ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಮತಗಳನ್ನು ತೆಗೆದು ಹಾಕುವಂತೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ʼಈದಿನʼ ತಂಡವು ಗ್ರೌಂಡ್ ರಿಪೋರ್ಟ್‌ಗಾಗಿ ಹೋದ ವೇಳೆ ಮುಸ್ಲಿಮರ ಮತಗಳನ್ನು ಡಿಲೀಟ್ ಮಾಡುವ ಜಾಲ ಭಾಲ್ಕಿ ಕ್ಷೇತ್ರದ ಅನೇಕ ಕಡೆ ಅತ್ಯಂತ ವ್ಯವಸ್ಥಿತವಾಗಿ ಪಿತೂರಿ ನಡೆಸಿರುವುದು ಬೆಳಕಿಗೆ ಬಂದಿದೆ.
ʼನನಗೆ 70 ಉಮ್ಮಾರ್ ಅದಾ, ಏನರಾ ಪನ್ನಾಸ್ ವರ್ಷದಿಂದ ಇಲ್ಲೇ ಓಟ್ ಹಾಕೋತಾ ಬಂದಿದಾ, ಈಗ ನಮ್ ವೋಟ್ ಕಟ್ ಮಾಡ್ಲಾಕ್ ಯಾರೋ ಫಾರಂ ಥುಂಬ್ಯಾರ್ ಅಂತ. ಬ್ಯಾರೇ ಯಾರ್ದ ಬೀ ಕಟ್ ಆಗಿಲ್ಲ, ನಮ್ ಮುಸ್ಲಿಂ ಮಂದಿದೇ ಯಾಕ್ ಕಟ್ ಮಾಡ್ಲಾತರ, ಈಗ ನಮಗ ಓಟ ಹಾಕಲಾಕ ಬರಲ್ ಹೋದುರ್ ಹ್ಯಾಂಗ್ ಮಾಡ್ಬೇಕ ಹೇಳ್ರೀ, ನಾ ಬರ್ದಿನಕೀ ಇಲ್ಲ, ಓದಿನಕೀ ಇಲ್ಲ, ಅನ್ಫಡ್ ಇದ್ದಾರೀ, ಹಿಂಗೆಲ್ಲಾ ನಮ್ಗ ಖುನಾ ಇಲ್ದ್ಹಾಂಗ್ ಮಾಡದುರ ನಾವ್ ಹ್ಯಾಂಗ ಮಾಡಬೇಕ್, ನಮ್ ವೋಟ್ ಕಟ್ ಮಾಡಭ್ಯಾಡ್ರೀ ಸರ್..!
ಹೀಗೆ, ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದ 70 ವರ್ಷ ಆಸುಪಾಸಿನ ಮಹಿಳಾ ಮತದಾರರೊಬ್ಬರು ʼಈದಿನʼ ಮುಂದೆೆ ಎರಡು ಕೈಮುಗಿದು ಹೇಳಿದ್ರು.
ತಮಗೆ ವೋಟ್ ಹಾಕುವುದಿಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರ ಸಮುದಾಯವನ್ನು ಗುರಿಯಾಗಿಸಿಕೊಂಡು ಕ್ಷೇತ್ರದ ವಿವಿಧ ಬೂತ್‌ಗಳಲ್ಲಿ, ಮುಸ್ಲಿಮರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವ ಮಹಾ ಸಂಚನ್ನು ನಡೆದಿರುವುದು ಬಹಿರಂಗವಾಗುತ್ತಿದೆ. ಚುನಾವಣಾ ಆಯೋಗದ ‘ಫಾರ್ಮ್-7’ಎಂಬ ಅಸ್ತ್ರವನ್ನು ಮುಸ್ಲಿಂ ಮತಗಳಿಗೆ ಕನ್ನ ಹಾಕಲು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಗಮನಕ್ಕೆ ಬಂದ ಬಳಿಕ ತಮ್ಮ ʼವೋಟ್ ಭದ್ರವಾಗಿದೆಯೇʼ ಎಂಬ ಪ್ರಶ್ನೆ ಮತದಾರರಿಗೆ ಕಾಡುವಂತಾಗಿದೆ.
