ಕರ್ತವ್ಯಲೋಪ, ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಇಲಾಖೆಯ ಸೂಚನೆಗಳನ್ನು ಪಾಲಿಸದೆ ಕಾರ್ಯನಿರ್ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ. ರಾಜಕುಮಾರ್ ಯರಗಲ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಗುರುದತ್ತ ಹೆಗಡೆ ಅವರು ಶುಕ್ರವಾರ ಅಮಾನತು ಆದೇಶ ಹೊರಡಿಸಿದ್ದಾರೆ.
ಡಾ. ರಾಜಕುಮಾರ್ ಅವರ ವಿರುದ್ಧ ಜಿಲ್ಲಾ ಪಂಚಾಯತ್ ಸಿಇಒ ಗಜಾನನ ಬಾಲೆ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಪುತ್ರಿ ಡಾ. ಅಂಕಿತಾ ಅವರು ʻನಮ್ಮ ಕ್ಲಿನಿಕ್ʼ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕರ್ತವ್ಯಕ್ಕೆ ಗೈರುಹಾಜರಾಗಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಿರುವ ವಿಚಾರವೂ ಅಮಾನತು ಆದೇಶದಲ್ಲಿ ಉಲ್ಲೇಖವಾಗಿದೆ.
ಡಾ. ಅಂಕಿತಾ ಅವರು ಎರಡು ಕಡೆ ಹಾಜರಾತಿ ದಾಖಲಿಸಿರುವುದು ಹಾಗೂ ಕರ್ತವ್ಯಕ್ಕೆ ಗೈರುಹಾಜರಾಗಿದ್ದ ಅವಧಿಯಲ್ಲಿಯೂ ಮಾಸಿಕ ಸುಮಾರು ₹75,000 ವೇತನ ಪಾವತಿಯಾಗಿರುವ ಬಗ್ಗೆ ಆರೋಪಗಳಿವೆ. ಈ ವಿಚಾರದಲ್ಲಿ ಮೇಲಧಿಕಾರಿಯಾಗಿದ್ದ ಡಾ. ರಾಜಕುಮಾರ್ ಅವರು ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಡಾ. ರಾಜಕುಮಾರ್ ಅವರು ಕಚೇರಿ ಕರ್ತವ್ಯಕ್ಕೆ ನಿಯಮಿತವಾಗಿ ಲಭ್ಯವಿರುವುದಿಲ್ಲ. ಇಲಾಖೆಯ ಅತ್ಯಗತ್ಯ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂಬ ಆರೋಪವೂ ಇದೆ.
ನಾಗರಿಕ ಸೇವಾ ನಿಯಮಗಳು ಹಾಗೂ ಸರ್ಕಾರದಿಂದ ಹೊರಡಿಸಲಾದ ಆದೇಶಗಳನ್ನು ಪಾಲಿಸದೆ ಸ್ವೇಚ್ಛಾನುಸಾರ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರಿ ಅಧಿಕಾರಿಗೆ ಇರಬೇಕಾದ ಕನಿಷ್ಠ ಮಟ್ಟದ ವೃತ್ತಿಪರತೆಯನ್ನು ಪಾಲಿಸಿಲ್ಲ. ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ಹೊಣೆಗಾರಿಕೆಯಿಂದ ವರ್ತಿಸಿಲ್ಲ ಎಂಬ ಆರೋಪಗಳನ್ನು ಕೂಡ ಸರ್ಕಾರದ ಆದೇಶದಲ್ಲಿ ದಾಖಲಿಸಲಾಗಿದೆ.
ಇದರೊಂದಿಗೆ ಜಿಲ್ಲಾ ಪಂಚಾಯತಿಯಿಂದ ನೀಡಲಾಗುತ್ತಿದ್ದ ಆಡಳಿತಾತ್ಮಕ ಸೂಚನೆಗಳಿಗೆ ಸಮರ್ಪಕವಾಗಿ ಸ್ಪಂದಿಸದಿರುವುದರಿಂದ ಜಿಲ್ಲೆಯ ಸಾರ್ವಜನಿಕ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂದು ಅಮಾನತು ಆದೇಶದಲ್ಲಿ ಕಾರಣ ನೀಡಲಾಗಿದೆ.
ಅಮಾನತುಗೊಂಡಿರುವ ಡಾ. ರಾಜಕುಮಾರ್ ಯರಗಲ್ ಅವರ ಸೇವಾವಧಿಯನ್ನು ಗದಗ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ.
