ಸರ್ಕಾರ ಮತ್ತು ಸಮಾಜವು ಅಲೆಮಾರಿ ಸಮುದಾಯಗಳ ಜೀವನಶೈಲಿಯನ್ನು ಗೌರವಿಸುತ್ತ, ಅವರ ಅನನ್ಯ ಸಂಸ್ಕೃತಿ ಮತ್ತು ಕೌಶಲ್ಯಗಳನ್ನು ಉಳಿಸಿಕೊಳ್ಳುವಂತೆ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ಅವರು ಮುಖ್ಯವಾಹಿನಿಯಲ್ಲಿ ಭಾಗವಹಿಸಿ, ಘನತೆಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಜತೆಗೆ ಅಲೆಮಾರಿ ಸಮುದಾಯಗಳ ಸಬಲೀಕರಣವು ನಮ್ಮ ದೇಶದ ಸಾಮಾಜಿಕ ನ್ಯಾಯದ ಪ್ರತಿಫಲನವಾಗಬೇಕು.
ಎಲೆಕ್ಷನ್ ಬಂದ ಕೂಡಲೇ ನಿಮ್ಮನಿ ಜಾಗ ಎಲ್ಲಿದೆ, ಮನಿ ಕಟ್ಟಿಸಿ ಕೊಡ್ತಿವಿ…. ಅದುನ್ನ ಕೊಡ್ತಿವಿ, ಇದನ್ನ ಕೊಡ್ತಿವಿ ಅಂತ ಹೇಳ್ತಾರ. ಆದರೆ ಏನೇನೂ ಕೊಡಿಸ್ತಿಲ್ಲ. ಓಟು ಮುಗಿದ್ಮ್ಯಾಗ ನಮ್ಮನ್ನ ದರ್ಕಾರ(ಕಾಳಜಿ) ಮಾಡಲ್ಲ. ಮತ್ತ ನಾವು ಇರೋದೆಲ್ರಿ. ನಾವು ಬಡಬಗ್ರು, ದುಡಿದು ತಿನ್ನೋರು, ಏನೂ ಕೊಟ್ಟಿಲ್ಲ. ಎಂತಂತೋರ್ಗೆ ಮನಿ ಕಟ್ಟಿಸಿಕೊಡ್ತಾರ, ನಮ್ಗ ಮನಿ ಕೊಟ್ಟಿಲ್ಲ. ನಾವ್ಯಾಕ ವೋಟ್ ಹಾಕ್ಬೇಕು ಅವರಿಗೆ ಎಂಬುದು ಗದಗ ಜಿಲ್ಲೆಯ ಚೆನ್ನದಾಸ ಅಲೆಮಾರಿ ಸಮುದಾಯವರ ಒಡಲಾಳದ ಧ್ವನಿ….
“ಮಳಿ ಬಂದ ಟೈಮಿಗೆ ಮಕ್ಳು ಮರಿ ಕಟ್ಗೊಂಡು ಬಸ್ಟ್ಯಾಂಡಿಗೆ ಹೋದ್ರ, ಇಲ್ಲಿ ಯಾಕ್ ಬರ್ತಿರಿ ಅಂತ ನಮ್ಮ ಓಡಿಸಿದರು…. ಅಲ್ಲಿ ಮಲಗಲು ಬಿಡಲಿಲ್ಲ. ನಿಗಿಸಿಕೊಳ್ಳಿಲಲ್ಲ. ಮಳಿಯಾಗ ಮಕ್ಳನ್ನ ತೋಯಿಸಿಗೊಂಡು ಶಾಲಿ ಗುಡಿಗೆ ಬಂದ್ವಿ. ಪುಣ್ಯದೋರು ಇರಾಕ ಬಿಟ್ರು. ಎರಡ್ಮೂರು ದಿನ ಆದ್ಮಾಲೆ ಅವರು ನಮ್ಮನ್ನ ಕಳಿಸಿದ್ರು. ಹಿಂಗ ಎಷ್ಟಂತ ಅಡ್ಯಾಡಬೇಕ್ರಿ ಹೇಳ್ರಿ” ಎಂಬುದು ಚಂದವ್ವ ಚೆನ್ನದಾಸರ ಅವರ ಸಂಕಟದ ಪ್ರಶ್ನೆಯಾಗಿದೆ.
