಾಯಿ ಸರೋವರ ಎಂದು ಹೆಸರಿಸಿಟ್ಟರು. ಇದು ನೀರಿನ ಸಂರಕ್ಷಣೆಗೆ ಅವರು ಕೈಗೊಂಡ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯು ವಿವಿಧ ಅಣೆಕಟ್ಟುಗಳ ಸ್ಥಾಪನೆಯೊಂದಿಗೆ, ಇಂದಿಗೂ ಸ್ಥಳೀಯ ಕೃಷಿ ಸಮುದಾಯಕ್ಕೆ ಅಗತ್ಯವಾದ ಜಲಸಂಪನ್ಮೂಲಗಳನ್ನು ಒದಗಿಸುತ್ತದೆ.
ಆರ್ಥಿಕ ವಲಯ: ರಾಜರ್ಷಿ ಶಾಹು ಮಹಾರಾಜರು ಆಧುನಿಕ ಅಭಿವೃದ್ಧಿಗೆ ಗಮನಾರ್ಹ ಒತ್ತು ನೀಡಿದರು. 1907ರಲ್ಲಿ, ಸಹಕಾರಿ ಜವಳಿ ಗಿರಣಿಯನ್ನು ಉದ್ಘಾಟಿಸಿದರು. ಇದು ಸ್ಥಳೀಯ ಉದ್ಯಮದಲ್ಲಿ ಪ್ರಮುಖ ಪ್ರಗತಿ ಸಾಧಿಸಿತು. ಹೆಚ್ಚುವರಿಯಾಗಿ, ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದ ವಿಶೇಷ ಶಾಲೆಯನ್ನು ಸ್ಥಾಪಿಸಿದರು. ಈ ಯೋಜನೆಗಳು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಕೊಲ್ಲಾಪುರದ ನಿವಾಸಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದವು. ಆಧುನಿಕ ಪ್ರಗತಿಗೆ ಅವರ ಬದ್ಧತೆ ಸ್ಪಷ್ಟವಾಗಿತ್ತು, ಅವರು ವಿವಿಧ ಯೋಜನೆಗಳನ್ನು ಪ್ರಾರಂಭಿಸುವ ಜತೆಗೆ ಯುವ ವ್ಯಕ್ತಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಆಯಾ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸಿದರು. ಇದಲ್ಲದೆ, ಅವರು ವೃತ್ತಿಪರ ತರಬೇತಿಯನ್ನು ಸುಗಮಗೊಳಿಸಲು ರಾಜಾರಾಮ್ ಕೈಗಾರಿಕಾ ಶಾಲೆಗಳನ್ನು ಸ್ಥಾಪಿಸಿದರು ಮತ್ತು 1913ರಲ್ಲಿ ಕೊಲ್ಹಾಪುರ ಅರ್ಬನ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಸ್ಥಾಪಿಸುವ ಮೂಲಕ ಸಹಕಾರಿಗಳ ಮಹತ್ವವನ್ನು ಗುರುತಿಸಿದರು.
ಮಹಾರಾಜರು ಪ್ರಾರಂಭಿಸಿದ 22 ಶಾಲೆಗಳಿಂದ 1920ರವರೆಗೆ, ವಿಶೇಷವಾಗಿ ಅಸ್ಪಶ್ಯ ಜಾತಿಗಳಲ್ಲಿ ಒಂದಾದ ಮಹಾರ್ ಜಾತಿಯ 418 ಮಂದಿ ವಿದ್ಯಾರ್ಥಿಗಳು ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಪದವೀಧರರಾಗಿದ್ದರು. ಈ ಪದವೀಧರರು ಹಾಗೂ ಅವರ ಪೋಷಕರನ್ನೊಳಗೊಂಡ ಮಹಾರ್ ಸಮಾವೇಶ 1920ರ ಮಾರ್ಚ್ 27ರಂದು ಮನಗಾಂವ್ ಎಂಬ ಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದಿತ್ತು.
