ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇವೆ. ಆ ರಾಜ್ಯದ ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸುಮಾರು ಮೂರು ವರ್ಷಗಳಿಂದ ದೂರವಿದ್ದ ಅಯೋಧ್ಯೆಯ ರಾಮಮಂದಿರಕ್ಕೆ ಡಿಸೆಂಬರ್ 12ರಂದು ತಮ್ಮ ಕುಟುಂಬ ಸಮೇತರಾಗಿ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮುನ್ನ, ಅವರು ತಮ್ಮ ತವರು ಜಿಲ್ಲೆಯಾದ ಇಟಾವಾದಲ್ಲಿ ನಿರ್ಮಿಸಲಾಗಿರುವ, ಉತ್ತರಾಖಂಡದ ಕೆದಾರನಾಥ ಧಾಮದ ಮಾದರಿಯ ಬೃಹತ್ ‘ಕೇದಾರೇಶ್ವರ ಮಹಾದೇವ’ ದೇವಾಲಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಎರಡೂ ಧಾರ್ಮಿಕ ನಿರ್ಧಾರಗಳು ಬಿಜೆಪಿಯ ಸುದೀರ್ಘ ರಾಜಕೀಯ ಅಸ್ತ್ರವಾದ ‘ಹಿಂದುತ್ವ’ಯನ್ನು ನಿಷ್ಕ್ರಿಯಗೊಳಿಸಲು ಅಖಿಲೇಶ್ ರೂಪಿಸಿರುವ ತಂತ್ರವೆಂದು ಹೇಳಲಾಗಿದೆ.
ಅಖಿಲೇಶ್ ಯಾದವ್ ಅವರ ಈ ಹಠಾತ್ ಅಯೋಧ್ಯೆ ಭೇಟಿಯ ನಿರ್ಧಾರವನ್ನು ‘ಸಾಫ್ಟ್ ಹಿಂದುತ್ವ’ ಅನುಸರಣೆ ಎಂದು ಕೆಲವು ರಾಜಕೀಯ ವಿರೋಧಿಗಳು ದೂರಿದ್ದಾರೆ. ಜೊತೆಗೆ, 400 ವರ್ಷ ಹಳೆಯ ಬಾಬರಿ ಮಸೀದಿ ಕೆಡವಲ್ಪಟ್ಟ ಜಾಗದಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಅಖಿಲೇಶ್ ಭೇಟಿಯು ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಮೂಡಿಸಬಹುದು ಎಂಬ ಲೆಕ್ಕಾಚಾರಗಳೂ ಇವೆ. ಆದರೆ, ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಅಖಿಲೇಶ್ ಅವರ ಲೆಕ್ಕಾಚಾರವೇ ಬೇರೆ ಇರುವಂತೆ ಕಾಣುತ್ತಿದೆ. ಉತ್ತರ ಪ್ರದೇಶದ 80%ರಷ್ಟಿರುವ ಹಿಂದು ಮತದಾರರಲ್ಲಿ ತಮ್ಮ ಮೇಲಿರುವ ‘ರಾಮ ವಿರೋಧಿ’ ಅಥವಾ ‘ಹಿಂದು ವಿರೋಧಿ’ ಎಂಬ ಲೇಬಲ್ ಅನ್ನು ಕಳಚಿಕೊಳ್ಳುವುದು ಮತ್ತು ರಾಜ್ಯದಲ್ಲಿ ತೀವ್ರ ಆಡಳಿತ ವಿರೋಧಿ ಅಲೆಯನ್ನೆದುರಿಸುತ್ತಿರುವ ಬಿಜೆಪಿಯನ್ನು ನೇರವಾಗಿ ಅದರದೇ ಮೈದಾನದಲ್ಲಿ ಎದುರಿಸುವುದು ಅವರ ಮುಖ್ಯ ಉದ್ದೇಶದಂತೆ ತೋರುತ್ತಿದೆ.
