ಯೇಮನ್‌ನ ರಾಜಧಾನಿ ಸನಾದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆದಿದೆ ಎಂದು ಹೌತಿ ಮತ್ತು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಿಂದಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುವ ಆತಂಕ ನಿರ್ಮಾಣವಾಗಿದೆ.
ಸನಾ ವಿಮಾನ ನಿಲ್ದಾಣದ ರನ್‌ವೇಗಳನ್ನು ಗುರಿಯಾಗಿಸಿ ಸೌದಿ ಅರೇಬಿಯಾ ಈ ದಾಳಿ ನಡೆಸಿದೆ ಎಂದು ಇರಾನ್ ಬೆಂಬಲಿತ ಹೌತಿ ಪಡೆಗಳ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸಾರೀ ಟೆಲಿಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ: ಬಿಕರಿಯಾಗದ ಭಾರತದ ಕಾಫಿ
“ಸೌದಿ ಪಡೆಗಳು ನಡೆಸಿರುವ ಈ ದಾಳಿಯು ಇದುವರೆಗೆ ಇದ್ದ ಪ್ರಾದೇಶಿಕ ಶಾಂತಿ ಮಾತುಕತೆ ಮತ್ತು ಕದನ ವಿರಾಮದ ಹಂತಕ್ಕೆ ಅಂತ್ಯಹಾಡಿದೆ. ಈ ಆಕ್ರಮಣಕ್ಕೆ ಸೌದಿ ಅರೇಬಿಯಾ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಕೃತ್ಯವನ್ನು ನಾವು ಸಹಿಸಲ್ಲ, ಶೀಘ್ರದಲ್ಲೇ ಪ್ರತಿಕಾರ ತೀರಿಸಿಕೊಳ್ಳಲಿದ್ದೇವೆ,” ಎಂದು ಯಾಹ್ಯಾ ಸಾರೀ ಎಚ್ಚರಿಕೆ ನೀಡಿದ್ದಾರೆ.
ದಾಳಿಯ ಬೆನ್ನಲ್ಲೇ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಹೌತಿ ಆಡಳಿತವು ಜನರಿಗೆ ಆದೇಶಿಸಿದೆ.
ಇರಾನ್‌ನಿಂದ ಹೌತಿ ನಿಯೋಗವನ್ನು ಹೊತ್ತು ತರುತ್ತಿದ್ದ ವಿಮಾನವೊಂದು ಸನಾ ನಿಲ್ದಾಣದಲ್ಲಿ ಇಳಿಯುವುದನ್ನು ತಡೆಯಲು ಈ ದಾಳಿ ನಡೆಸಲಾಗಿದೆ. ಯೇಮನ್‌ನ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಅಧಿಕೃತ ಸರ್ಕಾರವು (ಸೌದಿ ಬೆಂಬಲಿತ ಸರ್ಕಾರ) ಇರಾನ್ ವಿಮಾನ ಇಳಿಯದಂತೆ ತಡೆಯಲು ತಾನೇ ವಿಮಾನ ನಿಲ್ದಾಣದ ರನ್‌ವೇ ಮೇಲೆ ದಾಳಿ ಮಾಡಿರುವುದಾಗಿ ಹೇಳಿಕೊಂಡಿದೆ. ಆದರೆ, ಹೌತಿಗಳು ಮಾತ್ರ ಇದು ನೇರವಾಗಿ ಸೌದಿ ಅರೇಬಿಯಾ ನಡೆಸಿದ ದಾಳಿ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಕುರಿತು ಸೌದಿ ಅರೇಬಿಯಾ ಸರ್ಕಾರ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ 2022ರಿಂದ ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವೆ ಒಂದು ರೀತಿಯ ಅಲಿಖಿತ ಕದನ ವಿರಾಮವಿತ್ತು. ಸೌದಿ ಅರೇಬಿಯಾ ಯೇಮನ್ ಸಂಘರ್ಷದಿಂದ ದೂರವುಳಿಯಲು ಪ್ರಯತ್ನಿಸುತ್ತಿರುವಾಗಲೇ ಈ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಹೌತಿಗಳು ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳು, ತೈಲ ಸಂಸ್ಥೆಗಳು ಮತ್ತು ಕೆಂಪು ಸಮುದ್ರದ (Red Sea) ಜಲಮಾರ್ಗಗಳ ಮೇಲೆ ದಾಳಿ ಮಾಡುವುದಾಗಿ ಈ ಹಿಂದೆಯೇ ಎಚ್ಚರಿಸಿದ್ದರಿಂದ, ಈಗ ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಸುತ್ತಿನ ದೊಡ್ಡ ಯುದ್ಧ ಆರಂಭವಾಗುವ ಭೀತಿ ಎದುರಾಗಿದೆ.
ಸನಾ ವಿಮಾನ ನಿಲ್ದಾಣದ ಮೇಲೆ ಸೌದಿ ಅರೇಬಿಯಾ ದಾಳಿಯ ನಂತರ ಇರಾನ್‌ನ ವಿಮಾನವೊಂದು ಪಶ್ಚಿಮ ಯೆಮನ್‌ನ ಹೊಡೈದಾ ವಿಮಾನ ನಿಲ್ದಾಣಕ್ಕೆ ತೆರಳಿದೆ ಎಂದು ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.




