- ವದಂತಿ ಹರಡುವಿಕೆಯನ್ನು ತಡೆಯಲು ಇಂಟರ್‌ನೆಟ್ ಸೇವೆ ಸ್ಥಗಿತ
- ಶಾಂತಿ ಕಾಪಾಡುವಂತೆ ಎರಡೂ ಸಮುದಾಯಗಳ ಮುಖಂಡರಿಗೆ ಮನವಿ
ಹರಿಯಾಣದಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಗುರುಗ್ರಾಮ್‍ಗೆ ಹೊಂದಿಕೊಂಡಿರುವ ಹರಿಯಾಣದ ನೂಹ್‍ನಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆಯ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ನೂಹ್‍ನ ಖೇಡ್ಲಾ ಮೋಡ್‍ನಲ್ಲಿ ಧಾರ್ಮಿಕ ಮೆರವಣಿಗೆಯನ್ನು ತಡೆಯಲು ಕೆಲವರು ಕಲ್ಲುಗಳನ್ನು ಎಸೆದು, ಕಾರುಗಳಿಗೆ ಬೆಂಕಿ ಹಚ್ಚಿದ್ದಲ್ಲದೇ, ಇಬ್ಬರು ಹೋಮ್ ಗಾರ್ಡ್‍ಗಳನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಳಿಕ ರಾತ್ರಿಯ ವೇಳೆ ಮಸೀದಿಯೊಂದಕ್ಕೆ ಉದ್ರಿಕ್ತರ ಗುಂಪೊಂದು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ಇದರಲ್ಲಿ ಮಸೀದಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿತ್ತು. ಅದರಲ್ಲಿ ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ.
ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯು ಸೋಮವಾರ ಸಂಜೆ ಗುರುಗ್ರಾಮ-ಆಳ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಮೊದಲು ಘರ್ಷಣೆ ಪ್ರಾರಂಭವಾಗಿತ್ತು.
ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ ನೂಹ್, ಗುರುಗ್ರಾಮ, ಪಲ್ವಾಲ್ ಮತ್ತು ಪೊರಿದಾಬಾದ್‍ನಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 20 ಪ್ರಕರಣಗಳನ್ನು ದಾಖಲಿಸಿದ್ದು, ಹಲವರನ್ನು ಬಂಧಿಸಿದ್ದಾರೆ.
ಭಜರಂಗದಳದ ಸದಸ್ಯ, ಇಬ್ಬರು ಮುಸ್ಲಿಂ ಯುವಕರನ್ನು ಬೆಂಕಿ ಹಚ್ಚಿ ಕೊಂದ ಆರೋಪಿ ಮೋನು ಮಾನೇಸರ್ ಮತ್ತು ಅವರ ಸಹಚರರು ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಆಕ್ಷೇಪಾರ್ಹ ವಿಡಿಯೋ ಘರ್ಷಣೆ ಉಂಟಾಗಲು ಮೂಲ ಕಾರಣ ಎಂದು ವರದಿಯಾಗಿದೆ.
ತಪ್ಪು ಮಾಹಿತಿ ಮತ್ತು ವದಂತಿ ಹರಡುವಿಕೆಯನ್ನು ತಡೆಯಲು ನೂಹ್‍ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಗಲಭೆ ಪೀಡಿತ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ನಾಯಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದು, ಶಾಂತಿ ಕಾಪಾಡುವಂತೆ ಎರಡೂ ಸಮುದಾಯಗಳ ಮುಖಂಡರಿಗೆ ಮನವಿ ಮಾಡಿದ್ದಾರೆ.