ಬ್ಯಾಟಿಂಗ್ನಲ್ಲಿ ಸಾಮನ್ಯ ಮೊತ್ತ ಪೇರಿಸಿದರೂ ಸಹ, ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಐಪಿಎಲ್ 16ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ತಂಡವನ್ನು ಅವರದ್ದೇ ಮೈದಾನದಲ್ಲಿ 5 ರನ್ಗಳ ಅಂತರದಲ್ಲಿ ಮಣಿಸಿದೆ.
ಮೂರನೇ ಕ್ರಮಾಂಕದಲ್ಲಿ ಆಡಲಿಳಿದು 53 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗುಳಿದರೂ ಸಹ ನಾಯಕ ಹಾರ್ದಿಕ್ ಪಾಂಡ್ಯಾಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಲಾಗಲಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟದಲ್ಲಿ 130 ರನ್ಗಳಿಸಿತ್ತು. ಸಾಮಾನ್ಯ ಸವಾಲಿನ ಚೇಸಿಂಗ್ ವೇಳೆ ಟೈಟನ್ಸ್ ಗೆಲುವಿಗೆ ಅಂತಿಮ 9 ಎಸೆತಗಳಲ್ಲಿ 30 ರನ್ಗಳ ಕಠಿಣ ಗುರಿ ಮುಂದಿತ್ತು. ಆದರೆ ಅನ್ರಿಚ್ ನಾರ್ಟ್ಜೆ ಎಸೆದ 19ನೇ ಓವರ್ನ ಅಂತಿಮ 3 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದ ತೆವಾಟಿಯ ಪಂದ್ಯಕ್ಕೆ ರೋಚಕ ತಿರುವು ತಂದುಕೊಟ್ಟರು.
ಅಂತಿಮ ಓವರ್ನಲ್ಲಿ ಗುಜರಾತ್ ಗೆಲುವಿಗೆ 12 ರನ್ಗಳ ಅಗತ್ಯವಿತ್ತು. ಆದರೆ 6 ರನ್ ನೀಡಿ ತೆವಾಟಿಯ ವಿಕೆಟ್ ಪಡೆದ ಅನುಭವಿ ಬೌಳರ್ ಇಶಾಂತ್ ಶರ್ಮಾ ಡೆಲ್ಲಿಯ ಗೆಲುವಿನ ರುವಾರಿಯಾದರು.
23 ರನ್ಗಳಿಗೆ 5 ವಿಕೆಟ್ !
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 23 ರನ್ಗಳಿಸುವಷ್ಟರಲ್ಲೇ 5 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಆದರೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಅಮಾನ್ ಹಕೀಮ್ ಖಾನ್ ಭರ್ಜರಿ ಅರ್ಧಶತಕ ಸಿಡಿಸಿ ಡೆಲ್ಲಿ ಪಾಲಿಗೆ ರಕ್ಷಕನಾದರು.
44 ಎಸೆತಗಳನ್ನು ಎದುರಿಸಿದ ಖಾನ್ ತಲಾ 3 ಬೌಂಡರಿ ಮತ್ತು ಸಿಕ್ಸರ್ಗಳ ನೆರವಿನಿಂದ 51 ರನ್ಗಳಿಸಿ ವಿಕೆಟ್ ಒಪ್ಪಿಸಿದರು.