ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಐಡಿ ಎರಡು ಬಾರಿ ತನಿಖೆ ನಡೆಸಿ ಬಿ-ರಿಪೋರ್ಟ್ ಸಲ್ಲಿಸಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣಗಳನ್ನು ಸಿಐಡಿ ವಹಿಸಿಕೊಂಡು ವಿವರವಾದ ತನಿಖೆ ನಡೆಸಿದ ನಂತರ ಸಾಕ್ಷ್ಯಾಧಾರಗಳ ಕೊರತೆ ಕಂಡುಬಂದ ಕಾರಣಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಲಾಗಿದೆ.
2024ರ ಜೂನ್ 16ರಂದು ಹೊಳೆನರಸೀಪುರ ತಾಲೂಕಿನ ಘನ್ನಿಕಡ ಫಾರ್ಮ್‌ಹೌಸ್‌ನಲ್ಲಿ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 27 ವರ್ಷದ ಜೆಡಿಎಸ್ ಕಾರ್ಯಕರ್ತ ಚೇತನ್ ಕೆ.ಎಸ್ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 377, 342, 506 ಹಾಗೂ 34ರಡಿ ಎಫ್‌ಐಆರ್ ದಾಖಲಾಗಿ ಸೂರಜ್ ಅವರನ್ನು ಜೂನ್ 23ರಂದು ಬಂಧಿಸಲಾಗಿತ್ತು. ನಂತರ ಜುಲೈ 2024ರಲ್ಲಿ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದಾದ ನಂತರ ಸೂರಜ್ ಅವರ ಆಪ್ತ ಶಿವಕುಮಾರ್ ಎರಡು ಪ್ರತಿ-ದೂರುಗಳನ್ನು ಸಲ್ಲಿಸಿದ್ದರು. ಒಂದು, ದೂರುದಾರ ಚೇತನ್ 5 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂಬ ಎಕ್ಸ್‌ಟಾರ್ಷನ್ ಪ್ರಕರಣ. ಇನ್ನೊಂದು, ತಮ್ಮ ಮೇಲೆಯೂ ಸೂರಜ್ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು. ಎಲ್ಲ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.
ಸಿಐಡಿ ತನಿಖೆಯಲ್ಲಿ ಸುಲಿಗೆ ಪ್ರಕರಣ ಕಟ್ಟುಕತೆ ಎಂಬ ಸತ್ಯ ಹೊರಬಂದಿದ್ದು, ಸೂರಜ್ ತಮ್ಮ ಆಪ್ತ ಶಿವಕುಮಾರ್ ಅವರನ್ನು ಪ್ರೋತ್ಸಾಹಿಸಿ ದೂರುದಾರನನ್ನು ಹಣ ಕೇಳುವಂತೆ ಮಾಡಿ ರೇಪ್ ಕೇಸ್ ಸೆಟಲ್ ಮಾಡಿಸಲು ಯತ್ನಿಸಿದ್ದಾರೆ ಎಂದು ಬಿ-ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ದೂರುದಾರನ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಈ ಪ್ರಕರಣದಲ್ಲಿ ಬಿ-ರಿಪೋರ್ಟ್ ಸಲ್ಲಿಸಲಾಗಿದೆ. ಶಿವಕುಮಾರ್ ಅವರು ಸಲ್ಲಿಸಿದ್ದ ಲೈಂಗಿಕ ದೌರ್ಜನ್ಯ ದೂರಿನಲ್ಲೂ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ-ರಿಪೋರ್ಟ್ ಸಲ್ಲಿಸಲಾಗಿದೆ. ಆದರೆ ಮುಖ್ಯ ಪ್ರಕರಣದಲ್ಲಿ ಅಂದರೆ ಚೇತನ್ ಅವರ ದೂರಿನಲ್ಲಿ ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿದೆ. ಸಂತ್ರಸ್ತ ಹೇಳಿಕೆ, ಸಾಕ್ಷಿಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದಲ್ಲಿ ಸೆಕ್ಷನ್ 377ರ ಅನ್ವಯ ಆರೋಪ ಧೃಡಪಟ್ಟಿದೆ.
ಸಿಐಡಿ ಡೆಪ್ಯೂಟಿ ಎಸ್‌ಪಿ ಬಿ. ಉಮೇಶ್ ನ್ಯಾಯಾಲಯದಲ್ಲಿ ಪ್ರೈಮಾ ಫೇಸಿ ಸಾಕ್ಷ್ಯ ಸಾಕಷ್ಟಿಲ್ಲವಾದ್ದರಿಂದ ಬಿ-ರಿಪೋರ್ಟ್ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ನ್ಯಾಯಾಲಯ ಈ ವರದಿಯನ್ನು ಸ್ವೀಕರಿಸುವುದೇ ಇಲ್ಲವೇ ನಿರ್ಧರಿಸಲಿದೆ. ದೂರುದಾರರು ಆಕ್ಷೇಪಣೆ ಸಲ್ಲಿಸುವ ಹಕ್ಕನ್ನು ಹೊಂದಿದ್ದು, ಈ ಬೆಳವಣಿಗೆಯಿಂದ ಸೂರಜ್ ರೇವಣ್ಣಗೆ ಸುಲಿಗೆ ಮತ್ತು ಶಿವಕುಮಾರ್ ಅವರ ದೂರು ಪ್ರಕರಣಗಳಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ಮುಖ್ಯ ಪ್ರಕರಣದಲ್ಲಿ ಮಾತ್ರ ಚಾರ್ಜ್‌ಶೀಟ್ ಉಳಿದು ನ್ಯಾಯಾಲಯದ ವಿಚಾರಣೆ ಮುಂದುವರಿಯಲಿದೆ.




