ಮಧ್ಯಪ್ರಾಚ್ಯ ಸಂಘರ್ಷದ ಬಿಸಿ ಭಾರತದ ಕಾಫಿ ಬೆಳೆಗಾರರನ್ನು ಬಾಧಿಸಿದೆ. ಭಾರತ ಪ್ರಪಂಚದ ಪ್ರಮುಖ ಕಾಫಿ ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದೇಶ. 2026 ಮಾರ್ಚ್‌ನಲ್ಲಿ ಕಾಫಿ ರಫ್ತಿನಲ್ಲಿ ದೇಶ ಕೇವಲ 3% ಏರಿಕೆ ಸಾಧಿಸಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆ 4 ಲಕ್ಷ ಮೆಟ್ರಿಕ್ ಟನ್ ಕಾಫಿ ರಫ್ತು ಮಾಡಿದೆ.
ಯುದ್ಧದ ಬಿಸಿ ಅಕ್ಕಿ, ಗೊಬ್ಬರ, ಟೀ ಹೀಗೆ ಹಲವು ವಲಯಗಳ ವಹಿವಾಟು ಸ್ಥಗಿತಕ್ಕೆ ಕಾರಣವಾಗಿದೆ. ಸದ್ಯ ಕಾಫಿ ವಹಿವಾಟಿಗೂ ಕೊಲ್ಲಿ ಸಂಘರ್ಷದ ಬಿಸಿ ತಾಕಿದೆ. ಮಾರ್ಚ್ ಅಂತ್ಯದ ವೇಳೆಗೆ ಹೊಸ ಬೆಳೆ ಅಲಭ್ಯವಾದ ಸಂದರ್ಭದಲ್ಲಿ ಕಾಫಿ ರಫ್ತು ಕೇವಲ 3% ಹೆಚ್ಚಳ ಕಂಡಿದೆ.
ಗಲ್ಫ್ ರಾಷ್ಟ್ರಗಳು 25% ಭಾರತದ ಕಾಫಿಯ ಖರೀದಿದಾರರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಈ ಪ್ರಮಾಣದಲ್ಲಿ ಹೆಚ್ಚಳ ದಾಖಲಾಗುತ್ತಿತ್ತು. ಇಯುಡಿಆರ್ ಅಸ್ತಿತ್ವಕ್ಕೆ ಬಂದ ನಂತರ ಭಾರತ ಗಲ್ಫ್ ಹೊರತುಪಡಿಸಿ ಅನ್ಯ ದೇಶಗಳೊಂದಿಗೂ ಕಾಫಿ ವ್ಯಾಪಾರ ಕುದುರಿಸುವ ಪ್ರಯತ್ನದಲ್ಲಿತ್ತು.
ಇದನ್ನು ಓದಿ>>ಗಲ್ಫ್ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!
ಏತನ್ಮಧ್ಯೆ ಕದನದ ಕಾವು ಕಾಫಿ ಮಾರುಕಟ್ಟೆಯ ದಿಕ್ಕನ್ನು ಬದಲಿಸ ಹೊರಟಿದೆ. ಕಾಫಿ ರಫ್ತಿಗೆ ಸಂಕಷ್ಟ ತಂದೊಡ್ಡಿದೆ ಎಂದಿದ್ದಾರೆ. ಭಾರತದ ಕಾಫಿ ರಫ್ತು ಒಕ್ಕೂಟದ ಅಧ್ಯಕ್ಷರಾದ ರಮೇಶ್ ರಾಜ. ಇಯುಡಿಆರ್ ನಿಯಮಗಳಿಂದ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿದ್ದ ಕರ್ನಾಟಕದ ಕಾಫಿ ಬೆಳೆಗಾರರಿಗೆ ಈಗ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಇಯುಡಿಆರ್ 2023 ರಲ್ಲಿ ಯುರೋಪಿಯನ್ ಒಕ್ಕೂಟ ರೂಪಿಸಿದ ಕಾಫಿ ರಫ್ತಿನ ಮೇಲಿನ ಕಡ್ಡಾಯ ನಿಯಮಾವಳಿಗಳು.
