ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ

Date:

ಹಗಲಿನಲ್ಲಿ ಉದ್ಯೋಗ ಮಾಡುತ್ತಿದ್ದ ಶೋಯೆಬ್, ರಾತ್ರಿ ಪಾಳಯದಲ್ಲಿ ಫ್ಲಡ್ ಲೈಟ್‌ಗಳ ಬೆಳಕಿನಲ್ಲಿ ಕಠಿಣ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗುತ್ತಿದ್ದರು. ದಿನವಿಡೀ ಸೇಲ್ಸ್‌ಮನ್ ಆಗಿ ಕೆಲಸ ಮಾಡಿ, ರಾತ್ರಿ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದರು. ​ಅವರ ಈ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಶೀಘ್ರವೇ ದೊರೆಯಿತು. ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ಒಡೆತನದ ದುಬೈ ಕ್ಯಾಪಿಟಲ್ಸ್ ಫ್ರಾಂಚೈಸಿಯ ಡೆವಲಪ್‌ಮೆಂಟ್ ತಂಡಕ್ಕೆ ಅವರು ಆಯ್ಕೆಯಾದರು

- Advertisement -

ಸಾಧಿಸುವ ಛಲ ಮತ್ತು ಗುರಿಯೆಡೆಗಿನ ನಿರಂತರ ಪರಿಶ್ರಮವಿದ್ದರೆ, ಕನಸುಗಳಿಗೆ ಬಡತನವಾಗಲಿ, ಸೌಲಭ್ಯಗಳ ಕೊರತೆಯಾಗಲಿ ಎಂದಿಗೂ ಅಡ್ಡಿಯಾಗಲಾರದು. ಇದಕ್ಕೆ ಬಿಹಾರದ ಗಯಾ ಜಿಲ್ಲೆಯ ಯುವಕ ಶೋಯೆಬ್ ಖಾನ್ (ಸೊಹೈಬ್ ಖಾನ್) ಅವರೇ ನಿಜವಾದ ಉದಾಹರಣೆ. ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶವೆಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಗಯಾ ಜಿಲ್ಲೆಯ ಇಮಾಮ್‌ಗಂಜ್ ತಾಲೂಕಿನ ‘ಕೋಠಿ’ ಎಂಬ ಕುಗ್ರಾಮದ ಗಲ್ಲಿಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಹುಡುಗ, ಇಂದು 2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಯುಎಇ (ಅರಬ್ ಸಂಯುಕ್ತ ಸಂಸ್ಥಾನ) ರಾಷ್ಟ್ರೀಯ ತಂಡದ ನಿರ್ಣಾಯಕ ಆಟಗಾರನಾಗಿ ಬೆಳೆದು ನಿಂತಿದ್ದಾರೆ. ಹತಾಶೆಯ ಕತ್ತಲಿಂದ ಎದ್ದುಬಂದು, ಅರಬ್ ನಾಡಿನಲ್ಲಿ ಬೆಳಕಾದ ಶೋಯೆಬ್ ಅವರ ಈ ಪಯಣ ಅತ್ಯಂತ ರೋಚಕ ಹಾಗೂ ಸ್ಫೂರ್ತಿದಾಯಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕೋಠಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿದ್ದ ದಿನಗಳವು. ಕ್ರೀಡೆಯಿರಲಿ, ಕನಿಷ್ಠ ಮಟ್ಟದ ಶಿಕ್ಷಣವೂ ಅಲ್ಲಿ ಗಗನಕುಸುಮವಾಗಿತ್ತು. ಶೋಯೆಬ್ ಅವರ ತಂದೆ ಅದೀಬ್ ಖಾನ್ (ಜುಗ್ನು ಖಾನ್) ಓರ್ವ ರೈತ ಹಾಗೂ ಸಮಾಜ ಸೇವಕ. ನಕ್ಸಲ್ ಪ್ರಭಾವಿತ ಪ್ರದೇಶವಾಗಿದ್ದರೂ, ಅವರು ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಲು ನಿರ್ಧರಿಸಿದ್ದರು. ಸ್ವತಃ ಕಾನೂನು ಪದವೀಧರರಾಗಿದ್ದ ಅದೀಬ್ ಖಾನ್, ಹಳ್ಳಿಯಲ್ಲಿ ಸರಿಯಾದ ಶಾಲೆಯಿಲ್ಲದ ಕಾರಣ, ಗಯಾ ನಗರದ ಜ್ಞಾನ್ ಭಾರತಿ ಶಾಲೆಗೆ ಶೋಯೆಬ್‌ರನ್ನು ಸೇರಿಸಿದರು. ಕೇವಲ 6ನೇ ವಯಸ್ಸಿನಲ್ಲೇ ಕ್ರಿಕೆಟ್ ಹುಚ್ಚು ಹತ್ತಿಸಿಕೊಂಡಿದ್ದ ಶೋಯೆಬ್, ತಮ್ಮ 12ನೇ ವಯಸ್ಸಿನಲ್ಲಿಯೇ ಊರಿನ ಮಕ್ಕಳಿಗಾಗಿ ‘ಕೋಠಿ ಕ್ಲಬ್’ ಆರಂಭಿಸಿ, ತಾವೇ ಖುದ್ದಾಗಿ ಮೈದಾನ ಸಿದ್ಧಪಡಿಸಿದ್ದರು.

