ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಕ್ಷೇತ್ರವು ದುಬಾರಿಯ ಬಲೆಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆ. ಶಿಕ್ಷಣ ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕಾದರೆ ಸರ್ಕಾರ, ತಯಾರಕರು, ಶಾಲಾ ಆಡಳಿತ ಮಂಡಳಿಗಳು ಹಾಗೂ ಸಮಾಜ ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ವರ್ಷಗಳಲ್ಲಿ ಶಿಕ್ಷಣದ ವೆಚ್ಚ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಂಡಿದ್ದು, ಶಾಲಾ ಆವರಣಗಳು ಮಕ್ಕಳ ಕಲರವದಿಂದ ಕಂಗೊಳಿಸುತ್ತಿವೆ. ಆದರೆ ಮತ್ತೊಂದೆಡೆ ಹೊಸ ಶೈಕ್ಷಣಿಕ ವರ್ಷದ ಆರಂಭವು ಪೋಷಕರ ಆರ್ಥಿಕತೆಗೆ ಭಾರೀ ಹೊಡೆತ ನೀಡಿದೆ. ಶಾಲಾ ಶುಲ್ಕ, ಪುಸ್ತಕಗಳು, ನೋಟ್ಬುಕ್ಗಳು, ಸಮವಸ್ತ್ರಗಳು, ಶಾಲಾ ಬ್ಯಾಗ್ಗಳು, ಸಾರಿಗೆ ವೆಚ್ಚ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೆ ಏರಿಕೆಯಿಂದಾಗಿ ಶಿಕ್ಷಣ ವೆಚ್ಚ ಕಳೆದ ಕೆಲವು ವರ್ಷಗಳಿಗಿಂತ ಹೆಚ್ಚಾಗಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಒಂದು ಮಗುವಿಗೆ ಶಾಲೆ ಆರಂಭದಲ್ಲಿ ಅಗತ್ಯ ಪರಿಕರಗಳನ್ನು ಕೊಡಿಸಲು ತಗುಲುವ ವೆಚ್ಚ 4 ಸಾವಿರದಿಂದ 6 ಸಾವಿರ ರೂಪಾಯಿಗಳ ಒಳಗಡೆ ಆಗುತ್ತಿತ್ತು, ಈಗ ಅದೇ ವೆಚ್ಚ 7 ಸಾವಿರದಿಂದ 10 ಸಾವಿರ ರೂಪಾಯಿವರೆಗೆ ಏರಿಕೆಯಾಗಿದೆ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪಾಲಕರಿಗೆ ಈ ಹೊರೆಯ ಪ್ರಮಾಣ ಇನ್ನೂ ಹೆಚ್ಚಾಗಿದೆ.
ಶಾಲಾ ಬ್ಯಾಗ್, ನೀರಿನ ಬಾಟಲಿ, ಲಂಚ್ ಬಾಕ್ಸ್, ಶ್ಯೂ, ಸಾಕ್ಸ್, ಪುಸ್ತಕಗಳು ಹಾಗೂ ಬರವಣಿಗೆ ಸಾಮಗ್ರಿಗಳ ಖರೀದಿಗೆ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಅದರ ಜತೆಗೆ ಶಾಲಾ ವಾಹನ ಅಥವಾ ಆಟೊ ಬಾಡಿಗೆ ಕೂಡ ಹೆಚ್ಚಿರುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚುವರಿ ಒತ್ತಡ ತಂದಿದೆ.
ಬೆಲೆ ಏರಿಕೆಯನ್ನು ಎದುರಿಸಲು ಕೆಲವು ಕಂಪನಿಗಳು ಹೊಸ ತಂತ್ರ ಅನುಸರಿಸುತ್ತಿವೆ. ಹಿಂದೆ 100 ಪುಟಗಳಿದ್ದ ನೋಟ್ಬುಕ್ಗಳು ಈಗ 88 ಪುಟಗಳಿಗೆ, 200 ಪುಟಗಳ ಪುಸ್ತಕಗಳು 176 ಪುಟಗಳಿಗೆ ಇಳಿಕೆಯಾಗಿವೆ. ದರ ಮಾತ್ರ ಬಹುತೇಕ ಅದೇ ಮಟ್ಟದಲ್ಲಿ ಉಳಿದಿದೆ. ಆರ್ಥಿಕ ತಜ್ಞರ ಪ್ರಕಾರ, ಇದು ʼಶ್ರಿಂಕ್ಫ್ಲೇಷನ್ʼ (Shrinkflation) ಎಂಬ ಪ್ರಕ್ರಿಯೆ. ಅಂದರೆ ವಸ್ತುವಿನ ಪ್ರಮಾಣ ಕಡಿಮೆ ಮಾಡಿ, ಬೆಲೆಯನ್ನು ಯಥಾಸ್ಥಿತಿಯಲ್ಲಿ ಉಳಿಸುವ ವಿಧಾನ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ ಪರೋಕ್ಷವಾಗಿ ಬೀಳುತ್ತಿರುತ್ತದೆ.