ಅರಣ್ಯ ಭೂಮಿ ನಾಶಗೊಳಿಸಿದ ಪ್ರದೇಶಗಳಲ್ಲಿ ಬೆಳೆದ ಕಾಫಿಯನ್ನು ಕೊಳ್ಳುವುದಿಲ್ಲ. ಕಾಫಿ ಬೆಳೆಗಾರರು ಆಯಾ ದೇಶದ ಪರಿಸರ ಹಾಗೂ ಸಾಮಾಜಿಕ ನ್ಯಾಯದ ಹಿತಾಸಕ್ತಿಗೆ ಒಳಪಟ್ಟಿರಬೇಕು, ರಫ್ತು ಕಂಪನಿಗಳು ಕಾಫಿ ಬೆಳೆದ ಭೂಮಿಯ ಭೌಗೋಳಿಕ ನಕ್ಷೆಯನ್ನು ಅಧಿಕೃತ ದಾಖಲೆಗಳ ಮೂಲಕ ಒದಗಿಸುವುದು ಇಷ್ಟೆಲ್ಲಾ ನಿಯಮಗಳನ್ನು ಯುರೋಪಿಯನ್ ಯೂನಿಯನ್ ಡಿಫಾರೆಸ್ಟೇಶನ್ ರೆಗ್ಯುಲೇಷನ್ ಭಾರತೀಯ ಕಾಫಿ ಬೆಳೆಗಾರರ ಮೇಲೆ ಹೇರಿಕೆ ಮಾಡಿತ್ತು.

ಯುರೋಪಿಯನ್ ಒಕ್ಕೂಟದ ಈ ಹೊರೆಯಿಂದಾಗಿ ಭಾರತದ ಕಾಫಿ ಅಲ್ಜಿರಿಯ, ಉತ್ತರ ಆಫ್ರಿಕಾ, ಮಧ್ಯ ಏಷ್ಯಾದಲ್ಲಿ ಮಾರುಕಟ್ಟೆ ಹುಡುಕಾಟಕ್ಕೆ ಶುರುವಿಟ್ಟಿತು. ಇಟಲಿ ಹಾಗೂ ಜರ್ಮನಿ ಮಾರುಕಟ್ಟೆಗಳಲ್ಲಿ ಈಗಾಗಲೇ ಹಿನ್ನಡೆ ಕಂಡಿತ್ತು. ಇಟಲಿ ಕಡಿಮೆ ಬೆಲೆಯಲ್ಲಿ ಉಗಾಂಡದ ಕಾಫಿ ಆಮದು ಮಾಡಿಕೊಳ್ಳುತಿತ್ತು. ಈಶಾನ್ಯ ದೇಶಗಳಾದ ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾದ ಮಾರುಕಟ್ಟೆಗಳಿಗೂ ಭಾರತದ ಕಾಫಿ ರಫ್ತು ಮಾಡುವ ಯೋಜನೆಯಲ್ಲಿದ್ದಾಗ ವಿಯೆಟ್ನಾಂ ಪ್ರಬಲ ಪ್ರತಿಸ್ಪರ್ಧಿಯಾಗಿ ರೂಪುಗೊಂಡಿದೆ. ಭಾರತದ ರೊಬಸ್ಟಾ ತಳಿಯ ಕಾಫಿಯನ್ನು ಈ ಮಾರುಕಟ್ಟೆಗಳಿಗೆ ಪರಿಚಯಿಸುವ ಉದ್ದೇಶ ಹೊಂದಿದ್ದ ಕಾಫಿ ರಫ್ತುದಾರರಿಗೆ ಗಲ್ಫ್ ಸಂಘರ್ಷ ಸವಾಲಾಗಿ ಪರಿಣಮಿಸಿದೆ.
