ಉಡುಪಿ ಕಾಲೇಜೊಂದರಲ್ಲಿ ಮೊಬೈಲ್ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ‘ಸುಮೋಟೋ’ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ಆಗಿದೆ. ಡಿವೈಎಸ್‌ಪಿ ಮಟ್ಟದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಪ್ರಶ್ನೆ ಉದ್ಬವವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಮಹಿಳಾ ಆಯೋಗದ ಸದಸ್ಯರು ಬಂದು ತನಿಖೆ ನಡೆಸಿ, ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇರಲಿಲ್ಲವೆಂದು ಹೇಳಿದ್ದಾರೆ. ತನಿಖೆಯಾಗಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು” ಎಂದರು.
ಗೃಹ ಸಚಿವರು ಈ ಪ್ರಕರಣವನ್ನು ಮಕ್ಕಳಾಟ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಮಕ್ಕಳಾಟ ಆಗಿದಿದ್ದರೆ ಪ್ರಕರಣ ದಾಖಲಾಗುತ್ತಿತ್ತೆ. ಕಾಲೇಜಿನ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಎಂದು ಅವರು ಹೇಳಿರಬಹುದು” ಎಂದರು.
ಅನೈತಿಕ ಪೊಲೀಸ್‌ಗಿರಿ: ನಿರ್ದಾಕ್ಷಿಣ್ಯ ಕ್ರಮ
ಅನೈತಿಕ ಪೊಲೀಸ್‌ಗಿರಿ ಯಾರೇ ಮಾಡಿದರೂ ಕೂಡ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.