ಕೇಂದ್ರ ಸರ್ಕಾರವು ಮಾಧ್ಯಮ ಸೇರಿದಂತೆ ಹಲವು ಸಾಂವಿಧಾನಿಕ ಹಾಗೂ ಸಾಂಸ್ಥಿಕ ವ್ಯವಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದೀಗ ಸುಪ್ರೀಂ ಕೋರ್ಟ್ನ್ನೂ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ, ಸುಪ್ರೀಂ ಕೋರ್ಟ್ ಅನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಸಂಪೂರ್ಣ ನಂಬಿಕೆ ತಮಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿರುವುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಗಳಿಗೆ ಸರ್ಕಾರ ಪ್ರತಿಕ್ರಿಯಿಸಿದ ರೀತಿಯ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಬಲ್ ಈ ಹೇಳಿಕೆ ನೀಡಿದ್ದಾರೆ.
2014ರಿಂದಲೂ ಕೇಂದ್ರ ಸರ್ಕಾರವು ವಿವಿಧ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾರ್ಯತಂತ್ರ ಅನುಸರಿಸುತ್ತಿದೆ. ಜೊತೆಗೆ ಜನರ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಮೊದಲು ಅವರು ಮಾಧ್ಯಮವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮಾಧ್ಯಮವನ್ನು ವಶಕ್ಕೆ ಪಡೆದ ಬಳಿಕ ಇತರ ಸಂಸ್ಥೆಗಳ ಮೇಲೂ ನಿಯಂತ್ರಣ ಸಾಧಿಸಿದರು. ಈಗಲೂ ಸ್ವತಂತ್ರವಾಗಿ ಉಳಿದಿರುವ ಒಂದು ಸಂಸ್ಥೆಯೆಂದರೆ ಅದು ಭಾರತದ ಸುಪ್ರೀಂ ಕೋರ್ಟ್. ಅದನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಬೇರೆ ಯಾವುದನ್ನೂ ವಶಕ್ಕೆ ಪಡೆಯಲು ಸಾಧ್ಯವಾಗದಿದ್ದರೆ, ಕನಿಷ್ಠ ಮತದಾರರ ಪಟ್ಟಿಯನ್ನಾದರೂ ತಮ್ಮ ನಿಯಂತ್ರಣಕ್ಕೆ ಹೇಗೆ ತೆಗೆದುಕೊಳ್ಳಬಹುದು ಎಂದು ಅವರು ಯೋಚಿಸಿರಬಹುದು” ಎಂದು ಸಿಬಲ್ ಹೇಳಿದರು.
ದೆಹಲಿಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿರುವುದು ಹಾಗೂ ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸಿರುವುದನ್ನು ಪ್ರಸ್ತಾಪಿಸಿದ ಸಿಬಲ್, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಸಾರ್ವಜನಿಕ ಸುವ್ಯವಸ್ಥೆಯಂತಹ ಸಂವಿಧಾನಬದ್ಧವಾಗಿ ಮಾನ್ಯವಾದ ಕಾರಣಗಳಿದ್ದಾಗ ಮಾತ್ರ ಕಾನೂನಿನ ಮಿತಿಯೊಳಗೆ ಇಂತಹ ಹಕ್ಕುಗಳಿಗೆ ನಿರ್ಬಂಧ ವಿಧಿಸಬಹುದು. ಅಧಿಕಾರಿಗಳು ಸೂಕ್ತ ಕಾರಣಗಳನ್ನು ನೀಡದೆ ಪ್ರತಿಭಟನೆಗಳನ್ನು ನಿರ್ಬಂಧಿಸುವಂತಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಯ ಸೆಕ್ಷನ್ 163ರ ಅಡಿಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆಗಳ ಬಗ್ಗೆಯೂ ಪ್ರಶ್ನೆಗಳಿವೆ. ಇಂತಹ ನಿರ್ಬಂಧಗಳು ಏಕೆ ಅಗತ್ಯವಾಗಿದ್ದವು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸಮರ್ಥಿಸಬೇಕು. ಈ ವಿಚಾರವನ್ನು ನಾವು ಸುಪ್ರೀಂ ಕೋರ್ಟ್ನಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.
