“ಗಳಿಸಿದ ಎರಡು ರೂಪಾಯಿಗಳಲ್ಲಿ ಒಂದನ್ನು ಪುಸ್ತಕದ ಓದಿಗಾಗಿ ತೆಗೆದಿಡು’ ಎಂಬ ಬಾಬಾಸಾಹೇಬರ ಆಶಯದಂತೆ ಇಂದು ನಗರದಲ್ಲಿ ಮೂರು ಗ್ರಂಥಾಲಯಗಳು ರಚನೆಗೊಳ್ಳುವುದು ಇದಕ್ಕೆ ಪೂರಕವಾಗಿದೆ. ಓದಿನ ಬೆಳಕು ಬದುಕಿನ ಬೆಳಕಾಗಬೇಕು. ಅಕ್ಷರದ ಅರಿವು ಮೂಡಿದಾಗ ಸಮಾಜದಲ್ಲಿ ಬದಲಾವಣೆ ಬರಲು ಕಾರಣವಾಗುತ್ತದೆ. ಪುಸ್ತಕಗಳೇ ಇದಕ್ಕೆಲ್ಲ ಮುಖ್ಯ” ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹಾವೇರಿ ಪಟ್ಟಣದ ವಿಶ್ವೇಶ್ವರತೀರ್ಥ ನಗರದಲ್ಲಿ ಇರುವ ಸದಾನಂದ ನಿಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಡಾ. ಬಾಬಾಸಾಹೇಬ ಅಂಬೇಡ್ಕರರ ಜನ್ಮದಿನದಂದು ನಗರದಲ್ಲಿ ಮೂರು ಗ್ರಂಥಾಲಯ ಅನುಷ್ಠಾನದ ಸಮಾರೋಪದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಾಹಾಂತೇಶ ದಾನಮ್ಮನವರ ಮಾತನಾಡಿದರು.
“ಜಾಗೃತಿ ಸಮಿತಿಯ ಸದಸ್ಯೆ, ಸಂಶೋಧನಾ ವಿದ್ಯಾರ್ಥಿನಿ ಅನಿತ ಮಂಜುನಾಥ ಅವರ ಮನೆಯಲ್ಲಿನ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಆಗಮಿಸಿ ಐವತ್ತಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿ ಅವರು ಮಾತನಾಡಿದರು.
“ಮೊಬೈಲ್ ಹಾವಳಿಯಿಂದ ಪುಸ್ತಕದ ಓದು ಕಡಿಮೆಯಾಗಿದೆ’ ಎಂಬ ಮಾತು ಸುಳ್ಳು. ಇಂದಿನ ತಲೆಮಾರಿನ ಓದಿನ ವಿಧಾನ ಬದಲಾಗಿಯೆಂದು ಅರ್ಥೈಯಿಸಬೇಕು. ವ್ಯವಧಾನವಿಲ್ಲದ ಜೀವನದ ಓಟದಲ್ಲಿ ನಾವು ಹೊಸ ಹೊಸ ವಿಧಾನಗಳಿಗೆ ಜೋಡಿಸಿಕೊಳ್ಳಬೇಕು. ತಂತ್ರಜ್ಞಾನದ ಅರಿವು ಇದ್ದಾಗ ಮಾತ್ರ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಹಾಗಾದಾಗ ಮಾತ್ರ ನಾವು ಇಂದಿಗೆ ಬದುಕಿದಂತೆ” ಎಂದು ಕುಲಪತಿಗಳು ನುಡಿದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಇಡೀ ಕರ್ನಾಟಕದಲ್ಲಿ ಮಾರ್ಚ 2027 ಅಂತ್ಯಕ್ಕೆ ಸುಮಾರು ಒಂದು ಲಕ್ಷ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸುವುದು ಪ್ರಾಧಿಕಾರದ ಗುರಿಯಾಗಿದೆ. ಮನೆಗೊಂದು ಗ್ರಂಥಾಲಯ ಹುಟ್ಟುವುದು ಎಂದರೆ ಪ್ರತಿ ಮನೆಯಲ್ಲಿ ಅರಿವಿನ ದೀಪ ಹಚ್ಚಿದಂತೆ. ಇದರಿಂದಾಗಿ ಮೂರು ಕೋಟಿ ಮನಸ್ಸುಗಳಲ್ಲಿ ಓದಿನ ಅರಿವು ಮೂಡಿಸಿದಂತೆ” ಎಂದು ನುಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಅನಿತ ಮತ್ತು ಮಂಜುನಾಥರನ್ನು ಜಿಲ್ಲಾ ಜಾಗೃತಿ ಸಮಿತಿಯಿಂದ ಐವತ್ತು ಪುಸ್ತಕಗಳು ಮತ್ತು ಅಭಿನಂಧನಾ ಪತ್ರವನ್ನು ನೀಡಿ ವೇದಿಕೆಯ ಗಣ್ಯರು ಸನ್ಮಾನಿಸಿದರು.
ವೇದಿಕೆಯಲ್ಲಿ ಡಾ. ವಿ.ಕೃ ಗೋಕಾಕ ಟ್ರಸ್ಟಿನ ಅಧ್ಯಕ್ಷರು ಡಾ. ಸತೀಶ ಕುಲಕರ್ಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಲಿಂಗಯ್ಯ ಹಿರೇಮಠ ಇದ್ದರು. ಸಮಾರಂಭದಲ್ಲಿ ಡಾ. ಅರವಿಂದ ಮೂಲಿಮನಿ, ದಾಕ್ಷಾಯಿಣಿ ಗಾಣಗೇರ, ಅಮೃತಕ್ಕ ಶೀಲವಂತರ, ರಾಜೇಶ್ವರಿ ಬಿಷ್ಟನಗೌಡರ, ಜಾಗೃತಿ ಸಮಿತಿಯ ಸದಸ್ಯರು ಸಿ.ಎಸ್. ಮರಳಿಹಳ್ಳಿ. ಡಾ ಲಕ್ಷ್ಮೀಕಾಂತ ಮಿರಜಕರ, ಪ್ರಾ. ಸೊಮನಾಠ ಡಿ, ಸೋಮಣ್ಣ ಡಂಬರಮತ್ತೂರ, ಚಂದ್ರಪ್ಪ ಮುಂತಾದವರು ಭಾಗವಹಿಸಿದ್ದರು. ಆರಂಭದಲ್ಲಿ ಕುಮಾರಿಯರು ಲಿಖಿತಾ ಮತ್ತು ಜೀವಿಕಾ ಪ್ರಾರ್ಥನೆ ಹಾಡಿದರು. ಸಮಿತಿಯ ಸದಸ್ಯರು ಎಸ್. ಆರ್. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಸಿದ್ದೇಶ್ವರ ಹುಣಸಿಕಟ್ಟೀಮಠ ನಡೆಸಿದರೆ. ಕೊನೆಯಲ್ಲಿ ಡಾ. ಗೀತಾ ಸುತ್ತಕೋಟಿ ವಂದಿಸಿದರು.