ಮತ್ತೊಂದೆಡೆ, ಈ ನಡೆಯಿಂದ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದಿಂದ ದೂರವಾಗುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಮಯಾವತಿಯವರ ಬಿಎಸ್ಐಯ ರಾಜಕೀಯ ಪ್ರಭಾವ ಕುಸಿದಿದ್ದು, ಓವೈಸಿ ಅವರ ಎಐಎಂಐಎಂ ಪ್ರಭಾವ ಕೆಲವು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟವೇ ಏಕೈಕ ಪರ್ಯಾಯ ಎಂಬ ವಾಸ್ತವದ ಅರಿವು ಮುಸ್ಲಿಂ ಸಮುದಾಯದಲ್ಲಿದೆ. ಹೀಗಾಗಿ ಮುಸ್ಲಿಂ ಮತಗಳು ಚದುರಿಹೋಗುವ ಭೀತಿ ಅಖಿಲೇಶ್ಗೆ ಇಲ್ಲ. ಆದ್ದರಿಂದಲೇ, ಅವರು ಈ ದಿಟ್ಟ ಹೆಜ್ಜೆಯಿಡಲು ಮುಂದಾಗಿದ್ದಾರೆ.
ಅಂದಹಾಗೆ, ಅಯೋಧ್ಯೆ ಮತ್ತು ಸಮಾಜವಾದಿ ಪಕ್ಷದ ಸಂಬಂಧವು ನಾಲ್ಕು ದಶಕಗಳ ಕಹಿ ಇತಿಹಾಸವನ್ನು ಹೊಂದಿತ್ತು. 1980ರ ದಶಕದ ಕೊನೆಯಲ್ಲಿ ಆರ್ಎಸ್ಎಸ್-ವಿಎಚ್ಪಿ-ಬಿಜೆಪಿ ಜಂಟಿಯಾಗಿ ಆರಂಭಿಸಿದ ರಾಮಜನ್ಮಭೂಮಿ ಚಳವಳಿಯು ಭಾರತೀಯ ರಾಜಕೀಯದ ಚಿತ್ರಣವನ್ನೇ ಬದಲಿಸಿತು. 1990ರಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಯತ್ನಿಸಿದ ಕರಸೇವಕರ ಮೇಲೆ ಅಂದಿನ ಮುಖ್ಯಮಂತ್ರಿ, ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಸರ್ಕಾರವು ಗೋಲಿಬಾರ್ ನಡೆಸಿತ್ತು. ಆ ಗುಂಡಿನ ದಾಳಿಯನ್ನು ಬಿಜೆಪಿ ಇಂದಿಗೂ ಸಮಾಜವಾದಿ ಪಕ್ಷದ ವಿರುದ್ಧ ಪ್ರಮುಖ ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತ ಬಂದಿದೆ. ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡು, ಹೊಸ ಪೀಳಿಗೆಯ ಮತದಾರರಲ್ಲಿ ಸಮಾಜವಾದಿ ಪಕ್ಷವನ್ನು ‘ಹಿಂದು ವಿರೋಧಿ’ ಮತ್ತು ‘ಅಲ್ಪಸಂಖ್ಯಾತರ ಓಲೈಕೆಗಾರರು’ ಎಂದು ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ.
2013ರಲ್ಲಿ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಎಚ್ಪಿ ಆಯೋಜಿಸಿದ್ದ ‘84-ಕೋಸಿ ಯಾತ್ರೆ’ಯನ್ನು ಕಾನೂನು ಸುವ್ಯವಸ್ಥೆಯ ನೆಪದಲ್ಲಿ ತಡೆಯಲಾಗಿತ್ತು. ಇದು ಸಹ ಬಿಜೆಪಿಗೆ ದೊಡ್ಡ ಪ್ರಚಾರದ ವಸ್ತುವಾಗಿತ್ತು. 2024ರಲ್ಲಿ ಉದ್ಘಾಟನೆಯಾದ ರಾಮ ಮಂದಿರದ ಪ್ರಾಣಪ್ರತಿಷ್ಠಾಪನಾ ಸಮಾರಂಭದ ಆಹ್ವಾನ ಮತ್ತು ವಿಧಾನಸಭೆಯಲ್ಲಿ ಸ್ಪೀಕರ್ ಆಯೋಜಿಸಿದ್ದ ಜಂಟಿ ಅಯೋಧ್ಯೆ ಭೇಟಿಯನ್ನು ಅಖಿಲೇಶ್ ತಿರಸ್ಕರಿಸಿದ್ದರು. ಇದೇ ಕಾರಣಕ್ಕಾಗಿ, ಅಖಿಲೇಶ್ ಅವರನ್ನು ‘ರಾಮದ್ರೋಹಿ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜರೆದಿದ್ದರು.