ಡಾ. ರಾಜಕುಮಾರ್ ಅವರ ಕಾರ್ಯವೈಖರಿ ಹಾಗೂ ಅವರ ವಿರುದ್ಧ ಕೇಳಿಬಂದಿದ್ದ ಆರೋಪಗಳ ಹಿನ್ನೆಲೆಯಲ್ಲಿ ಜಿಪಂ ಸಿಇಒ ಗಜಾನನ ಬಾಲೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದ ಮೇಲೆಯೇ ಇದೀಗ ಸರ್ಕಾರ ಅಮಾನತು ಆದೇಶ ಹೊರಡಿಸಿದೆ. ಇದರೊಂದಿಗೆ ಡಾ. ರಾಜಕುಮಾರ್ ಅವರು ಬಾಗಲಕೋಟೆ ಡಿಎಚ್‌ಒ ಆಗಿ ಕಾರ್ಯನಿರ್ವಹಿಸುತ್ತಿರುವ ಅವಧಿಯಲ್ಲಿ ಎರಡನೇ ಬಾರಿಗೆ ಅಮಾನತುಗೊಂಡಂತಾಗಿದೆ.
2024ರಲ್ಲಿ ಜಿಲ್ಲೆಯ ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಡಾ. ರಾಜಕುಮಾರ್ ಅವರು ಈ ಹಿಂದೆ ಅಮಾನತುಗೊಂಡಿದ್ದರು. ಇದಲ್ಲದೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ 98 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಿಎಚ್‌ಒ ಹೊರಡಿಸಿದ್ದ ಆದೇಶವೂ ವಿವಾದಕ್ಕೆ ಕಾರಣವಾಗಿತ್ತು.
ಕಚೇರಿಗೆ ಗೈರುಹಾಜರಾಗುತ್ತಾರೆ ಹಾಗೂ ಸಾರ್ವಜನಿಕರೊಂದಿಗೆ ಸಮರ್ಪಕವಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪಗಳು ಕೂಡ ಅವರ ವಿರುದ್ಧ ಕೇಳಿಬಂದಿದ್ದವು. ವಿಜಯಪುರದಲ್ಲಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿಯೂ ಡಾ. ರಾಜಕುಮಾರ್ ಯರಗಲ್ ಅವರ ಕಾರ್ಯವೈಖರಿ ಕುರಿತು ಹಲವು ಆರೋಪಗಳು ಕೇಳಿಬಂದಿದ್ದವು.
ಇದೇ ವೇಳೆ ಡಾ. ರಾಜಕುಮಾರ್ ಅವರ ಪುತ್ರಿ ಡಾ. ಅಂಕಿತಾ ಅವರು ಸರ್ಕಾರಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಯಿತು. ಸರ್ಕಾರಿ ಕರ್ತವ್ಯಕ್ಕೆ ಗೈರುಹಾಜರಾಗಿ ವೇತನ ಪಡೆದು ಸ್ನಾತಕೋತ್ತರ ಅಧ್ಯಯನ ನಡೆಸಿದ ಆರೋಪದ ಕುರಿತು ಜಿಪಂ ಸಿಇಒ ಗಜಾನನ ಬಾಲೆ ವಿಚಾರಣೆ ನಡೆಸಿದರು.
ವಿಚಾರಣೆಗೆ ಹಾಜರಾಗಿದ್ದ ಡಾ. ರಾಜಕುಮಾರ್ ಯರಗಲ್ ಹಾಗೂ ಡಾ. ಅಂಕಿತಾ ಅವರು ತಮ್ಮ ವಿರುದ್ಧದ ಆರೋಪಗಳನ್ನು ಸಮರ್ಥಿಸಿಕೊಳ್ಳುವ ನಿಲುವು ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ. ನಿಕಟಪೂರ್ವ ಡಿಎಚ್‌ಒ ಸಿ. ಮಂಜುನಾಥ, ಅಧಿಕಾರಿಗಳಾದ ಡಾ. ಕುಸುಮಾ ಮಾಗಿ ಹಾಗೂ ಡಾ. ಸರಸ್ವತಿ ಮಾಗಿ ಕೂಡ ವಿಚಾರಣೆ ವೇಳೆ ತಮ್ಮವಾದ ಮಂಡಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಸರ್ಕಾರದ ಅಮಾನತು ಆದೇಶದ ಬಳಿಕ ಆರೋಗ್ಯ ಇಲಾಖೆಯ ಆಡಳಿತಾತ್ಮಕ ಹಾಗೂ ಸೇವಾ ನಿಯಮಗಳ ಅನುಸರಣೆಯ ಕುರಿತು ಮತ್ತಷ್ಟು ಚರ್ಚೆ ಆರಂಭವಾಗಿದೆ.




