ಯಶಸ್ವಿಯಾಗಿ ನಡೆದ ʼಕೊಂದವರು ಯಾರು?ʼ ಆಂದೋಲನ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣ

Date:

ಕೊಂದವರು ಯಾರು? ಆಂದೋಲನ ಆಯೋಜಿಸಿದ್ದ “ನಂಬಿಕೆಯೊಂದಿಗೆ ಸಂವಾದ: ಅಧಿಕಾರ, ಪಿತೃಪ್ರಧಾನತೆ, ಧರ್ಮ ಮತ್ತು ಹೊಣೆಗಾರಿಕೆ” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಅಕ್ಟೋಬರ್ 2ರಂದು ಬೆಳಿಗ್ಗೆ 10:30ರಿಂದ ಸಂಜೆ 6:30ರವರೆಗೆ ಬೆಂಗಳೂರಿನ ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿರುವ ಸಭಾ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

- Advertisement -

ʼನಾವೆದ್ದು ನಿಲ್ಲದಿದ್ದರೆ ಸಂಘಟನೆʼ 2025ರಲ್ಲಿ “ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?” ಎಂಬ ಪ್ರಶ್ನೆಯೊಂದಿಗೆ ಹುಟ್ಟಿದ ಆಂದೋಲನವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಗೋಷ್ಠಿ 1: ‘ಅಪರಾಧಿಗಳ ನಿರ್ಭೀತಿ: ಪ್ರಶ್ನಿಸುವುದು, ಉತ್ತರಕ್ಕಾಗಿ ಆಗ್ರಹಿಸುವುದುʼ

ಆರಂಭದಲ್ಲಿ ಮಹಿಳೆಯರ ನೇತೃತ್ವದಲ್ಲಿ ನಗಾರಿ ಪ್ರದರ್ಶನ ನಡೆಯಿತು. ಮಂಡ್ಯದ ಪೂರ್ಣಿಮಾ ಅವರು ನಗಾರಿ ತಂಡವನ್ನು ಪರಿಚಯಿಸಿ, ನಗಾರಿ ಡೊಳ್ಳು ಬಾರಿಸುವುದು ಪುರುಷರಿಗೆ ಮಾತ್ರ ಸೀಮಿತವಾಗಿರುವ ಸಂಪ್ರದಾಯವನ್ನು ಪ್ರಶ್ನಿಸುವ ಉದ್ದೇಶದಿಂದ ತಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

Advertisements

ಇದಾದ ನಂತರ “ಕೊoದವರು ಯಾರು” ಅಭಿಯಾನದ ತಂಡವು ಸಿದ್ಧಪಡಿಸಿದ್ದ ಸತ್ಯ ಶೋಧನಾ ವರದಿಯ ಕುರಿತು ಸಂಕ್ಷಿಪ್ತ ಚರ್ಚೆ ನಡೆಸಿ, ವರದಿಯನ್ನು ಮರುಬಿಡುಗಡೆ ಮಾಡಲಾಯಿತು. ಇಂಗ್ಲಿಷ್ ಉಪನ್ಯಾಸಕಿ ಚಂಪಾವತಿ ಎಚ್.ಎಸ್. ಅವರು, 2025ರ ಡಿಸೆಂಬರ್‌ನಲ್ಲಿ ಬೆಳ್ತಂಗಡಿಯಲ್ಲಿ ವರದಿಯನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ಸಂತ್ರಸ್ತರ ಕುಟುಂಬಗಳು ಮಾತನಾಡಲು ಹಿಂಜರಿದಿದ್ದವು ಎಂದು ಅವರು ಹೇಳಿದರು.

ರಂಗಭೂಮಿ ಕಲಾವಿದೆ ಮಾಯಾ ರಾವ್ ಅವರು, ಧರ್ಮಸ್ಥಳದಲ್ಲಿ ಶವಗಳೊಂದಿಗೆ ಸತ್ಯವನ್ನೂ ಹೂಳಲಾಗುತ್ತಿದೆ ಎಂದು ಹೇಳಿ, ನಿಜವಾದ ಸಂಗತಿಯನ್ನು ಹೊರತೆಗೆಯುವ ಹೋರಾಟಕ್ಕೆ ಮಹಿಳೆಯರು ಕೈಜೋಡಿಸುವಂತೆ ಕರೆ ನೀಡಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸುನಂದಮ್ಮ ಅವರು ಹಲವು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಮರುಪರಿಶೀಲಿಸುವ ಮತ್ತು ನೆನಪಿನಲ್ಲಿ ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಸಾರ್ವಜನಿಕ ನೆನಪು ಇಲ್ಲದಿರುವಾಗ, ಧಾರ್ಮಿಕ ನಾಯಕರಿಂದ ಇಂತಹ ಅಪರಾಧಗಳು ನಡೆಯಲು ಸಾಧ್ಯವೇ ಎಂಬುದನ್ನೇ ಜನರು ನಂಬಲು ನಿರಾಕರಿಸುತ್ತಾರೆ ಎಂದು ಅವರು ಹೇಳಿದರು.

