ಯೋಗಾಭ್ಯಾಸದಿಂದ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಒತ್ತಡವನ್ನು ನಿಯಂತ್ರಿಸಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹೇಳಿದರು.
ವಿಜಯಪುರ ನಗರದ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಯೋಗ ಶಿಕ್ಷಕ ಮಡಿವಾಳಪ್ಪ ಪರಸಪ್ಪ ದೊಡಮನಿ ಅವರಿಗೆ ಏಷ್ಯನ್ ಪೆಸಿಫಿಕ್ ಐಕಾನ್ ಅವಾರ್ಡ್ ಲಭಿಸಿದ ಹಿನ್ನೆಲೆಯಲ್ಲಿ ಗುರುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ವಿದ್ಯಾರ್ಥಿ ದೆಸೆಯಿಂದಲೇ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ನಿಯಂತ್ರಿಸುವ ಕೌಶಲ ಬೆಳೆಸಿಕೊಳ್ಳಬಹುದು. ಇದರಿಂದ ಏಕಾಗ್ರತೆ ಹೆಚ್ಚುವುದರ ಜೊತೆಗೆ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ದೊಡಮನಿ ಅವರು ಯೋಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಭಾರತದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದು ಬಸವನಾಡಿಗೆ ಹೆಮ್ಮೆ ತಂದಿದ್ದಾರೆ” ಎಂದು ಹೇಳಿದರು.
ದೊಡಮನಿ ಅವರ ಯೋಗ ಚಟುವಟಿಕೆಗಳಿಗೆ ಸಂಸ್ಥೆಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಅವರು ಕೈಗೊಳ್ಳಲಿರುವ ಭವಿಷ್ಯದ ಯೋಜನೆಗಳು ಯಶಸ್ವಿಯಾಗಲಿ ಎಂದು ಸುನೀಲಗೌಡ ಪಾಟೀಲ ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಡಿವಾಳಪ್ಪ ಪರಸಪ್ಪ ದೊಡಮನಿ, ಕಳೆದ 16 ವರ್ಷಗಳಿಂದ ಯೋಗಾಭ್ಯಾಸದಲ್ಲಿ ನಿರತನಾಗಿದ್ದು, ಕಳೆದ ಆರು ವರ್ಷಗಳಿಂದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಕರಾಗಿ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.
ಬಿ.ಎ ಪದವಿ, ಪಿಜಿ ಡಿಪ್ಲೋಮಾ ಇನ್ ಯೋಗ, ಸರ್ಟಿಫಿಕೇಟ್ ಯೋಗಾ ಸ್ಟಡೀಸ್ (CYS) ಹಾಗೂ ಯೋಗ ಇನ್‌ಸ್ಟ್ರಕ್ಟರ್ ಕೋರ್ಸ್ (YIC) ಪೂರ್ಣಗೊಳಿಸಿರುವುದಾಗಿ ಹೇಳಿದರು.
ಕೂಲಿ ಕಾರ್ಮಿಕರ ಕುಟುಂಬದಿಂದ ಬಂದಿರುವ ತಮಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹಾಗೂ ಅಮೃತಾನಂದ ಸ್ವಾಮೀಜಿಗಳ ಮಾರ್ಗದರ್ಶನ ದೊರೆತಿದೆ. ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಲಕ್ಷ್ಮಿಬಾಯಿ, ನಾಲ್ವರು ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಹೊಂದಿರುವುದಾಗಿ ತಮ್ಮ ವೈಯಕ್ತಿಕ ಹಿನ್ನೆಲೆಯನ್ನು ಹಂಚಿಕೊಂಡರು.
“ನೇಪಾಳದಲ್ಲಿ ಯೋಗದಲ್ಲಿ ಗೌರವ ಪದವಿ ಪಡೆದಿದ್ದು, ವಿಯಟ್ನಾಂನಲ್ಲಿ ಯೋಗ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದೇನೆ. 2023ರಲ್ಲಿ ಥೈಲ್ಯಾಂಡ್ ಹಾಗೂ 2024ರಲ್ಲಿ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ. 2025ರಲ್ಲಿ ಮಲೇಶಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದೇನೆ” ಎಂದು ತಿಳಿಸಿದರು.
2018ರಲ್ಲಿ ರಾಮದೇವ ಬಾಬಾ ನಗದು ಪುರಸ್ಕಾರ ಲಭಿಸಿದ್ದು, ಸೆಪ್ಟೆಂಬರ್ 7ರಂದು ಥೈಲ್ಯಾಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಷ್ಯನ್ ಪೆಸಿಫಿಕ್ ಐಕಾನ್ ಅವಾರ್ಡ್ ದೊರೆತಿದೆ. ಈವರೆಗೆ ಸುಮಾರು 20 ಪ್ರಶಸ್ತಿಗಳನ್ನು ಪಡೆದಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಯೋಗ ತರಬೇತುದಾರ ಹಾಗೂ ನಿರ್ಣಾಯಕರಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ತಮ್ಮ ಯೋಗ ಕ್ಷೇತ್ರದ ಸಾಧನೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬೆನ್ನೆಲುಬಾಗಿ ನಿಂತಿರುವುದು ಸಂತಸ ತಂದಿದೆ ಎಂದು ದೊಡಮನಿ ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಎಂ.ಎನ್. ಚೋರಗಸ್ತಿ, ಹಣಕಾಸು ಉಪಅಧಿಕಾರಿ ಯಲ್ಲಾಲಿಂಗ ಜನವಾಡ, ಶ್ರೀ ಬಿ.ಎಂ. ಪಾಟೀಲ ಐಸಿಎಸ್‌ಇ ಶಾಲೆಯ ಪ್ರಾಚಾರ್ಯ ವಿಕ್ರಂ ನಾರ್ವೆಕರ, ಸಿಬಿಎಸ್‌ಇ ಶಾಲೆಯ ಪ್ರಭಾರ ಪ್ರಾಚಾರ್ಯೆ ವಸುದಾ ನಾರ್ವೆಕರ, ಕೋ-ಆರ್ಡಿನೇಟರ್‌ಗಳಾದ ದೀಪಾ ಜಂಬೂರೆ ಹಾಗೂ ಜಯಾ ಗಲಗಲಿ ಇದ್ದರು.