ಈ ಅಲೆಮಾರಿ ಸಮುದಾಯಗಳಿಗೆ ಒಂದು ನಿರ್ದಿಷ್ಟ ನೆಲೆ ಇಲ್ಲದೆ, ಹೊಟ್ಟೆಪಾಡಿಗಾಗಿ ಸುಗ್ಗಿಕಾಲದಲ್ಲಿ ಸಮೃದ್ಧವಾಗಿ ಮಳೆ, ಬೆಳೆಯಾಗುವ ಕಡೆ ಗುಳೆ ಹೋದರೆ, ಇನ್ನುಳಿದ ಸಂದರ್ಭಗಳಲ್ಲಿ, ಎಲ್ಲಿ ಜಾತ್ರೆಗಳು, ಹಬ್ಬ-ಹರಿದಿನಗಳು ನಡೆಯುತ್ತವೋ ಅತ್ತ ಕಡೆ ಹೋಗಿ ಅಲ್ಲಿನ ದೇವಸ್ಥಾನಗಳ ಬಳಿಯೋ, ಊರಿನ ಹೊರಗೋ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪುಟ್ಟ ಪುಟ್ಟ ಗುಡಿಸಲುಗಳನ್ನು ಹಾಕಿಕೊಂಡು ಆಟಿಕೆ ಸಾಮಾನುಗಳನ್ನು, ಮಾರಾಟ ಮಾಡುವರು.. ಮಹಿಳೆಯರು ಹಳ್ಳಿ ಹಳ್ಳಿಗೆ ಹೋಗಿ ತಲೆಗೂದಲನ್ನು ಹೆಕ್ಕಿ, ಪಿನ್ನ, ಸ್ಟೇಷನರಿ ಸಾಮಾನುಗಳನ್ನು ಮಾರಾಟ ಮಾಡುವರು…. ನಗರದ ಗಟಾರ, ಚರಂಡಿ, ರಸ್ತೆ ಬದಿಯಲ್ಲಿ ಪ್ಲ್ಯಾಸ್ಟಿಕ್ ಬಾಟಲಿಗಳನ್ನು ಆಯ್ದು ಬದುಕುತ್ತಿದ್ದಾರೆ. ಮೂಲಸೌಕರ್ಯಗಳು ದೊರೆಯದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳ ಜತೆಗೆ ಅಧಿಕಾರಿಗಳೋ ಅಥವಾ ಖಾಸಗಿ ಭೂ ಮಾಲಿಕರೋ, ʼಇದು ನಿಮ್ದಲ್ಲ ಜಾಗ ಇಲ್ಲಿರಬ್ಯಾಡ್ರಿ, ಜಾಗ ಖಾಲಿ ಮಾಡಿʼ ಎಂದು ಹೇಳಿದಾಗ ಅಲೆಮಾರಿ ಸಮುದಾಯದವರು ದಿಕ್ಕೇ ತೋಚದೆ ದಂಗಾಗುತ್ತಾರೆ…

ಗದಗ ಜಿಲ್ಲೆಯ ರೋಣ ಪಟ್ಟಣದ ಕಲ್ಯಾಣ ನಗರ ಕೋರ್ಟ್ ಎದುರಿನ ರಸ್ತೆ, ಸಿನಿಮಾ ಮಂದಿರ, ಕಲ್ಯಾಣ ಮಂಟಪ ದಾಟಿ, ಎಡಕ್ಕೆ ತಿರುಗಿ ಸ್ವಲ್ಪ ನಡೆದು ಹೋಗಿ ಎಡಕ್ಕೆ ತಿರುಗಿ ನೋಡಿದರೆ ಸುತ್ತಲೂ ಕಾಂಕ್ರೀಟ್ ಮನೆಗಳು, ಸುಣ್ಣ ಬಣ್ಣ ಹಚ್ಚಿದ ಎರಡ್ಮೂರು ಅಂತಸ್ಥಿನ ಮನೆಗಳು, ಇವುಗಳ ನಡುವೆ ಯಾರದೋ ಜಾಗದಲ್ಲಿ ನಿರ್ಮಾಣವಾಗಿರುವ ಸಣ್ಣ ಸಣ್ಣ ಗುಡಿಸಲುಗಳು ಅಲೆಮಾರಿ ಚೆನ್ನದಾಸರ ಬದುಕಿನ ಕಥೆ-ವ್ಯಥೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತವೆ.