ಗೋಷ್ಠಿ 2: ನೊಂದವರ ಚೇತರಿಕೆ: ಅಧಿಕಾರ, ಪಿತೃಪ್ರಧಾನತೆ, ಧಾರ್ಮಿಕ ರಾಜಕೀಯವನ್ನು ಎದುರಿಸುವುದು

ಈ ಅಧಿವೇಶನದಲ್ಲಿ ಸಿಸ್ಟರ್ ರಾಣಿತ್, ಝಕಿಯಾ ಸೋಮನ್ ಮತ್ತು ವಿಮಲಾ ಕೆ.ಎಸ್. ಅವರು ಮಾತನಾಡಿದರು. ಕೊಂದವರು ಯಾರು ಅಭಿಯಾನದ ಅನಿತಾ ಚೇರಿಯಾ ಮತ್ತು ಮಧು ಭೂಷಣ್ ಅವರು ಅಧಿವೇಶನವನ್ನು ನಿರ್ವಹಿಸಿದರು.

ಕೇರಳದ ಅತ್ಯಾಚಾರ ಸಂತ್ರಸ್ತೆ ಸಿಸ್ಟರ್ ರಾಣಿತ್ ಅವರು ಮಿಷನರೀಸ್ ಆಫ್ ಜೀಸಸ್ (MJ) ಕಾಂಗ್ರಿಗೇಷನ್‌ಗೆ ಸೇರಿದವರು. 2014ರಿಂದ 2016ರವರೆಗೆ ಅವರು ತಮ್ಮ ಕಾಂಗ್ರಿಗೇಷನ್‌ನ ಸುಪೀರಿಯರ್ ಜನರಲ್ ಆಗಿದ್ದರು. ಈ ಅವಧಿಯಲ್ಲಿ ಅಂದಿನ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರು. ಪ್ರಕರಣ ದಾಖಲಿಸಲು ನಿರ್ಧರಿಸುವ ಸಂದರ್ಭದಲ್ಲಿ ತಾವು ಎದುರಿಸಿದ ಅಪಾರ ಕಷ್ಟಗಳನ್ನು ಸಿಸ್ಟರ್ ರಾಣಿತ್ ವಿವರಿಸಿದರು. ಇಂತಹ ಘಟನೆಗಳು ಸಂಭವಿಸಿದಾಗ ಸಂತ್ರಸ್ತರನ್ನು ಬೆಂಬಲಿಸುವಂತೆ ಅವರು ಎಲ್ಲರನ್ನೂ ಮನವಿ ಮಾಡಿದರು.

WhatsApp Image 2026 10 02 at 8.24.54 PM1

ದೂರು ದಾಖಲಿಸಿದ ನಂತರ ಕೆಲವರಷ್ಟೇ ಬೆಂಬಲಿಸಿದರು. ತಮ್ಮ ಮಕ್ಕಳಂತಿದ್ದ ತಮ್ಮಿಂದಲೇ ತರಬೇತಿ ಪಡೆದುಕೊಂಡ ಕಿರಿಯರೂ ಬೆಂಬಲಿಸಲಿಲ್ಲ. ಔಷಧಿ ಮತ್ತು ವಸತಿ ಸೌಲಭ್ಯಗಳಿಗೂ ಈಗ ಅಪಾಯ ಎದುರಾಗಿದೆ ಎಂದು ಅವರು ಹೇಳಿದರು.

ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (BMMA)ದ ಸಹ-ಸಂಸ್ಥಾಪಕಿ ಝಕಿಯಾ ಸೋಮನ್ ಅವರು 2002ರ ಗುಜರಾತ್ ಗಲಭೆಗಳನ್ನು ನೆನಪಿಸಿಕೊಂಡರು. ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸುತ್ತಮುತ್ತಲಿನ ಅಸಹಾಯಕತೆಯ ನಡುವೆಯೂ ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರಿಂದ ತಾವು ಪ್ರೇರಿತನಾದೆ ಎಂದು ಹೇಳಿದರು.

BMMAಗೆ ಹೆಸರಿಡುವ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಅವರು, “ನಾವೂ ಇತರರಷ್ಟೇ ಭಾರತೀಯರು ಎಂಬ ಕಾರಣದಿಂದ ಈ ಹೆಸರನ್ನು ಆಯ್ಕೆ ಮಾಡಲು ನಮಗೆ ಸಮಯ ಬೇಕಾಯಿತು” ಎಂದು ಹೇಳಿದರು.

ಕುರಾನ್‌ನ ನಾಲ್ಕು ಪ್ರಮುಖ ಮೌಲ್ಯಗಳಾದ ನ್ಯಾಯ, ದಯೆ, ಕರುಣೆ ಮತ್ತು ವಿವೇಕಗಳನ್ನು ಉಲ್ಲೇಖಿಸಿದ ಝಕಿಯಾ ಸೋಮನ್, ಇವು ಭಾರತೀಯ ಸಂವಿಧಾನದ ಮೌಲ್ಯಗಳೊಂದಿಗೆ ಹೊಂದಾಣಿಕೆ ಹೊಂದಿವೆ ಎಂದು ವಿವರಿಸಿದರು.

ವಿಮಲಾ ಕೆ.ಎಸ್. ಅವರು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ (AIDWA), ಕರ್ನಾಟಕ ಘಟಕವನ್ನು ಪ್ರತಿನಿಧಿಸುತ್ತಾರೆ. ಅಕ್ಕಮಹಾದೇವಿಯ ವಚನಗಳನ್ನು ಉಲ್ಲೇಖಿಸಿದ ಅವರು, ಪ್ರಗತಿಪರ ಚಿಂತನೆಗಳಿಂದ ಹುಟ್ಟಿಕೊಂಡ ಪರಂಪರೆಗಳಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿದರು.

ಕುದುರೆಮೋತಿ ಪ್ರಕರಣದಲ್ಲಿ, ದಲಿತ ಮಹಿಳೆಯೊಬ್ಬರು ಮುಖ್ಯ ಅರ್ಚಕರಿಂದ ಕಿರುಕುಳಕ್ಕೆ ಒಳಗಾದರು. ಮಹಿಳೆಯರ ದೇಹ ಮತ್ತು ಶುದ್ಧತೆಗೆ ಹೆಚ್ಚಿನ ಮಹತ್ವ ನೀಡುವ ಸಮಾಜವು ತಮಗೆ ಸಹಜವಾಗಿ ಬೆಂಬಲ ನೀಡುತ್ತದೆ ಎಂದು ಭಾವಿಸಿ ಅವರು ತಕ್ಷಣವೇ ಇದರ ವಿರುದ್ಧ ಧ್ವನಿ ಎತ್ತಿದರು. ಆದರೆ, ಮಾತನಾಡಿದ ಕಾರಣಕ್ಕೆ ಅವರಿಗೆ ಬೆಂಬಲ ಸಿಗುವ ಬದಲು ವಿರೋಧ ಎದುರಾಯಿತು ಮತ್ತು ಅವರನ್ನು ಗ್ರಾಮದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿಸಲಾಯಿತು ಎಂದು ವಿಮಲಾ ವಿವರಿಸಿದರು.

ಇಂತಹ ಘಟನೆಗಳು ಕೇವಲ ಮಹಿಳೆಯರ ದೇಹಕ್ಕೆ ಸಂಬಂಧಿಸಿದ ವಿಚಾರಗಳಲ್ಲ; ಅವು ಜಾತಿಯ ಪ್ರಶ್ನೆಗಳೂ ಹೌದು ಎಂದು ವಿಮಲಾ ಒತ್ತಿ ಹೇಳಿದರು. ಇದೇ ರೀತಿಯಲ್ಲಿ ಧರ್ಮಸ್ಥಳದ ವಿಚಾರದಲ್ಲಿಯೂ ಮಹಿಳೆಯರ ಮೇಲಿನ ಹಿಂಸೆಯ ಪ್ರಶ್ನೆಯಷ್ಟೇ ಅಲ್ಲದೆ ಜಾತಿ, ಧರ್ಮ ಮತ್ತು ಭೂಮಿಗೆ ಸಂಬಂಧಿಸಿದ ಹಿತಾಸಕ್ತಿಗಳ ಪ್ರಶ್ನೆಗಳೂ ಇವೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 508 ಅಡಿಯಲ್ಲಿ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದ್ದರೂ, ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 15ಕ್ಕೂ ಹೆಚ್ಚು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ ಎಂದು ಅವರು ಹೇಳಿದರು.

