ಆಗಸ್ಟ್ 15ರಿಂದ ಆರಂಭವಾಗಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಭಾರತೀಯ ರಾಷ್ಟ್ರೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜೆರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ನಿರ್ಧರಿಸಲಾಗಿದೆ. ಆದರೆ, ಈ ನಿರ್ಧಾರವನ್ನು ಕೈಗೊಂಡವರು ಯಾರು ಎಂಬುದೇ ಅಸ್ಪಷ್ಟವಾಗಿದೆ. ಬಣ್ಣ ಬದಲಾವಣೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಾಕಿ ಆಡಳಿತ ಮಂಡಳಿ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಮುಖ ನಿರ್ಧಾರವನ್ನು ಆಡಳಿತ ಮಂಡಳಿ ಅಥವಾ ತಮ್ಮ ಗಮನಕ್ಕೆ ತರದೆ ಜಾರಿಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ತಕ್ಷಣವೇ ವಿವರಣೆ ನೀಡುವಂತೆ ಹಿರಿಯ ಅಧಿಕಾರಿಗಳು ಮತ್ತು ಮಂಡಳಿಯ ಕಾರ್ಯಕಾರಿ ಸದಸ್ಯರಿಗೆ ನೋಟಿಸ್ ಕಳಿಸಿದ್ದಾರೆ.
ಭಾರತ ಹಾಕಿ ತಂಡದ ಮಾಜಿ ನಾಯಕರೂ ಆಗಿರುವ ದಿಲೀಪ್ ಟಿರ್ಕಿ ಅವರು ಶುಕ್ರವಾರ ಬೆಳಿಗ್ಗೆ ಕಳುಹಿಸಿದ ಇಮೇಲ್‌ನಲ್ಲಿ, “ವಿಷಯವು ಬಣ್ಣದ ಆಯ್ಕೆಯ ಬಗ್ಗೆಯಲ್ಲ, ಬದಲಿಗೆ ನಿರ್ಧಾರ ತೆಗೆದುಕೊಂಡ ಪ್ರಕ್ರಿಯೆಗೆ ಸಂಬಂಧಿಸಿದೆ. ರಾಷ್ಟ್ರೀಯ ತಂಡದ ಗುರುತು ಮತ್ತು ಪ್ರಾತಿನಿಧ್ಯವನ್ನು ಒಳಗೊಂಡಿರುವ ಇಂತಹ ಮಹತ್ವದ ನಿರ್ಧಾರವನ್ನು ಜಾರಿಗೆ ತರುವ ಮೊದಲು ಆಯ್ಕೆಯಾದ ನಾಯಕರು ಮತ್ತು ಆಡಳಿತ ಮಂಡಳಿಯೊಂದಿಗೆ ಚರ್ಚಿಸಬೇಕಾಗಿತ್ತು” ಎಂದು ಅವರು ಆಕ್ಷೇಪಿಸಿದ್ದಾರೆ.
“ಹಾಕಿ ತಂಡದ ಜೆರ್ಸಿ ಬಣ್ಣ ಬದಲಿಸುವ ನಿರ್ಧಾರವು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ. ಆದರೆ, ಇದು ಕೇವಲ ಕ್ರೀಡಾ ಸಂಬಂಧಿತ ನಿರ್ಧಾರ” ಎಂದು ಅವರು ವಿವರಿಸಿದ್ದಾರೆ.
ರಾಷ್ಟ್ರೀಯ ತಂಡದ ಆಟಗಾರರೊಂದಿಗೆ ಯಾವುದೇ ಸಲಹೆ-ಸಮಾಲೋಚನೆ ನಡೆಸದೆ ಜೆರ್ಸಿ ಬಣ್ಣವನ್ನು ಬದಲಾಯಿಸಲಾಗಿದೆ. ಇತ್ತೀಚೆಗೆ, ಜೆರ್ಸಿಯ ಹೊಸ ವಿನ್ಯಾಸವನ್ನು ಹೊರತಂದಾಗಷ್ಟೇ ಭಾರತೀಯ ಹಾಕಿ ತಂಡದ ಹಲವು ಆಟಗಾರರಿಗೆ ಈ ಬದಲಾವಣೆಯ ವಿಷಯ ಗೊತ್ತಾಗಿದೆ” ಎಂದು ಅವರ ತಿಳಿಸಿದ್ದಾರೆ.
ಹಾಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಕೆ. ಶ್ರೀವಾಸ್ತವ ಅವರಿಗೂ ನೋಟಿಸ್ ನೀಡಿರುವ ಟಿರ್ಕಿ, ಜುಲೈ 31ರ (ಇಂದು) ಸಂಜೆ 5 ಗಂಟೆಯೊಳಗೆ ಎಲ್ಲ ಕಾರ್ಯಕಾರಿ ಸದಸ್ಯರಿಗೆ ವಿವರವಾದ ಟಿಪ್ಪಣಿಯನ್ನು ತಲುಪಿಸುವಂತೆ ನಿರ್ದೇಶಿಸಿದ್ದಾರೆ.
ಕಾರ್ಯಕಾರಿ ಸದಸ್ಯರು ಸಲ್ಲಿಸಬೇಕಿರುವ ಟಿಪ್ಪಣಿಯಲ್ಲಿ ಮುಖ್ಯವಾಗಿ ಕೆಲವು ಅಂಶಗಳು ಸ್ಪಷ್ಟವಾಗಿ ಕೇಳಲಾಗಿದೆ. ಅವುಗಳೆಂದರೆ;
1. ಜೆರ್ಸಿಯ ಸಾಂಪ್ರದಾಯಿಕ ಬಣ್ಣವನ್ನು ಬದಲಾಯಿಸಲು ಇರುವ ಹಿನ್ನೆಲೆ ಮತ್ತು ಕಾರಣಗಳು.
2. ಈ ನಿರ್ಧಾರವನ್ನು ಯಾವ ಅಧಿಕಾರದ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ.
3. ಈ ನಿರ್ಧಾರಕ್ಕೆ ಬರಲು ಅನುಸರಿಸಿದ ಪ್ರಕ್ರಿಯೆ ಮತ್ತು ಅದರಲ್ಲಿ ಭಾಗಿಯಾದ ಅಧಿಕಾರಿಗಳು ಅಥವಾ ಸಮಿತಿಗಳ ವಿವರ.
4. ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಸ್ತುತ ಆಟಗಾರರು, ತರಬೇತುದಾರರು ಅಥವಾ ಮಾಜಿ ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಯಾವುದೇ ಸಮಾಲೋಚನೆ ನಡೆಸಲಾಗಿದೆಯೇ ಎಂಬ ಮಾಹಿತಿ.
5. ಸಾರ್ವಜನಿಕವಾಗಿ ಘೋಷಿಸುವ ಮೊದಲು ಅಧ್ಯಕ್ಷರಿಗಾಗಲಿ ಅಥವಾ ಆಡಳಿತ ಮಂಡಳಿಗಾಗಲಿ ಮಾಹಿತಿ ನೀಡದಿರಲು ಅಥವಾ ಸಮಾಲೋಚಿಸದಿರಲು ಇರುವ ಕಾರಣಗಳನ್ನು ಸ್ಪಷ್ಟಪಡಿಸುವಂತೆ ಸೂಚಿಸಲಾಗಿದೆ.
ಆಗಸ್ಟ್ 15 ರಿಂದ 30 ರವರೆಗೆ ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಹಾಕಿ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ.



