ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ರಸ್ತೆ ಬದಿಯ ಪೊಲೀಸ್ ಚೆಕ್‌ಪೋಸ್ಟ್ ಬಳಿ ಸ್ಫೋಟಕ ತುಂಬಿದ್ದ ವಾಹನವನ್ನು ಆತ್ಮಾಹುತಿ ದಾಳಿಕೋರ ಸ್ಫೋಟಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರಲ್ಲಿ ಕಸ್ಟಮ್ಸ್ ಮತ್ತು ಎಕ್ಸೈಸ್ ಇಲಾಖೆಯ ಇಬ್ಬರು ಅಧಿಕಾರಿಗಳೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ ಭಾರಿ ಹಾನಿಯಾಗಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ದರಾಜಿಂದಾ ರಕ್ಷಣಾ ಕೇಂದ್ರದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದರ ಜತೆಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಸ್ಫೋಟಕ್ಕೆ ಬಳಸಲಾದ ವಸ್ತುಗಳ ಸ್ವರೂಪ ಪತ್ತೆಹಚ್ಚಲು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ದಾಳಿಯ ಹೊಣೆಗಾರಿಕೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೊತ್ತುಕೊಂಡಿದೆ. ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ಟಿಟಿಪಿ, ಅಫ್ಘಾನಿಸ್ತಾನದಲ್ಲಿ 2021ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ತಾಲಿಬಾನ್‌ನಿಂದ ಪ್ರತ್ಯೇಕ ಸಂಘಟನೆಯಾಗಿದ್ದರೂ ಅದರೊಂದಿಗೆ ಮೈತ್ರಿ ಹೊಂದಿದೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ತಿಂಗಳು ಭದ್ರತಾ ಘಟನೆಗಳು ಹೆಚ್ಚಾಗಿದ್ದು, ಪಾಕಿಸ್ತಾನಿ ತಾಲಿಬಾನ್ ನಡೆಸಿದ ದಾಳಿಗಳೂ ವರದಿಯಾಗಿವೆ.
ಇದನ್ನೂ ಓದಿ: ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ
ಇದಕ್ಕೂ ಒಂದು ವಾರದ ಹಿಂದೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕೋಹಾಟ್ ಜಿಲ್ಲೆಯಲ್ಲಿ ಇದೇ ರೀತಿಯ ದಾಳಿ ನಡೆದಿತ್ತು. ಸ್ಫೋಟಕ ತುಂಬಿದ್ದ ವಾಹನವನ್ನು ದಾಳಿಕೋರನೊಬ್ಬ ಮಸೀದಿಗೆ ಡಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ಪೊಲೀಸ್ ಕಚೇರಿಗಳಿದ್ದ ಕಟ್ಟಡದ ಹೊರಗೋಡೆ ಕುಸಿದಿದ್ದಲ್ಲದೆ, ಮಸೀದಿಗೂ ಭಾರಿ ಹಾನಿಯಾಗಿತ್ತು. ಮಸೀದಿಯೊಳಗೆ ನಡೆದ ಸ್ಫೋಟದಲ್ಲಿ 21 ಮಂದಿ ಮೃತಪಟ್ಟಿದ್ದು, 78 ಜನರು ಗಾಯಗೊಂಡಿದ್ದರು. ಪೊಲೀಸ್ ಕಚೇರಿಗಳ ಸಮೀಪವೇ ದಾಳಿ ನಡೆದಿದ್ದರಿಂದ ಮೃತರಲ್ಲಿ 15 ಮಂದಿ ಪೊಲೀಸ್ ಅಧಿಕಾರಿಗಳೂ ಸೇರಿದ್ದರು.