ಭಾಲ್ಕಿ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 129, 107, 111, 112, 114 ಹಾಗೂ 115ರಲ್ಲಿ ಮತದಾರರ ಪಟ್ಟಿಯಿಂದ ಮುಸ್ಲಿಮರ ಮತಗಳನ್ನು ಅಳಿಸಲು ಕೆಲ ವ್ಯಕ್ತಿಗಳು ಒಬ್ಬೊಬ್ಬರೇ ನೂರಾರು ಫಾರ್ಮ್ -7 ಸಲ್ಲಿಸಿರುವ ಮಾಹಿತಿ ʼಈದಿನʼಕ್ಕೆ ಲಭ್ಯವಾಗಿತ್ತು. ಬೀದರ್ ಜಿಲ್ಲೆಯಲ್ಲಿಯೇ ಹೆಚ್ಚು ನಮೂನೆ-7 ಸಲ್ಲಿಕೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದರ ಜಾಡು ಹಿಡಿದು ಶನಿವಾರ ʼಈದಿನʼ ತಂಡ ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮಕ್ಕೆ ತೆರಳಿದ ವೇಳೆ ಅಲ್ಲಿ ಅಚ್ಚರಿ ಸಂಗತಿಯೊಂದು ಬಯಲಾಯ್ತು.
ತಮ್ಮ ಬದುಕಿನ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆತಂಕದಲ್ಲಿರುವ ಮತದಾರರು ನಿಟ್ಟೂರ)ಬಿ) ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಚುನಾವಣಾ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮದ ನೂರಾರು ಮುಸ್ಲಿಂ ಮತದಾರರು ʼಮತ ಹಕ್ಕು ಅಳಿಸುವ ಹುನ್ನಾರʼ ಬಗ್ಗೆ ನೂರಾರು ಪ್ರಶ್ನೆಗಳು ಕೇಳುತ್ತಾ ತರಾಟೆಗೆ ತೆಗೆದುಕೊಂಡರು.
ಗ್ರೇಡ್-2 ತಹಸೀಲ್ದಾರ್ ಪಲ್ಲವಿ ಬೇಳಕೇರೆ, ತಹಸೀಲ್ ಕಚೇರಿ ಶಿರಸ್ತೆದಾರ್ ಗೋಪಾಲ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸುತ್ತುವರಿದ ಮತದಾರರು, “ನಮ್ಮ ಮತದಾನ ಹಕ್ಕು ಅಳಿಸಲು ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದು ಯಾರು? ಅನಧೀಕೃತ ವ್ಯಕ್ತಿಗಳಿಂದ ಒಂದೇ ದಿನ ಬಿಎಲ್‌ಒಗಳು ನೂರಾರು ಅರ್ಜಿ ಸ್ವೀಕರಿಸಿದ್ದು ಹೇಗೆ? ನಮಗೆ ಗೊತ್ತಿಲ್ಲದ ಯಾರದೋ ವ್ಯಕ್ತಿಗೆ ನಮ್ಮ ವೋಟ್ ಕಿತ್ತುಕೊಳ್ಳುವ ಅಧಿಕಾರ ಕೊಟ್ಟವರು ಯಾರು? ಕೇವಲ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಮತಗಳನ್ನು ತೆಗೆದು ಹಾಕುವ ಸಂಚು ರೂಪಿಸಿದ ವ್ಯಕ್ತಿಗಳು ನೂರಾರು ಅರ್ಜಿ ಸಲ್ಲಿಸಿದ್ದು ಹೇಗೆ?” ಎಂಬೆಲ್ಲ ಪ್ರಶ್ನೆಗಳ ಸುರಿಮಳೆಗೈದರು. ಮತದಾರರ ಪ್ರಶ್ನೆಗಳಿಗೆ ಸಮರ್ಪಕ ಉತ್ತರಿಸಲು ತಡಬಡಿಸಿದ ಅಧಿಕಾರಿಗಳು ಸಮಜಾಯಿಸಿ ನೀಡಿ ಅಲ್ಲಿಂದ ಜಾಗ ಖಾಲಿ ಮಾಡಿದರು.
ಗ್ರಾಮ ಪಂಚಾಯತ್ ಆವರಣದಲ್ಲಿ ಜಮಾಯಿಸಿದ ಮುಸ್ಲಿಂ ಸಮುದಾಯದ ನೂರಾರು ಮಹಿಳೆಯರು, ವೃದ್ಧರು, ಯುವಕರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಮತ ಹಕ್ಕು ಕಳೆದುಕೊಳ್ಳುತ್ತಿದ್ದೇವೆ ಎಂಬ ಭೀತಿಯಿಂದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಸೇರಿ ಇತರೆ ದಾಖಲೆಗಳನ್ನು ಕೈಯಲ್ಲಿ ಹಿಡಿದು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದರು.

