ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಕಗ್ಗದಾಸಪುರದ 6ನೇ ಕ್ರಾಸ್ನಲ್ಲಿರುವ ಪಾಳು ಜಾಗದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ವೇಳೆ ದಿಢೀರನೇ ನಾಲ್ಕು ಸಿಲಿಂಡರ್ಗಳ ಸರಣಿ ಸ್ಫೋಟ ಉಂಟಾಗಿದೆ.
ಸ್ಫೋಟದ ರಭಸಕ್ಕೆ ಸಿಲಿಂಡರ್ ಒಂದರ ಭಾಗ ಪಕ್ಕದಲ್ಲೇ ಇದ್ದ ಶಾಲೆಯ ಕಿಟಕಿಗೆ ಬಂದು ಬಡಿದಿದೆ. ಇದರಿಂದ ಸ್ಥಳೀಯವಾಗಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮೂರ್ತಿ ಎಂಬುವವರಿಗೆ ಸೇರಿದ ಪಾಳು ಜಾಗದ ಶೆಡ್ನಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಸ್ಫೋಟದ ತೀವ್ರತೆಗೆ ಶೆಡ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಈ ಸುದ್ದಿ ಓದದ್ದೀರಾ? ಉಡುಪಿ | ಈಜಲು ತೆರಳಿದ ಯುವಕರು ನೀರುಪಾಲು; ಬೈಂದೂರಿನಲ್ಲಿ ಕೊಲೆ ಯತ್ನ ಆರೋಪಿಗಳ ಆತ್ಮಹತ್ಯೆ
ಘಟನಾ ಸ್ಥಳಕ್ಕೆ ಎಸಿಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ, ಘಟನೆಗೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.