ಈ ಎಲ್ಲ ಆರೋಪಗಳನ್ನು ಎದುರಿಸುತ್ತಾ, ಮಾತಿನ ರಕ್ಷಣೆಯಲ್ಲಿ ಉಳಿಯುವ ಬದಲು, ನೇರವಾಗಿ ಮಂದಿರಕ್ಕೆ ಭೇಟಿ ನೀಡಿ ಬಿಜೆಪಿಯ ‘ನರೇಟಿವ್’ಅನ್ನೇ ಧ್ವಂಸಗೊಳಿಸಲು ಅಖಿಲೇಶ್ ನಿರ್ಧರಿಸಿದ್ದಾರೆ.
ಇನ್ನೊಂದು ಪ್ರಮುಖ ಸಂಗತಿಯೆಂದರೆ, ಈ ಹಿಂದು ವಿರೋಧಿ ಆರೋಪದ ಹೊರತಾಗಿಯೂ 2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯನ್ನು ಎಸ್ಪಿ ಗೆದ್ದುಕೊಂಡಿತ್ತು. 2024ರ ಆರಂಭದಲ್ಲಷ್ಟೇ ರಾಮಮಂದಿರ ಉದ್ಘಾಟನೆಯಾಗಿತ್ತು. ಮಂದಿರವನ್ನು ಉದ್ಘಾಟಿಸಿದ್ದ ಮೋದಿ-ಯೋಗಿ ಜೋಡಿ; ‘ಜೋ ರಾಮ್ ಕೋ ಲಾಯೇ ಹೈಂ, ಹಮ್ ಉನ್ಕೋ ಲಾಯೇಂಗೆ’ (ಯಾರು ಶ್ರೀರಾಮನನ್ನು ಕರೆತಂದಿದ್ದಾರೋ, ನಾವು ಅವರನ್ನೇ ಅಧಿಕಾರಕ್ಕೆ ತರುತ್ತೇವೆ) ಎಂಬ ಘೋಷಣೆಯೊಂದಿಗೆ ಲೋಕಸಭಾ ಚುನಾವಣೆಗೆ ಹೋಗಿತ್ತು. ಆದರೆ, ಫಲಿತಾಂಶವು ಬಿಜೆಪಿಗೆ ಭಾರಿ ಆಘಾತ ನೀಡಿತು. ಸ್ವತಃ ರಾಮಮಂದಿರವಿರುವ ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ದಲಿತ ಅಭ್ಯರ್ಥಿ ಅವಧೇಶ್ ಪ್ರಸಾದ್ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಅಷ್ಟೇ ಅಲ್ಲದೆ, ಫೈಜಾಬಾದ್ ವಿಭಾಗದ ವ್ಯಾಪ್ತಿಗೆ ಬರುವ ಸುಲ್ತಾನ್ಪುರ, ಅಮೇಥಿ, ಬಾರಾಬಂಕಿ ಹಾಗೂ ಅಯೋಧ್ಯೆಯ ಎಲ್ಲ ಐದಕ್ಕೆ ಐದೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲನುಭವಿಸಿತು.
ಈ ಹಿನ್ನಡೆಗೆ ಮೂಲ ಕಾರಣ; ಅಯೋಧ್ಯೆಯಲ್ಲಿ ನಡೆದಿರುವ 40,000 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಸ್ಥಳೀಯ ಜನರಿಗೆ ಸರಿಯಾದ ಪರಿಹಾರ ಸಿಗದಿರುವುದು, ಭೂಸ್ವಾಧೀನದ ಅಸಮಾಧಾನ ಹಾಗೂ ಶ್ರೀರಾಮ ಮಂದಿರ ಟ್ರಸ್ಟ್ ಮೇಲೆ ಕೇಳಿಬಂದ ‘ಚಂದಾ ಚೋರಿ’ (ದೇಣಿಗೆ ಕಳ್ಳತನ) ಆರೋಪಗಳು. ಈ ಎಲ್ಲ ವಿಚಾರಗಳನ್ನು ಸಮಾಜವಾದಿ ಪಕ್ಷವು ಸಾರ್ವಜನಿಕವಾಗಿ ಪ್ರಸ್ತಾಪಿಸಿತ್ತು.