​ನಂತರ ಉನ್ನತ ವ್ಯಾಸಂಗಕ್ಕಾಗಿ ನವದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾದರು. ಸಮಾಜಶಾಸ್ತ್ರದಲ್ಲಿ ಪದವಿ ಪಡೆಯುವುದರ ಜೊತೆಗೆ ಅಲ್ಲಿಯೂ ವೃತ್ತಿಪರ ಕ್ರಿಕೆಟ್ ಅಭ್ಯಾಸ ಮುಂದುವರಿಸಿದರು. 2017 ಹಾಗೂ 2018ರಲ್ಲಿ ನಾರ್ತ್ ಝೋನ್ ಪಂದ್ಯಾವಳಿಗಳಲ್ಲಿ ಮಿಂಚಿದರು. ವಿಶೇಷವೆಂದರೆ, ಭಾರತದ ದಿಗ್ಗಜ ಆಟಗಾರ ವಿರೇಂದ್ರ ಸೆಹ್ವಾಗ್ ಬಳಿಕ ಜಾಮಿಯಾ ಮಿಲಿಯಾದಿಂದ ಟಿ20 ವಿಶ್ವಕಪ್ ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಈಗ ಶೋಯೆಬ್ ಅವರದ್ದಾಗಿದೆ.

​ಆದರೆ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಅಪಾರ ಪೈಪೋಟಿ ಇದೆ. ತನ್ನ ತವರು ರಾಜ್ಯ ಬಿಹಾರದ ಪರ ಆಡಬೇಕೆಂಬುದು ಶೋಯೆಬ್ ಅವರ ಅತಿದೊಡ್ಡ ಕನಸಾಗಿತ್ತು. ಆದರೆ ಸುಮಾರು 18 ವರ್ಷಗಳ ಕಾಲ ಬಿಹಾರಕ್ಕೆ ಬಿಸಿಸಿಐ ಮಾನ್ಯತೆಯೇ ಇರಲಿಲ್ಲ (2003-04 ರಣಜಿ ಋತುವಿನ ನಂತರ). ಕೊನೆಗೂ ಸುಪ್ರೀಂ ಕೋರ್ಟ್ ಆದೇಶದಿಂದ ಮಾನ್ಯತೆ ಸಿಕ್ಕು, 2019ರಲ್ಲಿ ಬಿಹಾರ ರಣಜಿ ತಂಡದ ಆಯ್ಕೆ ಪ್ರಕ್ರಿಯೆ ನಡೆದಾಗ, ಶೋಯೆಬ್‌ಗೆ ಅದರಲ್ಲಿ ಸ್ಥಾನ ನಿರಾಕರಿಸಲಾಯಿತು. ಪ್ರತಿಭೆ ಇದ್ದರೂ ಅವಕಾಶ ಸಿಗದ ಈ ಘಟನೆ ಅವರಿಗೆ ತೀವ್ರ ಆಘಾತವನ್ನುಂಟು ಮಾಡಿತು. ಅದೆಷ್ಟರ ಮಟ್ಟಿಗೆ ಎಂದರೆ, ತಾನು ಕ್ರಿಕೆಟ್ ಆಡುವುದನ್ನೇ ಶಾಶ್ವತವಾಗಿ ಬಿಡಬೇಕು ಎಂದು ಅವರು ನಿರ್ಧರಿಸಿದ್ದರು. ಈ ನಡುವೆ ​2021ರಲ್ಲಿ ವಿವಾಹವಾದ ಶೋಯೆಬ್, ಕುಟುಂಬದ ಆರ್ಥಿಕ ಜವಾಬ್ದಾರಿ ಹೊರಬೇಕಾದ ಅನಿವಾರ್ಯತೆಗೆ ಸಿಲುಕಿದರು. ಆ ಸಮಯದಲ್ಲಿ, ತಮ್ಮ ಬದುಕಿನ ಹೊಸ ಅಧ್ಯಾಯ ಆರಂಭಿಸಲು ನವೆಂಬರ್ 2021ರಲ್ಲಿ ಯುಎಇಗೆ ಪಯಣ ಬೆಳೆಸಿದರು.

