ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ, ಕನಕಪುರ ತಾಲೂಕುಗಳಲ್ಲಿ ಭಾನುವಾರ ರೋಡ್ ಶೋ ಮತ್ತು ಬಹಿರಂಗ ಸಭೆಗಳನ್ನು ನಡೆಸಿದರು. ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಸ್ವಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿರುವ ಅವರು, “ಕಳೆದ ವರ್ಷ ಜಿಲ್ಲೆಯ ಹೆಸರು ಬದಲಾದ ನಂತರ ಇಲ್ಲಿ ಭೂಮಿಯ ಬೆಲೆಗಳು ಗಗನಕ್ಕೇರಿವೆ. ಹೀಗಾಗಿ ಈ ಭಾಗದ ಜನರು ತಮ್ಮ ಜಮೀನುಗಳನ್ನು ಮಾರಾಟ ಮಾಡಬೇಡಿ” ಎಂದು ಕರೆ ನೀಡಿದ್ದಾರೆ.
“ಜಿಲ್ಲೆಯ ಹೆಸರು ಬದಲಾದ ಮೇಲೆ ಇಲ್ಲಿ (ಭೂಮಿಯ ಬೆಲೆಯಲ್ಲಿ) ಏನಾಗಿದೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ” ಎಂದಿರುವ ಸಿಎಂ, “ಬೆಂಗಳೂರು ದಕ್ಷಿಣ ಜಿಲ್ಲೆಯ ಜನರು ಕೆಲಸ ಹುಡುಕಿಕೊಂಡು ಬೆಂಗಳೂರು ನಗರಕ್ಕೆ ವಲಸೆ ಹೋಗಬಾರದು. ಬದಲಿಗೆ, ಸ್ಥಳೀಯವಾಗಿ ಲಭ್ಯವಿರುವ ನೀರನ್ನು ಬಳಸಿಕೊಂಡು ತಮ್ಮದೇ ಹಳ್ಳಿಗಳಲ್ಲಿ ರೇಷ್ಮೆ ಕೃಷಿ ಮತ್ತು ಡೇರಿ (ಹಾಲಿನ ವ್ಯವಹಾರ) ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸ್ವಾಭಿಮಾನದ ಜೀವನ ನಡೆಸಬೇಕು” ಎಂದು ಸಲಹೆ ನೀಡಿದ್ದಾರೆ.
ಅದೇ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮಗಳ ಸುಮಾರು 9,640 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ರೈತರು ನಡೆಸುತ್ತಿರುವ ಹೋರಾಟ ಈಗಾಗಲೇ 445 ದಿನಗಳನ್ನು ದಾಟಿದೆ. ಬಿಡದಿ ಟೌನ್ ಶಿಪ್ ಯೋಜನೆ ಹೆಸರಲ್ಲಿ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರ ಯತ್ನಿಸುತ್ತಿದೆ. ಸದಾ ಹಸಿರಿನಿಂದ ಕಂಗೊಳಿಸುತ್ತಿರುವ ಭೂಮಿಯನ್ನು ಕೊಟ್ಟು, ನಮ್ಮ ಮಕ್ಕಳ ಭವಿಷ್ಯವನ್ನು ಬೀದಿಗೆ ತಳ್ಳಲು ಬಿಡುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದಿದ್ದಾರೆ. ಈ ಹೋರಾಟಕ್ಕೆ ರೈತ, ಕಾರ್ಮಿಕ, ದಲಿತ, ಕನ್ನಡಪರ, ಮಹಿಳಾಪರ, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿವೆ. ಸಂಯುಕ್ತ ಹೋರಾಟ ಕರ್ನಾಟಕವು ಚಳವಳಿಗೆ ಬಲ ತುಂಬಿದೆ. ಈ ಬೆಳವಣೆಗೆಯನ್ನು ಡಿ.ಕೆ. ಶಿವಕುಮಾರ್ ಹೇಗೆ ನೋಡುತ್ತಾರೆ?
