10 ಕೋಟಿ ಲೀಟರ್ ಆಮ್ಲಜನಕವು ಸುಮಾರು 1,81,818 (ಸುಮಾರು 1.8 ಲಕ್ಷ) ಜನರಿಗೆ ಒಂದು ದಿನದ ಉಸಿರಾಟದ ಅಗತ್ಯವನ್ನು ಪೂರೈಸುತ್ತದೆ. ಇದೇ 10 ಕೋಟಿ ಲೀಟರ್ ಆಮ್ಲಜನಕವು ಸುಮಾರು 6,060 ಜನರಿಗೆ ಒಂದು ತಿಂಗಳ ಪೂರ್ತಿ ಆಮ್ಲಜನಕವನ್ನು ಒದಗಿಸಬಲ್ಲದು. ಇದೇ ಪ್ರಮಾಣವು ಸುಮಾರು 500 ಜನರಿಗೆ ಒಂದು ವರ್ಷ ಪೂರ್ತಿ ಉಸಿರಾಡಲು ಬೇಕಾದ ಆಮ್ಲಜನಕವನ್ನು ನೀಡಬಲ್ಲದು. ಇನ್ನು ಒಂದು ಮರ ಅಥವಾ ಅರಣ್ಯಗಳು ಕೇವಲ ಒಂದು ದಿನಕ್ಕೆ ಆಮ್ಲಜನಕವನ್ನು ನೀಡುವುದಿಲ್ಲ. ಅವು ಪ್ರತಿ ಸೆಕೆಂಡಿಗೂ ನಿರಂತರವಾಗಿ ಈ ಕೆಲಸವನ್ನು ಮಾಡುತ್ತಲೇ ಇರುತ್ತವೆ. 4.48 ಲಕ್ಷ ಮರಗಳು ನಾಶವಾದರೆ, ಈ 1.8 ಲಕ್ಷ ಜನರ ದೈನಂದಿನ ಉಸಿರಾಟದ ‘ನೈಸರ್ಗಿಕ ಮೂಲ’ ಶಾಶ್ವತವಾಗಿ ಬರಿದಾಗುತ್ತದೆ ಎಂದರ್ಥ.
ಮಧ್ಯಭಾರತದ ಜೀವನಾಡಿಯಾಗಿರುವ, ಸಾವಿರಾರು ವರ್ಷಗಳ ಇತಿಹಾಸ ಮತ್ತು ಅಪ್ರತಿಮ ಜೈವಿಕ ವೈವಿಧ್ಯತೆಯ ತವರೂರಾದ ಛತ್ತೀಸ್‌ಗಢದ ಹಸದೇವ್-ಆರಂಡ್ ಅರಣ್ಯವೀಗ ಇಂಧನ ಭದ್ರತೆಯ ನೆಪದಲ್ಲಿ ‘ಕಲ್ಲಿದ್ದಲು ಗಣಿಗಾರಿಕೆ’ಯ ಕರಾಳ ದೂಳಿನಲ್ಲಿ ಉಸಿರುಗಟ್ಟುತ್ತಿದೆ. ಸುಮಾರು 1,760 ಹೆಕ್ಟೇರ್ ದಟ್ಟಾರಣ್ಯವನ್ನು ಬಲಿ ಪಡೆದು, ಸುಮಾರು 4.48 ಲಕ್ಷ ಮರಗಳ ಬುಡಕ್ಕೆ ಕೊಡಲಿ ಹಾಕುವ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಈ ಪರಿಸರ ಅನುಮತಿಯು, ಅಭಿವೃದ್ಧಿಯ VS ಪರಿಸರ ಸಂರಕ್ಷಣೆಯ ನಡುವಿನ ಮಹಾಸಂಗ್ರಾಮಕ್ಕೆ ನಾಂದಿ ಹಾಡಿದೆ. ರಾಜಸ್ಥಾನದ ವಿದ್ಯುತ್ ಸ್ಥಾವರಗಳ ದಾಹ ತಣಿಸಲು, ಅದಾನಿ ಸಮೂಹದ ನೇತೃತ್ವದಲ್ಲಿ ನಡೆಯಲಿರುವ ಈ ಗಣಿಗಾರಿಕೆಯು, ದೇಶದ ಅತಿದೊಡ್ಡ ಹಸಿರು ಶ್ವಾಸಕೋಶವೊಂದನ್ನು ಶಾಶ್ವತವಾಗಿ ಹೊಸಕಿ ಹಾಕುವ ಆತಂಕ ಹುಟ್ಟುಹಾಕಿದೆ.
