ಬಹ್ರೇನ್ ದೇಶವನ್ನು ಗುರಿಯಾಗಿಸಿಕೊಂಡು 550ಕ್ಕೂ ಹೆಚ್ಚು ಇರಾನ್ ದೇಶದ ದಾಳಿಗಳನ್ನು ಪ್ರತಿರೋಧವಾಗಿ ತಡೆದು ಹೊಡೆದುರುಳಿಸಲಾಗಿದೆ ಎಂದು ಬಹ್ರೇನ್ ಸೇನೆ ತಿಳಿಸಿರುವುದಾಗಿ Aljazeera ವರದಿ ಮಾಡಿದೆ.
174 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 385 ಡೋನ್ ಗಳನ್ನು ಕಳೆದೊಂದು ತಿಂಗಳಲ್ಲಿ ತಡೆಹಿಡಿದು ನಾಶಮಾಡಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ. ನಾಗರಿಕ ಮೂಲಸೌಕರ್ಯ ಹಾಗೂ ಖಾಸಗಿ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಈ ದಾಳಿಗಳನ್ನು ಬಹ್ರೇನ್ ಸೇನೆ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಬಕ್ರೇನ್, ಡೋನ್ ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಬಳಕೆ “ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಯುಎನ್ ಚಾರ್ಟರ್ ನ ಸ್ಪಷ್ಟ ಉಲ್ಲಂಘನೆ” ಆಗಿದ್ದು, “ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆ” ಎಂದು ಹೇಳಿದೆ.
ಇದನ್ನೂ ಓದಿ : ಬಂಗಾಳ ಚುನಾವಣೆ | ಸಂದೇಶ್‌ಖಾಲಿ, ಆರ್.ಜಿ ಕರ್ ಘಟನೆಗಳಿಗೆ ಮರುಜೀವ ತುಂಬಲು BJP ಕುತಂತ್ರ!
ಬಹ್ರೇನ್‌ನಲ್ಲಿ ಶನಿವಾರ(ಮಾ.28) ಮುಂಜಾನೆ ಎರಡು ಬಾರಿ ಎಚ್ಚರಿಕಾ ಸೈರನ್ ಗಳನ್ನು ಮೊಳಗಿಸಿ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಆಂತರಿಕ ಸಚಿವಾಲಯ ಮನವಿ ಮಾಡಿದೆ. ಮಾತ್ರವಲ್ಲದೆ, ಇರಾನ್ ನಡೆಸಿದ ಹಿಂದಿನ ದಾಳಿಯ ಪರಿಣಾಮವಾಗಿ ಉಂಟಾದ ಅಗ್ನಿ ಅವಘಡವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.




