ಮುಕುಲ್ ಆಟದ ಶೈಲಿ ಮೊದಲಿನಿಂದಲೂ ಆಕ್ರಮಣಕಾರಿ. “ಬೌಲರ್ ಎಷ್ಟೇ ಒಳ್ಳೆಯ ಬಾಲ್ ಹಾಕಿದರೂ, ಒಂದು ಬಾಲ್ ನನ್ನ ಹೊಡೆಯುವ ಜಾಗಕ್ಕೆ ಬಂದೇ ಬರುತ್ತದೆ. ಅದನ್ನು ನಾನು ಖಂಡಿತ ಸಿಕ್ಸರ್‌ಗೆ ಅಟ್ಟುತ್ತೇನೆ” ಎನ್ನುತ್ತಾರೆ ಮುಕುಲ್. ಇದು ಅವರ ಅಚಲ ಆತ್ಮವಿಶ್ವಾಸ. ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ತಕ್ಷಣವೇ ತಮ್ಮೊಳಗಿದ್ದ ಭಯವೆಲ್ಲಾ ಮಾಯವಾಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ
ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವೆ ನಿನ್ನೆ(ಏ.09) ನಡೆದ ಪಂದ್ಯ ನಿಜಕ್ಕೂ ಒಂದು ಅದ್ಭುತ. 182 ರನ್‌ಗಳ ಗುರಿ ಬೆನ್ನಟ್ಟಿದ್ದ ಲಖನೌ ತಂಡ 128 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿತ್ತು. ಇನ್ನೇನು ಕಥೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಕ್ರೀಸ್ ಆಕ್ರಮಿಸಿಕೊಂಡ 21 ವರ್ಷದ ಯುವ ಆಟಗಾರ ಮುಕುಲ್ ಚೌಧರಿ ಪಂದ್ಯದ ಗತಿಯನ್ನೇ ಬದಲಾಯಿಸಿದರು.
ಕೊನೆಯ ಓವರ್‌ನಲ್ಲಿ ಎಲ್‌ಎಸ್‌ಜಿಗೆ 14 ರನ್ ಬೇಕಾಗಿತ್ತು. ಕೆಕೆಆರ್‌ನ ವೈಭವ್ ಅರೋರ ಜಾಣ ಬೌಲರ್. ವಿಕೆಟ್ ಮೇಲೆ ಯಾರ್ಕರ್ ಎಸೆದರೂ ಈ ಹುಡುಗ ಹೆಲಿಕಾಪ್ಟರ್ ಶಾಟ್ ಹೊಡೆದು ಸಿಕ್ಸರ್ ಬಾರಿಸುತ್ತಾನೆ. ಶಾರ್ಟ್ ಎಸೆದರೆ ಚೆಚ್ಚಿಯೇ ಚೆಚ್ಚುತ್ತಾನೆ. ಚೆಂಡು ಇವನ ಕೈಗೆ ಸಿಗಬಾರದು ಎಂದುಕೊಂಡು ಸತತ ಎರಡು ಎಸೆತ ವೈಡ್ ಯಾರ್ಕರ್ ಗಳನ್ನು ಎಸೆದ. ಎರಡೂ ಚೆಂಡುಗಳಲ್ಲಿ ಒಂದೂ ರನ್ ಸಿಗಲಿಲ್ಲ ಮುಕುಲ್‌ಗೆ. ಪಂದ್ಯ ಮತ್ತೆ ಕೆಕೆಆರ್ ಕಡೆ ವಾಲಿದಂತೆ ತೋರುತ್ತಿತ್ತು. ವೈಭವ್ ಐದನೇ ಎಸತವನ್ನೂ ವೈಡ್ ಯಾರ್ಕರ್ ಮಾಡಲು ಯತ್ನಿಸಿದ. ಅದು ಹೆಚ್ಚು ಕಡಿಮೆ ವೈಡ್ ಯಾರ್ಕರ್ ಆಗಿತ್ತು.