Sohaib Khan new

ಇದನ್ನು ಓದಿದ್ದೀರಾ? ರಣಜಿ ಟ್ರೋಫಿ ಫೈನಲ್‌ಗೇರಿದ ಜಮ್ಮುಕಾಶ್ಮೀರ ತಂಡದ ರೋಚಕ ಪಯಣ; 70 ವರ್ಷಗಳ ಹೊಸ ವಿಕ್ರಮ!

​ಹಗಲಲ್ಲಿ ಉದ್ಯೋಗ, ರಾತ್ರಿ ಕ್ರಿಕೆಟ್

ದುಬೈಗೆ ಹೋದ ಆರಂಭದ ದಿನಗಳು ಸುಲಭವಿರಲಿಲ್ಲ. ಆರ್ಥಿಕ ಸಲಹೆಗಾರರಾಗಿ ‘ಪ್ರೊಸ್ಪೆರೊ’ ಎಂಬ ಶೇರು ಮಾರುಕಟ್ಟೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಹಗಲಿನಲ್ಲಿ ಉದ್ಯೋಗ ಮಾಡುತ್ತಿದ್ದ ಶೋಯೆಬ್, ರಾತ್ರಿ ಪಾಳಯದಲ್ಲಿ ಫ್ಲಡ್ ಲೈಟ್‌ಗಳ ಬೆಳಕಿನಲ್ಲಿ ಕಠಿಣ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗುತ್ತಿದ್ದರು. ದಿನವಿಡೀ ಸೇಲ್ಸ್‌ಮನ್ ಆಗಿ ಕೆಲಸ ಮಾಡಿ, ರಾತ್ರಿ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದರು. ​ಅವರ ಈ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಶೀಘ್ರವೇ ದೊರೆಯಿತು. ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ಒಡೆತನದ ದುಬೈ ಕ್ಯಾಪಿಟಲ್ಸ್ ಫ್ರಾಂಚೈಸಿಯ ಡೆವಲಪ್‌ಮೆಂಟ್ ತಂಡಕ್ಕೆ ಅವರು ಆಯ್ಕೆಯಾದರು. ಅಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ ಶೋಯೆಬ್, ಯುಎಇಯ ಅಂತಾರಾಷ್ಟ್ರೀಯ ಲೀಗ್ ಟಿ20 (ILT20) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. 2024 ಮತ್ತು 2025ರ ಸಾಲಿನಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಮತ್ತು ‘ಬೆಸ್ಟ್ ಫೀಲ್ಡರ್’ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಅವರ ಈ ನಿರಂತರ ಪ್ರದರ್ಶನ, ಯುಎಇ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವಂತೆ ಮಾಡಿತು.

​ಟಿ20 ವಿಶ್ವಕಪ್‌ನಲ್ಲಿ ಸ್ಫೋಟಕ ಆಟ

2026ರ ಟಿ20 ವಿಶ್ವಕಪ್‌ಗೆ ಯುಎಇ ತಂಡದಲ್ಲಿ ಸ್ಥಾನ ಪಡೆದ ಶೋಯೆಬ್ ಖಾನ್, ಇದೀಗ ಜಾಗತಿಕ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ. ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಯುಎಇ ತಂಡಕ್ಕೆ, ಕೆನಡಾ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಜಯ ತಂದುಕೊಟ್ಟಿದ್ದು ಇದೇ ಶೋಯೆಬ್. ಆ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 51 ರನ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಬಳಿಕ ಅಫ್ಘಾನಿಸ್ತಾನದಂತಹ ಬಲಿಷ್ಠ ತಂಡದ ವಿರುದ್ಧವೂ 68 ರನ್‌ಗಳ ಸಿಡಿಲಬ್ಬರದ ಇನಿಂಗ್ಸ್ ಆಡುವ ಮೂಲಕ, ಯುಎಇ ತಂಡದ ಅತ್ಯಮೂಲ್ಯ ಆಸ್ತಿಯಾಗಿ ಹೊರಹೊಮ್ಮಿದ್ದಾರೆ.

