ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಶುಕ್ರವಾರ (ಜೂನ್ 19) ನಡೆಯಬೇಕಿದ್ದ ‘ಶಾಂತಿ ಒಪ್ಪಂದ (MoU) ಸಹಿ ಕಾರ್ಯಕ್ರಮ’ ರದ್ದಾಗುವ ಲಕ್ಷಣಗಳು ಗೋಚರಿಸಿವೆ. ಕಾರ್ಯಕ್ರಮದ ಕುರಿತು ‘ಎಕ್ಸ್’ (ಟ್ವಿಟರ್) ಜಾಲತಾಣದಲ್ಲಿ ಮಾಡಿದ್ದ ಪ್ರಕಟಣೆಯನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ದಿಢೀರನೆ ಅಳಿಸಿಹಾಕಿದ್ದು, ಹೊಸ ಪೋಸ್ಟ್‌ನಲ್ಲಿ ಶುಕ್ರವಾರದ ಕಾರ್ಯಕ್ರಮದ ಉಲ್ಲೇಖವನ್ನು ಕೈಬಿಟ್ಟಿದ್ದಾರೆ.
ಅಮೆರಿಕ-ಇರಾನ್ ನಡುವೆ ಶಾಂತಿ ಮೂಡಿಸುವಲ್ಲಿ ಪಾಕಿಸ್ತಾನ ಮತ್ತು ಕತಾರ್ ದೇಶಗಳು ಮಧ್ಯಸ್ಥಿಕೆ ವಹಿಸಿವೆ. “ಸಹ-ಮಧ್ಯಸ್ಥಿಕೆದಾರರಾದ ಕತಾರ್ ಬೆಂಬಲದೊಂದಿಗೆ ಪಾಕಿಸ್ತಾನವು ಈ ಐತಿಹಾಸಿಕ ಒಪ್ಪಂದವನ್ನು ಸ್ಮರಿಸಲು ಮತ್ತು ತಾಂತ್ರಿಕ ಮಟ್ಟದ ಮಾತುಕತೆಗಳನ್ನು ಆರಂಭಿಸಲು ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಅಧಿಕೃತ ಕಾರ್ಯಕ್ರಮವನ್ನು ಆಯೋಜಿಸಲಿದೆ” ಎಂದು ಶೆಹಬಾಜ್ ಷರೀಫ್ ಮೊದಲು ಪೋಸ್ಟ್ ಮಾಡಿದ್ದರು. ಆದರೆ, ಕೆಲವೇ ಹೊತ್ತಿನಲ್ಲಿ ಈ ಪೋಸ್ಟ್ ಅಳಿಸಿರುವ ಅವರು, ಹೊಸ ಪೋಸ್ಟ್‌ನಲ್ಲಿ ಶುಕ್ರವಾರದ ಅಧಿಕೃತ ಸಹಿ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಸದ್ಯಕ್ಕೆ ಶುಕ್ರವಾರದ ಸ್ವಿಟ್ಜರ್ಲೆಂಡ್ ಸಭೆ ಖಚಿತವಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ ಸ್ಪಷ್ಟಪಡಿಸಿದ್ದಾರೆ. ಕೆಲವು ಗಂಟೆಗಳ ಹಿಂದೆಯಷ್ಟೇ ಶುಕ್ರವಾರದ ಸಭೆಯನ್ನು ಖಚಿತಪಡಿಸಲಾಗಿತ್ತು. ಆದರೆ, ಈ ಒಪ್ಪಂದಕ್ಕೆ ಉಭಯ ದೇಶಗಳ (ಅಮೆರಿಕ ಮತ್ತು ಇರಾನ್) ಅಧ್ಯಕ್ಷರೇ ನೇರವಾಗಿ ಸಹಿ ಹಾಕುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಉನ್ನತ ನಾಯಕರೇ ಸಹಿ ಹಾಕಲಿರುವುದರಿಂದ, ಸದ್ಯಕ್ಕೆ ಶುಕ್ರವಾರದ ಸಭೆಯನ್ನು ತಡೆಹಿಡಿಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್‌ಗೆ ನುಂಗಲಾರದ ತುತ್ತು
ಒಪ್ಪಂದದ ಪ್ರಸ್ತುತ ಹಂತವನ್ನು ಗಮನಿಸುವುದಾದರೆ, ಭಾನುವಾರವಷ್ಟೇ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರು ಡಿಜಿಟಲ್ ಮೂಲಕ ಶಾಂತಿ ಒಪ್ಪಂದದ ಕರಡಿಗೆ ಸಹಿ ಹಾಕಿದ್ದರು. ತದನಂತರ, ಬುಧವಾರ (ಜೂನ್ 17) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧವನ್ನು ಅಂತ್ಯಗೊಳಿಸುವ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಈಗ ಉಭಯ ದೇಶಗಳ ನಾಯಕರೇ ಅಂತಿಮ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿರುವುದರಿಂದ, ಮಧ್ಯಸ್ಥಿಕೆದಾರರ ನೇತೃತ್ವದಲ್ಲಿ ನಡೆಯಬೇಕಿದ್ದ ಜಿನೀವಾ ಸಭೆಯಲ್ಲಿ ದಿಢೀರ್ ಬದಲಾವಣೆಯಾಗಿದೆ. ಇದರಿಂದಾಗಿ ಪಾಕಿಸ್ತಾನದ ಪ್ರಧಾನಿ ತಮ್ಮ ಅಧಿಕೃತ ಕಾರ್ಯಕ್ರಮದ ಪ್ರಕಟಣೆಯನ್ನು ಹಿಂಪಡೆಯುವಂತಾಗಿದೆ.




