ನರಗುಂದ ಪುರಸಭೆ ವ್ಯಾಪ್ತಿಯ ಹಳೆ ಎಪಿಎಂಸಿ ಶಾಲೆಗಳ ಸುತ್ತಮುತ್ತ ಸಾರ್ವಜನಿಕ ಸ್ವಚ್ಛತೆ ಕಾಪಾಡಿ ಮತ್ತು ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಪುರಸಭೆ ವ್ಯಾಪ್ತಿಯಲ್ಲಿರುವ ಅನೇಕ ಸರ್ಕಾರಿ, ಖಾಸಗಿ ಶಾಲೆಗಳ ಸುತ್ತಮುತ್ತ ಸಾರ್ವಜನಿಕರು ಮೂತ್ರ ವಿಸರ್ಜನೆ, ಮಲಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬರುತ್ತಿದ್ದು, ಕೂಡಲೇ ನೈರ್ಮಲ್ಯಗೊಳಿಸಿ, ಅನೈತಿಕ ಚಟುವಟೆಕೆಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ, ಡಿಎಸ್ಎಸ್ ಸಂಘಟನೆಗಳಿಂದ ಗದಗ ಜಿಲ್ಲೆಯ ನರಗುಂದ ಪಟ್ಟಣದ ಪುರಸಬೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಕಿರಿಯ ಆರೋಗ್ಯ ನಿರೀಕ್ಷಕ ಗಿರೀಶ್ ನರಗುಂದವರಿಗೆ ಮನವಿ ನೀಡಿ, “ಕೆಲವೆಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಿಂದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ದುರ್ವಾಸನೆ, ಅಸ್ವಚ್ಛತೆ, ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಉತ್ತಮ ಶೈಕ್ಷಣಿಕ ವಾತಾವರಣಕ್ಕೂ ಧಕ್ಕೆಯಾಗುತ್ತಿದೆ. ಆದ್ದರಿಂದ ದಯವಿಟ್ಟು ಕೂಡಲೇ ಕ್ರಮ ಕೈಗೊಳ್ಳುಬೇಕು” ಎಂದು ವಿನಂತಿಸಿದರು.
“ಎಲ್ಲ ಶಾಲೆಗಳ ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಸಬೇಕು. ಸಾರ್ವಜನಿಕ ಮೂತ್ರ ವಿಸರ್ಜನೆ, ಮಲಮೂತ್ರ ವಿಸರ್ಜನೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ಅಗತ್ಯವಿರುವ ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ಅಥವಾ ಕಾರ್ಯನಿರ್ವಹಣೆಗೆ ತರಬೇಕು” ಎಂದು ಆಗ್ರಹಿಸಿದರು.
“ಇಲ್ಲಿ ಮೂತ್ರ/ಮಲಮೂತ್ರ ವಿಸರ್ಜನೆ ನಿಷೇಧ” ಎಂಬ ಫಲಕಗಳನ್ನು ಅಳವಡಿಸಬೇಕು. ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನಿಯಮಿತ ಗಸ್ತು ಮತ್ತು ನಿಗಾ ವಹಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಪುರಸಭೆ ಕಾಯ್ದೆ ಹಾಗೂ ಇತರೆ ಅನ್ವಯವಾಗುವ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ಬಾಗಲಕೋಟೆ | ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ: ಪಿಎಂಎಫ್‌ಎಂಇ ಯೋಜನೆಯಡಿ ಸಹಾಯಧನ
ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ, ನಮ್ಮ ಕರ್ನಾಟಕ ಸೇನೆ ಮತ್ತು ಡಿಎಸ್ಎಸ್ ಸಂಘಟನೆಗಳು ಒತ್ತಾಯಿಸಿದವು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರವಿ ಚಿಂತಾಲ, ಡಿಎಸ್‌ಎಸ್ ತಾಲೂಕು ಸಂಚಾಲಕ ದತ್ತಾತ್ರೇಯ ಜೋಗಣ್ಣವರ, ಮುತ್ತು ಸುರಕೋಡ್, ಗುರುನಾಥ್ ಕೆಂಗಾರ್ಕರ್, ಬಸುರಾಜ್ ಜೋಗನ್ನವರ್, ಈರಪ್ಪ ಮೇಗೇರಿ, ಅಬ್ದುಲ್ ಸಾಬ್ ನರಗುಂದ, ಪೈಸೆಲ್ ಕುರಟ್ಟಿ, ಕಿರಣ್ ಜೋಗನ್ನವರ್ ಸೇರಿದಂತೆ ಇತರರು ಇದ್ದರು.