“ಶೇ.80ರಷ್ಟು ರೈತರು ಭೂಮಿ ನೀಡಲು ಸಿದ್ದವಿದ್ದಾರೆ” ಎಂದು ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಡಿ.ಕೆ ಶಿವಕುಮಾರ್ ಅವರನ್ನು ರೈತರು ಖಾರವಾಗಿ ಪ್ರಶ್ನಿಸಿದ್ದಾರೆ. ಜೊತೆಗೆ “ಶೇ. 80ರಷ್ಟು ಯಾವ ರೈತರು ಸಿದ್ಧವಿದ್ದಾರೆಂದು ತೋರಿಸಬೇಕು” ಎಂದು ಸವಾಲು ಹಾಕಿದ್ದಾರೆ. “ಭೂಮಿ ನೀಡುವುದಿಲ್ಲ” ಎಂದರೂ ಭೂಮಿ ಕಿತ್ತುಕೊಳ್ಳುವ ಕಸರತ್ತು ನಡೆಸುತ್ತಿರುವುದನ್ನು ಡಿ.ಕೆ. ಶಿವಕುಮಾರ್ ಅವರು ಮರೆಮಾಚಲು ಸಾಧ್ಯವೇ?
ಬಿಡದಿ ರೈತರಷ್ಟೇ ಅಲ್ಲ, ಬೆಂಗಳೂರು ಸುತ್ತಮುತ್ತ ಸಿಗುವ ಫಲವತ್ತಾದ ನೆಲದ ಮೇಲೆಲ್ಲ ಸರ್ಕಾರದ ಕಣ್ಣುಬಿದ್ದಂತೆ ಕಾಣುತ್ತಿದೆ. ಹೀಗಾಗಿಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ರೈತರ ಬದುಕು ಆತಂಕಕ್ಕೆ ಸಿಲುಕಿದೆ. ಇಲ್ಲಿನ ಅತ್ಯಂತ ಫಲವತ್ತಾದ ಭೂಮಿಯನ್ನು ‘ಡೀಪ್ ಟೆಕ್ ಪಾರ್ಕ್’ (Deep Tech Park) ಸ್ಥಾಪನೆಗಾಗಿ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಇದರಿಂದಾಗಿ ಇಲ್ಲಿನ ರೈತರಲ್ಲಿ ಅಸಮಾಧಾನ ಮತ್ತು ಆಕ್ರೋಶ ಹೆಚ್ಚುತ್ತಿದೆ. “ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಕೈಗೆತ್ತಿಕೊಂಡಿರುವ ಈ ಯೋಜನೆಯು ನಮ್ಮ ಸ್ವಾವಲಂಬಿ ಬದುಕನ್ನು ನುಚ್ಚುನೂರು ಮಾಡುತ್ತದೆ. ಕೋಟ್ಯಂತರ ರೂಪಾಯಿ ವಹಿವಾಟಿನ ಗ್ರಾಮೀಣ ಆರ್ಥಿಕತೆ ನಾಶವಾಗುತ್ತದೆ. ಸರ್ಕಾರ ಕೊಡುವ ಅಲ್ಪಾವಧಿಯ ನಗದು ಪರಿಹಾರವೇನೂ ಪ್ರಯೋಜನಕ್ಕೆ ಬರುವುದಿಲ್ಲ” ಎಂಬ ಆತಂಕ ರೈತರನ್ನು ಆವರಿಸಿದೆ.
“ಇಲ್ಲಿ ಯಾವುದೇ ಖಾಲಿ ಅಥವಾ ಬಂಜರು ಭೂಮಿ ಇಲ್ಲವೇ ಇಲ್ಲ. ಪ್ರತಿ ಜಮೀನಿನಲ್ಲೂ ಸಕ್ರಿಯವಾಗಿ ಕೃಷಿ ಮಾಡಲಾಗುತ್ತಿದೆ. ಮಾವು, ಸೀಬೆಹಣ್ಣು, ದ್ರಾಕ್ಷಿ, ಗೋಡಂಬಿ, ಶುಂಠಿ, ತರಕಾರಿಗಳು ಮತ್ತು ಸೇಬನ್ನು ಸಹ ಇಲ್ಲಿನ ರೈತರು ಬೆಳೆಯುತ್ತಿದ್ದಾರೆ. ಜೊತೆಗೆ ಈ ಭಾಗದ ಪ್ರಮುಖ ರೇಷ್ಮೆ ಉದ್ಯಮಕ್ಕೆ ಆಧಾರವಾಗಿರುವ ಹಿಪ್ಪೆನೇರಳೆ ಕೃಷಿಯನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ” ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವಿಸ್ತೃತವಾಗಿ ವರದಿ ಮಾಡಿದೆ.