ಸಾವಿರಾರು ಹೆಕ್ಟೇರ್ ಭೂಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಸುಮಾರು 4.48 ಲಕ್ಷ ಮರಗಳೆಂದರೆ ಕಡಿಮೆ ಮಾತಲ್ಲ. ಸಾಮಾನ್ಯವಾಗಿ ಒಂದು ಪ್ರೌಢ ಮರ ಒಂದು ದಿನದಲ್ಲಿ ಸುಮಾರು 200 ರಿಂದ 250 ಲೀಟರ್ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ವರ್ಷಕ್ಕೆ ಲೆಕ್ಕ ಹಾಕಿದರೆ, ಒಂದು ಮರ ಒಬ್ಬ ಮನುಷ್ಯನ ಒಂದು ವರ್ಷದ ಉಸಿರಾಟಕ್ಕೆ ಬೇಕಾಗುವಷ್ಟು ಶುದ್ಧ ಆಮ್ಲಜನಕವನ್ನು (ಸುಮಾರು 70,000 – 1,00,000 ಲೀಟರ್‌ಗಳು) ಉತ್ಪಾದಿಸುತ್ತದೆ.
ಸುಮ್ಮನೆ ಅಂದಾಜಿಗೆ ಲೆಕ್ಕ ಹಾಕಿದರೆ, ಒಂದು ಮರ ದಿನಕ್ಕೆ ಸರಾಸರಿ ಸುಮಾರು 225 ಲೀಟರ್ ಆಮ್ಲಜನಕ ಉತ್ಪಾದಿಸಿದರೆ, 4.48 ಲಕ್ಷ ಮರಗಳು ದಿನಕ್ಕೆ ಸುಮಾರು 10 ಕೋಟಿ ಲೀಟರ್‌ಗಿಂತ ಹೆಚ್ಚು ಆಮ್ಲಜನಕ ಉತ್ಪಾದಿಸುತ್ತವೆ. ಒಬ್ಬ ಆರೋಗ್ಯವಂತ ವಯಸ್ಕ ಮನುಷ್ಯ ವಿಶ್ರಾಂತ ಸ್ಥಿತಿಯಲ್ಲಿ ಸರಾಸರಿ ದಿನಕ್ಕೆ ಸುಮಾರು 550 ಲೀಟರ್ ಆಮ್ಲಜನಕವನ್ನು ಉಸಿರಾಟಕ್ಕಾಗಿ ಬಳಸುತ್ತಾನೆ. ಈ ದತ್ತಾಂಶವನ್ನು ಆಧರಿಸಿ 10 ಕೋಟಿ ಲೀಟರ್ ಆಮ್ಲಜನಕದ ಬಳಕೆಯನ್ನು ಹೀಗೆ ನೋಡಬಹುದು…

10 ಕೋಟಿ ಲೀಟರ್ ಆಮ್ಲಜನಕವು ಸುಮಾರು 1,81,818 (ಸುಮಾರು 1.8 ಲಕ್ಷ) ಜನರಿಗೆ ಒಂದು ದಿನದ ಉಸಿರಾಟದ ಅಗತ್ಯವನ್ನು ಪೂರೈಸುತ್ತದೆ. ಇದೇ 10 ಕೋಟಿ ಲೀಟರ್ ಆಮ್ಲಜನಕವು ಸುಮಾರು 6,060 ಜನರಿಗೆ ಒಂದು ತಿಂಗಳ ಪೂರ್ತಿ ಆಮ್ಲಜನಕವನ್ನು ಒದಗಿಸಬಲ್ಲದು. ಇದೇ ಪ್ರಮಾಣವು ಸುಮಾರು 500 ಜನರಿಗೆ ಒಂದು ವರ್ಷ ಪೂರ್ತಿ ಉಸಿರಾಡಲು ಬೇಕಾದ ಆಮ್ಲಜನಕವನ್ನು ನೀಡಬಲ್ಲದು. ಇನ್ನು ಒಂದು ಮರ ಅಥವಾ ಅರಣ್ಯಗಳು ಕೇವಲ ಒಂದು ದಿನಕ್ಕೆ ಆಮ್ಲಜನಕವನ್ನು ನೀಡುವುದಿಲ್ಲ. ಅವು ಪ್ರತಿ ಸೆಕೆಂಡಿಗೂ ನಿರಂತರವಾಗಿ ಈ ಕೆಲಸವನ್ನು ಮಾಡುತ್ತಲೇ ಇರುತ್ತವೆ. 4.48 ಲಕ್ಷ ಮರಗಳು ನಾಶವಾದರೆ, ಈ 1.8 ಲಕ್ಷ ಜನರ ದೈನಂದಿನ ಉಸಿರಾಟದ ‘ನೈಸರ್ಗಿಕ ಮೂಲ’ವನ್ನು ಶಾಶ್ವತವಾಗಿ ಬರಿದಾಗುತ್ತದೆ ಎಂದರ್ಥ.
