ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದ ಪ್ರಮುಖ ಸಾಂಸ್ಕೃತಿಕ ಮತ್ತು ರಾಜಕೀಯ ಕೇಂದ್ರವಾದ ಜಾಧವಪುರ 8B ಬಸ್ ಸ್ಟ್ಯಾಂಡ್ ಬಳಿ ದಶಕಗಳಿಂದ ದುರ್ಗಾ ಪೂಜಾ ಸಂದರ್ಭದಲ್ಲಿ ಪುಸ್ತಕ ಮಳಿಗೆಗಳನ್ನು ಇಡಲಾಗುತ್ತದೆ. ಆದರೆ ಈ ಬಾರಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹಬ್ಬದ ಸಂದರ್ಭದಲ್ಲಿ ಸಿಪಿಎಂನ ಪುಸ್ತಕ ಮಳಿಗೆಗಳ ನೆಲಸಮಕ್ಕೆ ಬುಲ್ಡೋಜರ್ ಕಳುಹಿಸಿದೆ. ಆದರೆ ಸ್ಥಳೀಯರು ಬಿಜೆಪಿ ಸರ್ಕಾರದ ದಬ್ಬಾಳಿಕೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಬುಲ್ಡೋಜರ್ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಶನಿವಾರ ಸಂಜೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಅಧಿಕಾರಿಗಳು ಮತ್ತು ಪೊಲೀಸ್ ಪಡೆಯು ಜಾಧವಪುರದ ಪ್ರಮುಖ ಪ್ರದೇಶವಾದ 8B ಬಸ್ ನಿಲ್ದಾಣದ ಬಳಿ ಇದ್ದ ಸಿಪಿಎಂ ಪುಸ್ತಕ ಮಳಿಗೆಯ ಬಳಿಗೆ ಬುಲ್ಡೋಜರ್ ಹಾಗೂ ಕಸದ ಲಾರಿಯೊಂದಿಗೆ ಆಗಮಿಸಿತು. ಮಳಿಗೆಯ ಸಂಘಟಕರು ತಾವು ಅಗತ್ಯವಿರುವ ಎಲ್ಲ ಕಾನೂನುಬದ್ಧ ಅನುಮತಿಗಳನ್ನು ಪಡೆದಿರುವುದಾಗಿ ದಾಖಲೆಗಳನ್ನು ತೋರಿಸಿದರೂ, ಅಧಿಕಾರಿಗಳು ಮಳಿಗೆ ತೆರವುಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಇದನ್ನೂ ಓದಿ: ಬಂಗಾಳದ ನವರಾತ್ರಿ- ತಾಯಿ ದುರ್ಗೆಯ ಕೇಶ ತಯಾರಕರು ಮುಸ್ಲಿಮರು- ಕೋಮು ಸೌಹಾರ್ದಕ್ಕೊಂದು ನಿದರ್ಶನ
ಈ ದಬ್ಬಾಳಿಕೆಯ ಸುದ್ದಿ ತಿಳಿಯುತ್ತಿದ್ದಂತೆ, ಜಾಧವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎಡಪಂಥೀಯ ಕಾರ್ಯಕರ್ತರು ಮತ್ತು ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಾಗರಿಕರು ಮುಗಿಬಿದ್ದು ಬುಲ್ಡೋಜರ್ ಮುಂದೆ ಮರುಚರ್ಚೆಗೆ ಅವಕಾಶವಿಲ್ಲದಂತೆ ಪ್ರತಿಭಟನೆ ಆರಂಭಿಸಿದರು.
“ಪುಸ್ತಕಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರು ಒಗ್ಗೂಡಿದ ಪರಿಣಾಮ, ಆಡಳಿತಾಧಿಕಾರಿಗಳು ಮತ್ತು ಬುಲ್ಡೋಜರ್ ಚಾಲಕ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳದಿಂದ ತೆರಳಬೇಕಾಯಿತು. ವಿಶೇಷವೆಂದರೆ, ಕೇವಲ 20 ಅಡಿ ದೂರದಲ್ಲೇ ಇದ್ದ ಸಂಘ ಪರಿವಾರ ಅಥವಾ ಬಲಪಂಥೀಯರ ಮತ್ತೊಂದು ಮಳಿಗೆಯನ್ನು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಹಾಗೇ ಬಿಡಲಾಗಿತ್ತು.
ಈ ಘಟನೆಗೆ ಕೆಲ ದಿನಗಳ ಹಿಂದೆ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ದುರ್ಗಾ ಪೂಜಾ ಸಮಿತಿಗಳಿಗೆ ಬಹಿರಂಗ ಎಚ್ಚರಿಕೆ ನೀಡುತ್ತಾ, ಕಮ್ಯುನಿಸ್ಟ್ ಪಕ್ಷಗಳು ತಮ್ಮ ಮಳಿಗೆಗಳಲ್ಲಿ ‘ದುರ್ಗಾ ಪೂಜಾ’ ಎಂದು ನಮೂದಿಸುವ ಬದಲು ‘ಶಾರದೋತ್ಸವ’ ಎಂದು ಬಳಸಿದರೆ ಅಂತಹವರಿಗೆ ಪೂಜಾ ಮಂಟಪಗಳ ಬಳಿ ಮಳಿಗೆ ಹಾಕಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ | ದುರ್ಗಾ ಪೂಜೆ ಪಂಡಾಲ್ನಲ್ಲಿ ಮಮತಾ ಮೇಲೆ ದಾಳಿ; ಟಿಎಂಸಿ ಮುಖಂಡರೇ ಗುರಿಯೆ?