ಭಾರತದ ಗಲ್ಫ್ ಕಾಫಿ ಆಮದುದಾರರಲ್ಲಿ ಯುಎಇ ಪ್ರಮುಖ ಆಮದು ರಾಷ್ಟ್ರ, ವರ್ಷಕ್ಕೆ ಸುಮಾರು 4460 ಟನ್ ಕಾಫಿ ಖರೀದಿ ಮಾಡುತ್ತಿದ್ದ ಯುಎಇ 2000 ಟನ್ ಇನ್ಸ್ಟಂಟ್ ಕಾಫಿ ಆಮದು ಮಾಡಿಕೊಳ್ಳುತ್ತಿತ್ತು. ಭಾರತದ ಅರೇಬಿಕಾ ತಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ. ಜೋರ್ಡನ್ 3501 ಅರೇಬಿಕಾ ತಳಿಯ ಕಾಫಿ ಭಾರತದಿಂದ ಆಮದು ಮಾಡಿಕೊಂಡರೆ ಕುವೈತ್ 1645 ಟನ್ ಅರೇಬಿಕಾ ಆಮದು ಮಾಡಿಕೊಳ್ಳುತ್ತಿತ್ತು.
ಲಿಬಿಯಾ ಮತ್ತು ಈಜಿಪ್ಟ್ ಭಾರತದ ಅರೇಬಿಕಾ ಹಾಗೂ ರೊಬಸ್ಟ ಎರಡೂ ತಳಿಗಳ ಕಾಫಿ ಆಮದುಗಾರರಾಗಿದ್ದರು. ಸೌದಿ ಅರೇಬಿಯಾ ವಿಭಿನ್ನ ತಳಿಯ 1348 ಟನ್ ಕಾಫಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿತ್ತು. ಹೀಗೆ ಭಾರತದ ಕಾಫಿ ಮಾರುಕಟ್ಟೆ ವಿಶ್ವಾದ್ಯಂತ ತನ್ನ ಜಾಲವನ್ನು ವಿಸ್ತರಿಸಿಕೊಂಡಿರುವಾಗ ಸದ್ಯದ ಬಿಕ್ಕಟ್ಟು ರಫ್ತಿನ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ.
300 ಕಾಫಿ ಕಂಟೈನರ್‌ಗಳು ಗಲ್ಫ್ ಬಂದರಿನಲ್ಲಿ ನಿಂತಿವೆ. ಪ್ರತಿ ಕಂಟೈನರ್‌ಗಳಲ್ಲಿ 20 ಟನ್ ಕಾಫಿ ಸಂಗ್ರಹವಿದೆ. ಹಾರ್ಮುಜ್ ಜಲಮಾರ್ಗದ ಮೇಲಿನ ಇರಾನ್ ನಿರ್ಬಂಧ ಭಾರತದ ಕಾಫಿ ಹೊತ್ತ ಹಡಗುಗಳು ಮಾರ್ಗಮಧ್ಯೆ ಸಿಲುಕಿಕೊಂಡು ಮಾರುಕಟ್ಟೆ ತಲುಪಲು ಪರದಾಡುವ ಸ್ಥಿತಿಗೆ ಕಾರಣವಾಗಿದೆ. ತಲುಪುವ ಮಾರ್ಗ ಬದಲಾಯಿಸಿ ಖೋರ್ ಫಕ್ಕನ್, ಸೋಹರ್, ಸಲಾಲ್ಹ, ಜೆದ್ದಾಹ್ ಬಂದರುಗಳ ಸುರಕ್ಷಾ ತಾಣ ತಲುಪಿರುವ ಹಡಗುಗಳು ತಮ್ಮ ನಿಗದಿತ ಮಾರ್ಗಕ್ಕಿಂತ ಬಹುದೂರಕ್ಕೆ ಬಂದು ತಂಗಿದಂತಾಗಿದೆ.