ಈಗ ನೆಲಸಮ ಮಾಡಲು ಹೊರಟಿರುವ ಈ 4.48 ಲಕ್ಷ ಮರಗಳು ಕೇವಲ ಆಮ್ಲಜನಕವನ್ನು ನೀಡುವುದಲ್ಲದೆ, ಪರಿಸರದಿಂದ ಸಾವಿರಾರು ಟನ್ ಇಂಗಾಲದ ಡೈಆಕ್ಸೈಡ್ (CO2) ಅನ್ನೂ ಹೀರಿಕೊಳ್ಳುತ್ತಿದ್ದವು. ಇವುಗಳ ನಾಶದಿಂದಾಗಿ, ಈ ಪ್ರದೇಶವು ಇಂಗಾಲದ ‘ಸಿಂಕ್’ ಆಗಿ ಅಲ್ಲ, ಇಂಗಾಲದ ‘ಮೂಲ’ವಾಗಿಯೇ ಬದಲಾಗುತ್ತದೆ.
ಮಧ್ಯಭಾರತದ ಛತ್ತೀಸ್‌ಗಢ ರಾಜ್ಯದ ಸೂರ್ಗುಜಾ ಜಿಲ್ಲೆಯಲ್ಲಿ ಹರಡಿರುವ ‘ಹಸದೇವ್-ಆರಂಡ್’ ಅರಣ್ಯ ಪ್ರದೇಶ ಸದ್ಯ ದೇಶದ ಗಮನ ಸೆಳೆದಿರುವ ಅತಿದೊಡ್ಡ ಪರಿಸರ ವಿವಾದದ ಕೇಂದ್ರಬಿಂದು. ಸಾವಿರಾರು ವರ್ಷಗಳಿಂದ ಮನುಷ್ಯನ ಹಸ್ತಕ್ಷೇಪವಿಲ್ಲದೆ ಸಮೃದ್ಧವಾಗಿರುವ ಈ ದಟ್ಟಾರಣ್ಯವನ್ನು ‘ಮಧ್ಯಭಾರತದ ಹಸಿರು ಶ್ವಾಸಕೋಶ’ ಎಂದು ಕರೆಯಲಾಗುತ್ತದೆ. ಆದರೆ, ಇಂಧನ ಭದ್ರತೆ ಮತ್ತು ಅಭಿವೃದ್ಧಿಯ ನೆಪದಲ್ಲಿ ಈ ಅರಣ್ಯದ ಅಸ್ತಿತ್ವಕ್ಕೆ ದೊಡ್ಡ ಕಂಟಕ ಎದುರಾಗಿದೆ. ಕೇಂದ್ರ ಪರಿಸರ ಸಚಿವಾಲಯವು ಹಸದೇವ್ ಅರಣ್ಯದ ‘ಕೆಂಟೆ ಎಕ್ಸ್‌ಟೆನ್ಶನ್’ (Kente Extension) ಕಲ್ಲಿದ್ದಲು ಬ್ಲಾಕ್‌ನಲ್ಲಿ ಗಣಿಗಾರಿಕೆಗೆ ನೀಡಿದ ಅಂತಿಮ ಅನುಮತಿಯು ಪರಿಸರವಾದಿಗಳು, ಸ್ಥಳೀಯ ಆದಿವಾಸಿಗಳು ಮತ್ತು ಅಭಿವೃದ್ಧಿ ಪರವಾದಿಗಳ ನಡುವೆ ತೀವ್ರ ಸಂಘರ್ಷ ಸೃಷ್ಟಿಸಿದೆ.
