ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾದ ನಾಯಕರು ಮತ್ತು ಕಾರ್ಯಕರ್ತರ ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿ, ಆ ಮೊಬೈಲ್ಗಳಲ್ಲಿ ನಕಲಿ ಸಾಕ್ಷ್ಯಗಳನ್ನು ಅಳವಡಿಸಿದ ಸಂಶಯವಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕ ಸೌರವ್ ದಾಸ್ ಆರೋಪಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ನಿಯಾಮಾನುಸಾರವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೇರಿದಂತೆ ಹಲವು ಸಿಜೆಪಿ ನಾಯಕರನ್ನು ನಿನ್ನೆ ವಿಮಾನದಲ್ಲಿಯೇ ಬಂಧಿಸಲಾಗಿದೆ. ಇಂದು ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಇದಾದ ಬಳಿಕ ಸೌರವ್ ದಾಸ್ ಸೇರಿದಂತೆ ಹಲವು ಪ್ರತಿಭಟನಾಕಾರರು ಮಾಧ್ಯಮಗಳ ಮುಂದೆ ಸರಣಿ ಆರೋಪಗಳನ್ನು ಮಾಡಿದ್ದಾರೆ. ಯಾವುದೇ ಜಪ್ತಿ ಮಹಜರು ನೀಡದೆ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಫೋನ್ಗಳ ದತ್ತಾಂಶಗಳನ್ನು ತಿದ್ದುಪಡಿ ಮಾಡುವ ಅಥವಾ ‘ಕ್ಲೋನಿಂಗ್’ ಮಾಡುವ ಅಪಾಯವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಂಧನದ ವೇಳೆ ಪೊಲೀಸರು ನಮ್ಮ ಮೊಬೈಲ್ ಕಸಿದುಕೊಂಡು ನಕಲಿ ಸಾಕ್ಷ್ಯ ಅಳವಡಿಸಿರುವ ಸಂಶಯವಿದೆ: ಸಿಜೆಪಿ ನಾಯಕರ ಗಂಭೀರ ಆರೋಪ
ಈ ಆರೋಪಗಳನ್ನು ದೆಹಲಿ ಪೊಲೀಸ್ ಇಲಾಖೆ ತಳ್ಳಿಹಾಕಿದೆ. ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ದೆಹಲಿ ಪೊಲೀಸರ ಪರವಾಗಿ ಸ್ಪಷ್ಟನೆ ನೀಡಿದ್ದಾರೆ. ಮುಂಜಾಗ್ರತಾ ತಡೆ ಬಂಧನದ ಸಮಯದಲ್ಲಿ ನೆಟ್ವರ್ಕ್ಗೆ ಸಂಪರ್ಕಗೊಂಡಿರುವ ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆಯುವುದು ಭದ್ರತಾ ನಿಯಮಾವಳಿಯ ಭಾಗವಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಮುಂಜಾಗ್ರತಾ ಬಂಧನದ ಅವಧಿಯಲ್ಲಿ ವ್ಯಕ್ತಿಗತ ಫೋನ್ ಬಳಸಲು ಅವಕಾಶವಿಲ್ಲ. ಆದಾಗ್ಯೂ, ತಡೆ ಬಂಧನದಲ್ಲಿದ್ದವರಿಗೆ ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಇಲಾಖೆಯ ಅಧಿಕೃತ ಫೋನ್ ಸೌಲಭ್ಯ ಒದಗಿಸಲಾಗಿತ್ತು ಎಂದಿದ್ದಾರೆ.
ಹಾಗೆಯೇ ಯಾವುದೇ ವ್ಯಕ್ತಿಗೆ ತಮ್ಮ ಡಿಜಿಟಲ್ ಸಾಧನಗಳ ದುರುಪಯೋಗವಾಗಿದೆ ಎಂಬ ಸಂಶಯವಿದ್ದರೆ, ಅವರು ನ್ಯಾಯಾಲಯವನ್ನು ಸಂಪರ್ಕಿಸಿ ವಿಧಿವಿಜ್ಞಾನ ತಪಾಸಣೆಗೆ ಕೋರುವ ಕಾನೂನುಬದ್ಧ ಅವಕಾಶಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಜಂತರ್ ಮಂತರ್, ಸೆಂಟ್ರಲ್ ದೆಹಲಿ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯಾಗುವುದನ್ನು ತಡೆಯಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದ ಕಾರಣದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.





