ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ – ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯ ಮತ್ತು ವಿರೋಧಿಗಳ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಗಂಭೀರ ಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ವಿಶೇಷವಾಗಿ ‘ಫಾರ್ಮ್ 7’ ಅನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಮತದ ಹಕ್ಕನ್ನು ಕಸಿಯುವ ಕೃತ್ಯಗಳು ಬೆಳಕಿಗೆ ಬಂದಿವೆ.
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಘಟನೆಯೊಂದು ಇಡೀ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದೆ. ಅಲ್ಲಿನ ಬೂತ್ ಮಟ್ಟದ ಅಧಿಕಾರಿಗೆ (ಬಿಎಲ್ಒ) ಸುಮಾರು 150ಕ್ಕೂ ಹೆಚ್ಚು ‘ಫಾರ್ಮ್-7’ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವು ನಿರ್ದಿಷ್ಟ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಕೋರುವ ಅರ್ಜಿಗಳಾಗಿದ್ದವು. ಆದರೆ, ಈ ಅರ್ಜಿಗಳನ್ನು ಬಿಎಲ್ಒ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅಳಿಸಿಹಾಕಲು ಕೋರಲಾದ ಹೆಸರುಗಳೆಲ್ಲವೂ ಆಯಾ ವಿಳಾಸಗಳಲ್ಲೇ ವರ್ಷಗಳಿಂದ ನಿರಂತರವಾಗಿ ವಾಸಿಸುತ್ತಿರುವ ಮತ್ತು ಬಿಎಲ್ಒಗೆ ವೈಯಕ್ತಿಕವಾಗಿ ಪರಿಚಿತರಾಗಿರುವ ಮುಸ್ಲಿಂ ಮತದಾರರದ್ದಾಗಿದ್ದವು. ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ರೀತಿ ಅರ್ಜಿಗಳನ್ನು ಸಲ್ಲಿಸಿದವರೆಲ್ಲರೂ ಕೇಂದ್ರದ ಆಡಳಿತಾರೂಢ ಬಿಜೆಪಿಯಿಂದ ನೇಮಕಗೊಂಡ ಬೂತ್ ಮಟ್ಟದ ಏಜೆಂಟರು (ಬಿಎಲ್ಎ). ಕೇವಲ ಒಬ್ಬ ಬಿಎಲ್ಒ ಮಾತ್ರವಲ್ಲದೆ, ನೆರೆಹೊರೆಯ ಕ್ಷೇತ್ರಗಳ ಅಧಿಕಾರಿಗಳಿಗೂ ಇದೇ ರೀತಿಯ ನೂರಾರು ಅರ್ಜಿಗಳು ಬಂದಿರುವುದು ಕಂಡುಬಂದಿದೆ.
ಈ ರೀತಿಯ ತಂತ್ರ ಕೇವಲ ಮಲ್ಲೇಶ್ವರಂ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಬಬಲೇಶ್ವರ, ಭಾಲ್ಕಿ, ಬೆಳಗಾವಿ ಉತ್ತರ ಹಾಗೂ ಬೈಲಹೊಂಗಲ ಸೇರಿದಂತೆ ಹತ್ತಾರು ಪ್ರಮುಖ ಕ್ಷೇತ್ರಗಳಲ್ಲಿ ಇದೇ ಮಾದರಿಯಲ್ಲಿ ಸದ್ದಿಲ್ಲದೆ ಮತಗಳನ್ನು ಅಳಿಸಿಹಾಕುವ ಅಕ್ರಮ ಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ.
ಎಸ್ಐಆರ್ ಜಾರಿಗೆ ಬಂದಾಗ – ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ದೇಶದಲ್ಲಿರುವ ಅಕ್ರಮ ವಿದೇಶಿಯರು ಹಾಗೂ ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕಲಾಗುತ್ತದೆ ಎಂದು ಪ್ರತಿಪಾದಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯು ಮುಕ್ತಾಯದ ಹಂತಕ್ಕೆ ಬಂದರೂ ಒಬ್ಬನೇ ಒಬ್ಬ ಅಕ್ರಮ ವಿದೇಶಿ ಮತದಾರ ಪತ್ತೆಯಾಗಿಲ್ಲ. ಬದಲಾಗಿ, ಚುನಾವಣೆಯಲ್ಲಿ ನೇರವಾಗಿ ಗೆಲ್ಲಲು ಸಾಧ್ಯವಾಗದಿದ್ದಾಗ, ತಮಗೆ ಮತ ಹಾಕುವುದಿಲ್ಲ ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಮತಪಟ್ಟಿಯಿಂದ ಕಿತ್ತುಹಾಕುವ ದುಷ್ಟ ತಂತ್ರವನ್ನು ಹೆಣೆಯಲಾಗಿದೆ.