ಹಸದೇವ್-ಆರಂಡ್ ಕಲ್ಲಿದ್ದಲು ಕ್ಷೇತ್ರ ಸುಮಾರು 1,502 ಚದರ ಕಿಲೋಮೀಟರ್‌ಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ. ಇದು ಸಾಲ್ ಮತ್ತು ತೇಗದ ಮರಗಳ ಅಪರೂಪದ ತಾಣವಾಗಿದೆ. ಈ ಅರಣ್ಯವು ಆನೆ, ಚಿರತೆ, ಹುಲಿ ಮತ್ತು ಅಳಿವಿನಂಚಿನಲ್ಲಿರುವ ಬಹು ಸಸ್ತನಿಗಳ ನೈಸರ್ಗಿಕ ಆವಾಸಸ್ಥಾನ. ವೈಜ್ಞಾನಿಕವಾಗಿ ಹೇಳುವುದಾದರೆ, ಇದೊಂದು ಅಖಂಡ ಪರಿಸರ ವ್ಯವಸ್ಥೆ. ಒಮ್ಮೆ ಈ ಅರಣ್ಯ ಛಿದ್ರವಾದರೆ, ಅಲ್ಲಿನ ಜೈವಿಕ ವೈವಿಧ್ಯತೆಯನ್ನು ಮರುಸ್ಥಾಪಿಸುವುದು ಅಸಾಧ್ಯ. 2021ರಲ್ಲಿ ‘ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ (WII) ನಡೆಸಿದ ಅಧ್ಯಯನವು, ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡುವುದರಿಂದ ಭೀಕರ ಪರಿಸರ ಪರಿಣಾಮಗಳು ಉಂಟಾಗಲಿವೆ ಎಂದು ಎಚ್ಚರಿಸಿತ್ತು. ಈ ವರದಿಯ ಆಧಾರದ ಮೇಲೆಯೇ ಈ ಪ್ರದೇಶವನ್ನು ಹಿಂದೆ ‘ನೋ-ಗೋ’ (No-Go) ವಲಯ ಎಂದು ಪರಿಗಣಿಸಲಾಗಿತ್ತು.

ʼಕೆಂಟೆ ಎಕ್ಸ್‌ಟೆನ್ಶನ್’ ಯೋಜನೆಯನ್ನು 2015ರಲ್ಲಿಯೇ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮಕ್ಕೆ (RRVUNL) ಹಂಚಿಕೆ ಮಾಡಲಾಗಿತ್ತು. ಈ ಯೋಜನೆಯಡಿ ವಾರ್ಷಿಕ 9 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಇಲ್ಲಿ ರಾಜಸ್ಥಾನದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸುವ ಕೆಲಸದಲ್ಲಿ ‘ಅದಾನಿ ಎಂಟರ್‌ಪ್ರೈಸಸ್’ ಸಂಸ್ಥೆಯು ‘ಮೈನ್ ಡೆವಲಪರ್ ಆಂಡ್ ಆಪರೇಟರ್’ (MDO) ಆಗಿ ಕಾರ್ಯನಿರ್ವಹಿಸುತ್ತಿದೆ. ಅದಾನಿ ಸಮೂಹವು ಈ ಯೋಜನೆಯಲ್ಲಿ ಗಣಿಗಾರಿಕೆಯ ಸಂಪೂರ್ಣ ತಾಂತ್ರಿಕ ಮತ್ತು ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದೆ. ಸರಳವಾಗಿ ಹೇಳುವುದಾದರೆ, ರಾಜಸ್ಥಾನ ಸರ್ಕಾರದ ಕಲ್ಲಿದ್ದಲು ಅಗತ್ಯವನ್ನು ಈಡೇರಿಸಲು, ಛತ್ತೀಸ್‌ಗಢದ ಅರಣ್ಯದಲ್ಲಿ ಅದಾನಿ ಗ್ರೂಪ್‌ನ ಯಂತ್ರಗಳು ಕಲ್ಲಿದ್ದಲನ್ನು ಹೊರತೆಗೆಯಲಿವೆ. ಗಣಿಗಾರಿಕೆಗೆ ಬೇಕಾದ ತಾಂತ್ರಿಕ ಸಿದ್ಧತೆ, ಅರಣ್ಯ ತೆರವುಗೊಳಿಸುವುದು, ಕಲ್ಲಿದ್ದಲು ತೆಗೆಯುವುದು ಮತ್ತು ಅದನ್ನು ರೈಲು/ರಸ್ತೆ ಮಾರ್ಗಗಳ ಮೂಲಕ ಸಾಗಿಸುವುದು.. ಈ ಎಲ್ಲಾ ಕಾರ್ಯಾಚರಣೆಯ ಹೊಣೆ ಅದಾನಿ ಗ್ರೂಪ್‌ನದ್ದು. ಅದಾನಿ ಗ್ರೂಪ್ ಆ ರಾಜಸ್ಥಾನಿ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಕಲ್ಲಿದ್ದಲು ತೆಗೆಯುವ ಪ್ರತಿ ಟನ್‌ಗೆ ನಿರ್ದಿಷ್ಟ ಮೊತ್ತವನ್ನು ಶುಲ್ಕವಾಗಿ ಪಡೆಯುತ್ತದೆ. ಅಂದರೆ, ಗಣಿಗಾರಿಕೆ ಹೆಚ್ಚಾದಷ್ಟೂ ಅದಾನಿ ಗ್ರೂಪ್‌ನ ಲಾಭ ಹೆಚ್ಚಾಗುತ್ತದೆ. ಇದು ಮಾತ್ರವಲ್ಲದೆ, ಅದಾನಿ ಗ್ರೂಪ್‌ಗೆ ಭಾರತದಲ್ಲಿ ಹಲವು ಕಡೆಗಳಲ್ಲಿ ಕಲ್ಲಿದ್ದಲು ಗಣಿಗಳು ಮತ್ತು ಸಾರ್ವಜನಿಕ ಸಂಪನ್ಮೂಲಗಳ ಗುತ್ತಿಗೆ ಸಿಕ್ಕಿದೆ ಎಂಬುದು ಇಲ್ಲಿ ಗಮನಾರ್ಹ. ಜಾರ್ಖಂಡ್‌ನ ಜರ್ಮಾ ಕಲ್ಲಿದ್ದಲು ಗಣಿ ಕೂಡ ಅದಾನಿ ಅಂಡರ್‌ನಲ್ಲಿದೆ. ಛತ್ತೀಸ್‌ಗಢದ ಮಂಡಾ ಗಣಿ ಕೂಡ ಅದಾನಿ ಗ್ರೂಪ್‌ಗೆ ವಿವಾದದ ಜೊತೆಗೂ ಭಾರೀ ಲಾಭವನ್ನೂ ತಂದುಕೊಡುತ್ತಿದೆ.
ಕಲ್ಲಿದ್ದಲಷ್ಟೇ ಅಲ್ಲದೆ, ಮುಂಡ್ರಾ ಬಂದರು ಸೇರಿದಂತೆ ದೇಶದ ಹಲವು ಪ್ರಮುಖ ಬಂದರುಗಳು ಮತ್ತು ಅಹಮದಾಬಾದ್, ಮುಂಬೈ ಸೇರಿದಂತೆ ಪ್ರಮುಖ ಏರ್‌ಪೋರ್ಟ್‌ಗಳ ನಿರ್ವಹಣೆಯನ್ನು ಸರ್ಕಾರವು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿದೆ.