ಆದರೆ ಮುಕುಲ್ ಅದನ್ನು ಹೇಗೆ ಕನೆಕ್ಟ್ ಮಾಡಿದನೋ ಏನೋ ಚೆಂಡು ಕವರ್ಸ್ ಮತ್ತು ಪಾಯಿಂಟ್ಸ್ ನಡುವೆ ಸಿಕ್ಸರ್ ಆಗಿತ್ತು. ಪವಾಡದಂಥ ಹೊಡೆತ. ಅಲ್ಲಿಗೆ ಸ್ಕೋರು ಸಮಸಮವಾಗಿಹೋಯಿತು. ಕೊನೆಯ ಎಸೆತದಲ್ಲಿ ಬೇಕಿದ್ದಿದ್ದು ಒಂದೇ ರನ್. ವೈಭವ್ ಸ್ಲೋ ಬೌನ್ಸರ್ ಎಸೆದ. ಮುಕುಲ್ ಬ್ಯಾಟ್ ಬೀಸಿದರೂ ಅದು ಕನೆಕ್ಟ್ ಆಗದೇ ವಿಕೆಟ್ ಕೀಪರ್ ಕಡೆಗೆ ಚೆಂಡು ಹೋಯಿತು. ಮುಕುಲ್, ಆವೇಶ್ ರನ್ ಓಡಿದರು. ರನ್ ಔಟ್ ಮಾಡಲು ವಿಕೆಟ್ ಕೀಪರ್ ಎಸೆದ ಚೆಂಡು ವಿಕೆಟ್‌ಗೆ ಬೀಳಲಿಲ್ಲ. ಎಲ್‌ಎಸ್‌ಜಿಗೆ ಬೇಕಿದ್ದ ರನ್ ಸಿಕ್ಕೇಬಿಟ್ಟಿತು. ಮುಕುಲ್ ಆಟ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು.
ಹೊಸ ಹುಡುಗ ಎಂದು ಮುಕುಲ್ ಅವರನ್ನು ಹಗುರವಾಗಿ ತೆಗೆದುಕೊಂಡ ಕೆಕೆಆರ್ ಬೌಲರ್‌ಗಳಿಗೆ ಸರಿಯಾದ ಪೆಟ್ಟು ಬಿತ್ತು. ಕೇವಲ 27 ಎಸೆತಗಳಲ್ಲಿ 54 ರನ್ ಚಚ್ಚಿದ ಮುಕುಲ್, 7 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದರು. ಕೊನೆಯವರೆಗೂ ಔಟ್ ಆಗದೆ ಅಚಲವಾಗಿ ನಿಂತು ತಂಡಕ್ಕೆ 3 ವಿಕೆಟ್‌ಗಳ ರೋಮಾಂಚಕ ಗೆಲುವು ತಂದುಕೊಟ್ಟರು. ಕ್ರೀಸ್‌ನಲ್ಲಿದ್ದಾಗ ರಿಷಭ್ ಪಂತ್ ನೀಡಿದ ಒಂದು ಸಣ್ಣ ಸಲಹೆ ತನ್ನ ಆಟಕ್ಕೆ ಬಹಳ ಸಹಾಯ ಮಾಡಿತು ಎಂದು ಸ್ವತಃ ಮುಕುಲ್ ಹೇಳುತ್ತಾರೆ.
ಈ ಅದ್ಭುತ ಗೆಲುವಿನ ನಂತರ ಮೈದಾನದಲ್ಲಿ ನಡೆದ ದೃಶ್ಯ ಎಲ್ಲರ ಗಮನ ಸೆಳೆಯಿತು. ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಭಾವುಕರಾಗಿ ಮುಕುಲ್ ಅವರನ್ನು ಅಪ್ಪಿಕೊಂಡ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಯಿತು. ಒಂದು ಹಂತದಲ್ಲಿ ಕೇವಲ ಶೇ. 35ರಷ್ಟಿದ್ದ ಗೆಲುವಿನ ಸಾಧ್ಯತೆ, ಮುಕುಲ್ ಆಟದಿಂದ ಕ್ಷಣಮಾತ್ರದಲ್ಲಿ ಶೇ. 75ಕ್ಕೆ ಏರಿತ್ತು. ಈ ಮೂಲಕ ಕ್ರಿಕೆಟ್ ಜಗತ್ತಿಗೆ ಒಬ್ಬ ಅದ್ಭುತ ‘ಫಿನಿಶರ್’ ಸಿಕ್ಕಂತಾಗಿದೆ.
ಮುಕುಲ್ ಚೌಧರಿ ಅವರ ಈ ಸಿಡಿಲಮರಿ ಆಟವನ್ನು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮೊದಲೇ ಊಹಿಸಿದ್ದರು. ಐಪಿಎಲ್ ಪಂದ್ಯಕ್ಕೂ ಮುನ್ನ ಪಾಡ್‌ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ್ದ ಅವರು, “ನಾನು ಮುಕುಲ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ನೆಟ್ಸ್‌ನಲ್ಲಿ ಅವರು ನಿರಾಯಾಸವಾಗಿ ದೊಡ್ಡ ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವುದನ್ನು ಕಂಡು ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಅವರ ಬ್ಯಾಟಿಂಗ್‌ನಲ್ಲಿ ಅದ್ಭುತ ಶಕ್ತಿಯಿದೆ. ಮುಂಬರುವ ದಿನಗಳಲ್ಲಿ ಮುಕುಲ್ ದೊಡ್ಡ ಮಟ್ಟದಲ್ಲಿ ಮಿಂಚುವುದನ್ನು ನೀವೆಲ್ಲರೂ ಕಾಣುತ್ತೀರಿ,” ಎಂದು ಹೇಳಿದ್ದರು. ಅವರ ಆ ಭವಿಷ್ಯ ಈಡನ್ ಗಾರ್ಡನ್ಸ್‌ನಲ್ಲಿ ನಿಜವಾಗಿದೆ.
ಹಾಗೆಯೇ ಎಲ್‌ಎಸ್‌ಜಿ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಮುಕುಲ್ ಆಟಕ್ಕೆ ಮಾರುಹೋಗಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು “ಮುಕುಲ್ ವಿಕೆಟ್‌ಗಳ ನಡುವೆ ಓಡುವ ವೇಗವನ್ನು ನೋಡಿದರೆ ವಿರಾಟ್ ಕೊಹ್ಲಿ ನೆನಪಾಗುತ್ತಾರೆ. ಹಾಗೆಯೇ, ಪಂದ್ಯವನ್ನು ಫಿನಿಶ್ ಮಾಡುವ ಅವರ ಶೈಲಿ ಮತ್ತು ಆಟದ ಅರಿವು ಮಹೇಂದ್ರ ಸಿಂಗ್ ಧೋನಿಯಂತಿದೆ. ತರಬೇತಿಯ ಸಮಯದಲ್ಲಿಯೇ ನಾನು ಮುಕುಲ್‌ಗೆ ‘ಮುಂದಿನ ನಾಲ್ಕು ತಿಂಗಳಲ್ಲಿ ನಿನ್ನನ್ನು ಭಾರತದ ಅತ್ಯಂತ ಅಪಾಯಕಾರಿ 6 ಅಥವಾ 7ನೇ ಕ್ರಮಾಂಕದ ಬ್ಯಾಟರ್ ಆಗಿ ರೂಪಿಸುತ್ತೇನೆ’ ಎಂದು ಹೇಳಿದ್ದೆ. ಆ ಯುವಕನ ಕಣ್ಣಿನಲ್ಲಿ ಗೆಲ್ಲಬೇಕೆಂಬ ಅದ್ಭುತವಾದ ಹಸಿವಿದೆ” ಎಂದು ಲ್ಯಾಂಗರ್ ಹೆಮ್ಮೆಯಿಂದ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್
ಮುಕುಲ್ ರಾಜಸ್ಥಾನದ ಜುಂಜುನು ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ ಆಗಸ್ಟ್ 6, 2004 ರಂದು ಜನಿಸಿದರು. ಇಂದು ಮೈದಾನದಲ್ಲಿ ಅಬ್ಬರಿಸುತ್ತಿರುವ ಈ ಹುಡುಗನ ಹಿಂದೆ ಅಪ್ಪನ ದೊಡ್ಡ ಕನಸಿತ್ತು. ಮುಕುಲ್ ಇನ್ನೂ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ‘ನನ್ನ ಮಗ ದೊಡ್ಡ ಕ್ರಿಕೆಟರ್ ಆಗಬೇಕು’ ಎಂದು ಅವರ ತಂದೆ ಕನಸು ಕಂಡಿದ್ದರು. ಆದರೆ ಆ ಕನಸಿನ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ.
