ಕಳೆದ ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದ ಉಂಟಾದ ಬೆಳೆ ಮತ್ತು ಮನೆ ಹಾನಿಗಳನ್ನು ಅಗಸ್ಟ್ 3ರಿಂದ 7ರವರೆಗೆ ಸರ್ವೆ ಕಾರ್ಯ ಮುಗಿಸಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರೊಂದಿಗೆ ಕಂದಾಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ ನೆರೆ ಹಾವಳಿಯಿಂದ ಮಾನವ ಮತ್ತು ಜಾನುವಾರುಗಳ ಜೀವ ಹಾನಿ, ಕೃಷಿ ಬಿತ್ತನೆ ಕುರಿತು ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, “ಮಾನವ ಸಾವು ಪ್ರಕರಣದಲ್ಲಿ ಜನರಿಗೆ ಪರಿಹಾರ ನೀಡುವುದು ಮುಖ್ಯವಲ್ಲ. ಪ್ರಾಣ ಹಾನಿ ಆಗದ ರೀತಿ ಮುನ್ನೆಚ್ಚರಿಕೆ ವಹಿಸುವುದು ನಮ್ಮ ಆದ್ಯತೆ ಆಗಬೇಕು. ಅದಕ್ಕಾಗಿ ಮಳೆಗಾಲ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಡಳಿತ ವರ್ಗ ಹೆಚ್ಚಿನ ಗಮನ ನೀಡಬೇಕು” ಎಂದರು.
“ವಿಪತ್ತು ನಿರ್ವಹಣೆ ಹೆಸರಿನಲ್ಲಿ ಹಣ ದುರುಪಯೋಗವಾದಲ್ಲಿ ಅದು ಕೆಟ್ಟ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತದೆ. ಪರಿಹಾರ ವಿತರಣೆಯ ಕೆಲವೊಂದು ಪ್ರಕರಣದಲ್ಲಿ ಸ್ಯಾಟಲೈಟ್ ಫೋಟೋಗಳನ್ನು ಪರೀಕ್ಷಿಸಿ ಜಿಲ್ಲಾಧಿಕಾರಿಗಳು ಪರಿಹಾರ ನೀಡಬೇಕು” ಎಂದು ತಿಳಿಸಿದರು.
“ಭೂಮಿ ತಂತ್ರಾಂಶದಲ್ಲಿ ಪಹಣಿ ಪತ್ರಿಕೆ ತಿದ್ದುಪಡಿ, ವರ್ಗಾವಣೆ ವಿಷಯ ಕುರಿತು ಚರ್ಚೆಯಲ್ಲಿ ಕಲಬುರಗಿ ವಿಭಾಗದಲ್ಲಿ
6 ತಿಂಗಳಿನಿಂದ 5 ವರ್ಷದೊಳಗಿನ 5,266 ಪ್ರಕರಣಗಳು ಬಾಕಿ ಇರುವುದನ್ನು ಗಮನಿಸಿದ ಸಚಿವ ಕೃಷ್ಣಭೈರೇಗೌಡ ಅವರು, ಇಂತಹ ಪ್ರಕರಣಗಳಿಂದಲೆ ಜನರು ಬೇಸತ್ತು ಹೋಗಿ ನನ್ನನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಬರುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮ್ಯೂಟೇಷನ್ ಡಿಸ್ಪೂಟ್ ಪ್ರಕರಣಗಳನ್ನು 4-5 ವಿಚಾರಣೆಗಳಲ್ಲಿ ಮುಗಿಸಿ ಜನರಿಗೆ ನೆಮ್ಮದಿ ಕಲ್ಪಿಸಿ” ಎಂದು ತಹಶೀಲ್ದಾರರಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಮಾತನಾಡಿ, “ಮೂರು ತಿಂಗಳ ಒಳಗೆ ಇಂತಹ ಪ್ರಕರಣಗಳು ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳು ಮಾಸಿಕ ಪ್ರಗತಿ ಪರಿಶೀಲನೆ ಮಾಡಬೇಕು. ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಹೊರತಾಗಿ ಇತರೆ ಇಲಾಖೆಯ ಕೆಲಸಗಳು ಇವೆ. ಆದರೆ, ಮಾತೃ ಇಲಾಖೆಯ ಮೂಲ ಕೆಲಸ ಮಾತ್ರ ಮರೆಯಬಾರದು” ಎಂದರು.