ಪರಿಸರ ಮತ್ತು ಅರಣ್ಯ ಇಲಾಖೆಗಳು ಈ ಹಿಂದೆ ವಿರೋಧಿಸಿದ್ದ ಯೋಜನೆಗಳಿಗೂ, ಒನ್-ವಿಂಡೋ ಕ್ಲಿಯರೆನ್ಸ್ (ಅತ್ಯಂತ ಕಡಿಮೆ ಅವಧಿಯಲ್ಲಿ ಅನುಮತಿ ದೊರೆಯುವಂತೆ ಮಾಡುವುದು) ಸಿಗುವಂತೆ ಮಾಡಲಾಗಿದೆ. ಗಣಿಗಾರಿಕೆಗೆ ಅನುಕೂಲವಾಗುವಂತೆ ಅರಣ್ಯ ಮತ್ತು ಪರಿಸರ ಕಾಯ್ದೆಗಳಲ್ಲಿ ಕಾಲಕಾಲಕ್ಕೆ ತಿದ್ದುಪಡಿ ತರಲಾಗಿದೆ. ಹಿಂದೆ ‘ನೋ-ಗೋ’ (No-Go) ಎಂದು ಘೋಷಿಸಲಾಗಿದ್ದ ಪ್ರದೇಶಗಳನ್ನು ನಂತರ ‘ಗಣಿಗಾರಿಕೆಗೆ ಯೋಗ್ಯ’ ಎಂದು ವರ್ಗೀಕರಿಸಲಾಗಿದೆ.
ಈ ಗಣಿಗಾರಿಕೆಗಾಗಿ 1,760 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು, ಇದರಲ್ಲಿ 1,742.6 ಹೆಕ್ಟೇರ್ ದಟ್ಟ ಅರಣ್ಯ ಭೂಮಿಯಿದೆ. ಈ 4.48 ಲಕ್ಷ ಮರಗಳನ್ನು ಹಂತ ಹಂತವಾಗಿ ಕಡಿಯಬೇಕಾಗುತ್ತದೆ. ಮೊದಲ ಹಂತದಲ್ಲಿ ಮುಂದಿನ 5 ವರ್ಷಗಳಲ್ಲಿ ಸುಮಾರು 98,000 ಮರಗಳನ್ನು ಕಡಿಯಲಾಗುತ್ತದೆ. ಈ ನಾಶ ಅಲ್ಲಿನ ನೀರಿನ ಮೂಲಗಳು, ಹಸದೇವ ನದಿಯ ಹರಿವು ಮತ್ತು ಸ್ಥಳೀಯರ ಬದುಕಿನ ಮೇಲೆ ಗಂಭೀರ ಭೀಕರ ಪರಿಣಾಮ ಬೀರುತ್ತದೆ.
ಅಭಿವೃದ್ಧಿ ಮತ್ತು ಪರಿಸರದ ಸಂಘರ್ಷ ಈ ಯೋಜನೆಯನ್ನು ಸಮರ್ಥಿಸಿಕೊಳ್ಳುವವರು, ದೇಶದ ವಿದ್ಯುತ್ ಭದ್ರತೆಯನ್ನು ಮುಂದಿಡುತ್ತಾರೆ. ರಾಜಸ್ಥಾನದಂತಹ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ತೀವ್ರ ಕಲ್ಲಿದ್ದಲು ಕೊರತೆಯಿದೆ. ಈ ಕೊರತೆಯು ವಿದ್ಯುತ್ ಬಿಕ್ಕಟ್ಟಿಗೆ ಕಾರಣವಾಗಬಹುದು, ಇದು ಆ ರಾಜ್ಯದ ಕೈಗಾರಿಕೆ ಮತ್ತು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಪಾದಿಸಲಾಗುತ್ತದೆ. ಗಣಿಗಾರಿಕೆ ನಡೆಸುವಾಗ ಸರ್ಕಾರದ ನಿಯಮಗಳನ್ನು ಪಾಲಿಸಲಾಗುತ್ತಿದೆ ಮತ್ತು ಪುನರ್ವಸತಿ ಯೋಜನೆಗಳ ಮೂಲಕ ಸ್ಥಳೀಯರಿಗೆ ನ್ಯಾಯ ಒದಗಿಸಲಾಗುತ್ತಿದೆ ಎಂದು ಸರ್ಕಾರ ಮತ್ತು ಗುತ್ತಿಗೆದಾರ ಸಂಸ್ಥೆಗಳು ಹೇಳುತ್ತವೆ.
ಇದನ್ನೂ ಓದಿ: ಭೂಕಂಪದ ಅವಶೇಷಗಳಡಿ ಮನುಷ್ಯ ಎಷ್ಟು ಕಾಲ ಬದುಕಬಲ್ಲ?