ಈ ಕನಸು ನನಸು ಮಾಡುವುದು ಅಷ್ಟು ಸುಲಭವಿರಲಿಲ್ಲ. ಮುಕುಲ್ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಕಷ್ಟದಲ್ಲಿತ್ತು. ಬಡತನದಿಂದಾಗಿ ಸಣ್ಣ ವಯಸ್ಸಿನಲ್ಲೇ ಬ್ಯಾಟ್ ಹಿಡಿಯಲು ಮುಕುಲ್‌ಗೆ ಸಾಧ್ಯವಾಗಲಿಲ್ಲ. ಅಪ್ಪ-ಅಮ್ಮ ಮಗನ ಭವಿಷ್ಯಕ್ಕಾಗಿ ಎಷ್ಟೋ ಕಷ್ಟಗಳನ್ನು ಎದುರಿಸಿದರು. ಹಸಿವು ಮತ್ತು ಬಡತನದಿಂದಾಗಿ ತಮ್ಮ ಆಸೆ-ಆಕಾಂಕ್ಷೆಗಳನ್ನು ಮುಂದೂಡುವುದು ಆ ಕುಟುಂಬಕ್ಕೆ ಅನಿವಾರ್ಯವಾಗಿತ್ತು.
ಕಷ್ಟಗಳ ನಡುವೆಯೂ ಛಲ ಬಿಡದ ಮುಕುಲ್, ತಮ್ಮ 12ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರು. ಬೇರೆ ಮಕ್ಕಳು ಈ ವಯಸ್ಸಿಗೆ ಆಗಲೇ ಶಾಲೆ ಮಟ್ಟದಲ್ಲಿ ಮಿಂಚುತ್ತಿದ್ದರೆ, ಮುಕುಲ್ ಮೊದಲ ಹೆಜ್ಜೆ ಇಡುತ್ತಿದ್ದರು. ಊರಿನಲ್ಲಿ ಸರಿಯಾದ ಕೋಚ್ ಅಥವಾ ಅಕಾಡೆಮಿ ಇರಲಿಲ್ಲ. ಹೀಗಾಗಿ ಅವರ ಆರಂಭಿಕ ದಿನಗಳು ಬಹಳ ಕಷ್ಟಕರವಾಗಿದ್ದವು ಹಾಗೂ ಅವರ ಬೆಳವಣಿಗೆ ನಿಧಾನವಾಗಿತ್ತು.
ಸ್ವಲ್ಪ ದಿನಗಳ ನಂತರ ಅವರ ಊರಿನಲ್ಲಿ ‘ಎಸ್‌ಬಿಸಿ ಕ್ರಿಕೆಟ್ ಅಕಾಡೆಮಿ’ ಶುರುವಾಯಿತು. ಅಲ್ಲಿ ಐದಾರು ವರ್ಷಗಳ ಕಾಲ ದಿನವಿಡೀ ಕಠಿಣ ಅಭ್ಯಾಸ ಮಾಡಿದರು. ಆದರೆ ಇಷ್ಟು ಸಾಲದು, ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲು ದೊಡ್ಡ ನಗರಕ್ಕೆ ಹೋಗಲೇಬೇಕು ಎಂದು ಮುಕುಲ್ ನಿರ್ಧರಿಸಿದರು. ಇದ್ದ ಅಲ್ಪಸ್ವಲ್ಪ ಅನುಕೂಲಗಳನ್ನೂ ಬಿಟ್ಟು ಕಠಿಣ ನಿರ್ಧಾರದೊಂದಿಗೆ ಜೈಪುರಕ್ಕೆ ಹೊರಟರು.
ಜೈಪುರದಲ್ಲಿ 4 ವರ್ಷಗಳ ಕಾಲ ಸತತ ಅಭ್ಯಾಸ ನಡೆಸಿದರು. ಜೊತೆಗೆ ಗುರುಗ್ರಾಮ್‌ಗೆ ತೆರಳಿ ದೆಹಲಿಯ ಮೈದಾನಗಳಲ್ಲೂ ಪಂದ್ಯಗಳನ್ನು ಆಡಿದರು. ದೆಹಲಿಯ ವೇಗದ ಪಿಚ್‌ಗಳಲ್ಲಿ ಆಡಿದ್ದು ಅವರ ಆಟಕ್ಕೆ ಹೊಸ ವೇಗ ಮತ್ತು ಶಕ್ತಿ ನೀಡಿತು. ಈ ಕಠಿಣ ಪಯಣ ಮತ್ತು ಹೋರಾಟ ಅವರ ಮನಸ್ಸನ್ನು ಬಲಗೊಳಿಸಿತು. ಇದರಿಂದಲೇ ಇಂದು ಐಪಿಎಲ್‌ನ ಒತ್ತಡವನ್ನು ಅವರು ಸುಲಭವಾಗಿ ನಿಭಾಯಿಸುತ್ತಿದ್ದಾರೆ.