ಆ ಬೃಹತ್ ಮಹಾರ್ ಪರಿಷತ್ತಿನಲ್ಲಿ ಮೊದಲನೇ ದಿನ ಮಾತನಾಡಿದ ಮಹಾರಾಜರು, “ನಾನು ನನ್ನ ಸಣ್ಣ ಸಂಸ್ಥಾನದಲ್ಲಿ ಅಧಿಕಾರ ಹಿಡಿದ ಮೇಲೆ ನಿಮಗೆಲ್ಲ ಏನೆಲ್ಲ ಮಾಡಬೇಕಾಗಿತ್ತೋ ಆ ಕಾನೂನುಗಳನ್ನು ಜಾರಿ ಮಾಡಿ ಅಸ್ಪಶ್ಯರ, ಹಿಂದುಳಿದವರ ಏಳಿಗೆಗೆ ಸಣ್ಣ ಪ್ರಮಾಣದಲ್ಲಿ ಪ್ರಯತ್ನಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸ್ಥಾನಗಳಲ್ಲಿ ಕೊಲ್ಲಾಪುರದ ಮಾದರಿಯಲ್ಲಿ ಬದಲಾವಣೆ ತರಬೇಕಾದರೆ ಈ ದೇಶದಲ್ಲಿರುವ ಏಕೈಕ ವ್ಯಕ್ತಿಯನ್ನು ಇಂದು ನಾನು ಈ ದೇಶದ ಜನತೆಗೆ ಪರಿಚಯಿಸುತ್ತೇನೆ. ಅವರು ಬೇರೆ ಯಾರೂ ಅಲ್ಲ. ವಿದ್ಯಾವಂತ, ಬುದ್ಧಿವಂತ ಮುತ್ಸದ್ದಿ ಈ ದೇಶದ ಭವಿಷ್ಯದ ಮುಂದಿನ ರುವಾರಿ, ಅಂಬೇಡ್ಕರ್” ಎನ್ನುವ ಸಂದೇಶವನ್ನು ಕೊಟ್ಟಿದ್ದರು.
ಆ ಸಭೆಯ 2ನೇ ದಿನದ ಅಧಿವೇಶನದಲ್ಲಿ ಬಾಬಾ ಸಾಹೇಬರು ಮಾತನಾಡಿ, ದಲಿತರು ಮತ್ತು ಹಿಂದುಳಿದವರಿಗೆ ತಿಳಿಸುತ್ತ, “ನೀವುಗಳು ನಿಮ್ಮದಲ್ಲದ ಬ್ರಾಹ್ಮಣರು ಸೃಷ್ಟಿ ಮಾಡಿದ ಅನೇಕ ಮೂಢನಂಬಿಕೆಯ ಹಬ್ಬಹರಿದಿನಗಳನ್ನು ಆಚರಿಸುತ್ತ ಹಣ ಮತ್ತು ಸಮಯವನ್ನು ಕಳೆದುಕೊಳ್ಳುತ್ತಿದ್ದೀರಿ! ನೀವು ಹಬ್ಬಗಳನ್ನು ಆಚರಿಸಲೇಬೇಕೆಂದರೆ, ಭಗವಾನ್ ಬುದ್ಧನ ಹುಟ್ಟು ಹಬ್ಬವನ್ನು ಆಚರಿಸಿ. ನಾವು ಕತ್ತಲೆಯಲ್ಲಿ ಸಾವಿರಾರು ವರ್ಷ ಕಳೆಯುತ್ತಿದ್ದಾಗ ನಮ್ಮ ಬಾಳಿಗೆ ವಿದ್ಯೆಯೆಂಬ ಬೆಳಕನ್ನು ನೀಡಿದ ಮಹಾತ್ಮಾ ಜ್ಯೋತಿಬಾ ಫುಲೆಯವರ ಮತ್ತು ಅವರ ಸಂಗಾತಿ ಮಾತೆ ಸಾವಿತ್ರಿ ಬಾಯಿಯವರ ಜನ್ಮದಿನವನ್ನು ಹಬ್ಬವಾಗಿ ಆಚರಿಸಬಹುದು. ಅಲ್ಲದೆ ಈಗ ನಮ್ಮ ಮುಂದಿರುವ ನಮಗಾಗಿ ಅನೇಕ ತ್ಯಾಗಗಳನ್ನು ಮಾಡಿದ ನಮಗಾಗಿ ‘ದೇಡ್ ಮಹಾರಾಜ’ ಎಂದು ಬೈಸಿಕೊಂಡರೂ ದೇಶದ ಚರಿತ್ರೆಯಲ್ಲಿ ಮೊದಲ ಬಾರಿಗೆ ಮೀಸಲಾತಿ ಜಾರಿಗೊಳಿಸಿದ ಛತ್ರಪತಿ ಶಾಹುಮಹಾರಾಜರ ಹುಟ್ಟಿದ ಹಬ್ಬವನ್ನು ಬಹುವಿಜೃಂಭಣೆಯಿಂದ ನಾವು ಆಚರಿಸಬೇಕು” ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಕರೆನೀಡಿದ್ದರು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಈ ಕರೆ ನೀಡಿ ಶತಕವೇ ಕಳೆದರೂ ಶೋಷಿತ ಸಮುದಾಯ ಅವರ ಮಾತನ್ನು ಇನ್ನೂ ಅರ್ಥೈಸಿಕೊಳ್ಳದಿರುವುದು ವಿಪರ್ಯಾಸವೇ ಸರಿ.