ಕೆಲವು ವಾಣಿಜ್ಯ ಹಡಗುಗಳು ಸರಕು ಸಮೇತ ಭಾರತಕ್ಕೆ ಮರಳಿವೆ. ಮುಂಧ್ರ, ನವ ಸೇವಾ, ನವ ಮಂಗಳೂರು, ಕೊಚ್ಚಿ ಬಂದರಿಗೆ ತಿರುಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸಾವಿರಾರು ಕಿಲೋಮಿಟರ್ ದಾರಿ ಸಾಗಿ ಯಾವ ಆದಾಯವೂ ಇಲ್ಲದೆ ವ್ಯರ್ಥ ಖರ್ಚಿಗೆ ಕಾರಣವಾಗಿವೆ. ಕೇಪ್ ಆಫ್ ಗುಡ್ ಹೋಪ್ ಮಾರ್ಗವಾಗಿ ಸುತ್ತಿ ಬಳಸಿ ಸಾಗುವ ಅನಿವಾರ್ಯ ಸೃಷ್ಟಿಯಾಗಿರುವುದು ಸಾಗಾಣೆಯ ವೆಚ್ಚವನ್ನು ಅಧಿಕ ಮಾಡಿದೆ. ಅಲ್ಲದೇ ಹತ್ತು ದಿನಗಳ ವಿಳಂಬವೂ ಉಂಟಾಗಿದೆ.
ಇತ್ತ ಕಾಫಿ ವ್ಯಾಪಾರಸ್ಥರು ಖರೀದಿ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಬೆಳೆಗಾರರು ಕಾಫಿ ಮೂಟೆಗಳನ್ನು ತಮ್ಮ ಗೋಡನ್ನಿನಲ್ಲಿ ಸಂಗ್ರಹಿಸಿಟ್ಟು ಬಿಕರಿಯಾಗುವ ದಿನಗಳಿಗೆ ಕಾಯುವಂತಾಗಿದೆ. ಅಕಾಲಿಕ ಮಾಲೆಯಿಂದ ಕಾಫಿ ಹೂವುಗಳು ಉದುರಿ ಇಳುವರಿಯಲ್ಲಿ ನಷ್ಟ ಸಂಭವಿಸಿತ್ತು. ಜೊತೆಗೆ ಕಾಫಿ ಹಣ್ಣು ಕೈಗೆ ಬರುವ ಸಂದರ್ಭದಲ್ಲಿ ಸುರಿದ ಮಳೆಯಿಂದ ಕರ್ನಾಟಕದ ಚಿಕ್ಕಮಗಳೂರು, ಕೊಡಗಿನ ಕಾಫಿ ಬೆಳೆಗಾರರು ನಷ್ಟಕ್ಕೆ ಅನುಭವಿಸಿದ್ದರು. ಅಕಾಲಿಕ ಮಳೆಯಿಂದ ಒಣಹಾಕಿದ್ದ ಕಾಫಿ ಕೊಳೆತು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ಬೆಳೆಗಾರರಿಗೆ ಆನೆಗಳ ಹಾವಳಿಯೂ ಹೈರಾಣಾಗಿಸಿತ್ತು.
ಅರೇಬಿಕಾ ಕಾಫಿಯ ಬೆಲೆ ಏರಿಕೆಯಾಗಿದ್ದರೂ ಇಳುವರಿ ಕಡಿಮೆಯಾಗಿರುವುದು ಸಮಸ್ಯೆಯಾಗಿ ಪರಿಣಮಿಸಿರುವ ಸಂದರ್ಭದಲ್ಲಿ, ಗಲ್ಫ್ ರಾಷ್ಟ್ರಗಳ ಯುದ್ಧ ಹೊಸ ತಲೆನೋವಾಗಿ ಪರಿಣಮಿಸಿದೆ.