ಆದರೆ, ವಾಸ್ತವವೇನೆಂಬುದನ್ನು ಅರಿತ ಪರಿಸರವಾದಿಗಳು ಈ ವಾದವನ್ನು ಒಪ್ಪುವುದಿಲ್ಲ. “ಪ್ರಕೃತಿಯನ್ನು ಹಾಳುಗೆಡವಿ ಪಡೆಯುವ ವಿದ್ಯುತ್ ನಿಜವಾದ ಪ್ರಗತಿಯೇ?” ಎಂಬುದು ಅವರ ಮೂಲಭೂತ ಪ್ರಶ್ನೆ. 4.48 ಲಕ್ಷ ಮರಗಳನ್ನು ಕಡಿಯುವುದರಿಂದ ಉಂಟಾಗುವ ಕಾರ್ಬನ್ ಹೊರಸೂಸುವಿಕೆ ಮತ್ತು ಹವಾಮಾನ ಬದಲಾವಣೆಯ ಅಪಾಯಗಳನ್ನು ಸರಿದೂಗಿಸಲು ಸಾಧ್ಯವಿಲ್ಲ. ಅಲ್ಲದೆ, ಸ್ಥಳೀಯ ಬುಡಕಟ್ಟು ಜನಾಂಗದವರು, ತಮ್ಮ ಸಾಂಪ್ರದಾಯಿಕ ಅರಣ್ಯ ಹಕ್ಕುಗಳನ್ನು (Forest Rights Act) ಉಲ್ಲಂಘಿಸಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅರಣ್ಯವನ್ನು ಅವಲಂಬಿಸಿ ಬದುಕುವ ಈ ಜನರ ಪಾಲಿಗೆ ಕಾಡು ಎಂದರೆ ದೇವರು, ಸಂಸ್ಕೃತಿ ಮತ್ತು ಬದುಕಿನ ಮೂಲ. ಇದನ್ನೆಲ್ಲ ನಾಶಗೊಳಿಸಿ ಅವರನ್ನೆಲ್ಲ ಯಾವುದಾದರೂ ಪ್ರಪಾತಕ್ಕೆ ತಳ್ಳಲು ಸರ್ಕಾರ ಕಾತರಿಸುತ್ತಿದೆ ಎನ್ನುವುದು ಪರಿಸರ ತಜ್ಞರ ವಾದ.
ದೇಶದ ನೈಸರ್ಗಿಕ ಸಂಪತ್ತನ್ನು ಎಷ್ಟು ಬಲಿ ನೀಡಬಹುದು ಎಂಬುದಕ್ಕೆ ಇಲ್ಲಿ ಎಲ್ಲೆ ಇಲ್ಲದಂತಾಗಿದೆ. ಹಸದೇವ್ ಅರಣ್ಯದ ಈ ಹೋರಾಟವು ಮುಂದಿನ ದಿನಗಳಲ್ಲಿ ನ್ಯಾಯಾಂಗ ಮತ್ತು ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಲಿದೆ. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಪರಿಸರಕ್ಕೆ ಉಂಟಾಗುವ ಶಾಶ್ವತ ಹಾನಿಯನ್ನು ಗಮನದಲ್ಲಿಟ್ಟುಕೊಂಡು, ಅಭಿವೃದ್ಧಿ ಯೋಜನೆಗಳ ಮರುಮೌಲ್ಯಮಾಪನವನ್ನು ತುರ್ತಾಗಿ ಮಾಡಬೇಕಾಗಿದೆ. ಈ ‘ಹಸಿರು ಶ್ವಾಸಕೋಶ’ವು ಉಸಿರುಕಟ್ಟಿ ಸಾಯುತ್ತಿದ್ದರೆ, ಅದರ ನೇರ ಪರಿಣಾಮ ಮುಂದಿನ ಪೀಳಿಗೆಯ ಮೇಲೆ ಬೀಳುವುದರಲ್ಲಿ ಸಂಶಯವಿಲ್ಲ. ಅಭಿವೃದ್ಧಿಯ ವೇಗವನ್ನು ಮಿತಗೊಳಿಸಿ, ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡುವ ದೂರದೃಷ್ಟಿಯ ಯೋಜನೆಗಳು ಮಾತ್ರವೇ ದೇಶದ ನಿಜವಾದ ಪ್ರಗತಿಗೆ ದಾರಿ ಮಾಡಿಕೊಡಬಲ್ಲವು.




