ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು, ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಬರಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಮಳೆ ಕೊರತೆಯಿಂದ ತೊಗರಿ, ಈರುಳ್ಳಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿದ್ದು, ಸಜ್ಜೆಯನ್ನೂ ಬೆಳೆಯದಷ್ಟು ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬೆಳೆ ನಷ್ಟ, ಸಂಕಷ್ಟ ಹಾಗೂ ಅಸಹಾಯಕತೆಯನ್ನು ನೇರವಾಗಿ ಆಲಿಸಿದ ಸಚಿವರು, ರೈತರ ಪರಿಸ್ಥಿತಿ ನೋವು ತಂದಿದೆ ಎಂದು ಹೇಳಿದರು.
“ಈ ಗಂಭೀರ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಕ್ಕೆ ತಂದು, ಸಚಿವ ಸಂಪುಟದಲ್ಲಿ ಚರ್ಚಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಭೆ ನಡೆಸಿ, ರೈತರ ಹಿತದೃಷ್ಟಿಯಿಂದ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುವುದು” ಎಂದು ಭರವಸೆ ನೀಡಿದರು.
“ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಸುಮಾರು 2.5 ಲಕ್ಷ ರೈತರು ಬೆಳೆವಿಮೆ ಮಾಡಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಬೆಳೆವಿಮೆ ರೈತರಿಗೆ ಹೆಚ್ಚಿನ ನೆರವು ನೀಡಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರು ಬೆಳೆ ವಿಮೆಯ ವ್ಯಾಪ್ತಿಗೆ ಬರುವಂತೆ ಕ್ರಮ ಕೈಗೊಳ್ಳಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | 80 ವರ್ಷಗಳ ಸ್ವಾತಂತ್ರ್ಯದ ಬಳಿಕವೂ ಅಲೆಮಾರಿಗಳ ಬದುಕಿಗೆ ಮೂಲಸೌಕರ್ಯ ಮರೀಚಿಕೆ
“ಬರಪರಿಸ್ಥಿತಿಯ ಗಂಭೀರತೆಯನ್ನು ಕೇಂದ್ರ ಸರ್ಕಾರದ ಗಮನಕ್ಕೂ ತಂದು, ಅಲ್ಲಿಂದಲೂ ಅಗತ್ಯ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರೈತರ ಬೆವರಿನಿಂದ ನಾಡಿನ ಅನ್ನದ ಬಟ್ಟಲು ತುಂಬುತ್ತದೆ. ಅವರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರೊಂದಿಗೆ ನಿಲ್ಲುವುದು ತನ್ನ ಕರ್ತವ್ಯವಾಗಿದೆ” ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಆನಂದ್ ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.