2014ರಿಂದಲೂ ಹಲವು ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದೇ ಸರ್ಕಾರದ ನೀತಿಯಾಗಿದೆ. ಮೊದಲು ಮಾಧ್ಯಮವನ್ನು ವಶಕ್ಕೆ ಪಡೆದರು. ನಂತರ ವಿಶ್ವವಿದ್ಯಾಲಯಗಳು, ರಾಜ್ಯಪಾಲರು ಸೇರಿದಂತೆ ಇತರ ಹಲವು ಸಂಸ್ಥೆಗಳ ಮೇಲೂ ನಿಯಂತ್ರಣ ಸಾಧಿಸಿದರು. ಆದರೆ, ಭಾರತದ ಸುಪ್ರೀಂ ಕೋರ್ಟ್ ಅನ್ನು ಮಾತ್ರ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್ ಈ ಎಲ್ಲ ಬೆಳವಣಿಗೆಗಳನ್ನು ಪರಿಗಣಿಸಿ, ಜನರ ಹಕ್ಕುಗಳನ್ನು ರಕ್ಷಿಸಲಿದೆ ಎಂಬ ವಿಶ್ವಾಸ ತಮಗಿದೆ ಎಂದ ಅವರು, ಶಾಂತಿಯುತ ಪ್ರತಿಭಟನೆ ನಡೆಸುವ ನಾಗರಿಕರ ಸಂವಿಧಾನಬದ್ಧ ಹಕ್ಕುಗಳನ್ನು ನ್ಯಾಯಾಲಯ ಕಾಪಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾನೂನಿನ ಚೌಕಟ್ಟಿನಲ್ಲೇ ಕಾರ್ಯಾಂಗದ ಶಕ್ತಿಯನ್ನು ಕಟ್ಟಿಹಾಕಬಹುದು ಎಂಬ ವಿಶ್ವಾಸದ ಮೇಲೆ ಸಿಬಲ್ ಹೇಳಿರುವ ಮಾತುಗಳು ಮಹತ್ವ ಪಡೆದುಕೊಂಡಿವೆ. 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ನ್ಯಾಯಾಂಗದ ಸ್ವಾಯತ್ತತೆ (Judicial Independence) ಮತ್ತು ಮುಕ್ತ-ನ್ಯಾಯಸಮ್ಮತ ಚುನಾವಣೆಗಳು ಭಾರತ ಸಂವಿಧಾನದ ಮೂಲ ರಚನೆಯ ಭಾಗವಾಗಿವೆ. ಸಂಸತ್ತು ಅಥವಾ ಕಾರ್ಯಾಂಗವು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಸಂವಿಧಾನದ ಈ ಮೂಲ ರಚನೆಯನ್ನು ಬದಲಾಯಿಸಲು ಅಥವಾ ನ್ಯಾಯಾಂಗದ ಸ್ವತಂತ್ರ ಅಧಿಕಾರವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಬಲ್ ಅವರ “ಸುಪ್ರೀಂ ಕೋರ್ಟ್ ವಶಕ್ಕೆ ಪಡೆಯಲು ಸಾಧ್ಯವಿಲ್ಲ” ಎಂಬ ನಂಬಿಕೆಗೆ ಇದೇ ಮುಖ್ಯ ಕಾನೂನಾತ್ಮಕ ಆಧಾರ.
ಸಿಆರ್ಪಿಸಿ (CrPC) ಸೆಕ್ಷನ್ 144 ರ ಬದಲಿಗೆ ಈಗ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸುವುದಕ್ಕೆ ಕಟ್ಟುನಿಟ್ಟಿನ ನಿಯಮಗಳಿವೆ. ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿರುವಂತೆ ಶಾಂತಿಯುತ ಪ್ರತಿಭಟನೆಗಳನ್ನು ತಡೆಯಲು ಕೇವಲ ನೆಪಮಾತ್ರಕ್ಕೆ ನಿಷೇಧಾಜ್ಞೆ ಜಾರಿಗೊಳಿಸುವಂತಿಲ್ಲ. ಅಧಿಕಾರಿಗಳು ಸೂಕ್ತ ಮತ್ತು ನೈಜ ಸಾರ್ವಜನಿಕ ತುರ್ತುಸ್ಥಿತಿಯ ಕಾರಣಗಳನ್ನು ನೀಡಲೇಬೇಕು.
ಇದನ್ನೂ ಓದಿ: EVM ಪರಿಶೀಲನೆಯಲ್ಲಿ ಅಕ್ರಮ ಆರೋಪ; ಸ್ಟಾಲಿನ್ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್
ಮತದಾರರ ಪಟ್ಟಿಯಿಂದ ಅರ್ಹ ನಾಗರಿಕರ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಮತದಾರರ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನದ ವಿಧಿ 326 (ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು) ಕ್ಕೆ ವಿರುದ್ಧವಾಗಿದೆ. ಇದನ್ನು ನ್ಯಾಯಾಲಯದಲ್ಲಿ ಸವಾಲು ಮಾಡಲು ಗಟ್ಟಿ ಕಾನೂನಿನ ಆಧಾರವಿದೆ.
ಸಾಂವಿಧಾನಿಕ ಕಾನೂನುಗಳ ಆಧಾರದ ಮೇಲೆ ನೀಡಿರುವ ಸಿಬಲ್ ಅವರ ಹೇಳಿಕೆಗಳು, ಇತ್ತೀಚಿನ ವರ್ಷಗಳಲ್ಲಿ ವಿವಿಧ ತನಿಖಾ ಸಂಸ್ಥೆಗಳ (ED, CBI) ತನಿಖೆಗಳು ಮತ್ತು ಸರ್ಕಾರಿ ಕ್ರಮಗಳಿಂದಾಗಿ ಪ್ರತಿಪಕ್ಷಗಳು ಹಾಗೂ ನಾಗರಿಕ ಸಮಾಜದಲ್ಲಿ ಉಂಟಾಗಿರುವ ನಿರಾಶೆ, ಆತಂಕ, ಭಯದ ವಾತಾವರಣವನ್ನು ಹೋಗಲಾಡಿಸಿ, ʼನ್ಯಾಯಾಂಗ ಇನ್ನೂ ಜೀವಂತವಾಗಿದೆ ಎಂಬ ಆಶಾವಾದವನ್ನು ಮೂಡಿಸಿವೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಅವರ ನಿರ್ಧಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಶ್ನಿಸುವ ಮೂಲಕ, ಮುಂಬರುವ ಚುನಾವಣೆಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿ ನಡೆಯುವಂತೆ ತನಿಖಾತ್ಮಕ ಒತ್ತಡ ಹೇರಲು ಕೂಡ ಅವರ ಮಾತುಗಳು ಆಧಾರವಾಗಲಿವೆ.





