ತಂತ್ರಜ್ಞಾನ ಲೋಕದಲ್ಲಿ ಹೊಸ ಬೆಳವಿಗೆಯೊಂದು ನಡೆದಿದೆ. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ‘ಅಂಡನ್ ಮಾರ್ಕೆಟ್’ ಎಂಬ ಕೃತಕ ಬುದ್ಧಿಮತ್ತೆ ಚಾಲಿತ ಪ್ರಯೋಗಾತ್ಮಕ ಮಳಿಗೆಯಲ್ಲಿ ಕೃತಕ ಬುದ್ಧಿಮತ್ತೆಯ (AI) ಬಾಸ್ ಮೊದಲ ಬಾರಿಗೆ ಮಾನವ ನೌಕರರೊಬ್ಬರನ್ನು ಕೆಲಸದಿಂದ ತೆಗೆದುಹಾಕಿದೆ. ‘ಲೂನಾ’ ಎಂಬ ಹೆಸರಿನ ಎಐ ಮ್ಯಾನೇಜರ್, ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ನೌಕರನು ಒಟ್ಟು 23 ಶಿಫ್ಟ್‌ಗಳ ಪೈಕಿ 17 ಶಿಫ್ಟ್‌ಗಳಲ್ಲಿ ತಡವಾಗಿ ಕೆಲಸಕ್ಕೆ ಬಂದಿದ್ದನ್ನು ಆಧರಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಬಳಿಕ ಕಂಪನಿಯ ಮಾನವ ಸಿಬ್ಬಂದಿ ಈ ಶಿಫಾರಸನ್ನು ಪರಿಶೀಲಿಸಿ, ಅಂತಿಮವಾಗಿ ಆ ನೌಕರನನ್ನು ವಜಾಗೊಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಂಡನ್ ಲ್ಯಾಬ್ಸ್, ಲೂನಾ ನೇತೃತ್ವದ ತಂಡಕ್ಕೆ ಸುಮಾರು 1,00,000 ಡಾಲರ್ ಹಣ, ಕಾರ್ಪೊರೇಟ್ ಕಾರ್ಡ್ ಹಾಗೂ ಮಳಿಗೆಯ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿತ್ತು. ಅಂಗಡಿಯ ಲೇಔಟ್, ಸರಕುಗಳ ಬೆಲೆ ನಿರ್ಧಾರ, ಬ್ರ್ಯಾಂಡಿಂಗ್ ಹಾಗೂ ಕೆಲಸಗಾರರ ನೇಮಕಾತಿ ಸೇರಿದಂತೆ ಹೆಚ್ಚಿನ ನಿರ್ಧಾರಗಳನ್ನು ಈ ಎಐ ವ್ಯವಸ್ಥೆಯೇ ನಿರ್ವಹಿಸುತ್ತಿತ್ತು.
ಆದಾಗ್ಯೂ, ಈ ವಜಾ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ನಡೆದಿಲ್ಲ. ಲೂನಾ ಕೆಲ ತಿಂಗಳ ಹಿಂದೆ ಹಾಜರಾತಿ ನಿಯಮಗಳನ್ನು ರೂಪಿಸಿತ್ತಾದರೂ, ನಂತರದ ದಿನಗಳಲ್ಲಿ ಅದನ್ನು ಮರೆತಂತೆ ಕಂಡುಬಂದಿತ್ತು. ನೌಕರನು ಸತತವಾಗಿ ತಡವಾಗಿ ಬರುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕೊನೆಗೆ ಕಂಪನಿಯ ಸಂಶೋಧಕರು ಲೂನಾಗೆ ತಾನು ಹಿಂದೆ ರೂಪಿಸಿದ್ದ ನಿಯಮಗಳನ್ನು ನೆನಪಿಸಿ ಪರಿಶೀಲಿಸಲು ಸೂಚಿಸಿದಾಗ, ಲೂನಾ ಆ ನೌಕರನನ್ನು ಕೆಲಸದಿಂದ ವಜಾಗೊಳಿಸಲು ಶಿಫಾರಸು ಮಾಡಿತು ಎಂದು ವರದಿಯಾಗಿದೆ.
ಎಐ ತಂತ್ರಜ್ಞಾನವು ಭವಿಷ್ಯದಲ್ಲಿ ಉದ್ಯೋಗ ರಂಗವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಈ ಘಟನೆ ಪ್ರಮುಖ ನಿದರ್ಶನವಾಗಿದೆ. ಎಐ ಸಿಸ್ಟಮ್‌ಗಳು ಜಟಿಲವಾದ ಉದ್ಯಮ ಕಾರ್ಯಾಚರಣೆಗಳನ್ನು ನಿರ್ವಹಿಸಬಲ್ಲವು ಎಂಬುದನ್ನು ಇದು ತೋರಿಸಿಕೊಟ್ಟಿದೆ. ಆದರೂ, ಪ್ರಸ್ತುತ ಇರುವ ಎಐ ವ್ಯವಸ್ಥೆಗಳು ನಿಯಮಗಳನ್ನು ನಿರಂತರವಾಗಿ ನೆನಪಿನಲ್ಲಿಟ್ಟುಕೊಂಡು ಜಾರಿಗೆ ತರುವಲ್ಲಿ ಇನ್ನೂ ಕೆಲವು ಮಿತಿಗಳನ್ನು ಎದುರಿಸುತ್ತಿರುವುದನ್ನು ಈ ಪ್ರಸಂಗ ಎತ್ತಿಹಿಡಿದಿದೆ.



