ಮುಂಗಾರು ಮಳೆ ಕೊರತೆಯ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ರಾಜ್ಯ ಸರ್ಕಾರವು ಜಲಾಶಯಗಳ ನೀರನ್ನು ಕೃಷಿಗೆ ಬಳಸದಂತೆ ನಿರ್ಬಂಧ ಹೇರಿ, ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡುವ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ತುಂಗಭದ್ರಾ ಮತ್ತು ಕಾವೇರಿ ತೀರದ ಪ್ರಮುಖ ಭತ್ತ ಬೆಳೆ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ ಪರಿಣಾಮ, ರಾಜ್ಯದ ಪ್ರಮುಖ ಆಹಾರ ಧಾನ್ಯವಾದ ಅಕ್ಕಿ ಬೆಲೆ ಗಗನಕ್ಕೇರಿದೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಬಿದ್ದಿದೆ. ಹಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ತೀರಾ ಕಡಿಮೆ ಮಟ್ಟದಲ್ಲಿದೆ. ತುಂಗಭದ್ರಾ ಜಲಾಶಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ, ಕೃಷಿಗೆ ನೀರು ಬಿಡುವುದನ್ನು ಮುಂದೂಡಲಾಗಿದೆ.
ಪರಿಣಾಮವಾಗಿ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಮಂಡ್ಯ, ಮೈಸೂರು ಸೇರಿದಂತೆ ತುಂಗಭದ್ರಾ ಮತ್ತು ಕಾವೇರಿ ಕಮಾಂಡ್ ಪ್ರದೇಶಗಳಲ್ಲಿ ರೈತರು ಭತ್ತ ಬಿತ್ತನೆಗೆ ಮುಂದಾಗಿಲ್ಲ. ಸಾಮಾನ್ಯವಾಗಿ ಜುಲೈನಲ್ಲಿ ನಡೆಯುವ ಬಿತ್ತನೆ ಕಾರ್ಯ ಈ ಬಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಮಾರುಕಟ್ಟೆಯಲ್ಲಿ ಅಕ್ಕಿ ಪೂರೈಕೆ ಕುಂಠಿತಗೊಂಡಿರುವುದರಿಂದ, ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ, ಸ್ಟೀಮ್ ಅಕ್ಕಿ ಸೇರಿದಂತೆ ಪ್ರಮುಖ ವಿಧಗಳಲ್ಲಿ ಕೆಜಿಗೆ ₹6 ರಿಂದ ₹10 ರೂಪಾಯಿ ಹೆಚ್ಚಳವಾಗಿದೆ. ಹಿಂದೆ ಕೆ.ಜಿ ₹40-45 ರೂಪಾಯಿ ಇದ್ದ ಅಕ್ಕಿಯ ಬೆಲೆ, ಈಗ ₹52 ರಿಂದ ₹59 ತಲುಪಿದೆ. ಒಟ್ಟಾರೆ ಶೇ. 30 ರಿಂದ 35 ರಷ್ಟು ಏರಿಕೆ ದಾಖಲಾಗಿದ್ದು, 25 ಕೆಜಿ ಚೀಲದ ಬೆಲೆ ಸುಮಾರು ₹150 ರಿಂದ ₹200 ಹೆಚ್ಚಾಗಿದೆ.
ಸರ್ಕಾರವು ರೈತರಿಗೆ ಜಲಾಶಯ ನೀರನ್ನು ನಂಬಿ ಬೆಳೆ ಬಿತ್ತದಂತೆ ಸಲಹೆ ನೀಡಿದ್ದು, ಮಳೆ ಸುಧಾರಿಸಿ ಜಲಾಶಯಗಳಿಗೆ ಸಾಕಷ್ಟು ನೀರು ಬಂದ ನಂತರವೇ ಕೃಷಿಗೆ ನೀರು ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸುವುದು ಮೊದಲ ಆದ್ಯತೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರೈತರು ಮತ್ತು ಗ್ರಾಹಕರು ಈ ಪರಿಸ್ಥಿತಿಯಿಂದ ಆತಂಕಕ್ಕೊಳಗಾಗಿದ್ದಾರೆ. ಮಳೆ ಸುಧಾರಣೆಯ ನಿರೀಕ್ಷೆಯಲ್ಲಿದ್ದು, ಸರ್ಕಾರವು ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.




