ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿ ಮಾಡಲು ನಾವು ಒಪ್ಪಿಕೊಂಡಿಲ್ಲ. ಇರಾನ್ಗೆ ಯಾವುದೇ ಪರಮಾಣ ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಶಾಂತಿ ಒಪ್ಪಂದಕ್ಕೆ ಮತ್ತಷ್ಟು ಪ್ರಸ್ತಾಪಗಳನ್ನು ಇರಾನ್ಗೆ ಟ್ರಂಪ್ ಕಳಿಸಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ತಮ್ಮ ಹೊಸ ಪ್ರಸ್ತಾಪದಲ್ಲಿ; “ಇರಾನ್ ಯಾವುದೇ ಅಣ್ವಸ್ತ್ರ ಅಭಿವೃದ್ಧಿಪಡಿಸುವುದನ್ನು ತಡೆಯುವುದು ಮತ್ತು ಸದ್ಯ ದಿಗ್ಬಂಧನಕ್ಕೊಳಗಾಗಿರುವ ಹಾರ್ಮುಜ್ ಜಲಸಂಧಿಯನ್ನು ಮರುಸಂರಕ್ಷಿಸುವುದು ಯಾವುದೇ ಒಪ್ಪಂದದ ಪ್ರಮುಖ ಆದ್ಯತೆಗಳಾಗಿವೆ” ಎಂದು ಹೇಳಿದ್ದಾರೆ.
ಹೊಸ ಪ್ರಸ್ತಾಪದಿಂದಾಗಿ, ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸುವ ಮತ್ತು ಹಾರ್ಮುಜ್ ಜಲಸಂಧಿಯ ಸಮುದ್ರ ಮಾರ್ಗವನ್ನು ಮುಕ್ತಗೊಳಿಸುವ ಒಪ್ಪಂದವು ಮತ್ತಷ್ಟು ವಿಳಂಬವಾಗಬಹುದು ಎನ್ನಲಾಗಿದೆ.
“ನನಗೆ ಬೇಕಾಗಿರುವ ಏಕೈಕ ಗ್ಯಾರಂಟಿ ಎಂದರೆ, ಅಲ್ಲಿ (ಇರಾನ್) ಯಾವುದೇ ಅಣ್ವಸ್ತ್ರಗಳು ಇರಬಾರದು. ಅದಕ್ಕೆ ಅವರು ಒಪ್ಪಿಕೊಳ್ಳಬೇಕು” ಎಂದು ಟ್ರಂಪ್ ಹೇಳಿದ್ದಾರೆ.
ಆದರೆ, ಇರಾನ್ ಪರಮಾಣ ಶಸ್ತ್ರಾಸ್ತ್ರ ಅಭಿವೃದ್ಧಿ ಪಡಿಸುವ ಯೋಜನೆಯಿಂದ ಹಿಂದೆಸರಿಯುವುದಿಲ್ಲ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದೆ. ತಮ್ಮ ನಿಲುವಿಗೆ ಇರಾನ್ ಅಂಟಿಕೊಂಡಿದೆ.
“ಅಣ್ವಸ್ತ್ರ ಕಾರ್ಯಕ್ರಮದಂತಹ ವಿಷಯಗಳ ಬಗ್ಗೆ ಗಂಭೀರ ಮಾತುಕತೆ ನಡೆಸುವ ಮುನ್ನ, ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ತಮ್ಮ 12 ಬಿಲಿಯನ್ ಡಾಲರ್ ಆಸ್ತಿಯನ್ನು ಬಿಡುಗಡೆ ಮಾಡಬೇಕು” ಎಂದು ಇರಾನ್ ಹೇಳಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್ಐಆರ್’
ಅಲ್ಲದೆ, “ಯುದ್ಧ ಕೊನೆಗೊಳ್ಳುವ ಯಾವುದೇ ಒಪ್ಪಂದದಲ್ಲಿ ಲೆಬನಾನ್ ಅನ್ನು ಸಹ ಒಳಗೊಳ್ಳಬೇಕು” ಎಂದು ಇರಾನ್ ಒತ್ತಾಯಿಸಿದೆ. ಸದ್ಯ, ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಹೆಜ್ಬುಲ್ಲಾ ಮತ್ತು ಇಸ್ರೇಲ್ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದೆ. ಹೆಜ್ಬುಲ್ಲಾ ಕಾರ್ಯಕರ್ತರನ್ನು ಗುರಿಯಾಗಿಕೊಂಡು ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ. ಲೆಬನಾನ್ ಮೇಲಿನ ಇಸ್ರೇಲ್ ಕ್ರೌರ್ಯವನ್ನು ತಡೆಯದ ಹೊರತು, ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದಿರುವ ಇರಾನ್, ಕದನ ವಿರಾಮದ ಒಪ್ಪಂದಗಳಲ್ಲಿ ಲೆಬನಾನ್ಅನ್ನು ಒಳಗೊಳ್ಳಲು ಒತ್ತಾಯಿಸಿದೆ.
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಈ ನಡುವೆ ಏಪ್ರಿಲ್ನಲ್ಲಿ ಇರಾನ್-ಅಮೆರಿಕ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಆದರೂ, ಸಣ್ಣ ಮಟ್ಟದ ಸಶಸ್ತ್ರ ಸಂಘರ್ಷಗಳು ಮುಂದುವರಿದಿವೆ. ಶಾಶ್ವತ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯುತ್ತಿವೆ.



