ಅಮೆರಿಕ ಹಾಗೂ ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಹದಗೆಟ್ಟಿದ್ದು, ಉಭಯ ದೇಶಗಳು ಸತತ ಎರಡನೇ ದಿನವೂ ದಾಳಿ-ಪ್ರತಿದಾಳಿ ಮುಂದುವರಿಸಿವೆ. “ಅಮೆರಿಕವು ಇಂದು ರಾತ್ರಿ ಇರಾನ್ ಮೇಲೆ ‘ಅತ್ಯಂತ ತೀವ್ರವಾದ’ ದಾಳಿ ನಡೆಸಲಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆದರೆ, ಇದೇ ವೇಳೆ ಇರಾನ್‌ನ ನಾಗರಿಕ ಮೂಲಸೌಕರ್ಯಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದೂ ಹೇಳುವ ಮೂಲಕ ಟ್ರಂಪ್ ದ್ವಂದ್ವ ನಿಲುವು ಪ್ರದರ್ಶಿಸಿದ್ದಾರೆ.
ಇಂದು ಈ ಕುರಿತು ಮಾತನಾಡಿರುವ ಟ್ರಂಪ್, “ನಾವು ಇರಾನ್ ಮೇಲೆ ಇಂದು ರಾತ್ರಿ ಅತ್ಯಂತ ಪ್ರಬಲ ದಾಳಿ ನಡೆಸಲಿದ್ದೇವೆ. ಅಲ್ಲದೆ, ಶೀಘ್ರದಲ್ಲೇ ಆ ಮಧ್ಯಪ್ರಾಚ್ಯ ರಾಷ್ಟ್ರದ ತೈಲ ಮತ್ತು ಅನಿಲ ಮೂಲಸೌಕರ್ಯಗಳು ಹಾಗೂ ಮಾರುಕಟ್ಟೆಯನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ. ವೆನೆಜುವೆಲಾದಲ್ಲಿ ಮಾಡಿದಂತೆಯೇ, ‘ಖಾರ್ಗ್ ದ್ವೀಪ’ ಹಾಗೂ ಇತರ ಪ್ರಮುಖ ತೈಲ ನೆಲೆಗಳ ಸಂಪೂರ್ಣ ನಿಯಂತ್ರಣವನ್ನು ನಾವು ಸಾಧಿಸುತ್ತೇವೆ. ಇದು ಅಮೆರಿಕ ಹಾಗೂ ವೆನೆಜುವೆಲಾ ಎರಡಕ್ಕೂ ಹೇಗೆ ಅದ್ಭುತವಾಗಿ ಕೆಲಸ ಮಾಡಿದೆಯೋ, ಹಾಗೆಯೇ ಇಲ್ಲೂ ಆಗಲಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ 2026: ಜೂನ್ 11ರಿಂದ ದಿಗ್ಗಜರ ಹಣಾಹಣಿಯ ಜಾಗತಿಕ ಹಬ್ಬ
‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ವಿದ್ಯುತ್ ಸ್ಥಾವರಗಳಂತಹ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಲು ತಮಗೆ ಇಷ್ಟವಿಲ್ಲ. ಏಕೆಂದರೆ, “ಹಾಗೆ ಮಾಡಿದರೆ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ” ಎಂದಿದ್ದಾರೆ. ಅಮೆರಿಕದ ಕೇಂದ್ರ ಕಮಾಂಡ್ (CENTCOM) ಮಾಹಿತಿ ಪ್ರಕಾರ, ಅಮೆರಿಕದ ಪಡೆಗಳು ಈಗಾಗಲೇ ಇರಾನ್‌ನ ಕಣ್ಗಾವಲು, ಸಂವಹನ ಮತ್ತು ವಾಯು ರಕ್ಷಣಾ ನೆಲೆಗಳ ಮೇಲೆ ದಾಳಿ ಮಾಡಿವೆ. ಇದಕ್ಕೆ ಪ್ರತಿಯಾಗಿ ಇರಾನ್‌ನ ‘ರೆವಲ್ಯೂಷನರಿ ಗಾರ್ಡ್ಸ್’, ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿದೆ ಎಂದು ಗಲ್ಫ್ ರಾಷ್ಟ್ರಗಳು ವರದಿ ಮಾಡಿವೆ.
ಕಳೆದ ಫೆಬ್ರವರಿಯಲ್ಲಿ ಶುರುವಾಗಿದ್ದ ಈ ಯುದ್ಧವು, ಏಪ್ರಿಲ್‌ನಲ್ಲಿ ಮಾಡಿಕೊಳ್ಳಲಾಗಿದ್ದ ತಾತ್ಕಾಲಿಕ ಕದನ ವಿರಾಮದ ಮೂಲಕ ಕೊಂಚ ತಣ್ಣಗಾಗಿತ್ತು. ಆದರೆ, ಇದೀಗ ಉಭಯ ದೇಶಗಳ ನಡುವೆ ಮತ್ತೆ ಕಾಳಗ ಭುಗಿಲೆದ್ದಿದ್ದು, ಇರಾನ್ ಮತ್ತೊಮ್ಮೆ ‘ಹಾರ್ಮುಜ್ ಜಲಸಂಧಿ’ಯನ್ನು ಮುಚ್ಚಿದೆ. “ಇಂದು ರಾತ್ರಿ ಇನ್ನಷ್ಟು ದೊಡ್ಡದಾದ ಹಾಗೂ ಹೆಚ್ಚು ಶಕ್ತಿಶಾಲಿ ಬಾಂಬ್ ದಾಳಿಗಳು ನಡೆಯಲಿವೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಹೀಗೆ ನಿರಂತರ ದಾಳಿಯ ಯೋಜನೆಗಳಿದ್ದರೂ, ಪ್ರಾಥಮಿಕ ಶಾಂತಿ ಒಪ್ಪಂದವೊಂದಕ್ಕೆ ಬರಲು ಅಮೆರಿಕವು ಇರಾನ್ ಜೊತೆಗಿನ ಪರೋಕ್ಷ ಮಾತುಕತೆಯನ್ನು ಚುರುಕುಗೊಳಿಸಿದೆ ಎಂದು ಪಾಶ್ಚಿಮಾತ್ಯ ಅಧಿಕಾರಿಗಳು ತಿಳಿಸಿದ್ದಾರೆ.