“ನೋಡಿ ಸಾರ್, ನಮ್ಮ ಹಳೆಯ ಮತದಾರರ ಗುರುತಿನ ಚೀಟಿ, ಆಧಾರ, ವಿಳಾಸದ ದಾಖಲೆ ಎಲ್ಲವೂ ಇದೇ ಊರಿನದು, ಇದೀಗ ನಾವು ʼಶಾಶ್ವತ ಸ್ಥಳಾಂತರʼ ಅಥವಾ ʼಗೈರುʼ ಎಂದು ನಮೂದಿಸಿ ನಮಗೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಮತದಾರರ ಪಟ್ಟಿಯಿಂದ ನಮ್ಮ ಹೆಸರು ತೆಗೆಸಲು ಅರ್ಜಿ ಸಲ್ಲಿಸಿರುವುದು ಗೊತ್ತಾಗಿದೆ. ಇದು ಯಾರು ಮಾಡಿದರು, ಯಾಕೆ ಮಾಡಿದರು ಎಂಬುದು ಬಹಿರಂಗ ಮಾಡಬೇಕು” ಎಂದು ಮತದಾರರು ಅಳಲು ತೋಡಿಕೊಂಡರು.
ಇದನ್ನೂ ಓದಿ : ಎಸ್‌ಐಆರ್ | ಭಾಲ್ಕಿ ಕ್ಷೇತ್ರದಲ್ಲಿ ಮುಸ್ಲಿಮರ ಮತ ಅಳಿಸುವ ಯತ್ನ, ನೂರಾರು ಅರ್ಜಿ ಪತ್ತೆ?
“ಭಾಲ್ಕಿ ತಾಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ಒಟ್ಟು ನಾಲ್ಕು ಬೂತ್‌ಗಳಿದ್ದು, ಎಲ್ಲ ಬೂತ್‌ಗಳಲ್ಲಿನ ಮುಸ್ಲಿಮರ ಮತಗಳನ್ನು ಅಳಿಸುವ ಹುನ್ನಾರದಿಂದ ಸುಮಾರು 500ಕ್ಕೂ ಅಧಿಕ ಅರ್ಜಿಗಳು (ನಮೂನೆ-7) ಸಲ್ಲಿಕೆಯಾಗಿದೆ. ಮತದಾರರ ಹೆಸರು, ಎಪಿಕ್ ಸಂಖ್ಯೆ ಹಾಕಿ ಸಲ್ಲಿಸಿದ ಅರ್ಜಿಯಲ್ಲಿ ವ್ಯಕ್ತಿಗಳ ಹೆಸರು ಹಾಗೂ ಮೊಬೈಲ್ ನಂಬರ್, ಸಹಿ ಇದೆ. ಆದರೆ, ಅರ್ಜಿ ಸಲ್ಲಿಸಿರುವ ದಿನಾಂಕ ನಮೂದಿಸಿಲ್ಲ. ಅರ್ಜಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ನೈಜ ಮತದಾರರು ಕರೆ ಮಾಡಿದರೆ ಮೈಸೂರು, ಬೆಂಗಳೂರು ಭಾಗದ್ದಾಗಿದೆ. ಎಲ್ಲ ನಕಲಿ ದಾಖಲೆ ಸೃಷ್ಟಿಸಿ ನಮ್ಮ ಮತ ಹಕ್ಕು ಕಸಿಯುವ ಹುನ್ನಾರ ಅಡಗಿದೆ” ಎಂದು ಗ್ರಾಮಸ್ಥ ಮುಕ್ತಾರ್ ಬಿದ್ರೆ ಅವರು ಮಾತನಾಡಿ ತಮ್ಮ ಹೆಸರಿಗೆ ಸಲ್ಲಿಕೆಯಾದ ಫಾರಂ-7 ನಕಲು ಪ್ರತಿಗಳು ಪ್ರದರ್ಶಿಸಿ ವಿವರಿಸಿದರು.