ಅವರೆಲ್ಲರೂ ವಾಸಿಸುತ್ತಿರುವ ಗುಡಿಸಲುಗಳ ಸುತ್ತ ಕಣ್ಣಾಡಿಸಿದರೆ, ಹರಿದು ಹೋದ ಪ್ಲ್ಯಾಸ್ಟಿಕ್ ಹಾಳೆ ಹೊದಿಕೆಯ ಛಾವಣಿ, ಪಕ್ಕದಲ್ಲಿ ಕೊಳಚೆ ನೀರು, ವಿಷಪೂರಿತ ಹುಳ ಹುಪ್ಪಡಿ, ತೂತು ಬಿದ್ದ ಪಾತ್ರೆ, ಹರಿದು ಹೋದ ಬಟ್ಟೆ, ಮಾರಾಟಕ್ಕೆ ತಂದ ಪ್ಲ್ಯಾಸ್ಟಿಕ್‌ನಲ್ಲಿ ತುಂಬಿದ ಬಾಟಲಿಗಳು, ಗುಡಿಸಲುಗಳ ಬಾಗಿಲುಗಳಲ್ಲಿ ಇಣುಕಿದರೆ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಜೀವಗಳು ಕಂಡುಬರುತ್ತವೆ. ಅಂಗಳದಲ್ಲಿ ತಲೆಗೂದಲು ಗೆದರಿಕೊಂಡು, ಮೈಯಲ್ಲಿ ಬಟ್ಟೆ ಇಲ್ಲದೆ, ಮಣ್ಣ ಮೆತ್ತಿಕೊಂಡು, ಅವ್ವನ ಅಪ್ಪನ ಬರುವಿಕೆಯನ್ನೆ ನೋಡುತ್ತ, ಅಳುತ್ತ, ದುಃಖದ ಮಡುವಿನಲ್ಲಿ ಕಾಯುತ್ತಿರುವ ಸಣ್ಣ ಸಣ್ಣ ಮಕ್ಕಳ ದೃಶ್ಯಗಳು ಅಲೆಮಾರಿಗಳ ಬದುಕಿನ ಚಿತ್ರಣದ ತಲ್ಲಣಗಳನ್ನು ಒಂದೊಂದಾಗಿ ಕಾಣಬಹುದು.

ಈ ಅಲೆಮಾರಿ ಸಮುದಾಯದ ಚೆನ್ನದಾಸ ಕುಟುಂಬಗಳು ರೋಣ ಪಟ್ಟಣದಲ್ಲಿ ಸುಮಾರು 30-40 ವರ್ಷಗಳಿಂದ ಸ್ವಂತ ಜಾಗವಿಲ್ಲದೇ ನಗರದಲ್ಲಿ ಯಾರದೋ ಜಾಗದಲ್ಲಿ ಅಲ್ಲೊಂದಿಷ್ಟು ವರ್ಷ, ಒಕ್ಕಲೆಬ್ಬಿಸಿದರೆ ಮತ್ಯಾರದೋ ಜಾಗದಲ್ಲಿ ಮತ್ತೊಂದಿಷ್ಟು ವರ್ಷ ಬದುಕು ನೂಕುತ್ತಿರುವ ಇವರ ಗುಡಿಸಲುಗಳಿಗೆ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿಯೇ ಬದುಕುವಂತಾಗಿದೆ. ಜತೆಗೆ ಯಾವುದೇ ಮೂಲಸೌಕರ್ಯಗಳಿಲ್ಲದೇ ವಂಚಿತರಾಗಿದ್ದಾರೆ.
ಹಳೇ ಸೀರೆಗಳನ್ನು ಸುತ್ತಲೂ ಕಟ್ಟಿಕೊಂಡು ಬದುಕುವ ಇವರ ಬದುಕು, ಮಳೆಗಾಲದಲ್ಲಿ ಬೀದಿಗೆ ಬೀಳುತ್ತದೆ. ಆಗ ಮಕ್ಕಳು ಮರಿ ಕಟ್ಟಿಕೊಂಡು, ಗುಡಿ-ಗುಂಡಾರಗಳಲ್ಲಿ ವಾಸಿಸುವ ಪರಿಸ್ಥಿತಿ ಅನಿವಾರ್ಯವಾದರೂ ಇಲ್ಲಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಜಾಣ ಕುರುಡರಂತೆ ಕಂಡೂ ಕಂಡರಿಯದಂತೆ ಸುಮ್ಮನಿರುವರು….
