ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ ಅಲ್ಲ. ಈ ದೇಶದ ಸತ್ಪ್ರಜೆಗಳು ಚುನಾವಣಾ ಆಯೋಗದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ, ಈ ದೇಶವಾಸಿಗಳ ಮೂಲಭೂತ ಹಕ್ಕಾದ ಮತದಾನದ ಹಕ್ಕನ್ನು ಕಿತ್ತುಕೊಂಡಿರುವುದಕ್ಕೆ ಸಿಡಿದೆದ್ದಿದ್ದಾರೆ. ಅವರು ಕೇಳುತ್ತಿರುವುದೇನು? ಈ ಪ್ರಮಾದಕ್ಕೆ ಕಾರಣರಾದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಎಂದಷ್ಟೇ. ಅವರನ್ನು ರಕ್ಷಣೆ ಮಾಡುತ್ತಿರುವವರು ಯಾರು?
ದೆಹಲಿಗೆ ಸಂಧಿಸುವ ಎಲ್ಲ ರೈಲುಗಳನ್ನು ಇಂದು ರಾತ್ರಿಯಿಂದಲೇ ರದ್ದುಗೊಳಿಸಲಾಗಿದೆ. ಅಕ್ಟೋಬರ್ 9ರ ಮಧ್ಯಾಹ್ನ 2 ಗಂಟೆಯ ಬಳಿಕ ಮೂಲ ನಿಲ್ದಾಣಗಳಿಂದ ಹೊರಡಬೇಕಿದ್ದ ಮತ್ತು ಅಕ್ಟೋಬರ್ 10ರ ಬೆಳಗ್ಗೆ 4ರಿಂದ ಮಧ್ಯಾಹ್ನ 2ರ ನಡುವೆ ನವದೆಹಲಿ ಅಥವಾ ಹಜರತ್ ನಿಜಾಮುದ್ದೀನ್ ನಿಲ್ದಾಣ ತಲುಪಬೇಕಿದ್ದ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳನ್ನು ಮೂಲ ನಿಲ್ದಾಣದಲ್ಲೇ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಪೂರ್ವ ರೈಲ್ವೆ ಶುಕ್ರವಾರ (ಅ.9) ಪಶ್ಚಿಮ ಬಂಗಾಳದಿಂದ ಹೊರಡಬೇಕಿದ್ದ ಎರಡು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ. 12301 ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಹಾಗೂ 12313 ಸೀಲ್ದಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಎರಡೂ ರೈಲುಗಳು ಅಕ್ಟೋಬರ್ 9ರಂದು ಪ್ರಯಾಣ ಆರಂಭಿಸಬೇಕಿತ್ತು. ದೆಹಲಿ ಮೆಟ್ರೊಗೂ ಬಾಗಿಲು ಹಾಕುವ ಆದೇಶ ಹೊರಡಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 23,000ಕ್ಕೂ ಹೆಚ್ಚು ಹೆಚ್ಚುವರಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಒಟ್ಟು ಭದ್ರತಾ ಸಿಬ್ಬಂದಿಯ ಸಂಖ್ಯೆ 25,000ಕ್ಕೂ ಅಧಿಕವಾಗಿದೆ.
ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ ಅಲ್ಲ. ಈ ದೇಶದ ಸತ್ಪ್ರಜೆಗಳು ಚುನಾವಣಾ ಆಯೋಗದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ, ದೇಶವಾಸಿಗಳ ಮೂಲಭೂತ ಹಕ್ಕಾದ ಮತದಾನದ ಹಕ್ಕನ್ನು ಕಿತ್ತುಕೊಂಡಿರುವುದನ್ನು ಪ್ರತಿಭಟಿಸಿ ಸಿಡಿದೆದ್ದಿದ್ದಾರೆ. ಅವರು ಕೇಳುತ್ತಿರುವುದೇನು? ಈ ಪ್ರಮಾದಕ್ಕೆ ಕಾರಣರಾದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಎಂದಷ್ಟೇ. ಅವರನ್ನು ರಕ್ಷಣೆ ಮಾಡುತ್ತಿರುವವರು ಯಾರು? ಅವರಿಗೆ ಪರಮಾಧಿಕಾರ ನೀಡಿ, ಜೀವನವಿಡೀ ಕಾನೂನಡಿ ಶಿಕ್ಷೆಯೇ ಇಲ್ಲದಂತಹ ವಿಶೇಷ ಸೌಲಭ್ಯ ನೀಡಿದ ಮೋದಿ-ಶಾ ಜೋಡಿ. ಜ್ಞಾನೇಶ್ ಕುಮಾರ್ ನಂತರ ಜೆನ್ ಝಿಗಳ ಗುರಿ ಈ ಇಬ್ಬರೇ ಆಗಿದ್ದಾರೆ.
ಹನ್ನೆರಡು ವರ್ಷಗಳಲ್ಲಿ ಮೋದಿ ಸರ್ಕಾರ ಜನಪ್ರತಿಭಟನೆಗೆ ತಲೆಬಾಗಿದ್ದು ಎರಡೇ ಸಲ. ಐದು ವರ್ಷಗಳ ಹಿಂದೆ ದೆಹಲಿಯ ಗಡಿಗಳಲ್ಲಿ ನಡೆದ ರೈತರ ಪ್ರತಿಭಟನೆ. ಮೂರು ರೈತವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಸುಮಾರು ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆದ ನಂತರ ಮೋದಿಯವರು ವಿಶೇಷ ಅಧಿವೇಶನವನ್ನೂ ಕರೆಯದೇ ಏಕಾಏಕಿ ಕ್ಯಾಮೆರಾ ಮುಂದೆ ನಿಂತು ಕೃಷಿ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದರು. ಅದಾದ ನಂತರ ನಡೆದ ಕಳೆದ ಜುಲೈನಲ್ಲಿ ನಡೆದ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಜೆನ್ ಝಿಗಳು ಕಾಕ್ರೋಚ್ ಜನತಾ ಪಾರ್ಟಿಯ ಅಡಿಯಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ, ಸಂಸತ್ ಭವನ ಮುತ್ತಿಗೆ ಯತ್ನ, ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಇವೆಲ್ಲ ನಡೆದ ನಂತರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕಾಯ್ತು.