ಇದಕ್ಕೆ ಮುಖ್ಯ ಕಾರಣ ಚುನಾವಣಾ ಆಯೋಗವು ‘ಫಾರ್ಮ್ 7’ ನಿಯಮದಲ್ಲಿ ತಂದಿರುವ ತಿದ್ದುಪಡಿ. 2024ರವರೆಗೆ ಇದ್ದ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿ ತಾನು ಬೇರೆಡೆಗೆ ಸ್ಥಳಾಂತರಗೊಂಡಾಗ ಮಾತ್ರ ತನ್ನ ಹಳೆಯ ಹೆಸರು ತೆಗೆಯಲು ‘ಫಾರ್ಮ್ 7’ ಹಾಕಬಹುದಿತ್ತು, ಅಥವಾ ಕುಟುಂಬದ ಸದಸ್ಯರು ಯಾರಾದರೂ ಮೃತಪಟ್ಟರೆ ಮಾತ್ರ ಅವರ ಕುಟುಂಬಸ್ಥರು ಅರ್ಜಿ ನೀಡಲು ಅವಕಾಶವಿತ್ತು. ಆದರೆ, ಪ್ರಸ್ತುತ ಚುನಾವಣಾ ಆಯೋಗ ಮಾಡಿರುವ ತಿದ್ದುಪಡಿಯಂತೆ, ವಿಧಾನಸಭಾ ಕ್ಷೇತ್ರದ ಯಾರು ಬೇಕಾದರೂ ಇನ್ನೊಬ್ಬರ ವಿರುದ್ಧ ‘ಫಾರ್ಮ್ 7’ ಅರ್ಜಿ ಸಲ್ಲಿಸಿ ಹೆಸರು ಡಿಲೀಟ್ ಮಾಡಲು ಕೋರಬಹುದು. ಈ ಕಾಯ್ದೆಯ ಲೋಪವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಏಜೆಂಟ್ಗಳು ತಮ್ಮ ವಿರೋಧಿ ಮತಗಳನ್ನು ಅಳಿಸಿಹಾಕುವ ಹೀನ ಕೃತ್ಯಕ್ಕೆ ಇಳಿದಿದ್ದಾರೆ.
ಮತ್ತೊಂದೆಡೆ, ಮತದಾರರ ಹೆಸರು ಮತ್ತು ವಿಳಾಸಗಳನ್ನು ಕೈಯಲ್ಲಿ ಬರೆಯುವ ಬದಲು, ಮುಂಚಿತವಾಗಿಯೇ ಮುದ್ರಿಸಲಾದ ‘ಪ್ರಿ-ಪ್ರಿಂಟೆಡ್’ ಫಾರ್ಮ್ಗಳನ್ನು ಬಳಸಿ ಅರ್ಜಿ ಸಲ್ಲಿಸಲಾಗುತ್ತಿದೆ. ಇಂತಹ ಪ್ರಿ-ಪ್ರಿಂಟೆಡ್ ಅರ್ಜಿಗಳನ್ನು ಆಯೋಗ ವಿತರಿಸಿಲ್ಲ ಮತ್ತು ಇವು ಸಂಪೂರ್ಣ ಕಾನೂನುಬಾಹಿರ ಎಂದು ಚುನಾವಣಾ ಆಯೋಗದ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಹಾಗಿದ್ದರೆ, ರಾಜಕೀಯ ಪಕ್ಷದ ಏಜೆಂಟರಿಗೆ ಈ ಅಧಿಕೃತ ಡೇಟಾ ಸಿಕ್ಕಿದ್ದು ಹೇಗೆ, ಮತದಾರರ ಖಾಸಗಿ ಮಾಹಿತಿಯನ್ನು ಎಲ್ಲಿಂದ ಕದಿಯಲಾಯಿತು ಅಥವಾ ಆಯೋಗದ ಒಳಗಿನಿಂದಲೇ ಈ ಮಾಹಿತಿ ಸೋರಿಕೆಯಾಗಿದೆಯೇ ಎಂಬ ಬಲವಾದ ಅನುಮಾನಗಳು ಮೂಡಿವೆ. ಇದರ ಬಗ್ಗೆ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯಾಗಬೇಕಿದೆ.
ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಇದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಇಂದು ಮುಸ್ಲಿಂ ಸಮುದಾಯದ ಹೆಸರುಗಳನ್ನು ಗುರಿಯಾಗಿಸಿಕೊಂಡು ಡಿಲೀಟ್ ಮಾಡಲಾಗುತ್ತಿದ್ದರೆ, ನಾಳೆ ದಲಿತರು ಅಥವಾ ಆಡಳಿತ ಪಕ್ಷದ ಅಕ್ರಮಗಳನ್ನು ಪ್ರಶ್ನಿಸುವ ಯಾವುದೇ ಸಾಮಾನ್ಯ ನಾಗರಿಕನ ಮೇಲೂ ಇದು ಮರುಕಳಿಸಬಹುದು. ಒಮ್ಮೆ ನಿಮ್ಮ ಹೆಸರು ಪಟ್ಟಿಯಿಂದ ಹೊರಬಿದ್ದರೆ, ನಿಮ್ಮ ದಿನನಿತ್ಯದ ಕೆಲಸ-ಕಾರ್ಯಗಳನ್ನು ಬಿಟ್ಟು ದಾಖಲೆಗಳನ್ನು ಹಿಡಿದು, ವಿಚಾರಣೆ ಎದುರಿಸಿ ‘ನಾನು ಭಾರತೀಯ’ ಎಂದು ಸಾಬೀತುಪಡಿಸಲು ವಾರಗಟ್ಟಲೆ ಅಲೆಯಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕೇ ಇಲ್ಲದಿದ್ದರೆ ನಾಗರಿಕನಿಗೆ ಯಾವುದೇ ದನಿ ಇರುವುದಿಲ್ಲ.
ವಾಸ್ತವವಾಗಿ, ‘ಫಾರ್ಮ್ 7’ ಅರ್ಜಿ ಸಲ್ಲಿಸುವಾಗ ಪ್ರತಿಯೊಬ್ಬರೂ ಒಂದು ಸ್ವಯಂ ಘೋಷಣೆ ನೀಡಬೇಕಿರುತ್ತದೆ. ಜನಪ್ರತಿನಿಧಿ ಕಾಯ್ದೆ 1950ರ (Representation of the People Act, 1950) ಸೆಕ್ಷನ್ 31ರ ಪ್ರಕಾರ, ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಯತ್ನಿಸಿದರೆ, ಅದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಸ್ಪಷ್ಟ ಅವಕಾಶವಿದೆ.
ಆದ್ದರಿಂದ, ಚುನಾವಣಾ ಆಯೋಗವು ತಕ್ಷಣವೇ ಕಾರ್ಯಪ್ರವೃತ್ತರಾಗಿ, ತಪ್ಪು ಮಾಹಿತಿ ನೀಡಿ ಫಾರ್ಮ್ 7 ಸಲ್ಲಿಸಿರುವ ಎಲ್ಲ ಬಿಎಲ್ಎಗಳ ವಿರುದ್ಧ ಈ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲು ಶಿಕ್ಷೆಗೆ ಗುರಿಪಡಿಸಬೇಕು. ಆ ಮೂಲಕ ಅಕ್ರಮ ಎಸಗುವವರಿಗೆ ತಕ್ಕ ಎಚ್ಚರಿಕೆಯ ಸಂದೇಶ ರವಾನಿಸಬೇಕು. ಅಂತೆಯೇ, ಪ್ರಜಾಪ್ರಭುತ್ವ ಮತ್ತು ನಮ್ಮ ಪ್ರಮುಖ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ದನಿಯೆತ್ತುವುದೂ ಅತ್ಯಗತ್ಯ.