ವೋಟರ್ ಐಡಿ, ಆಧಾರ್ ಇದ್ದರೂ ಇವರಿಗೆ ಸ್ವಂತ ಜಾಗವಿಲ್ಲ:
ಈ ಅಲೆಮಾರಿ ಸಮುದಾಯದ ಕುಟುಂಬಗಳಲ್ಲಿ ವೋಟರ್ ಐಡಿ, ಆಧಾರ್ ಕಾರ್ಡ್‌ಗಳು ಇದ್ದರೂ ಕೂಡ ಸರ್ಕಾರದಿಂದ ಜಾಗ ಸಿಕ್ಕಿಲ್ಲ. ಮನೆಗಾಗಿ ತಾಲೂಕು ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗೆ, ಶಾಸಕರ ಮನೆಗೆ ಹೋಗಿ ಮನವಿ ಕೊಟ್ಟು, ʼನಮಗೆ ಮನಿಯಿಲ್ಲ, ಮನಿ ಕೊಡ್ರಿ ಅಂತ ಮನವಿ ಮಾಡಿಕೊಂಡರೂ ಕೂಡ ಇವತ್ತಿಗೂ ಮನಿ ಕೊಟ್ಟಿಲ್ಲ, ಅದ್ರ ಬಗ್ಗೆ ಚಕಾರ ಎತ್ತಿಲ್ಲ” ಎಂದು ಚೆನ್ನದಾಸ ಸಮುದಾಯದ ಕುಟುಂಬಗಳು ಅಳಲನ್ನು ತೋಡಿಕೊಳ್ಳುತ್ತವೆ.
ಚೆನ್ನದಾಸರ ಮಕ್ಕಳು ಶಿಕ್ಷಣದಿಂದ ವಂಚಿತ
ಚೆನ್ನದಾಸ ಕುಟುಂಬಗಳು ಶಿಕ್ಷಣದಿಂದ ವಂಚಿತರಾಗಿದ್ದು, ʼತಮಗಾದ ವಂಚನೆ ಮಕ್ಕಳಿಗೂ ಆಗಬಾರದು. ಈ ಅಲೆಮಾರಿ ಬದುಕು ನಮಗಷ್ಟೇ ಇರಲಿ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ಚೆನ್ನಾಗಿ ಓದಿಸಬೇಕು ಅಂದುಕೊಂಡರೆ, ಶನಿ ಬೆನ್ನಿಗೆ ಹತ್ತಿದಂಗ ಬಡತನ ಬೆನ್ನತ್ತಿರುವುದರಿಂದ, ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಮತ್ತೆ ಮೂಲ ಕಸುಬಿಗೆ ಮರಳುವುದು ಅನಿವಾರ್ಯವಾಗುತ್ತದೆ. ಇದರಿಂದಾಗಿ ಸರ್ಕಾರದಿಂದ ಯಾವುದೇ ರೀತಿಯ ಸವಲತ್ತುಗಳಿಲ್ಲದೇ ಮಕ್ಕಳು ಶಿಕ್ಷಣದಿಂದ ದೂರಾಗುತ್ತಿದ್ದಾರೆʼ ಎಂಬುದು ಅಲೆಮಾರಿಗಳ ಅಳಲಾಗಿದೆ.

ಈ ಕುರಿತು ಈ ದಿನ.ಕಾಮ್ ಜತೆಗೆ ಚಂದಪ್ಪ ಚನ್ನದಾಸರ ಮಾತನಾಡಿ, “ಮೂವತ್ತು ನಲವತ್ತು ವರ್ಷಗಳಿಂದ ತಂಬೂರಿ ಬಾರಿಸುತ್ತ ರೋಣದಲ್ಲಿಯೇ ಬದುಕುತ್ತಿದ್ದೀವಿ. ನಮ್ಮ ಪರಿಸ್ಥಿತಿ ಗೌಡ್ರಿಗೆ, ಊರ ಹಿರಿಯರಿಗೆ, ಅಧ್ಯಕ್ಷರಿಗೆ, ಅಧಿಕಾರಿಗಳಿಗೆ ಎಲ್ಲರಿಗೂ ಗೊತ್ತೈತಿ. ಆದ್ರೂ ನಮ್ಮ ಬಗ್ಗೆ ದರ್ಕಾರ ಇಲ್ಲ. ನಾವು ವಾಸವಿರುವ ಜಾಗದ ಮಂದಿ ಬಾಡಿಗೆ ಕೇಳಾಕ ಹತ್ತಿದ್ದಾರ್ರಿ, ಹೊಟ್ಟಿ ಪಾಡು, ಮಕ್ಕಳನ್ನ ಸಾಕೂದೇ ಕಷ್ಟ ಆಗುವಾಗ ಬಾಡಿಗೆ ಎಲ್ಲಿಂದ ಕೊಡ್ಬೇಕ್ರಿ. ಮಕ್ಕಳಿಗೆ ಆಧಾರ ಇಲ್ಲದಂಗ ಆಗೈತಿ. ಹಾಗಾಗಿ ನಮ್ಮ ಮಕ್ಕಳಿಗೆ ನಮಗೆ ಇರಾಕ ಒಂದು ಸ್ವಂತ ಮನಿ ಆದ್ರ ಮಕ್ಕಳು ಮರಿ ಬದಕ್ತಾವ್ರಿ. ನಮಗ ಒಂದು ಸ್ವಂತ ಜಾಗ ಮಾಡಿಕೊಡ್ರಿ ಇರಾಕ” ಎಂದು ಅಳಲು ತೋಡಿಕೊಂಡರು.