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಇತ್ತೀಚೆಗೆ ಇಬ್ಬರು ಚುನಾವಣಾ ಆಯುಕ್ತರ ಅಸಮಾಧಾನ, ಆರೋಪಗಳ ಕುರಿತು ವರದಿ ಬಿತ್ತರಿಸಿದ ನಂತರ ಕಾಕ್ರೋಚ್ ಗಳು ಮತ್ತೆ ಬೀದಿಗಿಳಿದಿದ್ದಾರೆ. ಜ್ಞಾನೇಶ್ ಕುಮಾರ್ ತಲೆದಂಡಕ್ಕಾಗಿ ಆಗ್ರಹಿಸಿದ್ದಾರೆ. ಅ.10ರಂದು ಸಿಜೆಪಿ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮೋದಿ ಸರ್ಕಾರ ಬೆದರಿದೆ ಎಂಬುದಕ್ಕೆ ಗೃಹ ಇಲಾಖೆ ಇಡೀ ದೆಹಲಿಗೆ ದಿಗ್ಬಂಧನ ಹಾಕಿರುವುದೇ ಸಾಕ್ಷಿ. ಅಷ್ಟೇ ಅಲ್ಲ ಹಲವು ವಿದ್ಯಾರ್ಥಿ ಸಂಘಟನೆ, ಎಡಪಕ್ಷಗಳ ವಿದ್ಯಾರ್ಥಿ ಮುಖಂಡರನ್ನು ನಿನ್ನೆ ರಾತ್ರಿಯಿಂದಲೇ ಗೃಹಬಂಧನದಲ್ಲಿ ಇಡಲಾಗಿದೆ. ಇಂದೇ ದೆಹಲಿ ತಲುಪಿದ ಹತ್ತು ಸಾವಿರ ಮಂದಿಯನ್ನು ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಸಂಚಾರ ನಿರ್ಬಂಧ ತೆರವುಗೊಳಿಸುವಂತೆ ಸುಪ್ರೀಂಗೆ ಸಲ್ಲಿಕೆಯಾದ ಅರ್ಜಿ ವಿಚಾರಣೆಯ ಸಮಯದಲ್ಲಿ ಪೀಠವು ಅಸಮಾಧಾನ ಹೊರಹಾಕಿದೆ. ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿಸುವುದು ಸರಿಯಲ್ಲ. ಮೆಟ್ರೋ ಓಡಾಟವನ್ನು ಎಂದಿನಂತೆಯೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಕಾನೂನು ಸುವ್ಯಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಅಡ್ಡಿಪಡಿಸುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಹೇಳಿದೆ. ಆದರೆ ನಿರ್ಣಾಯಕವಾಗಿ ಕಡ್ಡಿ ತುಂಡು ಮಾಡಿದಂತೆ ಆದೇಶ ಹೊರಬಿದ್ದಿಲ್ಲ.
ಸರ್ಕಾರದ ದುರಾಡಳಿತ, ಅನೀತಿಗಳ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ಎಲ್ಲ ಪ್ರಜೆಗಳಿಗೆ ನೀಡಿದೆ. ಮೋದಿ ಸರ್ಕಾರ ಹದಿಮೂರು ವರ್ಷಗಳಿಂದ ಆಡಿದ್ದೇ ಆಟ ಎಂಬಂತೆ ಮೆರೆಯುತ್ತಿತ್ತು. ವಿಪಕ್ಷಗಳ ಪ್ರಭಾವೀ ಮುಖಂಡರ ಮೇಲೆ ಸಿಬಿಐ, ಇಡಿ ಛೂಬಿಟ್ಟು ಹಿಂಸೆ ನೀಡುವುದು, ಬೆದರಿಸಿ ತಮ್ಮ ಪಕ್ಷಕ್ಕೆ ಸೇರುವಂತೆ ಮಾಡುವುದು, ಪ್ರತಿಭಟನೆ ಮಾಡಿದ್ರೆ ದೇಶದ್ರೋಹದ ಪ್ರಕರಣ ದಾಖಲಿಸಿ ಜಾಮೀನು ಕೊಡದಂತೆ ಮಾಡಿ ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು ಒಂದೆಡೆಯಾದರೆ, ಮೋದಿ ಮತ್ತು ಅವರ ಪಕ್ಷವನ್ನು ಟೀಕಿಸಿದವರೆಲ್ಲರನ್ನೂ ಪಾಕಿಸ್ತಾನಿ ಬೆಂಬಲಿಗರು, ದೇಶದ್ರೋಹಿಗಳು ಎಂದು ಸ್ವತಃ ಮೋದಿಯವರೇ ಟೀಕಿಸುವುದು ಮಾಮೂಲಿಯಾಗಿದೆ. ಇದೇ ವರ್ಷ ಆಗಸ್ಟ್ 15ರಂದು ಕೆಂಪುಕೋಟೆಯಿಂದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿಯವರು ಜೆನ್ ಝಿ ಪ್ರತಿಭಟನೆಯ ಬಗ್ಗೆ ಪ್ರಸ್ತಾಪಿಸಿ ಅವರನ್ನು ಬೆಂಬಲಿಸಿದವರು ʼದಿಮಾಗಿ ನಕ್ಸಲರುʼ ಎಂಬ ಪದ ಬಳಸಿ ನಿಂದಿಸಿದ್ದಾರೆ. ಸಿಜೆಪಿ ಪ್ರತಿಭಟನೆಗೆ ಮಣಿದ ಅವಮಾನ ಅವರ ಮಾತಿನಲ್ಲಿತ್ತು. ಇದು ಪ್ರಜಾಪ್ರಭುತ್ವ ದೇಶ. ಪ್ರಜೆಗಳ ಮಾತಿಗೆ ಮಣಿಯುವುದೇ ಪ್ರಜಾಪ್ರಭುತ್ವದ ಲಕ್ಷಣ. ಆದರೆ, ಮೋದಿಯವರ ಏಕಚಕ್ರಾಧಿಪತ್ಯದ ಆಡಳಿತದಲ್ಲಿ ಯಾರಿಗೂ ಮಣಿಯದಿರುವ ಅಹಂ ಮುಡಿಗೇರಿಸಿಕೊಂಡೇ ಮೆರೆದವರು. ಈ ದೇಶದ ಹಿರಿಯ ಅನ್ನದಾತರು ಮೊದಲ ಬಾರಿಗೆ ತಲೆ ಬಾಗುವುದನ್ನು ಕಲಿಸಿಕೊಟ್ಟಿದ್ದರು. ಆ ನಂತರ ಜೆನ್ ಝಿಗಳು ಬುದ್ಧಿ ಕಲಿಸಲು ಬಂದಿದ್ದಾರೆ.
ಎಸ್‌ಐಆರ್ ಎಂಬ ಬೃಹತ್ ಹಗರಣ ಈಗ ಸರ್ಕಾರಕ್ಕೆ ದೊಡ್ಡ ಮಟ್ಟದ ಸವಾಲನ್ನು ತಂದೊಡ್ಡಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ ಬಿಜೆಪಿಯವರು ಫಾರಂ 7 ಅನ್ನು ಯಾವ ಮಟ್ಟಿಗೆ ದುರ್ಬಳಕೆ ಮಾಡಿದ್ದಾರೆ ಎಂಬುದು ಬಯಲಾದ ನಂತರ ಸಿಜೆಪಿಯ ಪ್ರತಿಭಟನೆಗೆ ಕರ್ನಾಟಕದಿಂದಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಗುರುವಾರ ಜನತಾ ನ್ಯಾಯಾಲಯ ಆಯೋಜಿಸಿದ್ದ ನಾಗರಿಕ ಸಂಘಟನೆಗಳು ಸಿಜೆಪಿಯ ದೆಹಲಿ ಪ್ರತಿಭಟನೆಗೆ ಬೆಂಬಲಿಸಿವೆ. ಸಿಜೆಪಿ ಮುಖಂಡರು ಬೆಂಗಳೂರಿನ ಪ್ರತಿಭಟನೆಯಲ್ಲಿ ಎರಡನೇ ಬಾರಿ ಭಾಗವಹಿಸಿ ದಕ್ಷಿಣ ಭಾರತದ ಉಳಿದ ರಾಜ್ಯಗಳ ವಿಪಕ್ಷಗಳೂ, ನಾಗರಿಕ ಸಂಘಟನೆಗಳು ʼಕರ್ನಾಟಕ ಮಾದರಿʼಯನ್ನು ಅನುಸರಿಸಬೇಕು ಎಂದು ಕರೆ ನೀಡಿದ್ದಾರೆ.