ನಂತರ ಅನಿತಾ ಚೇರಿಯಾ ಅವರು ಸಿಸ್ಟರ್ ರಾಣಿತ್ ಅವರ ಪ್ರಕರಣದ ಕುರಿತು ಮಾತನಾಡಿದರು. ಬಿಷಪ್ ವಿರುದ್ಧ ಸನ್ಯಾಸಿನಿಯೊಬ್ಬರು ದೂರು ದಾಖಲಿಸಿರುವುದು ಇದೇ ಮೊದಲ ಪ್ರಕರಣ ಎಂದು ಅವರು ಹೇಳಿದರು. ಫ್ರಾಂಕೋ ಮುಳಕ್ಕಲ್ ಅವರನ್ನು ಬಂಧಿಸುವಂತೆ ಎರ್ನಾಕುಲಂನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಗಳನ್ನು ಅವರು ವಿವರಿಸಿದರು. ಆದರೆ, ಅವರ ಬಿಡುಗಡೆಯನ್ನೂ ಸಮಾಜದ ಒಂದು ಭಾಗ ಸ್ವಾಗತಿಸಿತು ಎಂದು ಅವರು ಗಮನಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸಂತ್ರಸ್ತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹೊಣೆಗಾರಿಕೆ, ಸ್ಥೈರ್ಯ ಮತ್ತು ನಂಬಿಕೆಯ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು.

ದೌರ್ಜನ್ಯದಿಂದ ತಮ್ಮ ನಂಬಿಕೆಗೆ ಧಕ್ಕೆಯಾಯಿತೇ ಎಂಬ ಪ್ರಶ್ನೆಗೆ ಸಿಸ್ಟರ್ ರಾಣಿತ್, “ತಮ್ಮ ನಂಬಿಕೆ ವಾಸ್ತವವಾಗಿ ಮತ್ತಷ್ಟು ಬಲಗೊಂಡಿದೆ” ಎಂದು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯನ್ನೂ ಒಂದು ಸಂಸ್ಥೆಯ ಪ್ರತಿನಿಧಿಯಾಗಿ ನೋಡದೆ, ಸ್ವತಂತ್ರ ವ್ಯಕ್ತಿಯಾಗಿ ನೋಡುವುದಾಗಿ ಅವರು ವಿವರಿಸಿದರು.

ಮಹಿಳೆಯರ ಮೇಲಿನ ದಾಳಿಗಳು ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ನಾವು ಹೇಗೆ ಭರವಸೆಯಿಂದ ಇರಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ವಿಮಲಾ, ತಮ್ಮ ಧಾರ್ಮಿಕ ಗುರುಗಳನ್ನು ಟೀಕಿಸಿದ್ದಕ್ಕಾಗಿ ತಮ್ಮ ಕುಟುಂಬದ ಎಲ್ಲರಿಂದಲೂ ಬಹಿಷ್ಕಾರಕ್ಕೆ ಒಳಗಾದ ಸಂದರ್ಭವನ್ನು ನೆನಪಿಸಿಕೊಂಡರು. ಆದರೆ ತಮ್ಮ ಪರ ನಿಲ್ಲಲು ಕುಟುಂಬದ ಕೆಲವರು ಕೂಡ ಮುಂದೆ ಬಂದದ್ದು ತಮಗೆ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.

