ಇಸ್ರೇಲ್ ಲೆಬನಾನ್‌ನ ಗಡಿಭಾಗದಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯ ಪತ್ರಕರ್ತ ಇಸ್ಸಾಂ ಅಬ್ದುಲ್ಲಾ ಅವರನ್ನು ಇಸ್ರೇಲ್ ಉದ್ದೇಶಪೂರ್ವಕವಾಗಿ ಹತ್ಯೆಗೈದಿದೆ ಎಂದು ಆರೋಪಿಸಿರುವ ಲೆಬನಾನ್ ವಿದೇಶಾಂಗ ಸಚಿವರು, ಈ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅಧಿಕೃತವಾಗಿ ದೂರು ನೀಡುವುದಾಗಿ ತಿಳಿಸಿದ್ದಾರೆ.
‘ಇಸ್ರೇಲ್ ಕೃತ್ಯವು ಅಭಿಪ್ರಾಯ ವ್ಯಕ್ತಪಡಿಸುವುದರ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಘೋರ ದಾಳಿ ಮತ್ತು ಅಪರಾಧ. ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪತ್ರಕರ್ತರು ಕಾರಿನಲ್ಲಿದ್ದರು’ ಎಂದು ತಿಳಿಸಿದ್ದಾರೆ.
‘ಪತ್ರಕರ್ತನ ಸಾವಿಗೆ ವಿಷಾದಿಸುತ್ತೇವೆ. ಇದು ದುರದೃಷ್ಟಕರ ಘಟನೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಇಸ್ರೇಲ್ ಸೇನೆಯ ವಕ್ತಾರ ರಿಚರ್ಡ್ ಹೆಚ್ಟ್ ಅವರು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಸಾವಿಗೆ ಇಸ್ರೇಲ್ ಸೇನೆ ಕಾರಣವೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
Obituary: Reuters’ Issam Abdallah covered the world’s biggest events with bravery and insight https://t.co/aBi0dQidBg pic.twitter.com/YgJmUjUIzM
— Reuters World (@ReutersWorld) October 15, 2023
ದಕ್ಷಿಣ ಲೆಬನಾನ್ ಗಡಿಯಲ್ಲಿ ಇಸ್ರೇಲ್ ಸೇನೆ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ಕದನದ ವರದಿ ಮಾಡಲು ಅಂತಾರಾಷ್ಟ್ರೀಯ ಪತ್ರಕರ್ತರ ಗುಂಪು ಅಲ್ಮಾ–ಅಲ್– ಶಾಬ್ ಎಂಬ ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಇಸ್ರೇಲ್ ನಡೆದ ಕ್ಷಿಪಣಿ ದಾಳಿ ನಡೆದಿದೆ. ದಾಳಿಯಲ್ಲಿ ತನ್ನ ಸಂಸ್ಥೆಯ ಒಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಪತ್ರಕರ್ತರು ಗಾಯಗೊಂಡಿರುವುದಾಗಿ ರಾಯಿಟರ್ಸ್ ಹೇಳಿದೆ.
ಅಲ್– ಜಝೀರಾ ವಾಹಿನಿಯ ವರದಿಗಾರ ಮತ್ತು ವಿಡಿಯೋಗ್ರಾಫರ್ ಕೂಡ ಗಾಯಗೊಂಡಿದ್ದಾರೆ ಎಂದು ಅಲ್-ಜಝೀರಾ ಹೇಳಿದೆ. ಈ ಘಟನೆಯಲ್ಲಿ ಒಟ್ಟು ಆರು ಮಂದಿ ಪತ್ರಕರ್ತರು ಗಾಯಗೊಂಡಿದ್ದರು.
ಇಸ್ಸಾಂ ಅಬ್ದುಲ್ಲಾ ಅವರ ಅಂತಿಮ ಸಂಸ್ಕಾರವನ್ನು ದಕ್ಷಿಣ ಲೆಬನಾನ್‌ನ ಖಿಯಾಮ್ ಪಟ್ಟಣದಲ್ಲಿ ಶನಿವಾರ ನೆರವೇರಿಸಲಾಯಿತು. ಅದಕ್ಕೂ ಮೊದಲು, ಅವರ ಮೃತದೇಹಕ್ಕೆ ಲೆಬನಾನ್ ಧ್ವಜ ಹೊದಿಸಿ, ಖಿಯಾಮ್ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
ನೂರಾರು ಜನರು ಇಸ್ಸಾಂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹತ್ತಕ್ಕೂ ಹೆಚ್ಚು ಪತ್ರಕರ್ತರು ಮತ್ತು ಲೆಬೆನಾನ್‌ನ ಜನಪ್ರತಿನಿಧಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.