ಎಸ್‌ಐಆರ್ ಕುರಿತು ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರದ ಬಗ್ಗೆ ಇಬ್ಬರು ಆಯುಕ್ತರು ಅಸಮಾಧಾನ ದಾಖಲಿಸಿದ ನಂತರ ಬಿಜೆಪಿಯ ಪಶ್ಚಿಮ ಬಂಗಾಳದ ಗೆಲುವಿನ ರಹಸ್ಯ ಸಾಮಾನ್ಯ ಜನರಿಗೂ ಅರಿವಾಗಿದೆ. ಉತ್ತರ ಪ್ರದೇಶದ ಚುನಾವಣೆ ಸಮೀಪಿಸುತ್ತಿರುವ ಈ ಸರಿ ಹೊತ್ತಿನಲ್ಲಿ ಜಿನ್ ಝಿ ಪ್ರತಿಭಟನೆ ಹತ್ತಿಕ್ಕಲು ಶತಾಯ ಗತಾಯ ಮೋದಿ ಸರ್ಕಾರ ಎಲ್ಲ ಅಡ್ಡ ದಾರಿಗಳನ್ನು ಈಗಾಗಲೆ ಹಿಡಿದಿದೆ. ಈ ನಡವಳಿಕೆ ಎಲ್ಲ ಹದ್ದುಗಳನ್ನು ಮೀರಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ. ನಾಳೆಯ ಪ್ರತಿಭಟನೆ ನಡೆದರೂ, ತಡೆದರೂ ನಂತರ ಉಂಟಾಗಬಹುದಾದ ಸಾಧಕ ಬಾಧಕಗಳಿಗೆ ಮೋದಿ ಸರ್ಕಾರ ಸಂಪೂರ್ಣ ಹೊಣೆಯಾಗಿದೆ.
ಜುಲೈ ಪ್ರತಿಭಟನೆಯ ಸಂದರ್ಭದಲ್ಲಿ ಬಿಜೆಪಿಯ ದುಷ್ಟರು ಪೊಲೀಸ್ ಸಮವಸ್ತ್ರದಲ್ಲಿ, ಕೆಲವರು ಸಮವಸ್ತ್ರ ಇಲ್ಲದೆಯೇ ಪೊಲೀಸರ ಲಾಠಿ ಹಿಡಿದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ನಾಳೆಯ ದೆಹಲಿ ಪ್ರತಿಭಟನೆಯಲ್ಲಿ ʼಪೊಲೀಸರಿಗೆ ನೆರವಾಗಲು ರಾಷ್ಟ್ರವಾದಿ ಯುವಕರು ದೆಹಲಿಗೆ ಹೊರಟಿದ್ದಾರೆʼ ಎಂದು ಕೆಲವು ಮೋದಿ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಅಂದರೆ ಸಿಜೆಪಿ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸಲು ಬಿಜೆಪಿ ಸಜ್ಜಾಗಿದೆ. ಹಾಗೇನಾದರೂ ಆದರೆ ದೆಹಲಿ ರಣರಂಗವಾಗಲಿದೆ. ನೇಪಾಳ, ಬಾಂಗ್ಲಾದೇಶದಲ್ಲಿ ಉಂಟಾದ ಪರಿಸ್ಥಿತಿಯನ್ನು ಮೋದಿ ಸರ್ಕಾರ ಸೃಷ್ಟಿಸದಿರಲಿ.
ಜನರ ನ್ಯಾಯಯುತ ಅಹವಾಲು ಆಲಿಸುವ ವ್ಯವಧಾನವನ್ನು ಮೋದಿ ಸರ್ಕಾರ ಪ್ರದರ್ಶಿಸಬೇಕು. ಈಗಾಗಲೇ ಆಡಳಿತ ವಿರೋಧಿ ಅಲೆ ಭುಗಿಲೆದ್ದಿದೆ. ಅದನ್ನು ಶಮನ ಮಾಡಲು ನಿರ್ಬಂಧ, ಸುಳ್ಳು ಕೇಸು ದಾಖಲಿಸುವ, ಮೋಸದಿಂದ ಚುನಾವಣೆಗಳನ್ನು ಗೆಲ್ಲುವ, ತನಗೆ ಬೇಕಾದ ಮತದಾರರ ಯಾದಿಗಳನ್ನು ತಯಾರಿಸುವ ಭಂಡತನ ಬಿಡಬೇಕು.