ಡಿಎಸ್ಎಸ್ ತಾಲೂಕು ಸಂಚಾಲಕ ಹನಮಂತ ಚಲವಾದಿ ಮಾತನಾಡಿ, “ಅಲೆಮಾರಿ ಸಮುದಾಯದ ಚೆನ್ನದಾಸ ಕುಟುಂಬಗಳು, ಮಳೆ, ಗಾಳಿಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳುತ್ತಾರೆ. ಅಲ್ಲಿಂದ ಜಾಗ ಖಾಲಿ ಮಾಡ್ರಿ ಅಂದ್ರ ಖಾಲಿ ಮಾಡ್ಬೇಕು. ಹೀಗೆ ಹೋಗೋ ಹೋಗುವ ಕಡೆಗಳಲ್ಲೆಲ್ಲ, ಸಾಕಷ್ಟು ಹಣ ಕಳೆದುಕೊಳ್ಳುವಂತಾಗಿದೆ. ಹೀಗೇ ಆದರೆ ಅವರ ಕುಟುಂಬ, ಮಕ್ಕಳ ಶಿಕ್ಷಣದ ಹೊರೆಯನ್ನು ಯಾವ ರೀತಿ ನೀಗಿಸುತ್ತಾರೆ. ಎಸಿಯಲ್ಲಿ ಕುಳಿತಿರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇವರ ಸಮಸ್ಯೆ ಅರ್ಥವಾಗುವುದಿಲ್ಲ. ಚುನಾವಣೆ ಬಂದಾಗ ವೋಟಿಗೋಸ್ಕರ ಇಲ್ಲಿಗೆ ಬರ್ತಾರೆ, ನಿಮಗ ಜಾಗ ಮನಿ ಕೊಡಿಸ್ತೀವಿ ವೋಟ್ ಹಾಕಿ ಅಂತಾರೆ. ಗೆದ್ದ ನಂತರವೂ ಅವರ ಕಷ್ಟ ನಷ್ಟ, ಸಮಸ್ಯೆಗಳನ್ನು ಆಲಿಸಬೇಕಲ್ಲವೇ? ದಯವಿಟ್ಟು ಚೆನ್ನದಾಸ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಶಾಶ್ವತ ನೆಲೆಯನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ಏಳಿಗೆಗಾಗಿ ಇರುವ ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಸಮುದಾಯಗಳ ನಿಗಮಗಳು ಇದ್ದೂ ಇಲ್ಲದಂತಾಗಿವೆ. ಈ ಇಲಾಖೆಗಳು ಇಂತಹ ಕುಟುಂಬಗಳ ಬಗ್ಗೆ ಗಮನಹರಿಸದಿರುವುದು, ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು, ಅಧಿಕಾರಿ ವರ್ಗದವರು ಈ ಸಮುದಾಯಗಳ ಸಂಕಷ್ಟಗಳನ್ನು ನೋಡಿದರೂ ಕೂಡ ಅವರ ಕುರಿತು ಒಂದೇ ಒಂದು ಸೊಲ್ಲು ಎತ್ತದಿರುವುದು ದುರಂತವೇ ಸರಿ.
ಇಂತಹ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಸರ್ಕಾರ ಶಾಶ್ವತ ಪರಿಹಾರಗಳನ್ನು ನೀಡಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಮುನ್ನಲೆಗೆ ತರುವ ಪ್ರಯತ್ನ ಮಾಡಿ, ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ದಾರಿ ಮಾಡಬೇಕಿದೆ.
