ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಉಂಟಾಗದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಭಂವರ್ ಮೀನಾ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಕೇಸ್ವಾನ್‌ನಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅಗತ್ಯವಿದ್ದಲ್ಲಿ ಅವುಗಳ ಮಾಲೀಕರೊಂದಿಗೆ ಮಾತನಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ 31 ಗ್ರಾಮ ಪಂಚಾಯಿತಿಗಳ 4೦ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ, ಟ್ಯಾಂಕರ್‌ಗಳ ಮೂಲಕ 16 ಗ್ರಾಮಗಳಿಗೆ ಕುಡಿಯು ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿ ಮಾಡಿ ನೀಡುವಂತೆ ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಅಭಾವ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದರು.
ಪಶು ಸಂಗೋಪನ ಇಲಾಖೆ ಉಪ ನಿರ್ದೇಶಕ ಡಾ. ಗುರುಶಾಂತಪ್ಪ.ಬಿ ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ದನ, ಎಮ್ಮೆ, ಕುರಿ, ಮೇಕೆ ಸೇರಿದಂತೆ ಒಟ್ಟು 4,೦5,34೦. ಜಾನುವಾರುಗಳಿದ್ದು ಜಿಲ್ಲೆಯ ಜಾನುವಾರುಗಳಿಗೆ ಒಂದು ವಾರಕ್ಕೆ 11,275ಟನ್ಗಳಷ್ಟು ಮೇವಿನ ಅವಶ್ಯಕತೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 2,10,842. ಟನ್ಗಳಷ್ಟು ಮೇವು ಲಭ್ಯವಿದೆ ಗೋಮಾಳ ಅರಣ್ಯ ಪ್ರದೇಶ ಹಾಗೂ ಬೀಳು ಭೂಮಿಗಳಲ್ಲಿ ಬೆಳೆದಿರುವ ಹಸಿಮೆವನ್ನು ಒಂದು ವ್ಯಕ್ತಿಗೆ ವಾರ್ಷಿಕ ಒಂದು ಟನ್ ನಂತೆ ಪ್ರತಿ ತ್ರೈಮಾಸಿಕಕ್ಕೆ ದಾಸ್ತಾನಿಗೆ ತೆಗೆದುಕೊಳ್ಳಲಾಗುವುದು ಬಹುವಾರ್ಷಿಕ ಮೇವು ಬೆಳಗಳಿಂದ ಉತ್ಪಾದನೆಯಾದ ಮೇವನ್ನು ದಾಸ್ತಾನಿಗೆ ತೆಗೆದುಕೊಳ್ಳಲಾಗುವುದು. ಈಗಾಗಲೇ ಮೇವು ಬೀಜದ ಕಿಟ್‌ಗಳನ್ನು ನೀರಾವರಿ ವ್ಯವಸ್ಥೆ ಹೊಂದಿರುವ ಜಾನುವಾರು ಮಾಲೀಕರುಗಳಿಗೆ ವಿತರಿಸಲಾಗಿದ್ದು ಡಿಸೆಂಬರ್ ಮಾಹೆಯ ಮಧ್ಯಭಾಗದಲ್ಲಿ 11,385 ಒಣಮೆವು ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ ಎಂದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | 56 ಕಾಡಾನೆಗಳ ಸ್ಥಳಾಂತರ ಕೈ ಬಿಡಬೇಕು; ಶಾಸಕ ಟಿ. ಡಿ ರಾಜೇಗೌಡ
ವಿ.ಬಿ.ಜಿ ರಾಮ್ ಜಿ ಯೋಜನೆಯಡಿ ಮೇವು ಬೆಳೆಯಲು ಅಗತ್ಯ ಕ್ರಮ ವಹಿಸಬೇಕು ಜಿಲ್ಲೆಯಲ್ಲಿ ಎಷ್ಟು ಗೋಕಟ್ಟೆಗಳನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಕಡೂರು ತಹಸೀಲ್ದಾರ್ ಪೂರ್ಣಿಮ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ದಿವಾಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲ್ ಜಾದವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.