“ಈ ಬಗ್ಗೆ ಅಧಿಕಾರಿಗಳಿಗೆ ವಿಚಾರಿಸಿದರೆ ಯಾರೇ ನಮೂನೆ-7 ಕೊಟ್ಟರೂ ಸ್ವೀಕರಿಸುತ್ತೇವೆ. ತದನಂತರ ವಿಚಾರಣೆ ನಡೆಸಲಾಗುವುದು ಎಂದು ಹೇಳ್ತಾ ಇದ್ದಾರೆ. ಆದರೆ, ನಾಲ್ಕೈದು ವ್ಯಕ್ತಿಗಳು ಒಬ್ಬೊಬ್ಬರು 50-100 ಅರ್ಜಿಗಳು ಭರ್ತಿ ಮಾಡಿ ಅರ್ಜಿ ಸಲ್ಲಿಸಿದ್ದು, ಅದರಲ್ಲೂ ಕೇವಲ ಮುಸ್ಲಿಂ ಸಮುದಾಯದವರ ಹೆಸರನ್ನೇ ತೆಗೆಯುವ ಹುನ್ನಾರಕ್ಕೆ ಕೈಹಾಕಿದ್ದು ಯಾಕೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ನಿಟ್ಟೂರ(ಬಿ) ಗ್ರಾಮದ ನಾಲ್ಕು ಬೂತ್‌ಗಳಲ್ಲಿ 500ಕ್ಕೂ ಅಧಿಕ ಮತದಾರರ ಹೆಸರು ತೆಗೆದು ಹಾಕಲು ಫಾರಂ-7 ಸಲ್ಲಿಕೆಯಾಗಿವೆ. ಇದರಲ್ಲಿ ಪ್ರಮೋದಕುಮಾರ ಬಿರಾದರ್, ಪಾಂಡುರಂಗ ಶರಣಪ್ಪ, ಚಂದ್ರಕಾಂತ ಬಾಬುರಾವ್ ಎಂಬುವವರು ಮತಗಟ್ಟೆ ಸಂಖ್ಯೆ 51, 52, 53 ಹಾಗೂ 54ರಲ್ಲಿ ಮತದಾರರ ಹೆಸರು ಡಿಲೀಟ್ ಮಾಡುವಂತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರ ಮತಗಳಿರುವ ಬೂತ್ ಸಂಖ್ಯೆ 52 ಹಾಗೂ 53ರಲ್ಲಿ ಬೂತ್‌ಗಳಲ್ಲಿ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಎಲ್ಲವೂ ಮುಸ್ಲಿಮರ ಮತಗಳನ್ನು ತೆಗೆದು ಹಾಕುವ ತಂತ್ರವಾಗಿದೆ” ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಕಣ್ಮುಚ್ಚಿ ಕುಳಿತೇ ಚುನಾವಣಾ ಆಯೋಗ?
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯಲ್ಲಿ ಯಾರಾದರೂ ಮೃತಪಟ್ಟಿದ್ದರೆ, ಬೇರೆಡೆಗೆ ಶಾಶ್ವತವಾಗಿ ಸ್ಥಳಾಂತರ ಅಥವಾ ವಾಸಸ್ಥಳ ಬದಲಾಯಿಸಿದ್ದರೆ ಅಥವಾ ನಕಲಿ ಹೆಸರಿದ್ದರೆ, ಅಂತಹ ಹೆಸರು ಮತಪಟ್ಟಿಯಿಂದ ತೆರವುಗೊಳಿಸಲು ‘ಫಾರ್ಮ್-7’ ಮೂಲಕ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗುತ್ತದೆ. ಈ ಫಾರ್ಮ್-7 ಅನ್ನು ಯಾರು ಬೇಕಾದರೂ, ಎಷ್ಟೆಂದರೆ ಅಷ್ಟು ಸಲ್ಲಿಸಲು ಅವಕಾಶವಿಲ್ಲ. ಅದಕ್ಕೂ ಹಲವು ನಿಯಮಗಳಿವೆ. ಆದರೆ, ಚುನಾವಣಾ ಆಯೋಗದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಒಬ್ಬನೇ ವ್ಯಕ್ತಿ ಒಂದೇ ದಿನದಲ್ಲಿ 100, 200 ಫಾರ್ಮ್-7 ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಫಾರಂಗಳ ಮೇಲೆ ನಕಲಿ ಸಹಿ, ತಪ್ಪು ಮೊಬೈಲ್ ಸಂಖ್ಯೆ ದಾಖಲಿಸುವ ಬಹುದೊಡ್ಡ ಕುತಂತ್ರ ನಡೆದಿರುವುದು ವಾಸ್ತವ ಸತ್ಯ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇಷ್ಟೆಲ್ಲವೂ ಕಣ್ಮುಂದೆ ನಡೆದರೂ ಚುನಾವಣಾ ಆಯೋಗವಾಗಲಿ, ಜಿಲ್ಲಾ ಚುನಾವಣಾ ಅಧಿಕಾರಿಗಳು ಯಾರು ಬೇಕಾದರೂ ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಸಮಜಾಯಿಸಿ ನೀಡುತ್ತಿದ್ದಾರೆ.
