ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ರಾಜ್ಯವು ಚುನಾವಣಾ ಕಣವಾಗಿ ಬದಲಾಗಿದ್ದು, ರಾಜಕೀಯ ಪಕ್ಷಗಳ ಹಣಾಹಣಿ ನಡೆಯುತ್ತಿದೆ. ಬಂಗಾಳದ ಅಧಿಕಾರ ಚುಕ್ಕಾಣಿಯನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ತಂತ್ರ-ಕುತಂತ್ರಗಳನ್ನು ಹೆಣೆಯುತ್ತಿದೆ. ರಾಜ್ಯ ರಾಜಕೀಯದಲ್ಲಿ ಹೆಚ್ಚು ಸದ್ದು ಮಾಡಿದ್ದ ಸಂದೇಶ್‌ಖಾಲಿ ದೌರ್ಜನ್ಯ ಪ್ರಕರಣ ಮತ್ತು ಆರ್‌ಜಿ ಕರ್ ಕಾಲೇಜಿನ ಅತ್ಯಾಚಾರ ಪ್ರಕರಣಗಳಿಗೆ ಮರುಜೀವ ತುಂಬಿ, ಎರಡೂ ವಿಚಾರಗಳನ್ನು ಚುನಾವಣಾ ವಸ್ತುವಾಗಿಸಲು ಹವಣಿಸುತ್ತಿದೆ.
ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸುಂದರಬನ ಪ್ರದೇಶದ ಭಾಗವಾದ ಸಂದೇಶ್‌ಖಾಲಿ, ಕೋಲ್ಕತ್ತಾದಿಂದ ಭೌಗೋಳಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ದೂರವಿದೆ. ಇದು ಬಡತನ, ದುರ್ಬಲ ಮೂಲಸೌಕರ್ಯ ಹಾಗೂ ದೀರ್ಘಕಾಲದ ಹಿಂದುಳಿದಿರುವಿಕೆಯಿಂದಲೇ ಗುರುತಿಸಲ್ಪಟ್ಟಿರುವ ಪ್ರದೇಶವೂ ಕೂಡ. ಆದರೂ, ಇತ್ತೀಚಿನ ವರ್ಷಗಳಲ್ಲಿ, ಸಂದೇಶ್‌ಖಾಲಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯವಾಗಿ ಸಂವೇದನಾಶೀಲ ವಿಷಯವಾಗಿ ಮಾರ್ಪಟ್ಟಿದೆ.
ಸಂದೇಶ್‌ಖಾಲಿಯಲ್ಲಿ ಅಲ್ಲಿನ ಟಿಎಂಸಿಯ ಪ್ರಭಾವಿ ನಾಯಕನಾಗಿದ್ದ ಶೇಖ್ ಷಹಜಹಾನ್ ವಿರುದ್ಧ 2021ರ ಚುನಾವಣೆಯ ಸಮಯದಲ್ಲಿ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆತ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಮತ್ತು ಮಹಿಳೆಯರ ಮೇಲೆ ತೀವ್ರ ದೌರ್ಜನ್ಯ ಎಸಗುತ್ತಿದ್ದ ಎಂಬ ಆರೋಪಗಳು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದವು. ಸ್ಥಳೀಯ ಬಡ ಮಹಿಳೆಯರು ನಡೆಸಿದ ಸುದೀರ್ಘ ಪ್ರತಿಭಟನೆಗಳ ನಂತರ ಚುನಾವಣೆಯ ಸಮಯದಲ್ಲಿಯೇ ಆತನನ್ನು ಬಂಧಿಸಲಾಯಿತು. ಆತ ಈಗಲೂ ಜೈಲಿನಲ್ಲಿಯೇ ಇದ್ದಾನೆ. ಆದಾಗ್ಯೂ, ಆ ವರ್ಷದ ಚುನಾವಣಾ ಫಲಿತಾಂಶದ ಮೇಲೆ ಈ ಪ್ರಕರಣವು ಹೆಚ್ಚಿನ ಪರಿಣಾಮ ಬೀರಲಿಲ್ಲ. ಟಿಎಂಸಿ ಈ ಪ್ರದೇಶದಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡಿತು.
ಬಂಗಾಳದಲ್ಲಿ ಸಂದೇಶ್‌ಖಾಲಿ ಪ್ರಕರಣವು ಗ್ರಾಮೀಣ ಭಾಗದ ಸಂಘರ್ಷದ ಕೇಂದ್ರವಾಗಿದ್ದರೆ, ಕೋಲ್ಕತ್ತಾದಲ್ಲಿ ನಡೆದ ಅಮಾನುಷ ಘಟನೆ, ನಗರ ಪ್ರದೇಶದಲ್ಲಿ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿತ್ತು. ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಟಿಎಂಸಿ ಸರ್ಕಾರದ ವಿರುದ್ಧ ಆಕ್ರೋಶವನ್ನು ಮಡುಗಟ್ಟಿಸಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದರೂ, ಇನ್ನೂ ಪೂರ್ಣ ನ್ಯಾಯ ಸಿಕ್ಕಿಲ್ಲ ಎಂಬ ವಾದದೊಂದಿಗೆ ಬಿಜೆಪಿ ತನ್ನ ರಾಜಕೀಯ ಪ್ರಚಾರ ಮಾಡುತ್ತಿದೆ.