2024ರ ಬಿಜೆಪಿ ಹೀನಾಯ ಸೋಲಿನಿಂದಾಗಿ ಅಯೋಧ್ಯೆಯಲ್ಲಿ ಬಿಜೆಪಿ ತೀರ ದುರ್ಬಲವಾಗಿದೆ ಎಂಬುದನ್ನು ಅಖಿಲೇಶ್ ಗ್ರಹಿಸಿದ್ದಾರೆ. ಇದೀಗ, ಅದೇ ಅಯೋಧ್ಯೆಯಿಂದಲೇ ಬಿಜೆಪಿಗೆ ‘ದೊಡ್ಡ ಸೊನ್ನೆ’ ಅಂದರೆ ಅಯೋಧ್ಯೆ ಜಿಲ್ಲೆಯ ಎಲ್ಲ 5 ವಿಧಾನಸಭಾ ಕ್ಷೇತ್ರಗಳಲ್ಲೂ ಸೋಲುಣಿಸಲು ಮತದಾರರಿಗೆ ಕರೆ ನೀಡಲು ಮುಂದಾಗಿದ್ದಾರೆ.
ಈ ಲೇಖನ ಓದಿದ್ದೀರಾ?: ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!
ಅಖಿಲೇಶ್ ಯಾದವ್ ಅವರು ತಮ್ಮ ಪ್ರಮುಖ ರಾಜಕೀಯ ತಂತ್ರವಾದ ‘ಪಿಡಿಎ’ (ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು) ಜೊತೆಗೆ ಧಾರ್ಮಿಕ ಸಂಕೇತಗಳನ್ನು ಸಮರ್ಥವಾಗಿ ಹೊಂದಿಸುತ್ತಿದ್ದಾರೆ. ಇತ್ತೀಚೆಗೆ, ಅವರು “ಸಮಾಜವಾದವೇ ವಾಸ್ತವದಲ್ಲಿ ‘ರಾಮರಾಜ್ಯ’, ಮತ್ತು ‘ರಾಮರಾಜ್ಯ’ವೇ ಸಮಾಜವಾದ” ಎಂದು ವ್ಯಾಖ್ಯಾನಿಸುವ ಮೂಲಕ ಬಿಜೆಪಿಯ ಹಿಂದುತ್ವಕ್ಕೆ ಸವಾಲೆಸೆದಿದ್ದಾರೆ.
ಇಟಾವಾದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಶಿವ ದೇವಾಲಯ (ಕೇದಾರೇಶ್ವರ) ನಿರ್ಮಿಸುವುದು, ಕೃಷ್ಣನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಧೀರೇಂದ್ರ ಕೃಷ್ಣ ಶಾಸ್ತ್ರಿ ವಿರುದ್ಧ ದ್ವನಿ ಎತ್ತುವುದು ಹಾಗೂ ಈಗ ಅಯೋಧ್ಯೆಯ ರಾಮಲಲ್ಲಾ ದರ್ಶನಕ್ಕೆ ಸಜ್ಜಾಗುವ ಮೂಲಕ, ಹಿಂದು ತ್ರಿಸ್ವರೂಪಗಳಾದ ಶಿವ, ಕೃಷ್ಣ ಹಾಗೂ ರಾಮನ ಜೊತೆಗೆ ಉತ್ತರ ಪ್ರದೇಶದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಾದ ವಾರಣಾಸಿ, ಮಥುರಾ ಹಾಗೂ ಅಯೋಧ್ಯೆಯನ್ನು ಸಾಂಕೇತಿಕವಾಗಿ ಬೆಸೆಯಲು ಅಖಿಲೇಶ್ ಮುಂದಾಗಿದ್ದಾರೆ.
ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿಯ ಪ್ರಕಟಣೆಯಿಂದ ಕಂಗಾಲಾಗಿರುವ ಬಿಜೆಪಿ ನಾಯಕರು, ಇದನ್ನು ‘ಚುನಾವಣಾ ಗಿಮಿಕ್’ ಮತ್ತು ‘ಅವಕಾಶವಾದಿ ರಾಜಕಾರಣ’ ಎಂದು ಕರೆದಿದ್ದಾರೆ. ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು; “ಸನಾತನ ಸಂಸ್ಕೃತಿಯ ತಾಕತ್ತೇ ಹಾಗಿದೆ. ಮುಂಚೆ ರಾಮಮಂದಿರದ ಹೆಸರು ಎತ್ತದವರೂ ಸಹ ಈಗ ಚುನಾವಣೆಯಲ್ಲಿ ಮತ ಪಡೆಯಲು ಶ್ರೀರಾಮನಿಗೆ ಶರಣಾಗುವುದು ಅನಿವಾರ್ಯವಾಗಿದೆ” ಎಂದಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; “ಕರಸೇವಕರ ಮೇಲೆ ಗುಂಡು ಹಾರಿಸಿ, ಅಯೋಧ್ಯೆಯ ಬೀದಿಗಳನ್ನು ರಕ್ತಸಿಕ್ತಗೊಳಿಸಿದವರು ಹಾಗೂ ರಾಮನ ಅಸ್ತಿತ್ವವನ್ನೇ ನಿರಾಕರಿಸಿದವರು ಈಗ ಶ್ರೀರಾಮನ ಮುಂದೆ ತಲೆಬಾಗುವುದು ಅನಿವಾರ್ಯ. ಅವರು ಅಯೋಧ್ಯೆಗೆ ಬರುವುದಾದರೆ ರಾಮಭಕ್ತರ ಮತ್ತು ಸಂತರ ಕ್ಷಮೆಯಾಚಿಸಿ ಪ್ರಾಯಶ್ಚಿತ್ತ ಮಾಡಿಕೊಂಡು ಬರಲಿ” ಎಂದು ವಾಗ್ದಾಳಿ ನಡೆಸಿದ್ದಾರೆ.
ಆದಾಗ್ಯೂ, 1990ರ ಘಟನೆ ನಡೆದು ಮೂರು ದಶಕಗಳು ಕಳೆದಿವೆ. ಅದರ ನಂತರ ಸಮಾಜವಾದಿ ಪಕ್ಷವು ಮೂರು ಬಾರಿ ಅಧಿಕಾರಕ್ಕೆ ಬಂದಿದ್ದು, 2012ರಲ್ಲಿ ಅಖಿಲೇಶ್ ಪೂರ್ಣ ಬಹುಮತದ ಸರ್ಕಾರ ನಡೆಸಿದ್ದಾರೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ವಾರಣಾಸಿ ವಿಭಾಗದ ಎರಡೂ ಸ್ಥಾನಗಳನ್ನು ಬಿಜೆಪಿ ಸೋತಿದ್ದು, ಗೋರಖ್ಪುರ-ಫೈಜಾಬಾದ್ ಕ್ಷೇತ್ರದಲ್ಲೂ ಹಿನ್ನಡೆ ಕಂಡಿದೆ. ಇದು ಬಿಜೆಪಿಯ ಹಿಂದುತ್ವ ರಾಜಕಾರಣದ ಪ್ರಭಾವ ಕಡಿಮೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇಂತಹ ಸಂದರ್ಭದಲ್ಲಿ; ರಾಮ ಮಂದಿರವು ಕೇವಲ ಬಿಜೆಪಿಯ ರಾಜಕೀಯ ಆಸ್ತಿಯಲ್ಲ, ಅದು ದೇಶದ ಕೋಟ್ಯಂತರ ಸನಾತನಿಗಳ ಆಸ್ಥೆಯ ಕೇಂದ್ರ ಎಂಬ ಸಂದೇಶವನ್ನು ರವಾನಿಸುವ ಮೂಲಕ, ಅಖಿಲೇಶ್ ಯಾದವ್ ಅವರು ಬಿಜೆಪಿಯ ಕೈಯಲ್ಲಿದ್ದ ಅತ್ಯಂತ ಬಲವಾದ ಅಸ್ತ್ರವನ್ನು ಕಸಿದುಕೊಂಡಿದ್ದಾರೆ. ಡಿಸೆಂಬರ್ 12 ರಂದು ನಡೆಯಲಿರುವ ಈ ಅಯೋಧ್ಯೆ ಭೇಟಿಯು ಕೇವಲ ರಾಮಲಲ್ಲಾನ ದರ್ಶನವಾಗಿರದೆ, 2027ರ ಉತ್ತರ ಪ್ರದೇಶ ಸಮರಕ್ಕೆ ಸಮಾಜವಾದಿ ಪಕ್ಷವು ಎಸೆದಿರುವ ಪ್ರತ್ಯಕ್ಷ ಸವಾಲಾಗಿದೆ.
ಮೂಲ: ದಿ ವೈರ್