ಶಿಕ್ಷಣ ಪರಿಕರಗಳ ಬೆಲೆ ಏರಿಕೆಗೆ ಪ್ರಮುಖ ಕಾರಣ ಕಾಗದದ ಬೆಲೆ ಏರಿಕೆಯಾಗಿರುವುದು. ಕಚ್ಚಾ ವಸ್ತುಗಳ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಸಾಗಾಣಿಕೆ ದರ ಏರಿಕೆಯ ಪರಿಣಾಮವಾಗಿ ಕಾಗದದ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಮುದ್ರಣ ವೆಚ್ಚ, ಶಾಯಿ ಬೆಲೆ, ವಿದ್ಯುತ್ ಶುಲ್ಕ ಮತ್ತು ಕಾರ್ಮಿಕ ವೆಚ್ಚವೂ ಏರಿಕೆಯಾಗಿರುವುದರಿಂದ ಪ್ರಕಾಶಕರು ಹಾಗೂ ತಯಾರಕರು ಹೆಚ್ಚಿನ ದರ ವಿಧಿಸುವುದು ಅನಿವಾರ್ಯವಾಗಿದೆ ಎಂಬುದು ವ್ಯಾಪಾರಸ್ಥರ ವಾದ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕೇವಲ ವಾಹನ ಮಾಲೀಕರಿಗೆ ಮಾತ್ರವಲ್ಲ, ಶಿಕ್ಷಣ ಕ್ಷೇತ್ರಕ್ಕೂ ಪರಿಣಾಮ ಬೀರಿದೆ. ರಾಜ್ಯದ ವಿವಿಧ ಭಾಗಗಳಿಗೆ ಪುಸ್ತಕ ಮತ್ತು ಶಾಲಾ ಪರಿಕರಗಳನ್ನು ಸಾಗಿಸಲು ಹೆಚ್ಚಿನ ವೆಚ್ಚ ತಗುಲುತ್ತಿದೆ. ಈ ಹೆಚ್ಚುವರಿ ವೆಚ್ಚವನ್ನು ಅಂತಿಮವಾಗಿ ಗ್ರಾಹಕರೇ ಭರಿಸಬೇಕಾಗುತ್ತಿದೆ.
ಶಾಲಾ ಬಸ್ಗಳು ಹಾಗೂ ಆಟೋರಿಕ್ಷಾಗಳ ಬಾಡಿಗೆ ದರದಲ್ಲೂ ಶೇ.10ರಿಂದ 20ರಷ್ಟು ಏರಿಕೆ ಕಂಡುಬಂದಿದೆ. ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವೆಚ್ಚ ತಿಂಗಳಿಗೆ 500ರಿಂದ 1000 ರೂಪಾಯಿವರೆಗೆ ಹೆಚ್ಚಾಗಿದೆ ಎಂದು ಪೋಷಕರು ಹೇಳುತ್ತಾರೆ.
ಯಲ್ಲಾಪುರದ ರಾಜೇಶ ಪೂಜಾರ ಮಾತನಾಡಿ, “ದೂರದ ಊರುಗಳಿಗೆ ಹೋಗಿ ಪಠ್ಯ, ಪುಸ್ತಕಗಳನ್ನು ತರುವುದು ಕಷ್ಟದ ಕೆಲಸ. ಈಗಿನ ಬೆಲೆ ಏರಿಕೆಯಿಂದಾಗಿ ಮಕ್ಕಳ ಓದಿನ ಖರ್ಚು ಕಳೆದ ವರ್ಷಕ್ಕಿಂತ ಅಂದಾಜು ಶೇ.20-30ರಷ್ಟು ಜಾಸ್ತಿಯಾಗಿದೆ. ಇಂಧನ ದರ ಏರಿಕೆಯಿಂದಾಗಿ ಆಟೊ ಬಾಡಿಗೆಯೂ ದುಬಾರಿಯಾಗಿದ್ದು, ನಮ್ಮಂತಹ ಮಧ್ಯಮ ವರ್ಗದ ಪೋಷಕರಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಮಂಜುಳಾ ನಾಯ್ಕ(ಪೋಷಕರು, ಬನವಾಸಿ) ಮಾತನಾಡಿ, “ಶಾಲೆ ಆರಂಭಕ್ಕೆ ಮೊದಲೇ ಪುಸ್ತಕಗಳ ಪಟ್ಟಿ ಕೈಸೇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ನೋಟ್ಬುಕ್ಗಳ ಪುಟಗಳನ್ನು ಕಡಿಮೆ ಮಾಡಿ ಬೆಲೆ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ಶೈಕ್ಷಣಿಕ ಪರಿಕರಗಳ ಮೇಲೆ ಹೇರಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಅಥವಾ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು” ಎಂದರು.
