11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು ನೀಡಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸಂಸದ ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಪ್ರಾಧ್ಯಾಪಕ ಅಂಗೋಮ್ಚಾ ಬಿಮೋಲ್ ಅಕೋಯಿಜಾಮ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ವಿಶ್ವವಿದ್ಯಾಲಯದ ಆಂತರಿಕ ಸಮಿತಿಯು ದೂರುಗಳ ಕುರಿತು ತನಿಖೆ ನಡೆಸಿ, ಪ್ರಾಧ್ಯಾಪಕರ ವಿರುದ್ಧ ‘ಗಂಭೀರ ಶಿಕ್ಷೆ’ ವಿಧಿಸುವಂತೆ ಶಿಫಾರಸು ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ಈ ವರದಿಯನ್ನು ಸೆಪ್ಟೆಂಬರ್ 30ರಂದು ನಡೆದ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಂಡಿಸಲಾಗಿದ್ದು, ಅಕೋಯಿಜಾಮ್ ಅವರನ್ನು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸಲು ನಿರ್ಧರಿಸಲಾಯಿತು ಎಂದು JNU ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ಅವರು ಸೇವಾ ನಿಯಮಗಳ ಪ್ರಕಾರ ವಜಾ ಆದೇಶ ಹೊರಡಿಸಿದ್ದಾರೆ. ಆಂತರಿಕ ಸಮಿತಿಯ ವರದಿ ಸೇರಿದಂತೆ ಲಭ್ಯವಿರುವ ಎಲ್ಲ ಅಂಶಗಳನ್ನು ಪರಿಗಣಿಸಿ, ಸೂಕ್ತ ಪ್ರಕ್ರಿಯೆ ಅನುಸರಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅಕೋಯಿಜಾಮ್ ಅವರು ಮಣಿಪುರದ ಒಳ ಮಣಿಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ. JNU ನ ಸಮಾಜ ವಿಜ್ಞಾನ ಭಾಗದಡಿ ಬರುವ ‘ಸೆಂಟರ್ ಫಾರ್ ದಿ ಸ್ಟಡೀಸ್ ಆಫ್ ಸೋಶಿಯಲ್ ಸಿಸ್ಟಮ್ಸ್’ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಪ್ರಕರಣದ ಕುರಿತು ಪ್ರತಿಕ್ರಿಯೆ ಪಡೆಯಲು ಅಕೋಯಿಜಾಮ್ ಅವರ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.
ಇದೇ ವೇಳೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯ ಜೆಎನ್‌ಯು ಘಟಕವು ವಿಶ್ವವಿದ್ಯಾಲಯದ ಕ್ರಮವನ್ನು ಸ್ವಾಗತಿಸಿದೆ. ಕ್ಯಾಂಪಸ್‌ನಲ್ಲಿ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಸಂಘಟನೆ ಹೇಳಿದೆ. ಕಳೆದ ತಿಂಗಳು ಈ ವಿಚಾರವನ್ನು ಪ್ರಸ್ತಾಪಿಸಿದ್ದ ಎಬಿವಿಪಿ, ಪ್ರಾಧ್ಯಾಪಕರನ್ನು ಅಮಾನತುಗೊಳಿಸಿ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು.
ಇದನ್ನೂ ಓದಿ: ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ ಅಪರೂಪದ ಕಲಾವಿದ
ಅಕೋಯಿಜಾಮ್ ಅವರು ಜೆಎನ್‌ಯುವಿನಲ್ಲಿ ಈಶಾನ್ಯ ಭಾರತದ ರಾಜಕೀಯ, ದಲಿತ-ಬುಡಕಟ್ಟು ಹಕ್ಕುಗಳು ಹಾಗೂ ಪ್ರಜಾಸತ್ತಾತ್ಮಕ ವಿಚಾರಗಳಿಗೆ ಧ್ವನಿಯಾಗಿದ್ದವರು. ಶೈಕ್ಷಣಿಕ ವಲಯದಲ್ಲಿ ಎಡಪಂಥೀಯ ಹಾಗೂ ಪ್ರಗತಿಪರ ಚಿಂತಕರೆಂದು ಗುರುತಿಸಿಕೊಂಡಿದ್ದರು.
ಸದ್ಯ ಬಿಮೋಲ್ ಅವರು ಹೈಕೋರ್ಟ್ ಅಥವಾ ಕಾನೂನು ನ್ಯಾಯಾಲಯಗಳ ಮೊರೆ ಹೋಗುವ ಸಾಧ್ಯತೆಗಳಿದ್ದು, ಇದು ಮುಂದಿನ ದಿನಗಳಲ್ಲಿ ಹೊಸ ಕಾನೂನು ಹೋರಾಟಕ್ಕೆ ದಾರಿ ಮಾಡಿಕೊಡಲಿದೆ. ಜತೆಗೆ ಮುಂಬರುವ ಸಂಸತ್ ಅಧಿವೇಶನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಈ ಪ್ರಕರಣ ನೈತಿಕ ಅಸ್ತ್ರವಾಗಿ ಬಳಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.