ಈ ಭಾಗದಲ್ಲಿ ರಾಗಿ ಮತ್ತು ಜೋಳದಂತಹ ಸಾಂಪ್ರದಾಯಿಕ ಕೃಷಿ ಬೆಳೆಗಳನ್ನೂ ಬೆಳೆಯಲಾಗುತ್ತದೆ. ಈ ಜಮೀನುಗಳಿಂದ ರೈತರು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಆದರೂ, ಈಗ ಕೃಷಿ ಸಮುದಾಯದಲ್ಲಿ ಆತಂಕ ಮನೆಮಾಡಿದೆ. ರೈತ ಮುಖಂಡರು ಹೇಳುವ ಪ್ರಕಾರ, “ವಿಶೇಷ ಭೂಸ್ವಾಧೀನಾಧಿಕಾರಿಗಳು ನಡೆಸಿದ ಸರ್ವೆ ಸಂದರ್ಭದಲ್ಲಿ ಶೇಕಡಾ 70 ರಿಂದ 80 ರಷ್ಟು ಕೃಷಿಕರು ತಮ್ಮ ಜಮೀನುಗಳನ್ನು ನೀಡಲು ನಿರಾಕರಿಸಿ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.”
ಬಸವಾಪಟ್ನ, ತಡೂರು, ತಟ್ಲಗಾನಹಳ್ಳಿ, ನಡಿಪಿನಾಯಕನಹಳ್ಳಿ (ಈ ಒಂದೇ ಗ್ರಾಮದಲ್ಲಿ 1,050 ಎಕರೆ ಜಮೀನು ಗುರುತಿಸಲಾಗಿದೆ), ಯಣ್ಣಂಗೂರು, ಚೊಕ್ಕಹಂದಹಳ್ಳಿ, ಹೊಸಹಳ್ಳಿ, ಎದುರುತಿಪ್ಪೇನಹಳ್ಳಿ, ದೇವಗಾನಹಳ್ಳಿ, ಗೊಲ್ಲಹಳ್ಳಿ, ಅರಿಕೇರಿ, ಕೊಲ್ಮೆ ಹೊಸೂರು ಮತ್ತು ಸಂಜೀವಪುರ ಸೇರಿದಂತೆ 13 ಗ್ರಾಮಗಳ ಒಟ್ಟು 2,823 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ‘ಸರ್ ಎಂವಿ ಡೀಪ್ ಟೆಕ್ ಪಾರ್ಕ್’ ಸ್ಥಾಪನೆ ಮಾಡಲಾವುದು ಎಂದು KIADBಯ ಪ್ರಾಥಮಿಕ ಅಧಿಸೂಚನೆ ಹೇಳುತ್ತದೆ.