“ಕಲಬುರಗಿ ವಿಭಾಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ 3 ತಿಂಗಳಿನಲ್ಲಿ 24 ಸೇರಿದಂತೆ ರಾಜ್ಯದಲ್ಲಿ ಈ ವರ್ಷ ಸಿಡಿಲು, ಮಿಂಚಿನಿಂದ 80 ಜನ ಮೃತಪಟ್ಟಿದ್ದಾರೆ. ಸಿಡಿಲು ಕುರಿತು ಹೆಚ್ಚಿನ ಅರಿವು ನೀಡಿದಲ್ಲಿ ಸಾವು ತಪ್ಪಿಸಬಹುದಿತ್ತು. ನೊಂದ ಕುಟುಂಬಗಳಿಗೆ ಸರ್ಕಾರ 24 ಗಂಟೆಯಲ್ಲಿ ಪರಿಹಾರ ನೀಡಬಹುದು. ಆದರೆ, ಹೋದ ಜೀವ ಮತ್ತೆ ಮರುಕಳಿಸಲು ಸಾಧ್ಯವಿಲ್ಲ” ಎಂದರು.
“ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 2020-21ನೇ ಸಾಲಿನ ನೆರೆ ಹಾವಳಿಯ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿರುವುದಕ್ಕೆ ಸಚಿವ ಕೃಷ್ಣಭೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿ, ರಸ್ತೆ, ಶಾಲೆ, ಸೇತುವೆ ದುರಸ್ತಿಗೆ ವಿಪತ್ತು ನಿರ್ವಹಣೆಯಲ್ಲಿ 1-2 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಮಳೆಗಾಲ ಹೋಗಿ ಮತ್ತೆ ಮಳೆಗಾಲ ಬಂದರೂ ಕೆಲಸ ಇನ್ನು ಮುಗಿಯಲ್ಲ ಅಂದರೆ ಏನರ್ಥ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ರಿಂಗ್ ರಸ್ತೆ ಯೋಜನೆ ನಿಲ್ಲಿಸುವುದಿಲ್ಲ, ಭೂಮಿ ಕಳೆದುಕೊಳ್ಳುವವರ ಹಿತ ಕಾಯಲು ಬದ್ಧ: ಡಿಸಿಎಂ ಭರವಸೆ
“ಒಟ್ಟಾರೆಯಾಗಿ ಹಳೇ ವರ್ಷಗಳ ವಿಪತ್ತು ನಿರ್ವಹಣೆ ಕೆಲಸಗಳನ್ನು ಮತ್ತು ಕೊಪ್ಪಳ, ಯಾದಗಿರಿಯಲ್ಲಿ ಕೋವಿಡ್ ನಿರ್ವಹಣೆಯ ಬಾಕಿ ಅನುದಾನ ಮುಂದಿನ 10 ದಿನದಲ್ಲಿ ಖರ್ಚು ಮಾಡಿ, ಇಲ್ಲ ಸರ್ಕಾರಕ್ಕೆ ಅನುದಾನ ಹಿಂದಿರುಗಿಸಿ” ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
“ಕಂದಾಯ ಇಲಾಖೆಯು ಸರ್ಕಾರದ ಮಾತೃ ಇಲಾಖೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಹ ಮಾತೃ ಹೃದಯಿಗಳಾಗಿರಬೇಕು. ಸರ್ಕಾರದ ಉದ್ದೇಶ ಮತ್ತು ಧ್ಯೆಯೋದ್ದೇಶಗಳನ್ನು ಅರಿತು ಜನರಿಗೆ ಉತ್ತಮ ಆಡಳಿತ ನೀಡಬೇಕು” ಎಂದು ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಯ ಆಯುಕ್ತ ಪಿ ಸುನೀಲ್ ಕುಮಾರ್, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ ಮಂಜುನಾಥ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ. ಬಿ ಆರ್ ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯ ನಗರ, ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.