ಅಲ್ಲದೆ, ಬೊಂಗಾಂ ಪ್ರದೇಶದ ಒಂದು ನಿರ್ದಿಷ್ಟ ಪುಸ್ತಕ ಮಳಿಗೆಯ ಕುರಿತು ಬಂದಿದ್ದ ಹೈಕೋರ್ಟ್ನ ಅತ್ಯಂತ ಸೀಮಿತ ವ್ಯಾಪ್ತಿಯ ತೀರ್ಪನ್ನು ನೆಪವಾಗಿಟ್ಟುಕೊಂಡು, ರಾಜ್ಯದ ಇತರೆಡೆಗಳಲ್ಲಿಯೂ ಸಿಪಿಎಂ ಪುಸ್ತಕ ಮಳಿಗೆಗಳನ್ನು ಟಾರ್ಗೆಟ್ ಮಾಡಿ ತೆರವುಗೊಳಿಸಲು ಪೊಲೀಸ್ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ವಕೀಲರು ಹಾಗೂ ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚಾದ ದಾಳಿ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷಗಳಾದ ಸಿಪಿಎಂ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಇತರ ಎಡಪಕ್ಷಗಳ ಕಾರ್ಯಕರ್ತರ ಮೇಲೆ ವ್ಯವಸ್ಥಿತವಾದ ರಾಜಕೀಯ ಹಾಗೂ ಸಾಂಸ್ಕೃತಿಕ ದಾಳಿಗಳು ಹೆಚ್ಚಾಗಿವೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ.
ಬಂಗಾಳದ ದೀರ್ಘಕಾಲದ ಹಬ್ಬಗಳ ಸಂಪ್ರದಾಯದಲ್ಲಿ ಪುಸ್ತಕ ಮಳಿಗೆಗಳು ಜ್ಞಾನ ಮತ್ತು ವಿಚಾರ ವಿನಿಮಯದ ಪ್ರತೀಕವಾಗಿವೆ. ಆದರೆ ಹೊಸ ರಾಜಕೀಯ ಬದಲಾವಣೆಗಳ ನಂತರ ಬೌದ್ಧಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನಗಳು ನಡೆಯುತ್ತಿವೆ ಎಂದು ಎಡಪಕ್ಷಗಳ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ಜಾಧವಪುರ ಮಾತ್ರವಲ್ಲದೆ, ಹೌರಾದ ಶಿಬ್ಪುರ ಸೇರಿದಂತೆ ರಾಜ್ಯದ ವಿವಿಧಡೆ ಎಡಪಂಥೀಯರ ಪುಸ್ತಕ ಮಳಿಗೆಗಳನ್ನು ಧ್ವಂಸಗೊಳಿಸುವುದು, ಬೆಂಕಿ ಹಚ್ಚುವುದು ಮತ್ತು ಪುಸ್ತಕಗಳನ್ನು ರಸ್ತೆಗೆಸೆದು ಅವಮಾನಿಸುವಂತಹ ಘಟನೆಗಳು ವರದಿಯಾಗಿವೆ. ಬಿಜೆಪಿ ಸರ್ಕಾರದ ಸೂಚನೆಯ ಮೇರೆಗೆ ಪೊಲೀಸರು ಮತ್ತು ಸ್ಥಳೀಯ ಆಡಳಿತವು ವಿರೋಧ ಪಕ್ಷಗಳ ಸಾರ್ವಜನಿಕ ಪ್ರಚಾರದ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಮಳಿಗೆಗಳನ್ನು ಮುಚ್ಚಿಸಲು ಅಥವಾ ಬುಲ್ಡೋಜರ್ ಬಳಸಿ ತೆರವುಗೊಳಿಸಲು ಎಷ್ಟೇ ಯತ್ನಿಸಿದರೂ, ಬಂಗಾಳದ ಜನತೆ ಮತ್ತು ಎಡಪಕ್ಷಗಳು ರಸ್ತೆಬದಿಯಲ್ಲೇ ಬಟ್ಟೆಗಳನ್ನು ಹಾಸಿ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವಿರೋಧವನ್ನು, ಸಾಂಸ್ಕೃತಿಕ ಗಟ್ಟಿತನವನ್ನು ಪ್ರದರ್ಶಿಸುತ್ತಿರುವುದು ಪ್ರಸ್ತುತ ಬಂಗಾಳದ ರಾಜಕೀಯ ಅಂಕಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.






