ನೇಪಾಳದಲ್ಲಿ ಸಂಭವಿಸಿರುವ ತೀವ್ರ ಸ್ವರೂಪದ ದಿಢೀರ್ ಪ್ರವಾಹ ಹಾಗೂ ಸರಣಿ ಭೂಸಸಿತದಿಂದಾಗಿ ಭಾರತ ಮತ್ತು ನೇಪಾಳ ನಡುವಿನ ದ್ವಿಪಕ್ಷೀಯ ಗಡಿ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಪ್ರಮುಖ ‘ಸೊನೌಲಿ ಗಡಿ’ಯಲ್ಲಿ ನೇಪಾಳ ಪ್ರವೇಶಿಸಲು ಕಾಯುತ್ತಿರುವ ಸರಕು ಸಾಗಣೆ ಲಾರಿಗಳ ಸಾಲು ಸುಮಾರು 16 ಕಿಲೋಮೀಟರ್ಗೂ ಹೆಚ್ಚು ಉದ್ದ ಬೆಳೆದಿದೆ.
ನೇಪಾಳ ರಾಜಧಾನಿ ಕಠ್ಮಂಡು ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡು ಹಾಗೂ ಭೂಸಸಿತದಿಂದ ಸಂಪೂರ್ಣವಾಗಿ ಹಾನಿಗೊಳಗಾಗಿರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನಾಲ್ಕು ದಿನಗಳಿಂದ ಗಡಿಯಲ್ಲಿಯೇ ಸಿಲುಕಿಕೊಂಡಿರುವ ನೂರಾರು ಚಾಲಕರು ರಸ್ತೆಯ ಬದಿಯಲ್ಲೇ ಅಡುಗೆ ಮಾಡಿಕೊಂಡು ದಿನ ದೂಡುವಂತಾಗಿದೆ. ಲಾರಿಗಳ ಸಾಲು ನೌತನವಾ ಪ್ರದೇಶದವರೆಗೂ ವಿಸ್ತರಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಇದನ್ನೂ ಓದಿ: ನೇಪಾಳದಲ್ಲಿ ಜಲಪ್ರಳಯ: 77 ಈಶಾ ಫೌಂಡೇಶನ್ ಯಾತ್ರಿಗಳು ನಾಪತ್ತೆ; ತಂಡದಲ್ಲಿದ್ದ ಧಾರವಾಡ ಮೂಲದ ಯುವಕ
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಸೊನೌಲಿ ಗಡಿಯಲ್ಲಿ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. “ಗಡಿ ಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ ಮತ್ತು ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ” ಎಂದು ಸರ್ಕಲ್ ಆಫೀಸರ್ ಬಸಂತ್ ಸಿಂಗ್ ತಿಳಿಸಿದ್ದಾರೆ. ನೇಪಾಳದಲ್ಲಿ ರಸ್ತೆ ಸಂಪರ್ಕ ಶೀಘ್ರವೇ ಪುನರಾರಂಭಗೊಳ್ಳದಿದ್ದರೆ ಸರಕು ಪೂರೈಕೆ ಮತ್ತಷ್ಟು ಬಾಧಿತವಾಗಿ ಉಭಯ ದೇಶಗಳ ವ್ಯಾಪಾರಿಗಳಿಗೆ ಭಾರಿ ಆರ್ಥಿಕ ನಷ್ಟವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ನೇಪಾಳದ ಪ್ರವಾಹದ ಪ್ರಭಾವ ನೆರೆಯ ಖುಷಿನಗರ ಜಿಲ್ಲೆಯ ಮೇಲೆಯೂ ಬಿದ್ದಿದೆ. ನರ್ವಾಜೋಟ್ನಿಂದ ಅಹಿರೌಲಿವರೆಗಿನ 17.5 ಕಿ.ಮೀ ಉದ್ದದ ನದಿ ತಟಬಂಧದಲ್ಲಿ ಕಂದಾಯ, ಪೊಲೀಸ್ ಹಾಗೂ ಪ್ರವಾಹ ನಿಯಂತ್ರಣ ತಂಡಗಳು ನಿರಂತರ ನಿಗಾ ವಹಿಸಿವೆ. ನದಿಯ ಭೋರ್ಗರೆತದಲ್ಲಿ ಎಲ್ಪಿಜಿ ಸಿಲಿಂಡರ್, ಹಾಸಿಗೆ ಹಾಗೂ ರೆಫ್ರಿಜರೇಟರ್ಗಳಂತಹ ಗೃಹಬಳಕೆ ವಸ್ತುಗಳು ಕೊಚ್ಚಿಬರುತ್ತಿರುವುದು ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಜಲ ಪೋಲಿಸ್ ತಂಡಗಳನ್ನು ಗಡಿ ಗ್ರಾಮಗಳಲ್ಲಿ ನಿಯೋಜಿಸಲಾಗಿದೆ.
ನೇಪಾಳದಲ್ಲಿ ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹ ಮತ್ತು ಸರಣಿ ಭೂಸಸಿತದಿಂದ ಭಾರಿ ಜೀವಹಾನಿಯಾಗಿದೆ. 469ಕ್ಕೂ ಹೆಚ್ಚು ಜನರು ಸಾನ್ನಿಧ್ಯ ಕಳೆದುಕೊಂಡಿದ್ದಾರೆ (ನೇಪಾಳದಲ್ಲಿ 460ಕ್ಕೂ ಹೆಚ್ಚು ಹಾಗೂ ಟಿಬೆಟ್ ಗಡಿ ಭಾಗದಲ್ಲಿ ಮೃತಪಟ್ಟವರನ್ನೂ ಸೇರಿಸಿ). ನೇಪಾಳ ಮತ್ತು ನೆರೆಯ ಟಿಬೆಟ್ ಪ್ರದೇಶ ಎರಡನ್ನೂ ಸೇರಿ ಸುಮಾರು 1,300 ರಿಂದ 1,500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಭಾರತೀಯರು ಸೇರಿದಂತೆ 30ಕ್ಕೂ ಹೆಚ್ಚು ದೇಶಗಳ ಸುಮಾರು 500ರಿಂದ 600ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು/ಯಾತ್ರಿಕರು ಸೇರಿದ್ದಾರೆ.




