ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕಾವು ಪಡೆದುಕೊಂಡಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ನಿಂದ ಶಶಿ ಹುಲಿಕುಂಟೆಮಠ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಂ. ಸುರೇಶ್ ಕಣದಲ್ಲಿದ್ದು, ಎರಡೂ ಪಕ್ಷಗಳು ಪದವೀಧರರು, ಶಿಕ್ಷಕರು ಹಾಗೂ ಉಪನ್ಯಾಸಕರನ್ನು ತಲುಪಲು ಸಂಘಟನಾತ್ಮಕವಾಗಿ ಮುಂದಾಗಿವೆ.
ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಹಲವು ಬಾರಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಮತ್ತೊಂದೆಡೆ, ಬಿಜೆಪಿ–ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿರುವುದು ತನ್ನ ಸಂಘಟನಾ ಬಲವನ್ನು ವಿಸ್ತರಿಸಿಕೊಳ್ಳುವ ಅವಕಾಶವೆಂದು ಬಿಜೆಪಿ ನೋಡುತ್ತಿದೆ. ಎರಡೂ ಪಕ್ಷಗಳ ಸ್ಥಳೀಯವಾಗಿ ಮತದಾರರನ್ನು ನೇರವಾಗಿ ಸಂಪರ್ಕಿಸುವ ಕಾರ್ಯಕ್ಕೆ ಒತ್ತು ನೀಡಿವೆ.
ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ಮತ್ತೊಂದು ಕಾರಣಕ್ಕೂ ಮಹತ್ವದ್ದಾಗಿದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಈವರೆಗೆ ಗೆಲುವು ಸಾಧಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ಈ ಬಾರಿ ಮುಂಚಿತವಾಗಿಯೇ ಅಭ್ಯರ್ಥಿಯನ್ನು ಘೋಷಿಸಿ ಕ್ಷೇತ್ರದಲ್ಲಿ ಸಂಘಟನಾ ಚಟುವಟಿಕೆ ಆರಂಭಿಸಿತ್ತು. ಯುವ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಕ್ಷೇತ್ರದಾದ್ಯಂತ ವ್ಯಾಪಕವಾಗಿ ಸಂಚರಿಸಿ ಮತದಾರರನ್ನು ಸಂಪರ್ಕಿಸಿ ಪ್ರಚಾರ ನಡೆಸುತ್ತಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರ ಗೆಲುವಿನ ತಂತ್ರವನ್ನು, ಇಲ್ಲಿಯೂ ಬಳಸುವ ಪ್ರಯತ್ನ ನಡೆಯುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಇತ್ತ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ತಮಗೆ ಅವಕಾಶ ದೊರೆತಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಬಿಜೆಪಿ–ಜೆಡಿಎಸ್ ಸಂಘಟನೆಗಳ ಸಮನ್ವಯ, ಮತದಾರರನ್ನು ನಿರಂತರವಾಗಿ ಸಂಪರ್ಕಿಸುವ ಕಾರ್ಯ ಹಾಗೂ ಪ್ರತಿ ಮತದಾರರ ಗುಂಪಿಗೂ ಕಾರ್ಯಕರ್ತರನ್ನು ನಿಯೋಜಿಸುವ ಕ್ರಮವನ್ನು ಪಕ್ಷದ ನಾಯಕರು ತಮ್ಮ ಪ್ರಮುಖ ತಂತ್ರವಾಗಿಸಿಕೊಂಡಿದ್ದಾರೆ. ಬಿಜೆಪಿ–ಜೆಡಿಎಸ್ ನಾಯಕತ್ವವೂ ಈ ಚುನಾವಣೆಯನ್ನು ಜಂಟಿ ಮೈತ್ರಿಯಾಗಿ ಕೆಲಸ ಮಾಡವ ಸವಾಲು ಎನ್‌ಡಿಎ ಅಭ್ಯರ್ಥಿ ಮುಂದೆ ಇದೆ.
ಈ ಕ್ಷೇತ್ರದ ಚುನಾವಣೆಯಲ್ಲಿ ಸಾಮಾನ್ಯ ವಿಧಾನಸಭಾ ಚುನಾವಣೆಯ ಮತದಾರರ ಸಮೀಕರಣಕ್ಕಿಂತ ಪದವೀಧರ ಮತದಾರರ ನಿರ್ದಿಷ್ಟ ಸ್ವರೂಪ ಮಹತ್ವ ಪಡೆಯುತ್ತದೆ. ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ವಿದ್ಯಾವಂತ ಮತದಾರರ ಸಂಖ್ಯೆ ಗಮನಾರ್ಹವಾಗಿರುವುದರಿಂದ ಅಭ್ಯರ್ಥಿಗಳ ವೈಯಕ್ತಿಕ ಸಂಪರ್ಕ, ಸಂಘಟನಾ ಜಾಲ ಮತ್ತು ಮತದಾರರ ಸಮಸ್ಯೆಗಳ ಕುರಿತ ನಿಲುವುಗಳು ಚುನಾವಣಾ ಪ್ರಚಾರದ ಪ್ರಮುಖ ಅಂಶಗಳಾಗಿವೆ.