ಈಗ, ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ; ಬಿಜೆಪಿ ಈ ಎರಡು ಘಟನೆಗಳನ್ನು (ಸಂದೇಶ್‌ಖಾಲಿ ಮತ್ತು ಆರ್‌ಜಿ ಕರ್) ಒಂದೇ ರಾಜಕೀಯ ನಿರೂಪಣೆಯಡಿ ಜೋಡಿಸಲು ಬಿಜೆಪಿ ಯತ್ನಿಸುತ್ತಿದೆ. ಈ ಎರಡೂ ಪ್ರಕರಣಗಳನ್ನು ಪಶ್ಚಿಮ ಬಂಗಾಳದಲ್ಲಿ ಆಡಳಿತ ಮತ್ತು ಮಹಿಳೆಯರ ಸುರಕ್ಷತೆಯ ದೊಡ್ಡ ಪ್ರಶ್ನೆಗಳು ಮತ್ತು ಸಾಕ್ಷಿಗಳು ಎಂದು ಬಿಂಬಿಸಲು ಬಿಜೆಪಿ ಹವಣಿಸುತ್ತಿದೆ.
ಬಿಜೆಪಿ ಈಗ ಹೊಸ ಉತ್ಸಾಹದೊಂದಿಗೆ ಸಂದೇಶ್‌ಖಾಲಿಗೆ ಮರಳಿದೆ. ಸಂದೇಶ್‌ಖಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರೇಖಾ ಪಾತ್ರಾ ಅವರು ಈಗ, ಸಂದೇಶ್‌ಖಾಲಿ ಪಕ್ಕದ ಹಿಂಗಲ್‌ಗಂಜ್ ಕ್ಷೇತ್ರಕ್ಕೂ ತಮ್ಮ ರಾಜಕೀಯ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ. ಇದು, ಸಂದೇಶ್‌ಖಾಲಿ ಪ್ರಕರಣದ ಪ್ರಭಾವವನ್ನು ನೆರೆಹೊರೆಯ ಕ್ಷೇತ್ರಗಳಿಗೂ ಕೊಂಡೊಯ್ಯುವ ಪ್ರಯತ್ನದ ಭಾಗವೆಂದೇ ಹೇಳಲಾಗುತ್ತಿದೆ.
ಆದರೆ, ಈ ಪ್ರಯತ್ನವು ಚುನಾವಣಾ ಲಾಭವಾಗಿ ಬದಲಾಗುತ್ತದೆಯೇ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಯಾಕೆಂದರೆ, ಸಂದೇಶ್‌ಖಾಲಿ ಪ್ರಕರಣ ಹಸಿಯಾಗಿದ್ದಾಗಲೇ, ಆ ಪ್ರಕರಣದ ಪ್ರಭಾವ ಮತ್ತು ಆಕ್ರೋಶವು ಫಲಿತಾಂಶವನ್ನು ಪ್ರಭಾವಿಸಿರಲಿಲ್ಲ.
ಪ್ರಸ್ತುತ, ಸಂದೇಶ್‌ಖಾಲಿ ಇಂದಿಗೂ ಪ್ರವಾಹಕ್ಕೆ ತುತ್ತಾಗುವ ಅಪಾಯದಲ್ಲಿದೆ. ಕಳಪೆ ಸಂಪರ್ಕ ವ್ಯವಸ್ಥೆಯಿಂದ ಬಳಲುತ್ತಿದೆ ಹಾಗೂ ಸಮರ್ಪಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಇಲ್ಲಿನ ಆರ್ಥಿಕತೆಯು ಹೆಚ್ಚಾಗಿ ಕೃಷಿ ಆಧಾರಿತವಾಗಿದೆ. ಬಡತನವು ಇಲ್ಲಿನ ದೈನಂದಿನ ಜೀವನವನ್ನು ರೂಪಿಸುತ್ತಿದೆ. ಈ ಪರಿಸ್ಥಿತಿಗಳು ರಾಜಕೀಯವಾಗಿ ಅಭಿಪ್ರಾಯಗಳ ಬದಲಾವಣೆಗೆ ಪೂರಕ ನೆಲೆ ಒದಗಿಸುತ್ತವೆ. ಆದರೆ, ಅದೂ ಅಷ್ಟು ಸುಲಭವಲ್ಲ.
