ಖಾಸಗಿ ಹೊಟೇಲ್ವೊಂದರ 19ನೇ ಮಹಡಿಯಿಂದ ಜಿಗಿದು ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಸೋಮವಾರ ನಡೆದಿದೆ ಎಂಬುದು ವರದಿಯಾಗಿದೆ.
ತಮಿಳುನಾಡಿನ ಸೇಲಂ ಮೂಲದ 27 ವರ್ಷದ ಯುವಕ ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ರೇಸ್ ಕೋರ್ಸ್ ರಸ್ತೆಯ ಮಾಧವ ನಗರದ ರೆನೈಸಾನ್ಸ್ ಹೋಟೆಲ್‌ನ 19ನೇ ಮಹಡಿಯಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಮೃತನನ್ನು ತಮಿಳುನಾಡು ಮೂಲದ ಶರಣ್(28) ಎಂದು ಗುರುತಿಲಾಗಿದೆ. ಇವರು ವಾಣಿಜ್ಯ ವ್ಯವಹಾರ ಉದ್ದೇಶಕ್ಕಾಗಿ ಶನಿವಾರ ಹೋಟೆಲ್ಗೆ ಚೆಕ್ ಇನ್ ಆಗಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಸೋಮವಾರ ಮಧ್ಯಾಹ್ನ 2:15ರ ಸುಮಾರಿಗೆ 19ನೇ ಮಹಡಿಗೆ ತೆರಳಿದ್ದ ಶರಣ್ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದನ್ನು ಸಾರ್ವಜನಿಕರು ಗಮನಿಸಿದ್ದರು. ತಕ್ಷಣ ಹೋಟೆಲ್‍ನ ಭದ್ರತಾ ಸಿಬ್ಬಂದಿಯ ಗಮನಕ್ಕೂ ತಂದಿದ್ದರು. ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವ್ಯಕ್ತಿ ಈ ಹಿಂದೆಯೂ ಸಹ ಇದೇ ಹೋಟೆಲ್ಗೆ ಭೇಟಿ ನೀಡಿದ್ದರು ಎಂದು ಗೊತ್ತಾಗಿದೆ.
ಈತ ಭಾನುವಾರ ಹೋಟೆಲ್ಗೆ ಬಂದು ಚೆಕ್ ಇನ್ ಆಗಿದ್ದು, ಬ್ಯುಸಿನೆಸ್ ವಿಚಾರವಾಗಿ ಬಂದಿರುವುದಾಗಿ ರಿಸೆಪ್ಷನ್ ಬುಕ್ನಲ್ಲಿ ದಾಖಲು ಮಾಡಿದ್ದರು. ಈ ಹಿಂದೆ ಕೂಡ ಈತ ಹೋಟೆಲ್ಗೆ ಬಂದು ಉಳಿದುಕೊಂಡಿದ್ದನು. ಈ ಬಾರಿ ಎರಡು ದಿನ ಉಳಿಯೋದಾಗಿ ಹೋಟೆಲ್ ಸಿಬ್ಬಂದಿಗೆ ಹೇಳಿದ್ದನು. ಈತ ಸೋಮವಾರ ಮಧ್ಯಾಹ್ನ 2ಗಂಟೆಯ ಸುಮಾರಿಗೆ 19ನೇ ಫ್ಲೋರ್‌ನ ಬಾಲ್ಕನಿಗೆ ಬಂದು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ತಿಳಿದು ಹೈಗೌಂಡ್ಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಮಸ್ಯೆಗಳ ಆಗರವಾದ ಬೆಂಗಳೂರು; ಕ್ರಮಕ್ಕೆ ಬಿಎನ್‌ಪಿ ಒತ್ತಾಯ
ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ 19ನೇ ಫ್ಲೋರ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂಬ ವಿಷಯ ತಿಳಿದ ಕೂಡಲೇ, ಸ್ಥಳಕ್ಕೆ ಹೈಗ್ರೌಂಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿ ಶರಣ್ ಎಂದು ತಿಳಿದು ಬಂದಿದೆ. ತಮಿಳುನಾಡಿನವನು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಆದರೆ, ಯಾಕೆ ಈ ರೀತಿ ಮಾಡಿಕೊಂಡಿದ್ದಾರೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದರು.
ಘಟನೆಯ ನಂತರ, ಪೊಲೀಸರು ಮೃತ ವ್ಯಕ್ತಿಯ ಕೊಠಡಿಯನ್ನು ಪರಿಶೀಲನೆ ನಡೆಸಿದಾಗ, ಮೃತ ವ್ಯಕ್ತಿಯ ಆಧಾರ್ ಕಾರ್ಡ್ ಸಿಕ್ಕಿದೆ ಎನ್ನಲಾಗಿದೆ. ಸೇಲಂ ಜಿಲ್ಲಾ ಪೊಲೀಸರ ಮೂಲಕ ಅವರ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ಮುಂದುವರೆದಿದೆ.