ಗೋಷ್ಠಿ 3: ಪ್ರತಿರೋಧ ಬೆಳೆಸುವುದು: ಹೊಣೆಗಾರಿಕೆಗೆ ಹಕ್ಕೊತ್ತಾಯ ಮತ್ತು ನ್ಯಾಯಕ್ಕಾಗಿ ಹೋರಾಟ

ಈ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ದಿ ನ್ಯೂಸ್ ಮಿನಿಟ್ ಸಂಪಾದಕಿ ಧನ್ಯಾ ರಾಜೇಂದ್ರನ್, ವುಮೆನ್ ಅಂಡ್ ಸಿನಿಮಾ ಕಲೆಕ್ಟಿವ್, ಕೇರಳದ ಡಾ. ಆಶಾ ಅಚ್ಯು ಜೋಸೆಫ್ ಮತ್ತು ವಕೀಲೆ ಪೂರ್ಣಾ ರವಿಶಂಕರ್ ಅವರು ಮಾತನಾಡಿದರು.

ಕೊoದವರು ಯಾರು ಅಭಿಯಾನದ ಮಲ್ಲಿಗೆ ಸಿರಿಮನೆ ಅವರು ಸಂವಾದವನ್ನು ನಿರ್ವಹಿಸಿದರು.

ಧನ್ಯಾ ರಾಜೇಂದ್ರನ್ ಅವರು, ಇಂತಹ ಪ್ರಕರಣಗಳನ್ನು ಇಬ್ಬರು ವ್ಯಕ್ತಿಗಳ ನಡುವಿನ ಸಂಘರ್ಷವಾಗಿ ಮಾತ್ರ ನೋಡಬಾರದು; ಬದಲಾಗಿ, ವ್ಯಕ್ತಿ ಮತ್ತು ಸಂಸ್ಥೆಯ ನಡುವಿನ ಸಂಘರ್ಷವಾಗಿ ಗುರುತಿಸಬೇಕು ಎಂದು ಹೇಳಿದರು.

ನ್ಯಾಯಾಲಯದ ತೀರ್ಪು ಅನುಕೂಲಕರವಾಗಿರಲಿ ಅಥವಾ ಪ್ರತಿಕೂಲವಾಗಿರಲಿ, ಹೊಣೆಗಾರಿಕೆ ಅಲ್ಲಿಗೆ ಮುಗಿಯುವುದಿಲ್ಲ ಎಂದು ಅವರು ಹೇಳಿದರು. ಬಿಷಪ್ ಖುಲಾಸೆಗೊಂಡ ನಂತರವೂ ಸಿಸ್ಟರ್ ರಾಣಿತ್ ಸಮಾಜಕ್ಕೆ ಮರಳಿ, ತಮ್ಮದೇ ಕತೆಯನ್ನು ಹೇಳಿಕೊಳ್ಳುತ್ತಿರುವುದನ್ನು ಅವರು ಶ್ಲಾಘಿಸಿದರು.

ವಕೀಲೆ ಪೂರ್ಣಾ ಅವರು ಪ್ರಗತಿಪರ ಚರ್ಚೆಗಳು ನಡೆಯುವ ಸ್ಥಳಗಳು ಮತ್ತು ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಂಡುಬರುವ ಮನೋಭಾವಗಳ ನಡುವಿನ ಅಂತರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಪೊಲೀಸ್ ಜಾಗೃತಿ ತರಬೇತಿ ಕಾರ್ಯಕ್ರಮಗಳ ಸಂದರ್ಭದಲ್ಲಿ, ಮಹಿಳೆಯರನ್ನು ಖರೀದಿಸಿ, ಬಳಸಿಕೊಂಡು ಮತ್ತು ಮೌಲ್ಯಮಾಪನ ಮಾಡುವ ವಸ್ತುಗಳಂತೆ ನೋಡುವ ಮನೋಭಾವ ಹೊಂದಿರುವ ಕೆಲವು ಪೊಲೀಸರನ್ನು ತಾವು ಕಂಡಿರುವುದಾಗಿ ಅವರು ವಿವರಿಸಿದರು.