​ದುಬೈನಲ್ಲಿ ಸದ್ಯ ಭಾರಿ ಜನಪ್ರಿಯತೆ ಗಳಿಸಿರುವ ಶೋಯೆಬ್ ಖಾನ್, ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲದೆ, ಚುರುಕಿನ ಫೀಲ್ಡಿಂಗ್‌ಗೂ ಸೈ ಎನಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಭಾರತದ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆಡಬೇಕೆಂಬುದು ಅವರ ಮುಂದಿನ ಬಹುದೊಡ್ಡ ಕನಸಾಗಿದೆ. “ನನ್ನ ಮಗ ಭಾರತದ ಪರ ಆಡಬೇಕೆಂಬುದು ನಮ್ಮ ಕನಸಾಗಿತ್ತು. ಆದರೆ, ಈಗ ಅವನು ಯುಎಇ ತಂಡವನ್ನು ಪ್ರತಿನಿಧಿಸುತ್ತಾ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿರುವುದು ನಮ್ಮ ಇಡೀ ಗ್ರಾಮಕ್ಕೆ ಕೀರ್ತಿ ತಂದಿದೆ” ಎಂದು ತಂದೆ ಅದೀಬ್ ಭಾವುಕರಾಗಿ ಹೇಳುತ್ತಾರೆ.

Sohaib Khan new 2

​ತಾಯ್ನಾಡಿನ ಋಣ ಮರೆಯದ ಕ್ರೀಡಾಪಟು

ಅಂತಾರಾಷ್ಟ್ರೀಯ ತಾರೆಯಾಗಿ ಬೆಳೆದರೂ, ಶೋಯೆಬ್ ತಮ್ಮ ಬೇರುಗಳನ್ನು ಮರೆತಿಲ್ಲ. ತಮಗೆ ಭಾರತದಲ್ಲಿ ಎದುರಾದ ಕಷ್ಟಗಳು ತಮ್ಮ ಊರಿನ ಬೇರೆ ಪ್ರತಿಭೆಗಳಿಗೆ ಎದುರಾಗಬಾರದು ಎಂಬ ಕಾರಣಕ್ಕೆ, 2020ರಲ್ಲಿ ತಮ್ಮ ಅಣ್ಣ ಅಲ್ತಮಶ್ ಜೊತೆಗೂಡಿ ಗ್ರಾಮದಲ್ಲಿ ‘ಕೋಠಿ ಕಿಂಗ್ಸ್ ಕ್ರಿಕೆಟ್ ಕ್ಲಬ್’ ಸ್ಥಾಪಿಸಿದ್ದಾರೆ. ಆ ಮೂಲಕ ಹಳ್ಳಿಯ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಉಚಿತ ತರಬೇತಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ.

​ಒಂದು ಕಾಲದಲ್ಲಿ ನಕ್ಸಲರು – ಪೊಲೀಸರ ಬಂದೂಕುಗಳ ಸದ್ದಿಗೆ ಬೆಚ್ಚಿಬೀಳುತ್ತಿದ್ದ ಕೋಠಿ ಗ್ರಾಮದ ಜನತೆ, ಇಂದು ಶೋಯೆಬ್ ಖಾನ್ ಅವರ ಬ್ಯಾಟಿನಿಂದ ಸಿಡಿಯುವ ಬೌಂಡರಿ, ಸಿಕ್ಸರ್‌ಗಳ ಸದ್ದಿಗೆ ಹೆಮ್ಮೆಪಡುತ್ತಿದ್ದಾರೆ. ಬಿಹಾರದ ರಣಜಿ ತಂಡದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಕುಸಿದು ಕೂರದೇ, ಅರಬ್ ನಾಡಿಗೆ ತೆರಳಿ, ಅಲ್ಲಿನ ರಾಷ್ಟ್ರೀಯ ತಂಡದ ಆಧಾರಸ್ತಂಭವಾಗಿ ಬೆಳೆದು ನಿಂತ ಶೋಯೆಬ್ ಖಾನ್ ಅವರ ಈ ರೋಚಕ ಪಯಣ, ಸಾಧಿಸುವ ಛಲವಿರುವ ಪ್ರತಿಯೊಬ್ಬರಿಗೂ ದೊಡ್ಡ ಪಾಠವಾಗಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

‘ಗೋಧ್ರಾ’ದಿಂದ ‘SIR’ ವರೆಗೆ: ಮೋದಿ ಆಡಳಿತದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಕಮರಿದ ಕನಸುಗಳು!

​ಅಧಿಕಾರದ ಉತ್ತುಂಗದ ಸಂಭ್ರಮದ ನಡುವೆ, ಜನಸಾಮಾನ್ಯರ ಕಮರಿದ ಕನಸುಗಳ ಕಥೆಯೊಂದು ಮರೆಯಾಗುತ್ತಿದೆ....