ಅಲೆಮಾರಿ ಸಮುದಾಯಗಳು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದರೂ, ಸ್ಥಿರ ನೆಲೆಯಿಲ್ಲದೆ, ಮೂಲ ಸೌಕರ್ಯಗಳಿಂದ ವಂಚಿತರಾಗಿ, ನಿತ್ಯದ ಬದುಕಿನ ಹೋರಾಟದಲ್ಲಿ ತೊಳಲಾಡುತ್ತಿರುವ ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದೆ. ಸುಗ್ಗಿ, ಜಾತ್ರೆ, ಹಬ್ಬಗಳ ಅವಲಂಬನೆಯಲ್ಲಿ ಜೀವಿಸುವ ಈ ಸಮುದಾಯಗಳು ಆಧುನಿಕತೆಯ ಅಲೆಗಳಲ್ಲಿ ತಮ್ಮ ಸಾಂಪ್ರದಾಯಿಕ ಜೀವನ ವಿಧಾನವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ಲ್ಯಾಸ್ಟಿಕ್ ಆಯ್ವೆ, ತಲೆಗೂದಲು ಹೆಕ್ಕುವಿಕೆ, ಚಿಕ್ಕ ಚಿಕ್ಕ ವ್ಯಾಪಾರಗಳಂತಹ ಅಸಂಘಟಿತ ಕೆಲಸಗಳಲ್ಲಿ ತೊಡಗಿ ಬದುಕುತ್ತಿರುವ ಅವರಿಗೆ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸಾಮಾಜಿಕ ಭದ್ರತೆಯಂತಹ ಮೂಲಭೂತ ಹಕ್ಕುಗಳು ಇನ್ನೂ ದೂರವಾಗಿಯೇ ಉಳಿದಿವೆ.
ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸುರಕ್ಷತೆ ಕೇವಲ ರಾಜಕೀಯ ಭಾಷಣದ ಸರಕಾಗದಿರಲಿ
ಅಧಿಕಾರಿಗಳು ಮತ್ತು ಖಾಸಗಿ ಭೂಮಾಲೀಕರ ಒತ್ತಾಯದಿಂದಾಗಿ ಅವರು ಅನಿರೀಕ್ಷಿತವಾಗಿ ಜಾಗ ಖಾಲಿ ಮಾಡಬೇಕಾದ ಸನ್ನಿವೇಶಗಳು ಚೆನ್ನದಾಸರ ಅಲೆಮಾರಿಗಳ ಮಾನವೀಯ ಅಸ್ತಿತ್ವಕ್ಕೆ ಬೆದರಿಕೆಯಾಗುತ್ತಿವೆ. ಇಂತಹ ಸಮುದಾಯಗಳನ್ನು ಕೇವಲ ʼಅಲೆಮಾರಿಗಳುʼ ಎಂದು ಗುರುತಿಸಿ ನಿರ್ಲಕ್ಷಿಸುವ ಬದಲು, ಅವರಿಗೆ ಸೂಕ್ತವಾದ ಪುನರ್ವಸತಿ, ವ್ಯಾಪಾರ-ವ್ಯವಹಾರಕ್ಕೆ ಸಹಾಯ, ಮಕ್ಕಳ ಶಿಕ್ಷಣಕ್ಕೆ ವಿಶೇಷ ಯೋಜನೆಗಳನ್ನು ಒದಗಿಸಿ ಸಾಮಾಜಿಕವಾಗಿ ಒಳಗೊಳ್ಳುವಂತೆ ಮಾಡುವ ಅಗತ್ಯವಿದೆ.
ಸರ್ಕಾರ ಮತ್ತು ಸಮಾಜವು ಅಲೆಮಾರಿ ಸಮುದಾಯಗಳ ಜೀವನಶೈಲಿಯನ್ನು ಗೌರವಿಸುತ್ತ, ಅವರ ಅನನ್ಯ ಸಂಸ್ಕೃತಿ ಮತ್ತು ಕೌಶಲ್ಯಗಳನ್ನು ಉಳಿಸಿಕೊಳ್ಳುವಂತೆ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ಅವರು ಮುಖ್ಯವಾಹಿನಿಯಲ್ಲಿ ಭಾಗವಹಿಸಿ, ಘನತೆಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಜತೆಗೆ ಅಲೆಮಾರಿ ಸಮುದಾಯಗಳ ಸಬಲೀಕರಣವು ನಮ್ಮ ದೇಶದ ಸಾಮಾಜಿಕ ನ್ಯಾಯದ ಪ್ರತಿಫಲನವಾಗಬೇಕು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



