ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು ಮೈಸೂರಿಗೆ ಆಗಮಿಸಿದ್ದು, ಅರಮನೆ ನಗರಿಯಲ್ಲಿ ಸಂಭ್ರಮ ಮನೆಮಾಡಿದೆ.
ಸೋಮವಾರ ಬೆಳಿಗ್ಗೆ ಸುಮಾರು 9.15ಕ್ಕೆ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಅಭಿಮನ್ಯುವಿಗೆ ವಿಶೇಷ ಪೂಜೆ ಸಲ್ಲಿಸಿ, ಅರಮನೆ ಮಂಡಳಿ ವತಿಯಿಂದ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಈ ಬಾರಿ ದಸರಾ ಮಹೋತ್ಸವದಲ್ಲಿ ಅಭಿಮನ್ಯು ‘ನಿಶಾನೆ ಆನೆ’ (ಪೈಲಟ್ ಎಲಿಫೆಂಟ್) ಆಗಿ ಜಂಬೂ ಸವಾರಿಯ ನೇತೃತ್ವ ವಹಿಸಲಿದ್ದಾನೆ. ಕಳೆದ 2020ರಿಂದ 2025ರವರೆಗೆ ಸತತ ಆರು ವರ್ಷಗಳ ಕಾಲ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಯಶಸ್ವಿಯಾಗಿ ಸಾಗಿದ್ದ ಅಭಿಮನ್ಯು, ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತನಾಗಿದ್ದಾನೆ.
60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಾರಿ ಅಭಿಮನ್ಯುವನ್ನು ದಸರಾ ಕರ್ತವ್ಯದಿಂದ ನಿವೃತ್ತಿಗೊಳಿಸಿತ್ತು. ಆದರೆ, ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿಮನ್ಯುವಿಗೆ ದಸರಾ ಮಹೋತ್ಸವದಲ್ಲೇ ಬೀಳ್ಕೊಡುಗೆ ನೀಡಬೇಕೆಂದು ಒತ್ತಾಯಿಸಿದ್ದರು. ಅಭಿಮಾನಿಗಳ ಆಸೆಯಂತೆ ಸರ್ಕಾರ ವಿಶೇಷ ಅನುಮತಿ ನೀಡಿ ಅಭಿಮನ್ಯುವನ್ನು ಈ ಬಾರಿಯ ದಸರಾ ಮಹೋತ್ಸವಕ್ಕೆ ಕರೆತಂದಿದೆ.
ಅರಮನೆ ಆವರಣಕ್ಕೆ ಭವ್ಯವಾಗಿ ಆಗಮಿಸಿದ ಅಭಿಮನ್ಯುವಿಗೆ ಅಭಿಮಾನಿಗಳು ವಿಶೇಷ ಗೌರವ ಸಲ್ಲಿಸಿದರು. 166 ಇಂಚು ಸುತ್ತಳತೆ ಹಾಗೂ 8 ಕೆ.ಜಿ. ತೂಕದ ಬೃಹತ್ ಮೈಸೂರು ಪೇಟವನ್ನು ವಿಶೇಷವಾಗಿ ಸಿದ್ಧಪಡಿಸಿ ಅಭಿಮನ್ಯುವಿಗೆ ತೊಡಿಸಿ ಗೌರವಿಸಲಾಯಿತು. ಕಳೆದ ಆರು ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತು ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಅಭಿಮನ್ಯು, ಈ ಬಾರಿ ಯಾವುದೇ ಭಾರ ಹೊರುವುದಿಲ್ಲ. ಜಂಬೂ ಸವಾರಿಯ ಮುನ್ನಡೆಸುವ ನಿಶಾನೆ ಆನೆಯಾಗಿ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾನೆ.
ಈ ವಿಶೇಷ ವರದಿ ಓದಿದ್ದೀರಾ? SIR: ಕೊಡಗಿನ ಬ್ಯಾಡಗೊಟ್ಟದಲ್ಲಿ 66 ಮುಸ್ಲಿಂ ಮತಗಳ ಅಳಿಸುವಿಕೆಗೆ Form-7 ಅರ್ಜಿ
ಈ ದಸರಾ ಅಭಿಮನ್ಯು ಭಾಗವಹಿಸುತ್ತಿರುವ ಕೊನೆಯ ದಸರಾ ಆಗಲಿದೆ. ಅಕ್ಟೋಬರ್ 21ರಂದು ನಡೆಯಲಿರುವ ವಿಜಯದಶಮಿ ಮೆರವಣಿಗೆಯ ಬಳಿಕ ಅಭಿಮನ್ಯುವನ್ನು ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರಕ್ಕೆ ಮರಳಿ ಕಳುಹಿಸಲಾಗುತ್ತದೆ.
ಇನ್ನು ಮುಂದೆ ಕಠಿಣ ಕಾಡಿನ ಕಾರ್ಯಾಚರಣೆಗಳಿಗೂ ಅಭಿಮನ್ಯುವನ್ನು ಬಳಸದೆ, ಸಂಪೂರ್ಣ ವಿಶ್ರಾಂತಿ ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.