“ಈ ಗ್ರಾಮಗಳಲ್ಲಿ ಕೃಷಿಯು ಅತ್ಯಂತ ವ್ಯವಸ್ಥಿತವಾಗಿ ಸಾಗುತ್ತಿದೆ. ಹಿಪ್ಪೆನೇರಳೆ ನಮಗೆ ಕಲ್ಪವೃಕ್ಷವಿದ್ದಂತೆ. ನಾವು ರೇಷ್ಮೆ ಹುಳುಗಳಿಗೆ ಈ ಎಲೆಗಳನ್ನು ಉಣಿಸುತ್ತೇವೆ. ಉಳಿದ ಕಡ್ಡಿಗಳು ಮತ್ತು ರೇಷ್ಮೆ ತ್ಯಾಜ್ಯವನ್ನು ನಾವು ಎಸೆಯುವುದಿಲ್ಲ. ಅವು ನಮ್ಮ ಹಸು, ಆಡು ಮತ್ತು ಕುರಿಗಳಿಗೆ ಮೇವಾಗುತ್ತವೆ. ಈ ಜಾನುವಾರುಗಳು ನಮಗೆ ಹಾಲು ಮತ್ತು ಸಗಣಿ ಗೊಬ್ಬರವನ್ನು ನೀಡುತ್ತವೆ, ಅದು ಮತ್ತೆ ಸಾವಯವ ಗೊಬ್ಬರವಾಗಿ ಮಣ್ಣನ್ನು ಸೇರುತ್ತದೆ” ಎನ್ನುತ್ತಾರೆ ಯಣ್ಣಂಗೂರು ಗ್ರಾಮದಲ್ಲಿ ಮೂರು ಎಕರೆ ಜಮೀನು ಹೊಂದಿರುವ ಯುವ ರೈತ ಪುನೀತ್.
ಈ ಲೇಖನ ಓದಿದ್ದೀರಾ?: ಸಿಎಂ ಬದಲಾವಣೆಯ ನಂತರ ಕಾಂಗ್ರೆಸ್ ಮುಂದಿರುವ ಸವಾಲುಗಳು: ಇದು ಸಿದ್ಧಾಂತ ರಾಜಕೀಯವೇ? ಅಧಿಕಾರ ರಾಜಕಾರಣವೇ?
ಇಲ್ಲಿನ ರೈತರು ವರ್ಷಕ್ಕೆ ಆರು ಬಾರಿ ರೇಷ್ಮೆ ಗೂಡಿನ ಇಳುವರಿಯನ್ನು ಸುಲಭವಾಗಿ ಪಡೆಯುತ್ತಾರೆ. ಇದರೊಂದಿಗೆ ಶುಂಠಿ, ಮೆಕ್ಕೆಜೋಳ, ರಾಗಿ ಮತ್ತು ತರಕಾರಿಗಳಂತಹ ಹೆಚ್ಚಿನ ಮೌಲ್ಯದ ಬೆಳೆಗಳನ್ನು ಬೆಳೆಯುತ್ತಾರೆ. “ನಮ್ಮ ರೇಷ್ಮೆ ಗೂಡುಗಳು ಶಿಡ್ಲಘಟ್ಟ ಮಾರುಕಟ್ಟೆಗೆ ಬಂದಾಗ, ಅವು ಅತ್ಯುನ್ನತ ಗುಣಮಟ್ಟವನ್ನು ಹೊಂದಿರುವುದರಿಂದ ಉತ್ತಮ ಬೆಲೆಗೆ ಮಾರಾಟವಾಗುತ್ತವೆ” ಎಂದು ನಡಿಪಿನಾಯಕನಹಳ್ಳಿಯಲ್ಲಿ ಎಂಟು ಎಕರೆ ಮಾವಿನ ತೋಟ ಮತ್ತು ಎರಡು ಎಕರೆ ರಾಗಿ ಜಮೀನನ್ನು ನಿರ್ವಹಿಸುತ್ತಿರುವ 78 ವರ್ಷದ ನಂಜುಂಡಪ್ಪ ಹೇಳುತ್ತಾರೆ. “ನಮ್ಮ ಭಾಗದ ರೇಷ್ಮೆಯ ಅತ್ಯುತ್ತಮ ಗುಣಮಟ್ಟವನ್ನು ಈ ಹಿಂದೆ ಮುಖ್ಯಮಂತ್ರಿಯವರೂ ಶ್ಲಾಘಿಸಿದ್ದರು. ಇಲ್ಲಿನ ರೇಷ್ಮೆ ನೂಲು ಬಿಚ್ಚಣಿಕೆದಾರರು ನಮ್ಮ ಉತ್ಪನ್ನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಾರೆ” ಎನ್ನುತ್ತಾರೆ ನಂಜುಂಡಪ್ಪ.
