ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಹೆದ್ದಾರಿ ಫ್ಲೈ ಓವರ್ ಕೆಳಭಾಗದ ಸರ್ಕಾರಿ ಜಾಗದಲ್ಲಿ ಸುಮಾರು ಎರಡು ವರ್ಷಗಳಿಂದ ಅನುಮತಿ ಇಲ್ಲದೆ ನಡೆಸಲಾಗುತ್ತಿದ್ದ ಗಿಡಗಳ ನರ್ಸರಿ ಸ್ಥಳಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರಿ ಜಾಗವನ್ನು ಖಾಸಗಿ ವ್ಯಾಪಾರಕ್ಕೆ ಬಳಸಿಕೊಳ್ಳಲು ಅವಕಾಶ ನೀಡಿರುವ ಬಗ್ಗೆ ಅವರು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಕರ್ತವ್ಯ ಲೋಪಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಸ್ಥಳದಲ್ಲಿದ್ದ ನರ್ಸರಿ ವ್ಯಾಪಾರಿಯನ್ನು ವಿಚಾರಿಸಿದಾಗ, ದಿನವೊಂದಕ್ಕೆ ಸುಮಾರು ₹3,000ರಿಂದ ₹4,000 ವಹಿವಾಟು ನಡೆಯುತ್ತಿರುವ ಮಾಹಿತಿ ಲಭ್ಯವಾಯಿತು. ಅನುಮತಿ ಇಲ್ಲದೆ ಸರ್ಕಾರಿ ಜಾಗದಲ್ಲಿ ವ್ಯಾಪಾರ ನಡೆಯುತ್ತಿದ್ದರೂ ಅಧಿಕಾರಿಗಳು ನೋಟಿಸ್ ಹಾಗೂ ದಂಡದ ಕ್ರಮಕ್ಕೆ ಮಾತ್ರ ಸೀಮಿತವಾಗಿರುವ ಬಗ್ಗೆ ಉಪಲೋಕಾಯುಕ್ತರು ಪ್ರಶ್ನಿಸಿದರು.
ಇಂತಹ ಪ್ರಕರಣಗಳಲ್ಲಿ ದಂಡ ವಿಧಿಸುವುದರ ಜೊತೆಗೆ ಕಾನೂನುಬದ್ಧವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಹಾಗೂ ಸಂಬಂಧಪಟ್ಟ ವಸ್ತುಗಳು ಮತ್ತು ವಾಹನಗಳನ್ನು ವಶಕ್ಕೆ ಪಡೆಯುವ ಕ್ರಮ ಅಗತ್ಯವಿತ್ತು ಎಂದು ಅವರು ಸೂಚಿಸಿದರು.
ಅನಧಿಕೃತ ಚಟುವಟಿಕೆ ಮುಂದುವರಿಯಲು ಅವಕಾಶ ನೀಡಿದ ಅಧಿಕಾರಿಗಳು ಹಾಗೂ ಖಾಸಗಿ ಕನ್ಸಲ್ಟೆಂಟ್‌ಗಳ ಪಾತ್ರದ ಬಗ್ಗೆಯೂ ಅವರು ಪ್ರಶ್ನಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಲಿಖಿತ ಸ್ಪಷ್ಟನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಆಸ್ತಿಯನ್ನು ಖಾಸಗಿ ಉದ್ದೇಶಕ್ಕೆ ಬಳಸುವುದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಈ ಪ್ರಕರಣದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿಯನ್ನು ನವದೆಹಲಿಯ ಲೋಕಪಾಲ್ ಗಮನಕ್ಕೆ ತರುವುದಾಗಿ ಉಪಲೋಕಾಯುಕ್ತರು ತಿಳಿಸಿದರು.