ಆದರೂ, ಈ ಬಾರಿ ಸಂದೇಶ್‌ಖಾಲಿ ಪ್ರಕರಣ ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ಒಳಗೊಂಡು ಬಿಜೆಪಿ ತನ್ನ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಲು ಮುಂದಾಗಿದೆ. ಸಂದೇಶ್‌ಖಾಲಿಯ ಜೊತೆಗೆ, ಆರ್.ಜಿ. ಕರ್ ಪ್ರಕರಣದ ಮೇಲೂ ಹೆಚ್ಚಿನ ಗಮನ ಹರಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಕೇಸರಿ ಫೈಲ್ | ಬಿಜೆಪಿ ನಾಯಕ ‘ಹರೇನ್ ಪಾಂಡ್ಯ’ರನ್ನು ಮೌನಗೊಳಿಸಿದ ಭೀಕರ ಕತೆ
ಆರ್.ಜಿ ಕರ್ ಆಸ್ಪತ್ರೆಯು ಕಾಶಿಪುರ-ಬೆಳಗಾಚಿಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಟಿಎಂಸಿ ನಾಯಕ, ಶಾಸಕ ಅತಿನ್ ಘೋಷ್ ಅವರು ಜನಪ್ರಿಯ ಮತ್ತು ವಿವಾದರಹಿತ ನಾಯಕನಾಗಿಯೇ ಗುರುತಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿಯೂ ಅವರೇ ಅಭ್ಯರ್ಥಿಯಾಗಿದ್ದಾರೆ. ಆದರೆ, ಆರ್.ಜಿ ಕರ್ ಕಾಲೇಜಿನ ಪ್ರಕರಣದ ರಾಜಕೀಯ ಧ್ವನಿಯು ಕ್ಷೇತ್ರದ ಗಡಿಗಳನ್ನು ದಾಟಿದೆ. ಹೀಗಾಗಿ, ಆ ವಿಚಾರವನ್ನು ಕೋಲ್ಕತ್ತಾದಿಂದ ಹೊರತಂದು ರಾಜ್ಯಮಟ್ಟದ ವಿಚಾರವಾಗಿ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಸಂತ್ರಸ್ತೆಯ ತಾಯಿ ಕೂಡ ತಾನು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಸಾರ್ವಜನಿಕವಾಗಿ ಇಚ್ಛೆ ವ್ಯಕ್ತಪಡಿಸಿದ್ದಾರೆ. ನ್ಯಾಯದ ಹುಡುಕಾಟದಲ್ಲಿ ಬಿಜೆಪಿ ಬೆಂಬಲವನ್ನು ಕೋರಿದ್ದಾರೆ. ಬಹುಶಃ, ಅವರಿಗೆ ಬಿಜೆಪಿ ಟಿಕೆಟ್‌ಅನ್ನೂ ನೀಡಬಹುದು. ಆದರೆ, ಇನ್ನೂ ಖಾತ್ರಿಯಿಲ್ಲ.
ಆದರೂ, ಸಂದೇಶ್‌ಖಾಲಿ ಮತ್ತು ಆರ್.ಜಿ ಕರ್ ಕಾಲೇಜು ಪ್ರಕರಣವು ಬಿಜೆಪಿಯ ಪ್ರಚಾರದ ಅಸ್ತ್ರಗಳಾಗಿವೆ. ಈ ಅಸ್ತ್ರಗಳ ಬಳಕೆಗಾಗಿ ಬಿಜೆಪಿ ತಮ್ಮ ಮಹಿಳಾ ನಾಯಕಿಯರನ್ನು ಮುಂದೆಬಿಟ್ಟಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿ, ರಾಜ್ಯ ನಾಯಕಿಯರಾದ ರೂಪಾ ಗಂಗೂಲಿ ಮತ್ತು ಅಗ್ನಿಮಿತ್ರಾ ಪಾಲ್ ಅವರಂತಹ ಪ್ರಮುಖ ನಾಯಕಿಯರು ಪ್ರಚಾರದಲ್ಲಿ ತೊಡಗಿದ್ದಾರೆ.
ಆದಾಗ್ಯೂ, ಕಳೆದ ಚುನಾವಣೆಯಲ್ಲಿ ಈ ವಿಷಯಗಳು ಚುನಾವಣಾ ಲಾಭವನ್ನು ನೀಡುವಲ್ಲಿ ವಿಫಲವಾಗಿದ್ದವು. ಈ ಬಾರಿ ಅದು ಹೇಗೆ ಫಲ ನೀಡಬಹುದು ಎಂಬ ಪ್ರಶ್ನೆ ಮುನ್ನೆಲೆಯಲ್ಲಿದೆ. ಸದ್ಯಕ್ಕೆ, ಬಿಜೆಪಿಯ ತಂತ್ರವು ಇತಿಹಾಸವನ್ನು ಕೆದಕುವುದು ಮತ್ತು ಭಾವನೆಗಳನ್ನು ಮರಳಿ ಪ್ರಚೋದಿಸುವುದನ್ನು ಅವಲಂಬಿಸಿದೆ. ಹಿಂದಿನ ಆಕ್ರೋಶವನ್ನು ಮರುಜೀವಗೊಳಿಸಿ, ಅದನ್ನು ಪ್ರಸ್ತುತ ರಾಜಕೀಯ ಆಯ್ಕೆಯನ್ನಾಗಿ ರೂಪಿಸುವ ಪ್ರಯತ್ನದಲ್ಲಿದೆ.