ಸಾಮಾಜಿಕ ಹರಿಹಾರ, ಮೊಟ್ಟಮೊದಲ ಮೀಸಲಾತಿ ಕರ್ತೃ ಶಾಹು ಮಹಾರಾಜರ ಆಡಳಿತದ ಸಾಧನೆಗಳು
- ಶಾಹು ಮಹಾರಾಜರು 1870ರಲ್ಲಿ ರಾಜಾರಾಂ ಇಂಡಸ್ಟ್ರಿಯಲ್ ಸ್ಕೂಲ್ ನಿರ್ಮಿಸಿದರು.
- 1886ರಲ್ಲಿ ಶೂದ್ರ ಜಾತಿಗಳಿಗೆ ವಿಶೇಷವಾಗಿ ಅಸ್ಪಶ್ಯ ಜಾತಿಗಳನ್ನೊಳಗೊಂಡು 22 ಶಾಲೆ ಮತ್ತು ಹಾಸ್ಟೆಲ್‌ಗಳನ್ನು ಪ್ರಾರಂಭಿಸಿದರು.
- 1902ರಂದು ಮೊಟ್ಟಮೊದಲಿಗೆ ಅಸ್ಪಶ್ಯ, ಹಿಂದುಳಿದ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿಯಲ್ಲಿ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿದರು. ಕೊಲ್ಲಾಪುರದ ಗೆಜೆಟ್‌ನಲ್ಲಿ ಪ್ರಕಟವಾಯಿತು.
- 1906ರಲ್ಲಿ ಶಾಹು ಛತ್ರಪತಿ ನೇಯ್ಗೆ ಮತ್ತು ನೂಲುವ ಗಿರಣಿಯನ್ನು ಪ್ರಾರಂಭಿಸಿದರು.
- 1907ರಂದು ರಾಧಾನಗರಿ ಅಣೆಕಟ್ಟನ್ನು ಪ್ರಾರಂಭಿಸಿದ್ದು, ಈ ಯೋಜನೆ 1935ರಲ್ಲಿ ಪೂರ್ಣಗೊಂಡಿತು.
- 1908ರಲ್ಲಿ ಭಾಗೀರಥಿ ನದಿಯ ಮೇಲೆ ʼಬಂಧಾರʼ(ಅಣೆಕಟ್ಟೆ)ವನ್ನು ನಿರ್ಮಿಸಿದರು.
- 1913ರಲ್ಲಿ ಕೊಲ್ಹಾಪುರ ಅರ್ಬನ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಸ್ಥಾಪಿಸಿದರು.
- 1917ರಂದು ತಮ್ಮ ರಾಜ್ಯದಲ್ಲಿ ಪ್ರಾಥಮಿಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಾಗೂ ವಿಧವಾ ವಿವಾಹ ಕಾಯ್ದೆ ಜಾರಿ ಮಾಡಿದರು.
- 1919ರಲ್ಲಿ ಅಸ್ಪಶ್ಯತಾ ನಿಷೇಧ ಕಾಯ್ದೆ ಜಾರಿಗೊಳಿಸಿದರು. ಮೊಟ್ಟಮೊದಲ ಬಾರಿಗೆ ಅಂತರ್ಜಾತಿ ವಿವಾಹ ಕಾಯ್ದೆ ಜಾರಿಗೊಳಿಸಿದರು.
- 1920ರಲ್ಲಿ ಚಮ್ಮಾರ ಜಾತಿಗೆ ಸೇರಿದ ಯುವಕನನ್ನು ಕೊಲ್ಲಾಪುರ ಮುನ್ಸಿಪಾಲಿಟಿಯ ಚೇರ್ಮನ್ ಆಗಿ ನೇಮಿಸಿದ್ದರು. ದೇವದಾಸಿ ಪದ್ಧತಿಯ ನಿರ್ಮೂಲ ಕಾಯ್ದೆ ಜಾರಿ ಮಾಡಿದ್ದರು.
- ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಕೂಸಾದ ‘ಮೂಕ ನಾಯಕ’ ಮರಾಠಿ ಪತ್ರಿಕೆ ಪ್ರಾರಂಭಿಸಲು 1920ರಲ್ಲಿ ಪ್ರಾರಂಭಿಕ ಬಂಡವಾಳವಾಗಿ ಛತ್ರಪತಿ ಶಾಹು ಮಹಾರಾಜರೇ 2,500 ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು.
ಭಾರತದಲ್ಲಿ ಸಾಮಾಜಿಕ ಸುಧಾರಕರ ಒಂದು ಸಣ್ಣ ಗುಂಪು ಸಾಮಾಜಿಕ ಪ್ರಗತಿಗೆ ಗಮನಾರ್ಹ ಮತ್ತು ಅತ್ಯಂತ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ. ರಾಜರ್ಷಿ ಶಾಹು ಮಹಾರಾಜರು ಮತ್ತೊಬ್ಬ ಬದ್ಧ ವ್ಯಕ್ತಿ ಮತ್ತು ಬಹುಶಃ ಸಮಾಜವನ್ನು ಮತ್ತಷ್ಟು ಅಭಿವೃದ್ಧಿಪಡಿಸುವತ್ತ ಗಮನಾರ್ಹ ಪ್ರಗತಿ ಸಾಧಿಸಿದ ಅತ್ಯಂತ ಗಮನಾರ್ಹ ವ್ಯಕ್ತಿ. ಅವರು ದಯಾಳು, ಆಶಾವಾದಿ ಮತ್ತು ಗ್ರಹಿಸುವ ಚಕ್ರವರ್ತಿಯಾಗಿದ್ದರು. ಅವರು ಪಡೆದ ಅತ್ಯುತ್ತಮ ಶಿಕ್ಷಣದಿಂದಾಗಿ, ಶಿಕ್ಷಣದ ಮಹತ್ವ ಮತ್ತು ಮೌಲ್ಯದ ಬಗ್ಗೆ ಅವರಿಗೆ ತಿಳಿದಿತ್ತು. ಅವರ ತತ್ವಶಾಸ್ತ್ರ, ಆಲೋಚನಾ ವಿಧಾನ ಮತ್ತು ವಿಶಾಲ ವ್ಯಾಪ್ತಿಯ ವಿಷಯಗಳ ಕುರಿತಾದ ಅಭಿಪ್ರಾಯಗಳು ಆ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಚ್ಚು ಆಧುನಿಕವಾಗಿದ್ದವು. ಹಾಗಾಗಿ ಅವರು ಕೊಲ್ಲಾಪುರದಲ್ಲಿ ಸರಾಸರಿ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸಲು ಶ್ರಮಿಸಿದ್ದಾರೆ. ಅಲ್ಲದೆ ಮಹಾರಾಜರು ಸಮಕಾಲೀನ ಯುಗದಲ್ಲಿ ಒಬ್ಬ ಸಮಾಜ ಸುಧಾರಕರಾಗಿದ್ದರು.
ಇದನ್ನೂ ಓದಿದ್ದೀರಾ? ʼಮೇ ವಾಪಸ್ ಆವೂಂಗಾʼ: ಬಿರುಕುಬಿಟ್ಟ ಬಯಲಿನೊಳಗೊಂದು ಚಿಗುರು!
ಶಾಹು ಮಹಾರಾಜರ ಆಡಳಿತವು ರಾಜಪ್ರಭುತ್ವದಲ್ಲಿ ಜನಪ್ರಭುತ್ವದ ಮೌಲ್ಯಗಳನ್ನು ತುಂಬಿದ್ದರಿಂದ ಅವರು ಸ್ವಯಂ ʼರಾಜರ್ಷಿʼ ಎಂದು ಕರೆಸಿಕೊಂಡರು. ಜಾತಿ, ವರ್ಗ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಅವರ ಸುಧಾರಣೆಗಳು ಸ್ವಾತಂತ್ರ್ಯೋತ್ತರ ಭಾರತದ ಸಂವಿಧಾನದ ಮೀಸಲಾತಿ ನೀತಿಗೆ ಪ್ರೇರಣೆಯಾದವು. ʼಹಿಂದುಳಿದವರನ್ನು ಮುಂದುವರಿಸುವುದೇ ನನ್ನ ಧರ್ಮʼ ಎಂಬ ಅವರ ಮಾತುಗಳು ಇಂದಿಗೂ ಪ್ರೇರಣೆಯಾಗಿವೆ.