ಅನಧಿಕೃತ ವ್ಯಕ್ತಿಗಳು ಒಂದೇ ದಿನ ರಾಶಿಗಟ್ಟಲೇ ಅರ್ಜಿಗಳನ್ನು ಸಲ್ಲಿಸುವ ವೇಳೆ ಕನಿಷ್ಠ ಆ ವ್ಯಕ್ತಿಗಳು ಯಾರು, ಎಲ್ಲಿನವರು ಎಂಬ ಸಾಮಾನ್ಯ ಮಾಹಿತಿ ಕೇಳುವ ಗೋಜಿಗೆ ಹೋಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಎಲ್‌ಓಗಳಿಗೆ ಸರಿಯಾದ ತರಬೇತಿ ನೀಡದೆ ಇರುವುದರಿಂದ ಇಂತಹ ಕೃತ್ಯಗಳು ಬಯಲಾಗುತ್ತಿರುವುದು, ಆಯೋಗ ಕಟ್ಟುನಿಟ್ಟಿನ ಕ್ರಮ ಇಲ್ಲದಿರುವುದು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಇದರ ಹಿಂದಿನ ದುರುದ್ದೇಶ ಏನೆಂಬುದು ಜನರಿಗೆ ಬಹಿರಂಗಪಡಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ ಎಂದು ನಾಗರಿಕ ಮತಕಾವಲು ಸಮಿತಿಯ ಪ್ರಮುಖರು ಹೇಳುತ್ತಾರೆ.
ಭಾಲ್ಕಿ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಅವರು ʼಈದಿನ ಡಾಟ್ ಕಾಮ್ʼ ಜೊತೆ ಮಾತನಾಡಿ, “ಫಾರ್ಮ್-7 ಯಾರು ಬೇಕಾದರೂ, ಎಷ್ಟು ಬೇಕಾದರೂ ಸಲ್ಲಿಸಬಹುದು. ಯಾರೇ ಅರ್ಜಿ ಕೊಟ್ಟರೂ ನಾವು ಸ್ವೀಕರಿಸಿ ಆನ್‌ಲೈನ್ ಅಪ್ಲೋಡ್ ಮಾಡ್ತೇವೆ. ತದನಂತರ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿ ಹಾಗೂ ಯಾರ ಹೆಸರಿಗೆ ಫಾರ್ಮ್-7 ಸಲ್ಲಿಕೆಯಾಗಿದೆ ಇಬ್ಬರನ್ನೂ ಕರೆಯಿಸಿ, ವಿಚಾರಣೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದರು.
“ಯಾರಾದರೂ ಸುಳ್ಳು ಮಾಹಿತಿ ನೀಡಿ, ನಕಲಿ ದಾಖಲೆ ಸೃಷ್ಟಿಸಿ, ದುರುದ್ದೇಶಪೂರ್ವಕವಾಗಿ ಮತದಾರರ ಹೆಸರು ಅಳಿಸಲು ಫಾರ್ಮ್-7 ಸಲ್ಲಿಸಿದರೆ, ಅವರ ವಿರುದ್ಧ ತಕ್ಷಣವೇ ‘ಕ್ರಿಮಿನಲ್ ಕೇಸ್’ ದಾಖಲಿಸಬೇಕು. ಮಾತ್ರವಲ್ಲ, ಅವರನ್ನು ಬಂಧಿಸಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಫಾರ್ಮ್-7 ಸಲ್ಲಿಕೆಯಾದ ತಕ್ಷಣ ಯಾರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗುವುದಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಮುಚ್ಚಿಹೋದ ಪ್ರಕರಣಕ್ಕೆ ಮರುಜೀವ; ‘ಆತ್ಮಹತ್ಯೆ’ ನೋಟ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಹೆಸರು
ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಮಾತನಾಡಿ, “ಎಸ್‌ಐಆರ್ ದಿಂದ ಮತದಾರರು ಹಲವು ಗೊಂದಲಗಳಿಗೆ ಸಿಲುಕುತ್ತಿದ್ದಾರೆ. ಇದೀಗ ಮುಸ್ಲಿಮರ ಮತಗಳನ್ನು ಕಿತ್ತುಹಾಕುವ ಹುನ್ನಾರದಿಂದ ಅನಧಿಕೃತ ವ್ಯಕ್ತಿಗಳು ಫಾರ್ಮ್-7 ಸಲ್ಲಿಕೆಯಾಗಿರುವ ಆರೋಪ ಕೇಳಿ ಬರುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷವೂ ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರ (ಸೆ.28) ರಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ” ಎಂದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