ನಾಗಲಕ್ಷ್ಮಿ ಚೌಧರಿ ಮಾತನಾಡುತ್ತಾ, “ಇಂದು ಮೊದಲ ಬಾರಿಗೆ ಮಹಿಳಾ ಸಚಿವರೇ ಇಲ್ಲದೆ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದೆ. ಮತ ಹಾಕಲು ಮಹಿಳೆ ಬೇಕು. ಆದರೆ ಅಧಿಕಾರಕ್ಕೆ ಮಾತ್ರ ನಾವು ಬೇಡ. ಅದಕ್ಕೆ ಗಾಂಧೀಜಿ ಅವರು ನೈತಿಕತೆಯ ಬಲದ ಪ್ರಸ್ತಾಪ ಮಾಡುತ್ತಾರೆ. ಹೆಣ್ಣುಮಗಳಿಗೆ ಒಂದು ಟಿಕೆಟ್ ಕೊಡುವಾಗಲೂ ದುಡ್ಡು ಎಷ್ಟಿದೆ, ಜನ ಎಷ್ಟು ಇಟ್ಟಿದ್ದೀಯಾ- ಅಂದರೆ ತೋಳುಬಲ, ಹಣಬಲ ಕೇಳುತ್ತಾರೆ. ನೈತಿಕ ಬಲ ಯಾರಿಗೂ ಬೇಡ. ನೈತಿಕತೆ ಅವರಿಗೆ ಬೇಕಾಗಿಲ್ಲ. ನೈತಿಕತೆ ಎಂದರೆ ಸತ್ಯ, ಪ್ರಾಮಾಣಿಕತೆ, ಹೋರಾಟ, ಆತ್ಮಸ್ಥೈರ್ಯ, ಮನೋಬಲ- ಇವೆಲ್ಲವೂ ಹೆಣ್ಣುಮಗಳಿಗೆ ಹೆಚ್ಚಾಗಿರುತ್ತದೆ” ಎಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ರುತ್ ಮನೋರಮಾ, ಮಹಿಳೆಯರನ್ನು ಪೊಲೀಸ್ ಠಾಣೆಗಳಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಮಹಿಳಾ ಆಯೋಗವು ಪೊಲೀಸ್ ಠಾಣೆಗಳಿಗೆ ದಿಢೀರ್‌ ಭೇಟಿ ನೀಡಿ (surprise visits)ತಪಾಸಣೆ ನಡೆಸಬೇಕು ಎಂದು ಒತ್ತಾಯಿಸಿದರು. ಮಹಿಳೆಯರು ದೂರು ನೀಡಲು ಹಿಂಜರಿಯುವ ಪರಿಸ್ಥಿತಿ ಇದೆ. ಒಮ್ಮೆ ಪೊಲೀಸ್‌ ಠಾಣೆಗೆ ಹೋದರೆ ಮತ್ತು ಆ ಕಡೆ ಹೋಗದಿರುವ ತೀರ್ಮಾನ ಮಾಡುತ್ತಾರೆ. ಯಾರಾದರೂ ಹೋರಾಟಗಾರರ ಬೆಂಬಲ ಇದ್ದರೆ ಮಾತ್ರ ಪೊಲೀಸರು ದೂರು ಸ್ವೀಕರಿಸುತ್ತಾರೆ ಎಂದರು.

ಧರ್ಮಸ್ಥಳದ ಸೌಜನ್ಯ ಪ್ರಕರಣದ ಸಿಬಿಐ ತೀರ್ಪು ಬಂದು ಮೂರು ವರ್ಷವಾಗುತ್ತಿದೆ, ಇದುವರೆಗೂ ಅಕ್ವಿಟಲ್‌ ಕಮಿಟಿ ಕರ್ತವ್ಯಲೋಪ ಎಸಗಿದ ತನಿಖಾಧಿಕಾರಿಗಳ ವಿಚಾರಣೆ ನಡೆಸಿಲ್ಲ. ಯಾವುದೇ ಕ್ರಮ ಆಗಿಲ್ಲ. ಈ ಬಗ್ಗೆ ಮಹಿಳಾ ಆಯೋಗ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಮಹಿಳೆಯೊಬ್ಬರು ಒತ್ತಾಯಿಸಿದರು.

ಕೊನೆಯದಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಿರಿಯ ಹೋರಾಟದ ಸಂಗಾತಿಗಳಾದ ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್‌, ಡಾ ವಿಜಯಮ್ಮ, ಸಿರಿಮನೆ ನಾಗರಾಜ್‌, ಲೇಖಕಿ ನೇಮಿಚಂದ್ರ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯಾ ಪ್ರಕರಣ: ಮಂಗಳೂರಿಗೆ ನೂತನ SIT ತಂಡ; ತನಿಖೆಗೆ ಸಿದ್ಧತೆ

ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್...

ಎಂಆರ್‌ಪಿಎಲ್ ದುರಂತ: ಮೃತ ಮನೀಶ್ ಕುಟುಂಬಕ್ಕೆ ₹1.20 ಕೋಟಿ ಪರಿಹಾರ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್‌ಟಿಯು)ನಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ...

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...