ಪ್ರತಿಯೊಂದು ಗ್ರಾಮವೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿದಿನ 1,000 ಲೀಟರ್ಗಿಂತ ಹೆಚ್ಚು ಹಾಲನ್ನು ಪೂರೈಸುತ್ತವೆ. “ನಮ್ಮ ಹಳ್ಳಿಯಲ್ಲಿ ನಾಲ್ಕರಿಂದ ಐದು ಎಕರೆ ಭೂಮಿಯನ್ನು ಗೇಣಿಗೆ (ಲೀಸ್) ಪಡೆದು, ಶುಂಠಿ ಬೆಳೆದು ಒಂದೇ ವರ್ಷದಲ್ಲಿ 40-50 ಲಕ್ಷ ರೂಪಾಯಿ ಸಂಪಾದಿಸಿದ ಜನರಿದ್ದಾರೆ” ಎಂದು ಎರಡು ಎಕರೆ ಜಮೀನಿನಲ್ಲಿ ಸೇವಂತಿ ಮತ್ತು ದಾಳಿಂಬೆ ಬೆಳೆಯುತ್ತಿರುವ ರಂಗಾರೆಡ್ಡಿ ತಿಳಿಸುತ್ತಾರೆ. ಇಂತಹ ಬಂಗಾರದ ಬದುಕು ಕೊಟ್ಟ ಭೂಮಿಯನ್ನು ಕೈಗಾರಿಕೆಗೆ ಕೊಡುವುದಾದರೂ ಹೇಗೆ ಎಂಬುದು ಇಲ್ಲಿನ ರೈತರ ಪ್ರಶ್ನೆ.
“ನಾವು KIADB ಗೆ ಭೂಮಿ ಕೊಟ್ಟರೆ, ಮನೆ ಕಟ್ಟಲು ಸಾಕಾಗುವಷ್ಟು ಹಣ ಸಿಗಬಹುದು. ಆದರೆ ಆ ನಂತರ ಭೂಮಿಯೂ ಇರುವುದಿಲ್ಲ, ಹಣವೂ ಖಾಲಿಯಾಗುತ್ತದೆ. ನಮ್ಮ ಶಾಶ್ವತ ಆಸ್ತಿಯನ್ನು ನಾವು ಕಳೆದುಕೊಳ್ಳುತ್ತೇವೆ. ಅದರ ನಂತರ ನಾವು ಏನು ಮಾಡಬೇಕು?” ಎಂದು ರಂಗಾರೆಡ್ಡಿ ಪ್ರಶ್ನಿಸುತ್ತಾರೆ. ಇದು ಶಿಡ್ಲಘಟ್ಟ ರೈತರ ಬದುಕು-ಬವಣೆಯ ಕಥೆ.
ಅಭಿವೃದ್ಧಿ ಹೆಸರಲ್ಲಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನೇ ಕೇಂದ್ರೀಕರಿಸಿ, ಇಲ್ಲಿನ ಕೃಷಿ ಭೂಮಿಯತ್ತ ನೋಡುವ ಸರ್ಕಾರಗಳು ಪರ್ಯಾಯ ಅಭಿವೃದ್ಧಿ ಮಾದರಿಗಳನ್ನು ಶೋಧಿಸದಿರುವುದು ದುರಂತ ಎಂದು ರೈತ ಸಂಘಟನೆಗಳು ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿವೆ. “ಭೂಮಿಯನ್ನು ಮಾರಬೇಡಿ” ಎಂದು ಕರೆ ನೀಡಿರುವ ಡಿ.ಕೆ. ಶಿವಕುಮಾರ್ ಅವರ ಮಾತು ಕೇವಲ ಹೇಳಿಕೆಯಾಗಿ ಉಳಿಯುತ್ತದೆಯೋ ಅಥವಾ ಬಿಡದಿ ಮತ್ತು ಶಿಡ್ಲಘಟ್ಟ ರೈತರಿಗೂ ಅನ್ವಯಿಸುತ್ತದೆಯೋ ಎಂದು ನೇಗಿಲಯೋಗಿಗಳು ಕೇಳುತ್ತಿದ್ದಾರೆ.