ಮುಕುಲ್ ಆಟದ ಶೈಲಿ ಮೊದಲಿನಿಂದಲೂ ಆಕ್ರಮಣಕಾರಿ. “ಬೌಲರ್ ಎಷ್ಟೇ ಒಳ್ಳೆಯ ಬಾಲ್ ಹಾಕಿದರೂ, ಒಂದು ಬಾಲ್ ನನ್ನ ಹೊಡೆಯುವ ಜಾಗಕ್ಕೆ ಬಂದೇ ಬರುತ್ತದೆ. ಅದನ್ನು ನಾನು ಖಂಡಿತ ಸಿಕ್ಸರ್‌ಗೆ ಅಟ್ಟುತ್ತೇನೆ” ಎನ್ನುತ್ತಾರೆ ಮುಕುಲ್. ಇದು ಅವರ ಅಚಲ ಆತ್ಮವಿಶ್ವಾಸ. ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ತಕ್ಷಣವೇ ತಮ್ಮೊಳಗಿದ್ದ ಭಯವೆಲ್ಲಾ ಮಾಯವಾಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಇವರ ನಿರಂತರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು 2023ರಲ್ಲಿ. ರಾಜಸ್ಥಾನ ತಂಡದ ಮೂಲಕ ರಣಜಿ ಟ್ರೋಫಿಗೆ ಕಾಲಿಟ್ಟರು. ನಂತರ 2025-26ರ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಮಿಂಚಿದರು. ದೇಶೀಯ ಟಿ20ಯಲ್ಲಿ 46.67ರ ಸರಾಸರಿ ಹಾಗೂ 164.71 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಈ ಪ್ರದರ್ಶನವೇ ಅವರಿಗೆ ಐಪಿಎಲ್ ಬಾಗಿಲು ತೆರೆಯಿತು.
ಐಪಿಎಲ್ 2026ರ ಹರಾಜಿನಲ್ಲಿ ಮುಕುಲ್ ಮೂಲಬೆಲೆ ಇದ್ದದ್ದು ಕೇವಲ 30 ಲಕ್ಷ ರೂಪಾಯಿ. ಆದರೆ ಇವರ ಪ್ರತಿಭೆ ಅರಿತಿದ್ದ ಮುಂಬೈ, ರಾಜಸ್ಥಾನ ಮತ್ತು ಲಖನೌ ತಂಡಗಳು ಇವರನ್ನು ಕೊಳ್ಳಲು ಮುಗಿಬಿದ್ದವು. ಕೊನೆಗೆ ಲಖನೌ ತಂಡ 2.6 ಕೋಟಿ ರೂಪಾಯಿಗೆ ಖರೀದಿಸಿತು. ಇದು ಬಡತನದಲ್ಲಿ ಬೆಳೆದ ಮುಕುಲ್ ಹೋರಾಟಕ್ಕೆ ಮತ್ತು ತಂದೆ ತಾಯಿಯ ಕನಸಿಗೆ ಸಿಕ್ಕ ಅತಿ ದೊಡ್ಡ ಗೌರವ. ಕಡುಬಡತನದ ಚಿಕ್ಕ ಹಳ್ಳಿಯಿಂದ ಬಂದು, ಈಡನ್ ಗಾರ್ಡನ್ಸ್‌ನಲ್ಲಿ ಲಕ್ಷಾಂತರ ಜನರ ಎದುರು ಅಬ್ಬರಿಸಿದ ಮುಕುಲ್ ಸಾಧನೆ ಕ್ರೀಡಾ ಇತಿಹಾಸದಲ್ಲಿ ಸದಾ ನೆನಪಿನಲ್ಲುಳಿಯುವಂಥದ್ದು.