ನವೀನ(ಸ್ಟೇಷನರಿ ಅಂಗಡಿಯವರು, ಶಿರಸಿ) ಮಾತನಾಡಿ, “ಶಿರಸಿಯಂತಹ ಮಲೆನಾಡು ಭಾಗದಲ್ಲಿ ಸಾಗಾಣಿಕೆ ವೆಚ್ಚವೇ ದೊಡ್ಡ ಸವಾಲು. ಹುಬ್ಬಳ್ಳಿ ಅಥವಾ ಬೆಂಗಳೂರು ಕಡೆಯಿಂದ ಸರಕುಗಳನ್ನು ತರಿಸಲು ಈಗ ಡೀಸೆಲ್ ದರ ಏರಿಕೆಯಿಂದಾಗಿ ಲಾರಿ ಬಾಡಿಗೆ ಹೆಚ್ಚಾಗಿದೆ. ಈ ಹೆಚ್ಚಿನ ಸಾಗಾಣಿಕೆ ವೆಚ್ಚವನ್ನು ನಾವು ಗ್ರಾಹಕರಿಗೆ ವಿಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ನಮಗೂ ಬೇಸರ ತಂದಿದೆ. ಆದರೆ ವಿಧಿಯಿಲ್ಲ, ಅನಿವಾರ್ಯ” ಎಂದರು.
ಬಟ್ಟೆ, ದಾರ, ರಬ್ಬರ್ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ದರ ಹೆಚ್ಚಿರುವುದರಿಂದ ಶಾಲಾ ಸಮವಸ್ತ್ರ ಮತ್ತು ಶ್ಯೂಗಳನ್ನು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಿದರೂ ಕೂಡ ಉಳಿದ ಪರಿಕರಗಳು ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕೆಲ ಖಾಸಗಿ ಶಾಲೆಗಳು ನಿರ್ದಿಷ್ಟ ಅಂಗಡಿಗಳಿಂದಲೇ ಸಮವಸ್ತ್ರ ಖರೀದಿಸುವಂತೆ ಸೂಚಿಸುತ್ತಿರುವುದರಿಂದ ಪೋಷಕರಿಗೆ ಆಯ್ಕೆಯ ಅವಕಾಶ ಕಡಿಮೆಯಾಗಿದೆ.
ಜಿಲ್ಲೆಯ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಕುಟುಂಬಗಳು ಹೆಚ್ಚು ಸಂಕಷ್ಟ ಅನುಭವಿಸುತ್ತಿವೆ. ಕೃಷಿ ಆದಾಯದ ಅನಿಶ್ಚಿತತೆ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಅನೇಕ ಕುಟುಂಬಗಳು ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಪರದಾಡುತ್ತಿವೆ. ಕೆಲವೆಡೆ ಪಾಲಕರು ಹಳೆಯ ಬ್ಯಾಗ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ಮರುಬಳಕೆ ಮಾಡಿಕೊಳ್ಳುವ ಮೂಲಕ ಖರ್ಚು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
“ಕಾಗದ ಮತ್ತು ಮುದ್ರಣ ವೆಚ್ಚ ಹೆಚ್ಚಿರುವುದರಿಂದ ತಯಾರಕರು ಹಳೆಯ ದರದಲ್ಲಿ ಸರಕು ಪೂರೈಸುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಸರಕು ಸಿಗುತ್ತಿಲ್ಲ. ಇದರಿಂದ ಗ್ರಾಹಕರು ಹೆಚ್ಚಿನ ದರ ಕೊಟ್ಟು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎನ್ನುತ್ತಾರೆ ಸ್ಟೇಷನರಿ ಅಂಗಡಿ ಮಾಲೀಕರು.
ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಏರುತ್ತಿರುವ ಬೆಲೆ ಮತ್ತು ಬದುಕಲು ಕಲಿಸುತ್ತಿರುವ ಮೋದಿ
ಕಾಗದ ಮತ್ತು ಇಂಧನ ದರಗಳಲ್ಲಿ ಇಳಿಕೆ ಕಾಣದಿದ್ದರೆ ಮುಂದಿನ ತಿಂಗಳುಗಳಲ್ಲಿ ಶಿಕ್ಷಣ ಪರಿಕರಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಶಾಲಾರಂಭದ ಸಂಭ್ರಮದ ನಡುವೆ ದುಬಾರಿಯ ಬಿಸಿ ಪೋಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಕ್ಷೇತ್ರವು ದುಬಾರಿಯ ಬಲೆಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆ. ಶಿಕ್ಷಣ ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕಾದರೆ ಸರ್ಕಾರ, ತಯಾರಕರು, ಶಾಲಾ ಆಡಳಿತ ಮಂಡಳಿಗಳು ಹಾಗೂ ಸಮಾಜ ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ವರ್ಷಗಳಲ್ಲಿ ಶಿಕ್ಷಣದ ವೆಚ್ಚ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.