ಕ್ಷೇತ್ರದ ವ್ಯಾಪ್ತಿ ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆ ಜಿಲ್ಲೆಯ ಕೆಲವು ತಾಲ್ಲೂಕುಗಳನ್ನು ಒಳಗೊಂಡಿದೆ. ಹೀಗಾಗಿ ಐದು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮತದಾರರನ್ನು ತಲುಪುವುದು ಎರಡೂ ಪಕ್ಷಗಳಿಗೆ ಸಂಘಟನಾ ಸವಾಲಾಗಿದೆ.
ಎರಡೂ ಪ್ರಮುಖ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದು ಕ್ಷೇತ್ರದ ಸಾಮಾಜಿಕ ಸಮೀಕರಣದ ಚರ್ಚೆಗೆ ಕಾರಣವಾಗಿದೆ. ಆದರೆ ಇದು ಕೇವಲ ಜಾತಿ ಸಮೀಕರಣದ ಚುನಾವಣೆ ಆಗದೆ, ಪದವೀಧರ ಮತದಾರರ ನಿರ್ದಿಷ್ಟ ಸಮಸ್ಯೆಗಳು, ಅಭ್ಯರ್ಥಿಗಳ ಸಂಪರ್ಕ ಹಾಗೂ ಪಕ್ಷಗಳ ಸಂಘಟನಾ ಸಾಮರ್ಥ್ಯವೂ ನಿರ್ಣಾಯಕ ಅಂಶಗಳಾಗುವ ಸಾಧ್ಯತೆ ಇದೆ ಎಂಬುದು ಎರಡೂ ಬಣಗಳ ಪ್ರಚಾರದ ಕೇಂದ್ರಬಿಂದುವಾಗಿದೆ.
ಕಾಂಗ್ರೆಸ್ ತನ್ನ ಶಾಸಕರ ಸಂಖ್ಯೆಯನ್ನು ಸಂಘಟನಾ ಬಲವಾಗಿ ಪರಿಗಣಿಸುತ್ತಿದ್ದರೆ, ಬಿಜೆಪಿ–ಜೆಡಿಎಸ್ ಮೈತ್ರಿ ಮತಗಳ ಸಮನ್ವಯವನ್ನು ಪ್ರಮುಖ ಆಧಾರವಾಗಿ ನೋಡುತ್ತಿದೆ. ಹೀಗಾಗಿ ವಿಧಾನಸಭಾ ಚುನಾವಣೆಯ ರಾಜಕೀಯ ಲೆಕ್ಕಾಚಾರವನ್ನು ನೇರವಾಗಿ ವಿಧಾನ ಪರಿಷತ್ ಚುನಾವಣೆಗೆ ಅನ್ವಯಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಎರಡೂ ಬಣಗಳಿಂದ ವ್ಯಕ್ತವಾಗುತ್ತಿದೆ.
ಚುನಾವಣಾ ವೇಳಾಪಟ್ಟಿಯಂತೆ ಅಕ್ಟೋಬರ್ 6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅಕ್ಟೋಬರ್ 7ರಂದು ನಾಮಪತ್ರಗಳ ಪರಿಶೀಲನೆ, ಅಕ್ಟೋಬರ್ 9ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಅಕ್ಟೋಬರ್ 23ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 27ರಂದು ಮತ ಎಣಿಕೆ ನಡೆಯಲಿದೆ.
ಒಟ್ಟಿನಲ್ಲಿ, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಎರಡು ಪ್ರಮುಖ ರಾಜಕೀಯ ಬಣಗಳ ಸಂಘಟನಾ ಸಾಮರ್ಥ್ಯ, ಅಭ್ಯರ್ಥಿಗಳ ವೈಯಕ್ತಿಕ ಸಂಪರ್ಕ ಹಾಗೂ ಪದವೀಧರ ಮತದಾರರನ್ನು ತಲುಪುವ ತಂತ್ರಗಳ ನಡುವಿನ ಸ್ಪರ್ಧೆಯಾಗಿ ರೂಪುಗೊಂಡಿದೆ. ಹಳೆಯ ಚುನಾವಣಾ ಫಲಿತಾಂಶಗಳ ಹಿನ್ನೆಲೆ ಒಂದೆಡೆಯಾದರೆ, ಹೊಸ ರಾಜಕೀಯ ಮೈತ್ರಿ ಮತ್ತು ಯುವ ಅಭ್ಯರ್ಥಿಯ ಪ್ರವೇಶ ಮತ್ತೊಂದೆಡೆ ಇದೆ. ಅಂತಿಮವಾಗಿ ಮತದಾರರ ಆಯ್ಕೆ ಯಾವ ಅಂಶಗಳ ಮೇಲೆ ನೆಲೆಯಾಗುತ್ತದೆ ಎಂಬುದು ಅಕ್ಟೋಬರ್ 23ರ ಮತದಾನದ ಬಳಿಕವೇ ಸ್ಪಷ್ಟವಾಗಲಿದೆ.




